ಭಾನುವಾರ, ಮಾರ್ಚ್ 7, 2021
21 °C

ಭೂಮ್ ತಾಯಿಯ ಜೋಕಾಲಿ.. ಮನೆಗಳು ಖಾಲಿ ಖಾಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಮ್ ತಾಯಿಯ ಜೋಕಾಲಿ.. ಮನೆಗಳು ಖಾಲಿ ಖಾಲಿ...

ರಾತ್ರಿ ಸುಮಾರು 9:30 ಇರಬೇಕು "ನನ್ನ ಮುಖ ಅವನು, ಅವನ ಮುಖ ನಾನು" ದೀರ್ಘವಾಗಿ ದಿಟ್ಟಿಸಿ ನೋಡುತ್ತಿದ್ದೇವೆ. ಆ ಕಣ್ಣುಗಳಲ್ಲಿ ಯಾವ ಪ್ರೀತಿಯೂ ಕಾಣುತ್ತಿರಲಿಲ್ಲ ಬಿಡಿ, ಅದಾವುದೋ ಸಣ್ಣದೊಂದು ನಡುಕವಿರುವಂತೆ ಕಾಣಿತು. ನಮ್ಮನೆಯವರು ಆರ್ಕಿಮಿಡೀಸ್ ಥರಾ "ನೋಡಿದ್ಯಾ ಹೇಗೆ ತೂಗಾಡ್ತಾ ಇದ್ದೀವಿ, ಭೂಮಿ ನಡುಗುತ್ತಿದೆ, ಇದೆ ಫಸ್ಟ್ ನನಗೆ ಹೀಗೆ ಭೂಕಂಪ ಆಗುತ್ತೆ ಎಂದು ಗೊತ್ತಾಗಿದ್ದು" ಎನ್ನುತ್ತಿದ್ದರೆ, ನನ್ನ ತಲೆ ಧಿಮ್ ಎನ್ನುತ್ತಿಲ್ಲ, ಭೂಮ್ ತಾಯಿ ಜೋಕಾಲಿ ತೂಗಿದ್ದಾಳೆ ಎಂದುಕೊಂಡೆ. ನೋಡಿ ಈ ಭೂಮ್ ತಾಯಿ ಜೋಗುಳ ಅರಿವಾಗಿದ್ದು ಎರಡೇ ಸೆಕೆಂಡ್ ನಲ್ಲಿ, ಆದರೆ ಆಕೆ ನಮ್ಮೊಳಗಿನ ಜೀವ ಝಲ್ ಎನಿಸಿದ್ದಳು.

ಹೌದು ಭೂಮಿ ಅಲುಗಾಡಿದ ಅನುಭವ ನಮಗೆ ಆಗಿತ್ತು, ಇತ್ತ ನನ್ನವರು ಜೀವನದಲ್ಲಿ ಇದೇ ಮೊದಲ ಬಾರಿ ಭೂಕಂಪನದ ಅರಿವಾಗಿದ್ದು ಅಬ್ಬಾ ಹೀಗೆಲ್ಲಾ ಆಗುತ್ತ ಎನ್ನುತ್ತಿದ್ದರೆ, ನಾನು ಆಗಿನ್ನು 4ನೇ ತರಗತಿಯಲ್ಲಿದ್ದಾಗ ಸ್ನೇಹಿತರ ಮನೆಯಲ್ಲಿ ಮಂಚದ ಮೇಲೆ ಮಲಗಿದ್ದವಳು ನೆಲಕ್ಕೆ ಬಿದ್ದದ್ದು ನೆನಪಿಗೆ ಬಂತು. ಆಗ ತಕ್ಷಣ ಎಲ್ಲರೂ ಮನೆ ಬಿಟ್ಟು ಬೀದಿಗೆ ಬಂದಿದ್ದೆವು. ಈಗಲೂ ಇಂತಹದೇ ಅನುಭವ. ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಎಲ್ಲರಿಗೂ ಭೂಕಂಪನವಾಗಿದ್ದರ ಮೆಸೇಜ್ ನೋಡಿ ಓಹೋ ಆ ಏರಿಯಾ, ಈ ಏರಿಯಾ ಎಲ್ಲಾ ಕಡೆಯಾಗಿದೆಯಂತೆ ಎಂದು ಓದುವುದೇ ಕೆಲಸವಾಗಿತ್ತು. ಆಗ ನೋಡುತ್ತಿದ್ದಂತೆ ಯಾವುದೋ ಒಂದು ಗ್ರೂಪ್ ನಲ್ಲಿ ಇನ್ನು 30 ನಿಮಿಷದಲ್ಲಿ ಮತ್ತೊಮ್ಮೆ ಭೂಕಂಪನವಾಗುವ ಸಾಧ್ಯತೆ ಇದೆ, ಎಲ್ಲರೂ ಮನೆ ಬಿಟ್ಟು ಹೊರಗೆ ಬನ್ನಿ ಎಂಬ ಮೆಸೇಜ್ ಬಂತು.

ನಾವು ಅದುವರೆಗೂ ಮನೆಯೊಳಗೆ ಇದ್ದೆವು. ಹೊರಗಡೆಗೆ ತಲೆಹಾಕಿರಲಿಲ್ಲ, ಈ ಮೆಸೇಜ್ ನೋಡಿ ತಟ್ಟನೆ ಪಾಸ್ ಪೋರ್ಟ್ ಹಿಡಿದುಕೊಂಡು ಹೊರಡೋಣ ಎಂದು ಹೇಳಿದರೆ, ನಮ್ಮ ಮನೆಯವರು ಕೇಳಬೇಕಲ್ಲ ಏನು ಆಗುತ್ತೋ ಆಗಲಿ ಬಿಡು, ಅದೆಲ್ಲ ಎತ್ತಿಕೊಂಡು ಹೋಗೋದು ಬೇಡ. ಬಾ ಆಚೆ ಸುಮ್ಮನೆ ಸುತ್ತಾಡಿ ಬರೋಣ ಎಂದು ಹೊರಗಡೆ ಹೋದರೆ, ಅಲ್ಲಲ್ಲಿ ಗುಂಪು ಗುಂಪು ಜನ ನಿಂತಿದ್ದಾರೆ, ಎಲ್ಲರ ಬಾಯಲ್ಲೂ ಪಾತ್ರೆ ಬಿತ್ತು, ಟಿವಿ, ಅಲುಗಾಡಿತು, ಲೋಟ ಬಿತ್ತು ಎಂಬ ಮಾತು ಕೇಳಿಸುತ್ತಿತ್ತು. ಏಳನೇ ಅಂತಸ್ತಿನಲ್ಲಿದ್ದವರಂತೂ ನಡುಗಿಹೋಗಿದ್ದರು, ಮಹಡಿ ಮನೆ ಪೂರ್ಣ ವಾಲಿದ್ದರ ಅನುಭವ ನೆನೆದು ಭಯಭೀತರಾಗಿದ್ದರು. ಅಂತೂ ಭೂಮಿ ತಾಯಿಯ ಜೋಕಾಲಿ ಆಟಕ್ಕೆ ಮನೆ ಮನೆಗಳು ಖಾಲಿ ಖಾಲಿಯಾಗಿ ಜನ ರಸ್ತೆಗೆ ಬಂದಿದ್ದರು.

ಮತ್ತೆ ಅರ್ಧ ಘಂಟೆಗೆ ಭೂಕಂಪವಾಗುತ್ತೆ ಎಂಬ ಸುದ್ದಿ ಎಲ್ಲೆಡೆ ಹರಡಿತು. ನಿದ್ದೆ ಬರುವ ಸೂಚನೆ ಕಾಣುತ್ತಿರಲಿಲ್ಲ, ಮನೆ ಒಳಗೆ ಯಾರು ಹೋಗದಿದ್ದು ನೋಡಿ, ನಾವು ಹೆಜ್ಜೆ ಇಡುವ ಮನಸ್ಸು ಮಾಡಲಿಲ್ಲ.

ಆ ಅರ್ಧ ಘಂಟೆ ಹೇಗಿತ್ತು ಅಂದರೆ ಎಲ್ಲಾ ಗ್ರೂಪಿನಲ್ಲಿಯೂ ಆಗಾಗ ಮೆಸೇಜ್ ಬರುತ್ತಿತ್ತು. ಮತ್ತೆ ಮೂವತ್ತು ನಿಮಿಷ ಬಿಟ್ಟು ಆಗುತ್ತೆ ಎಂದು. ಹೀಗೆ ಆದರೆ ಮೂವತ್ತು-ಮೂವತ್ತು ಎಂದುಕೊಂಡು ಬೆಳಕು ಹರಿಯುತ್ತದೆ ಎಂದು ಕೊಳ್ಳುವಷ್ಟರಲ್ಲಿ ಯಾರೋ ಒಬ್ಬ ವ್ಯಕ್ತಿ ಸೂಟ್ ಕೇಸ್ ಸಮೇತ ರಸ್ತೆ ಬದಿಯಲ್ಲಿ ನಿಂತಿರುವ ಫೋಟೋ ಒಂದು ವಾಟ್ಸ್ ಅಪ್ ನಲ್ಲಿ ಬಂತು. ಅದನ್ನು ಎಲ್ಲರೂ ಒಬ್ಬರಿಗೊಬ್ಬರು ತೋರಿಸುತ್ತಾ ಮುಖದಲ್ಲಿ ನಗುತರಿಸಿಕೊಳ್ಳುತ್ತಿದ್ದರು. ಅಂದರೆ ಮನುಷ್ಯನಿಗೆ ತಮ್ಮ ಜೀವದ ಮೇಲೆ ಎಷ್ಟೆಲ್ಲಾ ಆಸೆ ಇರುತ್ತದೆ ಎಂಬುದಕ್ಕೆ ಅದು ಸಾಕ್ಷಿಯಾಗಿತ್ತು. ನಮ್ಮ ಜೀವನದ ತಳಪಾಯಗಳು ಸ್ವಲ್ಪ ಅಲುಗಿದರೂ ಸರಿ, ಖಂಡಿತಾ ಮನುಷ್ಯನಿಗೆ ಅಭದ್ರತೆ ಕಾಡುವುದು ಸತ್ಯ.

ಸರಿ ರಾತ್ರಿಯವರೆಗೂ ಮನೆ ಹೊರಗಡೆ ಇದ್ದವರಿಗೆ ಕುವೈತ್ ಪೋಲೀಸರು ಕಾರ್ ಗಳಲ್ಲಿ ರಸ್ತೆಗೆ ತೆರಳಿ "Everything is fine now, go inside and sleep, Nothing to worry,” ಎಂದು ಸಂದೇಶ ರವಾನಿಸುತ್ತಿದ್ದರು. ಆ ಕ್ಷಣದಲ್ಲಿ ಜನರಿಗೆ ಒಂದು ರೀತಿ ಸಾಂತ್ವನ ದೊರೆತಂತಾಗಿತ್ತು. ಸ್ವಲ್ಪ ಜನರಲ್ಲಿ ನಿರಾಳತೆ ಮೂಡಿ ಮನೆಯೊಳಗೆ ಸೇರಿಕೊಂಡರು.

-ಸುಗುಣಾ ಮಹೇಶ್, ಖಾಸಗಿ ಕಂಪೆನಿ ಉದ್ಯೋಗಿ ಕುವೈತ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.