ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್‌ ರಾಜೀನಾಮೆಗೆ ಪಟ್ಟು: ಕಲಾಪ ಬಲಿ

ರಾಜೀನಾಮೆ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನುಡಿ– ಜಾರ್ಜ್ ಕೊಲೆಗಡುಕ: ಕೆ.ಎಸ್‌. ಈಶ್ವರಪ್ಪ
Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಬಿಜೆಪಿ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಪಟ್ಟು ಹಿಡಿದಿದ್ದರಿಂದಾಗಿ ಚಳಿಗಾಲದ ಅಧಿವೇಶನದ ಮೊದಲ ದಿನದ ಕಲಾಪ ಬಲಿಯಾಯಿತು.

ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಿದ ಬಳಿಕ ನಿಲುವಳಿ ಸೂಚನೆ ಮಂಡಿಸಲು ಮನವಿ ಸಲ್ಲಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾವು ಪ್ರಕರಣದಲ್ಲಿ ಸಚಿವ ಜಾರ್ಜ್‌ ವಿರುದ್ಧ  ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಈ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಗಂಟೆಗೂ ಹೆಚ್ಚು ಹೊತ್ತು ಪರ–ವಿರೋಧದ ಸಂಘರ್ಷ ನಡೆಯಿತು. ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಎದುರು ಧರಣಿಗೆ ಮುಂದಾದರು. ಈ ಹಂತದಲ್ಲಿ ‘ಜಾರ್ಜ್‌ ಕೊಲೆಗಡುಕ’ ಎಂದು ಈಶ್ವರಪ್ಪ ಹೇಳಿದ್ದರಿಂದಾಗಿ ಸದನದಲ್ಲಿ ವಾಕ್ಸಮರ ನಡೆಯಿತು.ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಮತ್ತೆ ಧರಣಿ, ಕಲಾಪ ಮುಂದೂಡಿಕೆ:

ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಈಶ್ವರಪ್ಪ ಕೂಡಲೇ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.

ಸದನ ಸರಿಹಾದಿಯಲ್ಲಿ ಇಲ್ಲದಿರುವಾಗ ನಿಲುವಳಿ ಸೂಚನೆ ಪ್ರಸ್ತಾವನೆ ಮಂಡಿಸುವುದು ಸರಿಯಲ್ಲ. ವಾಪಸ್ ಹೋಗಿ ಕುಳಿತಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸದಸ್ಯರಿಗೆ ಮನವಿ ಮಾಡಿದರು. ‘ನಿಮ್ಮ ಮಾತಿಗೆ ಗೌರವ ಕೊಟ್ಟು ಧರಣಿಯಿಂದ ಹಿಂದೆ ಸರಿಯುತ್ತೇವೆ’ ಎಂದು ಹೇಳಿದ ಈಶ್ವರಪ್ಪ ಪ್ರಸ್ತಾವನೆ ಮಂಡಿಸಲು ಅಣಿಯಾದರು.

ಈಶ್ವರಪ್ಪ ಕ್ಷಮೆಗೆ ಕಾಂಗ್ರೆಸ್‌ ಸದಸ್ಯರು ಮತ್ತೆ ಒತ್ತಾಯಿಸಿದರು. ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ‘ಜಾರ್ಜ್ ಕೊಲೆಗಡುಕ ಎಂದು ನೀವು ಹೇಳಿದರೆ ಕೇಳಿಕೊಂಡು ಸುಮ್ಮನೆ ಕೂರಬೇಕೇ. ಯಾವುದೇ ಕೋರ್ಟ್‌ ಅಥವಾ ತನಿಖೆ ಅವರನ್ನು ಅಪರಾಧಿ ಎಂದು ಹೇಳಲಿಲ್ಲ. ಮಾತನಾಡುವ ಹಕ್ಕಿದೆ ಎಂಬ ಕಾರಣಕ್ಕೆ ನಿಮ್ಮನ್ನು ಕೊಲೆಗಡುಕ ಎಂದು ನಾನು ಹೇಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಜಾರ್ಜ್ ಅವರನ್ನು ಒಂದನೇ ಆರೋಪಿ ಎಂದು ಹೆಸರಿಸಿ ಸಿಬಿಐ ಎಫ್ಐಆರ್ ದಾಖಲಿಸಿದೆ. ನಂ.1 ಆರೋಪಿ ರಕ್ಷಣೆಗೆ ಮುಖ್ಯಮಂತ್ರಿ ನಿಂತಿದ್ದಾರೆ. ಅವರು ಕೂಡಲೇ ರಾಜೀನಾಮೆ ನೀಡಬೇಕು. ನಿಲುವಳಿ ಸೂಚನೆ ಮೇರೆಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಈಶ್ವರಪ್ಪ ಆಗ್ರಹಿಸಿದರು.

‘ನಾನು ಯಾವುದೇ ತಪ್ಪು ಮಾಡಿಲ್ಲ. ಸಿಐಡಿ ಬಿ–ರಿಪೋರ್ಟ್‌, ವಿವಿಧ ಕೋರ್ಟ್‌ಗಳು ಇದನ್ನು ಸ್ಪಷ್ಟಪಡಿಸಿವೆ. ನಿಮ್ಮ ಬಳಿ ದಾಖಲೆ ಇದ್ದರೆ ಸಿಬಿಐಗೆ ಕೊಡಿ. ಸುಮ್ಮನೆ ಆರೋಪ ಮಾಡಬೇಡಿ’ ಎಂದು ಜಾರ್ಜ್ ಪ್ರತಿಪಾದಿಸಿದರು.

‘ಜಾರ್ಜ್ ರಾಜೀನಾಮೆ ಕೊಡುವುದು ಬೇಡ ಎಂದು ಹಿಂದೆಯೂ ಹೇಳಿದ್ದೆ. ಈಗಲೂ ಅವರು ರಾಜೀನಾಮೆ ನೀಡುವುದಿಲ್ಲ. ಎಫ್‌ಐಆರ್‌ ದಾಖಲಿಸಿದ ಮಾತ್ರಕ್ಕೆ ರಾಜೀನಾಮೆ ನೀಡಬೇಕು ಎಂದಾದರೆ ಕೇಂದ್ರ ಸರ್ಕಾರದ 24 ಸಚಿವರು ರಾಜೀನಾಮೆ ನೀಡಬೇಕು. ನಿಮ್ಮ ಬೇಡಿಕೆಗೆ ಸಾಮಾನ್ಯ ಪ್ರಜ್ಞೆ ಇರುವ ಯಾರೂ ಸಮ್ಮತಿ ನೀಡುವುದಿಲ್ಲ. ರಾಜಕೀಯಕ್ಕಾಗಿ ನೀವು ಮಾಡುತ್ತಿರುವ ನಾಟಕ ಇದು. ಬನ್ನಿ, ಅದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಚರ್ಚೆ ನಿಲ್ಲಿಸುವಂತೆ ಸೂಚಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪರಿಷತ್ತಿನ ಇತಿಹಾಸದಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡಿದ ನಿದರ್ಶನವಿಲ್ಲ. ಈಗಲೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸದಸ್ಯರು ಮತ್ತೆ ಧರಣಿ ಆರಂಭಿಸಿದಾಗ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಸದಸ್ಯರಿಲ್ಲದೇ ಕಾದು ಕುಳಿತ ಮುಖ್ಯಮಂತ್ರಿ

ಮಧ್ಯಾಹ್ನ 3 ಗಂಟೆಗೆ ಪರಿಷತ್ತಿನ ಕಲಾಪ ಆರಂಭವಾಗಬೇಕಿತ್ತು. 2.50ಕ್ಕೆ ಸಭಾಂಗಣದ ಬಳಿ ಬಂದ ಸಿದ್ದರಾಮಯ್ಯ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ ಕೊಠಡಿಗೆ ತೆರಳಿದರು. ಬಿಜೆಪಿ ಸದಸ್ಯರು ಸದನದಲ್ಲಿ ಇರಲಿಲ್ಲ. ಕಲಾಪ ಆರಂಭಿಸಲು 3.25ರವರೆಗೂ ಅವರು ಅಲ್ಲಿಯೇ ಕಾದರು.

ಕಲಾಪದ ಆರಂಭದಲ್ಲೇ ಸಭಾತ್ಯಾಗ

ಪ್ರಶ್ನೋತ್ತರ ಅವಧಿಯಲ್ಲಿ ಉತ್ತರ ನೀಡಬೇಕಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ ಕುಮಾರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು ಕಲಾಪ ಆರಂಭವಾದಾಗ ಸದನದಲ್ಲಿ ಇರಲಿಲ್ಲ.

‘ಪ್ರಶ್ನೆಗೆ ಉತ್ತರ ನೀಡಬೇಕಾದ ಒಬ್ಬ ಮಂತ್ರಿಯೂ ಇಲ್ಲ. ಮೊದಲನೆ ದಿನವೇ ಹೀಗಾದರೆ ಹೇಗೆ. ಕಲಾಪ ನಡೆಸುವುದಾದರೂ ಏಕೆ. ಒಂದೋ ಕಲಾಪವನ್ನು ಮುಂದೂಡಿ. ಅಥವಾ ಇಂಥ ಸಚಿವರ ರಾಜೀನಾಮೆ ಪಡೆದು ಹೊಸಬರಿಗೆ ಅವಕಾಶ ಕೊಡಿ’ ಎಂದು ಈಶ್ವರಪ್ಪ ಖಾರವಾಗಿ ಹೇಳಿದರು.

ಸಚಿವ ಯು.ಟಿ.ಖಾದರ್‌, ‘ನಾವು ಉತ್ತರಿಸುತ್ತೇವೆ’ ಎಂದರು. ಇದಕ್ಕೆ ಕಿವಿಗೊಡದೆ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

ಮೊದಲ ಮಹಿಳಾ ಕಾರ್ಯದರ್ಶಿ:

‘ಕೆ.ಆರ್‌.ಮಹಾಲಕ್ಷ್ಮಿ ಅವರು ಪರಿಷತ್‌ನ ಕಾರ್ಯದರ್ಶಿಯಾಗಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿ, ಕಲಾಪದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮೊದಲ ಮಹಿಳೆ ಇವರು’ ಎಂದು ಸಭಾಪತಿ ತಿಳಿಸಿದರು. 

ಕ್ರಿಯಾಲೋಪ ಮಂಡಿಸಲು ಅವಕಾಶ ನೀಡದ ಸಭಾಪತಿ

ವಿರೋಧ ಪಕ್ಷದ ನಾಯಕ ಮಾತನಾಡುವಾಗ ಸದಸ್ಯ ವಿ.ಎಸ್‌.ಉಗ್ರಪ್ಪ ಕ್ರಿಯಾಲೋಪ ಎತ್ತಲು ಅವಕಾಶ ಕೋರಿದರು. ಆದರೆ ಸಭಾಪತಿ ಇದಕ್ಕೆ ಅವಕಾಶ ನೀಡಲಿಲ್ಲ.

‘ಕ್ರಿಯಾಲೋಪ ಎತ್ತುವುದು ನನ್ನ ಹಕ್ಕು’ ಎಂದು ಉಗ್ರಪ್ಪ  ಪ್ರತಿಪಾದಿಸಿದರೂ ಸಭಾಪತಿ ಸೊಪ್ಪು ಹಾಕಲಿಲ್ಲ.

‘ಅವಕಾಶ ನೀಡಬೇಕೋ ಬಿಡಬೇಕೋ ಎಂದು ತೀರ್ಮಾನ ಮಾಡುವ ಅಧಿಕಾರ ನನಗೂ ಇದೆ’ ಎಂದು ಸಮರ್ಥಿಸಿಕೊಂಡರು. 

‘ಉಪಮುಖ್ಯಮಂತ್ರಿಯಾಗಿದ್ದೂ ಹೀನಾಯವಾಗಿ ಸೋತವರು’

‘ಜಾರ್ಜ್ ರಾಜೀನಾಮೆ ಕೊಡದೇ ಇದ್ದರೆ ನಾವು ನೋಡಿಕೊಳ್ಳುತ್ತೇವೆ’ ಎಂದು ಈಶ್ವರಪ್ಪ ಹೇಳಿದಾಗ, ಸಿಟ್ಟಾದ ಸಿದ್ದರಾಮಯ್ಯ, ‘ಉಪಮುಖ್ಯಮಂತ್ರಿಯಾಗಿದ್ದ ನೀವು ಹೀನಾಯವಾಗಿ ಸೋತವರು. ಜನ ನಿಮ್ಮನ್ನು ತಿರಸ್ಕರಿಸಿ, ಮೂರನೇ ಸ್ಥಾನಕ್ಕೆ ತಳ್ಳಿದ್ದರು. ನಿಮಗೆ ಠೇವಣಿ ಕೂಡ ಸಿಕ್ಕಿರಲಿಲ್ಲ. ಇನ್ನೂ ನಿಮಗೆ ಬುದ್ಧಿ ಬಂದಿಲ್ಲ’ ಎಂದು ಹರಿಹಾಯ್ದರು.

’ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಪರಿಸ್ಥಿತಿ ನಿಮ್ಮದು. ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷ 40 ಸ್ಥಾನಗಳನ್ನೂ ಗೆಲ್ಲಲಿಲ್ಲ’ ಎಂದು ಈಶ್ವರಪ್ಪ ತಿರುಗೇಟು ಕೊಟ್ಟರು.

