ಸೋಮವಾರ, ಮಾರ್ಚ್ 8, 2021
22 °C

ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣ: ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜೀನಾಮೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣ: ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜೀನಾಮೆ

ತಿರುವನಂತಪುರ: ನಿಯಮ ಉಲ್ಲಂಘಿಸಿ ರೆಸಾರ್ಟ್‌ಗೆ ರಸ್ತೆ ನಿರ್ಮಾಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ಸಾರಿಗೆ ಸಚಿವ ಥಾಮಸ್‌ ಚಾಂಡಿ ಬುಧವಾರ ರಾಜೀನಾಮೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಮಸ್‌ ಅವರಿಗೆ ಛೀಮಾರಿ ಹಾಕಿದ್ದ ಕೇರಳ ಹೈಕೋರ್ಟ್‌, ಹಗರಣ ನಡೆಸಿದ ಆರೋಪ ಹೊತ್ತುಕೊಂಡು ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿತ್ತು.

ಅಲಪ್ಪುಳ ಜಿಲ್ಲೆಯಲ್ಲಿ ಥಾಮಸ್‌ ಅವರಿಗೆ ಸೇರಿದ ರೆಸಾರ್ಟ್‌ಗೆ ಭತ್ತದ ಗದ್ದೆಗಳ ಮೂಲಕ ರಸ್ತೆ ನಿರ್ಮಿಸಲಾಗಿದೆ. ಥಾಮಸ್‌ ಅವರಿಗೆ ಸೇರಿದ ಕಂಪೆನಿಯೇ ನಿಯಮ ಉಲ್ಲಂಘಿಸಿ ಈ ರಸ್ತೆ ನಿರ್ಮಿಸಿದೆ ಎಂಬ ಆರೋಪ ಅವರ ಮೇಲಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯವು ಕಳೆದ ವಾರ ಆದೇಶ ನೀಡಿತ್ತು. ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಥಾಮಸ್‌ ಅವರ ವಿರುದ್ಧ ಅಲಪ್ಪುಳ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.

‘ನನ್ನ ವಿರುದ್ಧದ ಆರೋಪ ಸುಳ್ಳು. ನಾನು ಆರೋಪ ಮುಕ್ತನಾಗಿ ಮತ್ತೆ ಮರಳುತ್ತೇನೆ’ ಎಂದು ರಾಜೀನಾಮೆ ನೀಡಿದ ಬಳಿಕ ಥಾಮಸ್‌ ಹೇಳಿದ್ದಾರೆ.

‘ನನ್ನ ವಿರುದ್ಧದ ದೋಷಾರೋಪಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಸುಪ್ರೀಂಕೋರ್ಟ್‌ನಲ್ಲಿ ನನ್ನ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ’ ಎಂದು ಥಾಮಸ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.