ಶುಕ್ರವಾರ, ಮಾರ್ಚ್ 5, 2021
29 °C

ತಾಲ್ಲೂಕು ರಚನೆ: ತೀವ್ರಗೊಂಡ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಲ್ಲೂಕು ರಚನೆ: ತೀವ್ರಗೊಂಡ ಹೋರಾಟ

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆ ಹೋರಾಟಕ್ಕೆ ಸಂಬಂಧಿಸಿ ಅಲ್ಲಿನ ಗಾಂಧಿ ಮಂಟಪದ ಬಳಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿತು. ಸೋಮವಾರ ಸ್ಥಳೀಯ ಮಾತಾಯಿ ಪುರುಷ ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ನೌಕರರ ಒಕ್ಕೂಟ, ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇತರ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ತಾಲ್ಲೂಕು ರಚನೆಗೆ ಒತ್ತಾಯಿಸಿದರು.

ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ. ಎಲ್ಲ ಸಂಘ–ಸಂಸ್ಥೆಗಳು ಬೆಂಬಲ ಸೂಚಿಸುತ್ತಿವೆ. ಇದರಿಂದ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಹೋರಾಟ ಸಮಿತಿ ಪದಾಧಿಕಾರಿ ಐನಂಡ ಬೋಪಣ್ಣ ಹೇಳಿದರು.

ಬಿರುನಾಣಿ, ಪರಕಟಗೇರಿ, ಕುಟ್ಟ, ಬಾಳೆಲೆ ಭಾಗದ ಜನತೆಗೆ ಅನುಕೂಲವಾಗುವಂತೆ ಪೊನ್ನಂಪೇಟೆ ತಾಲ್ಲೂಕು ಕೇಂದ್ರವನ್ನು ರಚಿಸಬೇಕು ಎಂದು ಒತ್ತಾಯಿಸಿದರು. ದಿನಕಳೆದಂತೆ ಹೋರಾಟ ತೀವ್ರಗೊಳ್ಳುತ್ತಿದೆ. ಪೊನ್ನಂಪೇಟೆ ಸುತ್ತಲಿನ ಜನತೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜತೆಗೆ ವಿವಿಧ ಕೊಡವ ಸಮಾಜಗಳ ಜನತೆಯೂ ಭಾಗಿಯಾಗುತ್ತಿದ್ದಾರೆ.

ಧರಣಿಯಲ್ಲಿ ಮಾತಾಯಿ ಪುರುಷ ಸ್ವಸಹಾಯ ಸಂಘದ ಎಸ್.ವಿ.ಸುರೇಶ್, ಕಾರ್ಯದರ್ಶಿ ಎಚ್.ಪಿ.ಸುರೇಶ್, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂಡೇರ ಕುಸುಮಾ, ಉಪಾಧ್ಯಕ್ಷ ರಂಜನ್, ಸದಸ್ಯೆ ಬಿ.ಆರ್.ಸುಶೀಲಾ, ಗಿರಿಜಾ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ರಜನಿ, ಗೋಣಿಕೊಪ್ಪಲಿನ ಹಿರಿಯ ವೈದ್ಯ ಕೆ.ಕೆ.ಶಿವಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೋಳೆರ ದಯಾ ಚಂಗಪ್ಪ, ಹಿರಿಯ ವಕೀಲ ಮತ್ರಂಡ ಅಪ್ಪಚ್ಚು, ಚೆಪ್ಪುಡೀರ ಸೋಮಯ್ಯ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ್, ಮೂಕಳೇಮಾಡ ಶಾರದಾ, ಸ್ತ್ರೀಶಕ್ತಿ ಸಂಘದ ಸಂಚಾಲಕಿ ಚೊಟ್ಟೆಕಾಳಪಂಡ ಆಶಾ, ಅಡ್ಡಂಡ ಅನಿತಾ ಕಾರ್ಯಪ್ಪ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.