‘ಹೀನಾಯವಾಗಿ ಸೋತು ಮನೆ ಸೇರಿದ್ದೀರಿ. ಈಗ ಭ್ರಮಾಲೋಕದಲ್ಲಿದ್ದೀರಿ. ಸೋಲುತ್ತೇವೆ ಎಂದು ಗೊತ್ತಾಗಿ ನಾಟಕ ಮಾಡುತ್ತಿದ್ದೀರಿ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸದನದಲ್ಲಿ ಇಲಿ–ಹುಲಿ, ಗಿಳಿಮರಿ!

ಜಾರ್ಜ್ ಅವರನ್ನು ಸಮರ್ಥಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾದಾಗ, ಬಿಜೆಪಿಯ ಸುನಿಲ್ ಸುಬ್ರಮಣಿ ‘ಅವರು ಪ್ರಭಾವಿ ಸಚಿವರು’ ಎಂದು ಕುಟುಕಿದರು.

‘ನೀವು ಪ್ರಭಾವಿ ಅಲ್ಲವೇನ್ರೀ. ಪ್ರಭಾವಿ ಅಂದುಕೊಂಡಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು. ‘ಅವರು ಮೊದಲ ಬಾರಿ ಗೆದ್ದಿದ್ದಾರೆ. ಇಲಿ ಮೇಲೆ ಹುಲಿ ಸವಾರಿ ಮಾಡಿದಂತೆ ಆಯಿತು’ ಎಂದು ಈಶ್ವರಪ್ಪ ಕೆಣಕಿದರು.

ಇದನ್ನೇ ಬಳಸಿಕೊಂಡ ಸಿದ್ದರಾಮಯ್ಯ,  ‘ನೋಡ್ರೀ ಇಲಿಯಂತೆ. ನಿಮ್ಮ ನಾಯಕರು ಹೇಳುತ್ತಿದ್ದಾರೆ. ಕೇಳಿಸಿಕೊಳ್ಳಿ’ ಎಂದು ಸುನಿಲ್‌ಗೆ ಛೇಡಿಸಿದರು.

‘ಪಾಪ ಗಿಳಿಮರಿಗಳು’

ಯಡಿಯೂರಪ್ಪ–ಈಶ್ವರಪ್ಪ ಗಿಳಿಮರಿಗಳಿದ್ದಂತೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಚರ್ಚೆ ಮಧ್ಯೆ ಯಡಿಯೂರಪ್ಪ ಹೆಸರನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು. ಯಡಿಯೂರಪ್ಪ ಅವರನ್ನು ಕಂಡರೆ ಭಯವೇ ಎಂದು ಈಶ್ವರಪ್ಪ ಕೆಣಕಿದರು.

‘ಅಲ್ಲಾ ನೀವಿಬ್ಬರೂ ಒಂದೇ ಜಿಲ್ಲೆಯವರು. ಅದಕ್ಕೆ ಹೇಳಿದೆ’ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

‘ನಾವು ಅಣ್ಣ ತಮ್ಮಂದಿರಿದ್ದಂತೆ’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

‘ಅಣ್ಣ–ತಮ್ಮ ಗೊತ್ತಿದೆ, ಪಾಪದ ಗಿಳಿಮರಿಗಳು. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ನಿಮ್ಮ ಬಗ್ಗೆ ಏನೇನು ಬೈದಿದ್ದರು ಹೇಳಲಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಮುದ್ದು ಮಾಡಿ ಮುತ್ತುಕೊಡಲೇ’

‘ಆಡಳಿತ ಪಕ್ಷದವರನ್ನು ಟೀಕಿಸದೇ ಮುದ್ದು ಮಾಡಿ, ಮುತ್ತು ಕೊಡಲು ಸಾಧ್ಯವೇ’ ಎಂದು ಈಶ್ವರಪ್ಪ ಪ್ರಶ್ನಿಸಿದರು.

‘ನನಗೆ ಮಾತನಾಡಲು ನಿಮ್ಮವರು ಅವಕಾಶ ನೀಡುತ್ತಿಲ್ಲ. ನಿಮ್ಮಿಂದ ರಕ್ಷಣೆ ಬೇಕು’ ಎಂದು ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಕೋರಿದರು.

‘ನೀವು ಪ್ರಚೋದನೆ ಮಾಡುತ್ತೀರಾ. ಅದಕ್ಕೆ ಅವರು ಹಾಗೆ ಮಾಡುತ್ತಾರೆ’ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

* ಗಣಪತಿ  ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಿದಾಗ ಪ್ರಾಮಾಣಿಕವಾಗಿ ರಾಜೀನಾಮೆ ನೀಡಿದ ಸತ್ಯಹರಿಶ್ಚಂದ್ರ ಸಿಬಿಐ ತನಿಖೆ ವೇಳೆ ಏಕೆ ರಾಜೀನಾಮೆ ನೀಡುತ್ತಿಲ್ಲ.
– ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT