ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಪಂದ್ಯ ಇಂದು: ಅಗ್ರಸ್ಥಾನದ ಮೇಲೆ ಚೆಟ್ರಿ ಬಳಗ ಕಣ್ಣು

ಎಎಫ್‌ಸಿ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಪಂದ್ಯ ಇಂದು: ಭಾರತಕ್ಕೆ ಮ್ಯಾನ್ಮಾರ್‌ ಎದುರಾಳಿ
Last Updated 13 ನವೆಂಬರ್ 2017, 20:09 IST
ಅಕ್ಷರ ಗಾತ್ರ

ಮಡಗಾಂವ್‌: ಅಮೋಘ ಆಟದ ಮೂಲಕ ಏಷ್ಯಾಕಪ್‌ ಚಾಂಪಿಯನ್‌ಷಿಪ್‌ಗೆ ಪ್ರವೇಶ ಗಿಟ್ಟಿಸಿರುವ ಭಾರತ ಫುಟ್‌ಬಾಲ್ ತಂಡದವರು ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಮಂಗಳವಾರ ಭರವಸೆಯಿಂದಲೇ ಕಣಕ್ಕೆ ಇಳಿಯಲಿದ್ದಾರೆ. ಇಲ್ಲಿ ನಡೆಯುವ ಪಂದ್ಯದಲ್ಲಿ ಆತಿಥೇಯರು ಮ್ಯಾನ್ಮಾರ್ ಎದುರು ಸೆಣಸುವರು.

ಸ್ಟೀಫನ್‌ ಕಾನ್‌ಸ್ಟಂಟೈನ್‌ ಗರಡಿಯಲ್ಲಿ ಪಳಗಿರುವ ಸುನಿಲ್ ಚೆಟ್ರಿ ನಾಯಕತ್ವದ ತಂಡ ಕಳೆದ 12 ಪಂದ್ಯಗಳಲ್ಲಿ ಸೋಲು ಕಾಣ ಲಿಲ್ಲ. ಫಟೋಡಾದ ಪಂಡಿತ್‌ ಜವಾಹರ್‌ಲಾಲ್‌ ನೆಹರು ಕ್ರೀಡಾಂಗಣದಲ್ಲಿ ಮ್ಯಾನ್ಮಾರ್ ವಿರುದ್ಧವೂ ಗೆಲುವಿನ ತೋರಣ ಕಟ್ಟಲು ತಂಡ ಸಜ್ಜಾಗಿದೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮಕಾವ್ ಎದುರು 4–1ರಿಂದ ಗೆಲುವು ದಾಖಲಿಸಿದ ಭಾರತ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದುಕೊಂಡಿತ್ತು. ಮಂಗಳವಾರದ ಪಂದ್ಯದಲ್ಲಿ ಗೆದ್ದು ’ಎ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ತಂಡದ ಗುರಿ.

ಭಾರತ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಮ್ಯಾನ್ಮಾರ್‌ 0–1ರಿಂದ ಸೋತಿತ್ತು. ಕಿರ್ಗಿಸ್ತಾನ್ ಮತ್ತು ಮ್ಯಾನ್ಮಾರ್‌ ಬಗಲಲ್ಲಿ ಈಗ ಚಾಂಪಿಯನ್‌ಷಿಪ್‌ನಲ್ಲಿ ತಲಾ ನಾಲ್ಕು ಪಾಯಿಂಟ್‌ಗಳು ಇದ್ದು ಇನ್ನೂ ಖಾತೆ ತೆರೆಯಬೇಕಾಗಿರುವ ಮಕಾವ್‌ ಪಾಯಿಂಟ್ ಪಟ್ಟಿಯ ಕೊನೆಯಲ್ಲಿದೆ. ಈ ಲೆಕ್ಕಾಚಾರದಲ್ಲಿ ಮಂಗಳವಾರದ ಪಂದ್ಯ ಮ್ಯಾನ್ಮಾರ್‌ಗೆ ಮಹತ್ವದ್ದು.

ಇದರಲ್ಲಿ ಚೆಟ್ರಿ ಬಳಗವನ್ನು ಸೋಲಿಸಲು ಸಾಧ್ಯವಾದರೆ ತಂಡ ಏಷ್ಯಾಕಪ್‌ನಲ್ಲಿ ಆಡುವ ಕನಸು ಜೀವಂತವಾಗಿರಿಸಿಕೊಳ್ಳಬಹುದು.

ಮೂರು ದಿನಗಳ ಹಿಂದೆಯೇ ಇಲ್ಲಿಗೆ ಬಂದಿಳಿದಿರುವ ತಂಡ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ.

ಪಂದ್ಯಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾತನಾಡಿದ ಕೋಚ್‌ ಜೆರ್ಡ್ ಜೀಸ್‌ ‘ಮೂರು ದಿನಗಳ ಹಿಂದೆಯೇ ಬಂದು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದ್ದೇವೆ. ಈಗ ತಂಡ ಪೂರ್ಣ ಭರವಸೆಯಲ್ಲಿದೆ’ ಎಂದರು.

‘ಭಾರತದ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಮ್ಯಾನ್ಮಾರ್ ತಂಡ ಗೋಲು ಗಳಿಸಲು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿತ್ತು. ಆದರೆ ಅದಕ್ಕೆ ಫಲ ಸಿಗಲಿಲ್ಲ. ಭಾರತದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಆದ್ದರಿಂದ ನಾಳಿನ ಪಂದ್ಯದಲ್ಲಿ ಕಠಿಣ ಸವಾಲು ಇದೆ. ಆದರೆ ಗೆಲ್ಲುವ ಭರವಸೆ ಕಳೆದುಕೊಂಡಿಲ್ಲ’ ಎಂದು ಅವರು ತಿಳಿಸಿದರು.

ಚೆಟ್ರಿ ವಿಶ್ವಾಸ

ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಕೂಡ ಮಂಗಳವಾರದ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ‘ಮ್ಯಾನ್ಮಾರ್ ವಿರುದ್ಧ ಅವರ ನೆಲದಲ್ಲಿ ನಡೆದ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಗೆಲುವು ನಮ್ಮದಾಗಿತ್ತು. ಮಂಗಳವಾರವೂ ಪ್ರಬಲ ಸ್ಪರ್ಧೆಯ ನಿರೀಕ್ಷೆ ಇದೆ. ಪಂದ್ಯದಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.

**

ತಂಡಗಳು

ಭಾರತ: ಗುರುಪ್ರೀತ್ ಸಿಂಗ್ ಸಂಧು (ಗೋಲ್‌ಕೀಪರ್‌), ಪ್ರೀತಮ್‌ ಕೊತಾಲ್‌, ಸಂದೇಶ್‌ ಜಿಂಗಾನ, ಅನಾಸ್ ಎಡತೋಡಿಕ, ನಾರಾಯಣ ದಾಸ್‌, ಜಾಕಿಚಂದ್ ಸಿಂಗ್‌, ಯೂಜೆನ್ಸನ್‌ ಲಿಂಗ್ಡೊ, ರಾವ್ಲಿಂಗ್ ಬೋರ್ಜಸ್‌, ಸುನಿಲ್ ಚೆಟ್ರಿ (ನಾಯಕ), ರಾಬಿನ್ ಸಿಂಗ್, ಜೆಜೆ ಲಾಲ್‌ಪೆಕ್ಲುವಾ.

ಮ್ಯಾನ್ಮಾರ್‌: ತಿಹಾಸಿ ತು (ಗೋಲ್ ಕೀಪರ್‌), ಜಾ ಮಿನ್ ಟುನ್‌, ಡೇವಿಡ್ ಟಾನ್‌, ಯಾನ್ ಆಂಗ್‌ ಕ್ಯಾ (ನಾಯಕ), ಟಿನ್‌ ವಿನ್‌ ಆಂಗ್‌, ಕ್ಯಾವ್ ಕೊಕೊ, ಆಂಗ್‌ ತು, ಯಾನ್ ನೈಂಗ್ ವೂ, ಫ್ಯೊ ಕೊಕೊ ತೇನ್‌, ಸಿ ತು ಆಂಗ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT