ಶನಿವಾರ, ಫೆಬ್ರವರಿ 27, 2021
27 °C

ಅಕಾಲಿಕ ಮಳೆಗೆ ನೆಲಕ್ಕುರಿಳಿದ ಮೆಕ್ಕೆಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕಾಲಿಕ ಮಳೆಗೆ ನೆಲಕ್ಕುರಿಳಿದ ಮೆಕ್ಕೆಜೋಳ

ಸಾಸ್ವೆಹಳ್ಳಿ: ಹಿಂದಿನ ಎರಡು ವರ್ಷಗಳಲ್ಲಿ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತ ಈ ಬಾರಿ ಅಕಾಲಿಕ ಮಳೆಯಿಂದಾಗಿ ಬೆಳೆ ಕಳೆದುಕೊಂಡಿದ್ದಾನೆ. ಅಕ್ಟೋಬರ್‌ ಅಂತ್ಯದಲ್ಲಿ ಸುರಿದ ಮಳೆಯಿಂದ ಕೈ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ. ತಾಲ್ಲೂಕಿನಾದ್ಯಂತ ಕೊಯ್ಲಿಗೆ ಬಂದಿದ್ದ ವಿವಿಧ ಬೆಳೆಗಳು ನೆಲಕಚ್ಚಿದ್ದು, ಅಪಾರ ಹಾನಿ ಸಂಭವಿಸಿದೆ ಎಂದು ಬೆನಕನಹಳ್ಳಿಯ ರೈತ ಮುಖಂಡ ಗಣೇಶಪ್ಪ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರವು ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯವಾಗಿದೆ. ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಮೆಕ್ಕೆಜೋಳ, ರಾಗಿ, ಊಟದ ಜೋಳ, ಸೂರ್ಯಕಾಂತಿ, ಹತ್ತಿ ಒಳಗೊಂಡಂತೆ ವಿವಿಧ ಬೆಳೆಗಳು ನೆಲಕಚ್ಚಿವೆ.

ಕಟಾವಿಗೆ ಬಂದಿದ್ದ ಶೇಂಗಾ ಹಾನಿಗೀಡಾಗಿದೆ ಎಂದು ತಕ್ಕನಹಳ್ಳಿಯ ರೈತ ಟಿ.ಡಿ. ನಾಗರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ತನ್ನ ಏಳೂವರೆ ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ನೆಲಕ್ಕುರುಳಿ ಹಾಳಾಗಿದೆ. ಫಸಲಿಗೆ ಬಂದಿದ್ದ ಸುಮಾರು ₹ 2.5 ಲಕ್ಷ ಮೌಲ್ಯದ ಬೆಳೆ ನಾಶವಾಗಿದೆ.

ಅಡಿಕೆ ತೋಟದಲ್ಲಿ ನೀರು ನಿಂತು ಅಪಾರ ಹಾನಿಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದ ರಾಗಿ ನೆಲಕ್ಕುರುಳಿದೆ. ಇದೇ ರೀತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ ಎಂದು ಮಳೆಯಿಂದ ಆಗಿರುವ ತೊಂದರೆಯನ್ನು ತೋಡಿಕೊಂಡರು.

ಮುಂಗಾರು ವೈಫಲ್ಯದಿಂದ ಕಂಗಾಲಾಗಿದ್ದ ರೈತ ಹರಸಾಹಸಪಟ್ಟು ತುಂಗಭದ್ರಾ ನದಿಯಿಂದ ಪಂಪ್‌ಸೆಟ್‌ಗಳ ಮೂಲಕ ಮೆಕ್ಕೆಜೋಳದ ಬೆಳೆಗೆ ನೀರು ಹರಿಸಿಕೊಂಡಿದ್ದರು. ಮತ್ತೆ ಕೆಲ ರೈತರು ಡೀಸೆಲ್‌ಪಂಪ್ ಬಳಸಿ ಎಲ್ಲಿಂದಲೋ ನೀರು ತಂದು ಮೆಕ್ಕೆಜೋಳದ ಬೆಳೆ ಉಳಿಸಿಕೊಂಡಿದ್ದರು. ಅದೆಲ್ಲ ಅಕಾಲಿಕ ಮಳೆಗೆ ಹೋಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.