ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ಸ್ಥಗಿತ ಇಲ್ಲ

Last Updated 15 ನವೆಂಬರ್ 2017, 10:02 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯ (ಕೆಪಿಎಂಇ) ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕೆಲವು ಜಿಲ್ಲೆಗಳಲ್ಲಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಮೈಸೂರಿನಲ್ಲಿ ವೈದ್ಯರ ಮುಷ್ಕರ ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮೈಸೂರು ಶಾಖೆ ಸ್ಪಷ್ಟಪಡಿಸಿದೆ.

‘ಐಎಂಎ ರಾಜ್ಯ ಶಾಖೆಯು ರಾಜ್ಯದಾದ್ಯಂತ ಮುಷ್ಕರಕ್ಕೆ ಕರೆ ನೀಡಿದರೆ ಅದರಲ್ಲಿ ಪಾಲ್ಗೊಳ್ಳುತ್ತೇವೆ. ವೈಯಕ್ತಿಕವಾಗಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದು ಐಎಂಎ ಮೈಸೂರು ಶಾಖೆಯ ಅಧ್ಯಕ್ಷ ಡಾ.ವಿಶ್ವೇಶ್ವರಯ್ಯ ಅವರು ಮಂಗಳವಾರ ನಡೆದ ಐಎಂಎ ಸದಸ್ಯರ ಸಭೆಯ ಬಳಿಕ ತಿಳಿಸಿದರು.

‘ಬೆಳಗಾವಿಯಲ್ಲಿ ಸೋಮವಾರ ನಡೆದ ಮುಷ್ಕರದಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ಸುಮಾರು 500 ವೈದ್ಯರು ತೆರಳಿದ್ದರು. ಸರ್ಕಾರವು ಮಸೂದೆ ಕೈಬಿಡುವವರೆಗೆ ಮುಷ್ಕರ ಮುಂದುವರಿಸುವುದಾಗಿ ತುಮಕೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವೈದ್ಯರು ತೀರ್ಮಾನಿಸಿದ್ದಾರೆ ಎಂಬ ವರದಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದೆ. ಇದರಿಂದ ಮೈಸೂರಿನ ವೈದ್ಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು. ಗೊಂದಲ ನಿವಾರಿಸಲು ಸಭೆ ನಡೆಸಲಾಯಿತು’ ಎಂದು ವಿವರಿಸಿದರು.

‘ನ. 3ರಂದು ರಾಜ್ಯದಾದ್ಯಂತ ಮುಷ್ಕರ ನಡೆದಿತ್ತು. ಅಂದು ನಡೆದ ರೀತಿಯಲ್ಲಿ ರಾಜ್ಯದಾದ್ಯಂತ ಮುಷ್ಕರ ನಡೆದರೆ ಮಾತ್ರ ಪರಿಣಾಮ ಬೀರುತ್ತದೆ. ಐಎಂಎ ರಾಜ್ಯ ಶಾಖೆಯಿಂದ ಮುಷ್ಕರಕ್ಕೆ ಕರೆ ಬಂದ ಕೂಡಲೇ ಎಲ್ಲ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುತ್ತೇವೆ. ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ’ ಎಂದರು.

ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ವೈದ್ಯರು ‘ಬೆಳಗಾವಿ ಚಲೊ’ಗೆ ತೆರಳಿದ್ದರಿಂದ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಸೋಮವಾರ ವೈದ್ಯಕೀಯ ಸೇವೆ ಅಸ್ತವ್ಯಸ್ತವಾಗಿತ್ತು.

ಸಾರ್ವಜನಿಕರಿಗೆ ತಿಳಿವಳಿಕೆ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಸೂದೆಯನ್ನು ವಿರೋಧಿಸುತ್ತಿರುವ ವೈದ್ಯರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತಿದೆ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಸಂಘವು ನಿರ್ಧರಿಸಿದೆ.

‘ಸಂಘದ ವತಿಯಿಂದ ಅಲ್ಲಲ್ಲಿ ವಿಚಾರಸಂಕಿರಣ ಏರ್ಪಡಿಸಲಾಗುವುದು. ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಸಲು ಕರಪತ್ರಗಳನ್ನು ಹಂಚಲಾಗುವುದು. ಈ ಕೆಲಸದಲ್ಲಿ ಸ್ವಯಂಸೇವಾ ಸಂಸ್ಥೆಗಳ ನೆರವು ಕೂಡಾ ಪಡೆಯುತ್ತೇವೆ’ ಎಂದು ವಿಶ್ವೇಶ್ವರಯ್ಯ ತಿಳಿಸಿದರು.

ಸಾರ್ವಜನಿಕರಿಗೆ ಈ ಕಾಯ್ದೆಯಿಂದ ತುಂಬಾ ತೊಂದರೆಯಿದೆ. ಅದನ್ನು ಸಾರ್ವಜನಿಕರು ಅರಿತು ವೈದ್ಯರ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿದರು. ಡಾ. ಸಿ.ಶರತ್‌ ಕುಮಾರ್‌, ಡಾ.ಜಿ.ಸಿದ್ದೇಶ್‌, ಡಾ.ಎಸ್‌.ಪಿ.ಯೋಗಣ್ಣ, ಡಾ.ಸಂಜಯ್‌ ರಾಜಶೇಖರ್‌, ಡಾ.ಹರೀಶ್‌, ಡಾ.ಮಹೇಶ್‌, ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಆಸ್ಪತ್ರೆಗಳ ವೈದ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹೊರನಡೆದ ಬಸವನಗೌಡ
ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭ ವೈದ್ಯರೊಬ್ಬರು ಕೆಟ್ಟ ಪದ ಬಳಸಿದ್ದನ್ನು ಆಕ್ಷೇಪಿಸಿ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಸವನಗೌಡ ಅವರು ಸಭೆಯಿಂದ ಹೊರನಡೆದ ಘಟನೆ ನಡೆಯಿತು. ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಆಸ್ಪತ್ರೆ ಸೋಮವಾರ ಅರ್ಧದಿನ ಕಾರ್ಯನಿರ್ವಹಿಸಿತ್ತು.

‘ವೈದ್ಯರ ಮುಷ್ಕರಕ್ಕೆ ಜೆಎಸ್‌ಎಸ್‌ನ ಬೆಂಬಲವಿದೆ. ಜೆಎಸ್‌ಎಸ್‌ ಸೋಮವಾರ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಿತ್ತು. ಈ ವಿಷಯವನ್ನು ಅರಿಯದೆ ವೈದ್ಯರೊಬ್ಬರು ಟೀಕೆ ಮಾಡಿದ್ದಾರೆ. ಬಸವನಗೌಡ ಅವರು ತುರ್ತು ಕೆಲಸವಿದ್ದ ಕಾರಣ ಸಭೆಯಿಂದ ಬೇಗ ನಿರ್ಗಮಿಸಿದ್ದಾರೆ’ ಎಂದು ಐಎಂಎ ಪದಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT