ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಭ್ರಷ್ಟ ಮುಖ್ಯಮಂತ್ರಿ: ಟೀಕೆ

Last Updated 13 ನವೆಂಬರ್ 2017, 10:10 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ‘ಸ್ವತಂತ್ರ ಭಾರತದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾಲ್ಕೂವರೆ ವರ್ಷಗಳಲ್ಲಿ ನಡೆದ ಎಲ್ಲ ಪ್ರಕರಣಗಳನ್ನು ಬಿಜೆಪಿ ಆಡಳಿತಕ್ಕೆ ಬಂದ 24 ಗಂಟೆಯೊಳಗೆ ಮರು ತನಿಖೆ ನಡೆಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬಿಜೆಪಿಯ ಪರಿವರ್ತನಾ ಯಾತ್ರೆಯು ಕಾಪುಗೆ ಬಂದ ಸಂದರ್ಭದಲ್ಲಿ ಪೇಟೆಯಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ‘ಭ್ರಷ್ಟಾಚಾರಿ ಎಂದರೆ ಸಾಬೀತು ಪಡಿಸಿ’ ಎಂದು ಸವಾಲು ಹಾಕುವ ಮುಖ್ಯಮಂತ್ರಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ದುಬಾರಿ ವಾಚು ಪ್ರಕರಣದಲ್ಲಿ ಆರೋಪಿಯಾಗಿದ್ದು, ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬ ಪಾಲುದಾರ ರಾಗಿದ್ದಾರೆ. ಬಿಬಿ ಎಂಪಿ ಹಗರಣ ದಲ್ಲಿ ಅವರು ಭಾಗಿಯಾಗಿದ್ದು, ಮಗನಿಗೆ ಕಾನೂನು ಬಾಹಿರವಾಗಿ ಲ್ಯಾಬೊರೋಟರಿ ನಡೆಸಲು ಅನುಮತಿ ಕೊಟ್ಟ ದ್ದಾರೆ. ಇದು ಭ್ರಷ್ಟಾಚಾರ ಅಲ್ಲವೇ ಎಂದು ಪ್ರಶ್ನಿಸಿದರು.

ಬಿಬಿಎಂಪಿಯಲ್ಲಿ ಗುಂಡಿ ಮುಚ್ಚುವುದರಲ್ಲೂ ಇವರ ಜೇಬು ತುಂಬಿಕೊಳ್ಳುವ ಕೆಲಸ ಮಾಡುತಿದ್ದಾರೆ. ಕಸ ಗುಡಿಸುವ ಯಂತ್ರದಲ್ಲೂ ಒಂದಕ್ಕೆ ಎರಡು ಪಟ್ಟು ಹಣ ಕೊಟ್ಟ ಖರೀದಿ ಮಾಡಿ ಲೂಟಿ ಮಾಡಲಾಗಿದೆ. ‘ಹಿಂದುಳಿದ ವರ್ಗಗಳ ಕ್ರಾಂತಿ ಮಾಡುತ್ತೇನೆ’ ಎಂದು ಅಧಿಕಾರ ಪಡೆದು ಬಡ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ವಿತರಿಸಿದ್ದಾರೆ.

ಈ ಸಮವಸ್ತ್ರವನ್ನು ₹ 76 ಕೋಟಿ ವೆಚ್ಚದಲ್ಲಿ ಖರೀದಿ ಮಾಡಿದ್ದಾರೆ. ಈ ಬಗ್ಗೆ ಕೇಳಿದರೆ ತನಿಖೆ ನಡೆಸುತ್ತೇವೆ ಎನ್ನುತ್ತಾರೆ. ಇನ್ನು ಮೂರೇ ತಿಂಗಳು ಇರುವುದು, ಇನ್ನೇನಿದ್ದರೂ ನಾವು ಅಧಿಕಾರಕ್ಕೆ ಬಂದೇ ತನಿಖೆ ನಡೆಸುತ್ತೇವೆ ಎಂದರು.

ಅಪರೂಪದ ಕಲ್ಪನೆ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ರಾಜ್ಯದಲ್ಲಿ 224 ಕ್ಷೇತ್ರಗಳನ್ನು ಒಂದೇ ಭಾರಿ ಹೋಗಿ ಬರುವಂತಹ ಅಪರೂಪದ ಕಲ್ಪನೆ ಕೊಟ್ಟಿದ್ದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಕಾರ್ಯಕ್ರಮ ಉದ್ಘಾಟನೆಯಿಂದ ಇಲ್ಲಿಯವರೆಗೆ ಅಭೂತಪೂರ್ವ ಸ್ವಾಗತ ದೊರಕುತ್ತದೆ. ನಾಡಿನಲ್ಲಿ ಸಂಕಷ್ಟದಲ್ಲಿ ಜನರು ಬಳಲುತಿದ್ದಾರೆ.

ಸ್ವಚ್ಛ, ದಕ್ಷ, ಪ್ರಾಮಾಣಿಕ ಆಡಳಿತವನ್ನು ಕೊಟ್ಟು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಲು, ಸಾಮಾಜಿಕ ನ್ಯಾಯ ಅದನ್ನು ಕಾರ್ಯರೂಪಕ್ಕೆ ಬರುವ ಶಕ್ತಿಯನ್ನು ಕೊಡಲು ಪ್ರಾರ್ಥನೆಯನ್ನು ಮಾಡಿದ್ದೇನೆ. ನೆಮ್ಮದಿ ಗೌರವದಿಂದ ರೈತ, ಮೀನುಗಾರ, ಕೃಷಿ, ಕಾರ್ಮಿಕರು ಬದುಕಬೇಕು ಎನ್ನುವ ನಿಟ್ಟಿನಲ್ಲಿ ಈ ಯಾತ್ರೆ ಹೊರಟಿದ್ದೇವೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವುದು ಈ ಯಾತ್ರೆಯ ಉದ್ದೇಶ ಅಲ್ಲ. ಜನರಲ್ಲಿ ಪರಿವರ್ತನೆ ಆಗಬೇಕು ಎಂದು ಹೇಳಿದರು.

‘ರಾಜ್ಯದ ಖಜಾನೆಯನ್ನು ಲೂಟಿ ಮಾಡಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಆಲಿ ಬಾಬಾ ಮತ್ತು 40 ಕಳ್ಳರಂತೆ’ ಎಂದು ಸಂಸದ ಸದಾನಂದ ಗೌಡ ಲೇವಡಿ ಮಾಡಿದರು. ‘ಗರೀಬಿ ಹಠಾವೋ’ ಎಂದು ಹೇಳಿ ಅಧಿಕಾರಕ್ಕೆ ಬಂದವರು ಇಂದು ಬಡವರ ಪಡಿತರ ಆಹಾರವನ್ನು ಬಿಡಲಿಲ್ಲ. ರಾಜ್ಯ ಸರ್ಕಾರವು ದೊಡ್ಡ ಹೆಗ್ಗಣ ಎಂದು ಟೀಕಿಸಿದ ಅವರು, ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿಗೆ ಅಧಿಕಾರ ನೀಡಿ ಎಂದು ಹೇಳಿದರು.

ಸಿದ್ದರಾಮಯ್ಯ ದುಷ್ಟ ಮುಖ್ಯಮಂತ್ರಿ: ಸಿದ್ದರಾಮಯ್ಯ ರಾವಣನಿಗಿಂತಲೂ ದುಷ್ಟ. ಕುಂಭಕರ್ಣ ನಿದ್ದೆಯಲ್ಲಿರುವ ಅವರ ಸರ್ಕಾರವನ್ನು ಬದಿಗೊತ್ತಿ, ರಾಮ ಭಕ್ತನಾಗಿ ರಾಜ್ಯ ಸಂಚಾರ ಮಾಡಿ ಯಡಿಯೂರಪ್ಪ ರಾಜ್ಯಭಾರ ಮಾಡಲಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ಹೇಳಿದರು.

ರಾವಣ ಕೇವಲ ಸೀತೆಯನ್ನು ಅಪಹರಣ ಮಾಡಿದ್ದಾನೆ. ಆದರೆ, ಸಿದ್ದರಾಮಯ್ಯ ರೈತರ ಆತ್ಮಹತ್ಯೆಗೆ ಪೂರಕವಾಗಿ ನಿಂತು, ಹಿಂದೂ ಯುವಕರ ಹತ್ಯೆಗೆ ಪ್ರೇರಣೆಯನ್ನು ಕೊಡುತ್ತಾ, ಗೋಹತ್ಯೆ ಮಾಡಿದವರ ಪರವಾಗಿ, ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಾರೆ. ಹಿಂದೂ ಸಂಸ್ಕೃತಿಯನ್ನು ವಿಭಜನೆ ಮಾಡುವ ಮುಖ್ಯಮಂತ್ರಿಗೆ ಮುಂದಿನ ದಿನಗಳಲ್ಲಿ ಶಾಪ ತಟ್ಟಲಿದೆ ಎಂದು ಹೇಳಿದರು.

ಪಿಎಫ್ಐ ಮತ್ತು ಎಸ್‌ಡಿಪಿಐ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ ಎಂಬ ಎನ್ಐಎ ವರದಿಯಿದೆ. 23 ರಾಜ್ಯಗಳಲ್ಲಿ ಸಕ್ರಿಯವಾಗಿರುವ ಈ ಸಂಘಟನೆಯು ಕೇರಳ, ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗೆ ಕಾರಣವಾಗಿದೆ. ಇದರ ಕಾರ್ಯಕರ್ತರು ಭಯೋತ್ಪಾದಕರು. 27 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಉಡುಪಿ- ಮಂಗಳೂರಿನಲ್ಲಿ ಈ ಸಂಘಟನೆ ಸಕ್ರಿಯಕ್ಕೆ ಸಿದ್ದರಾಮಯ್ಯ ಸರ್ಕಾರವೇ ಕಾರಣ ಎಂದು ದೂರಿದರು.

‘ಲಾಲಾಜಿ ಮೆಂಡನ್ ಅವರ ಅವಧಿ ಯಲ್ಲಿ ಬಿಡುಗಡೆಯಾದ ಅನುದಾನದಿಂದ ಶಾಸಕ ವಿನಯಕುಮಾರ್ ಸೊರಕೆ ಅವರು ತೆಂಗಿನ ಕಾಯಿ ಒಡೆಯುತ್ತಿದ್ದಾರೆ. ಆ ಬಳಿಕ ಕೇಂದ್ರದ ಸಿಆರ್ಎಫ್ ಅನುದಾನದಿಂದ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಿಂದ ತಮ್ಮದೇ ಅನುದಾನ ಎಂದು ಹೇಳಿಕೊಂಡು ತೆಂಗಿನ ಕಾಯಿ ಒಡೆದು ಭೂಮಿಪೂಜೆ ನೆರವೇರಿಸಿದ್ದಾರೆ. ಇದುವೇ ಶಾಸಕರ ಸಾಧನೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಸಂಸದ ಶ್ರೀರಾಮುಲು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮಟ್ಟಾರು ರತ್ನಾಕರ ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ಪ್ರಕಾಶ್ ಶೆಟ್ಟಿ, ದಿನಕರ ಬಾಬು, ಯಶ್‌ಪಾಲ್ ಸುವರ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ, ತೇಜಸ್ವಿನಿ ರಮೇಶ್, ಶಶಿಕಾಂತ್ ಪಡುಬಿದ್ರಿ, ಮಿಥುನ್ ಹೆಗ್ಡೆ, ಕಟಪಾಡಿ ಶಂಕರ ಪೂಜಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT