ಸೋಮವಾರ, ಮಾರ್ಚ್ 1, 2021
23 °C

ಯುವ ಮನಕೆ ಲಗ್ಗೆಯಿಟ್ಟ ಗ್ರಾಜಿಯಾ

ಯೋಗಿತಾ ಆರ್‌.ಜೆ. Updated:

ಅಕ್ಷರ ಗಾತ್ರ : | |

ಯುವ ಮನಕೆ ಲಗ್ಗೆಯಿಟ್ಟ ಗ್ರಾಜಿಯಾ

ದೇಶಿ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್‌ ಹಾಗೂ ಮೋಟಾರ್‌ ಸೈಕಲ್‌ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ನಗರ ಮತ್ತು ಉಪನಗರಗಳ ಜನರನ್ನು ಸೆಳೆಯಲು ಹೋಂಡಾ ಮೋಟಾರ್ಸ್ ಇಂಡಿಯಾ ಇತ್ತೀಚೆಗಷ್ಟೆ ಮುಂಬೈನಲ್ಲಿ ಗ್ರಾಜಿಯಾ ಸ್ಕೂಟರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಟ್ಯಾಂಡರ್ಡ್, ಅಲಾಯ್, ಡಿಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಗ್ರಾಜಿಯಾ ಅಭಿವೃದ್ಧಿಮಾಡಲಾಗಿದೆ. ಹೋಂಡಾ ಸ್ಕೂಟರ್ ಮಾದರಿಗಳಲ್ಲೇ ಭಿನ್ನವಾದ ವಿನ್ಯಾಸವನ್ನು ಗ್ರಾಜಿಯಾ ಹೊಂದಿದೆ.

ಟ್ವಿನ್ ಪಾಡ್ ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರುವ ಗ್ರಾಜಿಯಾ, ಮುಂಭಾಗದಲ್ಲಿ ‘ವಿ’ ಆಕಾರದಲ್ಲಿ ರೂಪುಗೊಂಡಿದೆ. 5.94 ಅಡಿ ಉದ್ದ, 2.28 ಅಡಿ ಅಗಲ, 3.75 ಅಡಿ ಎತ್ತರ, 1,260 ಎಂ.ಎಂ ಉದ್ದದ ವೀಲ್‌ ಬೇಸ್, 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಇದೇ ಮೊದಲ ಬಾರಿಗೆ ತನ್ನ ಸ್ಕೂಟರ್‌ನಲ್ಲಿ ಸಂಪೂರ್ಣ ಡಿಜಿಟಲ್‌ ಮೀಟರ್ ಕನ್ಸೋಲ್‌ ಅನ್ನು ಹೋಂಡಾ ಪರಿಚಯಿಸಿದೆ. ಎಷ್ಟು ಕಿಲೋಮೀಟರ್‌ ವೇಗದಲ್ಲಿ ಚಲಾಯಿಸಿದರೆ ಇಂಧನ ಉಳಿಯುತ್ತದೆ ಎನ್ನುವು ದನ್ನು ಈ ಡಿಜಿಟಲ್‌ ಮೀಟರ್‌ನಲ್ಲಿ ತಿಳಿಯ ಬಹುದು. ಇದರಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಅಳವಡಿಸಲಾಗಿದೆ. ಸೀಟ್‌ ಕೆಳಗೆ ಎರಡು ಹೆಲ್ಮೆಟ್‌ ಇಡುವಷ್ಟು ಜಾಗವಿದೆ.

ಎಂಜಿನ್ ಸಾಮರ್ಥ್ಯ: ಗ್ರಾಜಿಯಾ ಆವೃತ್ತಿಯು ಆಕ್ಟಿವಾ ಮಾದರಿ ಯಲ್ಲೇ 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 8.52-ಬಿಎಚ್‌ಪಿ ಶಕ್ತಿ ಮತ್ತು 10.54 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 107 ಕೆ.ಜಿ ತೂಕ ಇದ್ದು, ಸುಲಭ ವಾಗಿ ನಿಭಾಯಿಸ ಬಹುದು. ಲೀಟರಿಗೆ 45–50 ಕಿ.ಮೀ ಮೈಲೇಜ್ ನೀಡುತ್ತದೆ.

ಸ್ಕೂಟರ್‌ಗಳಲ್ಲಿಯೇ ಹೆಚ್ಚು ಇಂಧನ ಸಾಮರ್ಥ್ಯದ ಟ್ಯಾಂಕನ್ನು ಗ್ರಾಜಿಯಾ ಹೊಂದಿದೆ. 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್, 12 ಇಂಚಿನ ಅಲಾಯ್ ವೀಲ್, ಮುಂಭಾಗದ ಚಕ್ರದಲ್ಲಿ 190 ಎಂ.ಎಂ ಗಾತ್ರದ ಡಿಸ್ಕ್ ಬ್ರೇಕ್ ಇದೆ. ಇದರಿಂದ ಗ್ರಾಜಿಯಾ ಡಿಯೋ ಸ್ಕೂಟರ್‌ಗಿಂತಲೂ ಉತ್ತಮವಾಗಿದೆ ಎನ್ನಬಹುದು.

ಲಭ್ಯವಿರುವ ಬಣ್ಣಗಳು: ನಿಯೋ ಆರೆಂಜ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಪರ್ಲ್ ಪ್ಯಾಟರ್ನ್ ರೆಡ್, ಪರ್ಲ್ ಅಮೇಜಿಂಗ್ ವೈಟ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಮಾರ್ವೆಲ್‌ ಬ್ಲೂ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯ.

ಗ್ರಾಜಿಯಾ ಚಾಲನೆ ಅನುಭವ: ಗ್ರಾಜಿಯಾ ಸ್ಟಾರ್ಟ್‌ ನಯವಾಗಿದ್ದು, ಸೆಲ್ಫ್‌ ಅಥವಾ ಕಿಕ್‌ ಮೂಲಕ ಸುಲಭವಾಗಿ ಸ್ಟಾರ್ಟ್‌ ಮಾಡಬಹುದು. 15 ಕಿ.ಮೀ.ನಿಂದ ಶುರುವಾಗುವ ಆಕ್ಸಿಲರೇಟರ್ ಮೀಟರ್‌ನಲ್ಲಿ ತೋರಿಸಿರುವಂತೆ 85 ಕಿ.ಮೀವರೆಗೂ ಏರಿಸಬಹುದು. ಉತ್ತಮ ಬ್ರೇಕ್‌ ವ್ಯವಸ್ಥೆ ಮತ್ತು ಎಂಆರ್ಎಫ್‌ ಜಾಫರ್‌ ಎಫ್‌ಜಿ ಟೈರ್‌ನಿಂದಾಗಿ ಹೆಚ್ಚು ವಾಹನ ದಟ್ಟಣೆಯ ರಸ್ತೆಯಲ್ಲಿಯೂ ನಯವಾಗಿ ವಾಹನ ಚಲಾಯಿಸಿದ ಅನುಭವ ನೀಡುತ್ತದೆ.

40–45ಕಿ.ಮೀ ವೇಗದಲ್ಲಿ ಹೋಗುತ್ತಿದ್ದಾಗ ಗುಂಡಿಗಳು ಸಿಕ್ಕರೆ ಮುಂಭಾಗದ ಸಸ್ಪೆನ್ಷನ್‌ನಿಂದ ಹೆಚ್ಚು ಎತ್ತಿಹಾಕುವುದಿಲ್ಲ. ಆರಾಮದಾಯಕ ಸೀಟ್‌ ಮತ್ತು ನಯವಾದ ಹಿಡಿತದಿಂದ ಗುಂಡಿಗಳಿದ್ದರೈ ಹೆಚ್ಚು ಅಲುಗಾಡದಂತೆ ಸಾಗಬಹುದು. 190 ಮಿ.ಮೀ ಫ್ರಂಟ್‌ ಡಿಸ್ಕ್‌ ಮತ್ತು 130 ಮಿ.ಮೀ ಹಿಂದಿನ ಡ್ರಮ್‌ ಬ್ರೇಕ್‌ಗಳಿವೆ. ಉತ್ತಮ ಎಲ್‌ಇಡಿ ಹೆಡ್‌ ಲೈಟ್‌ಗಳಿಂದ ರಾತ್ರಿ ವೇಳೆಯೂ ಚಲಾಯಿಸುವುದು ಸುಲಭ. ಎಲ್ಲಾ ರೀತಿಯಿಂದಲೂ ಗ್ರಾಜಿಯಾ ನಗರ ಪ್ರದೇಶಕ್ಕೆ ಹೆಚ್ಚು ಸೂಕ್ತವಾಗುವಂತಿದೆ.

ಗ್ರಾಜಿಯಾ ಮಾದರಿಗಳ ಬೆಲೆ (ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ಗ್ರಾಜಿಯಾ ಎಸ್‌ಟಿಡಿ  ₹57,827

ಗ್ರಾಜಿಯಾ ಅಲಾಯ್  ₹57,897

ಗ್ರಾಜಿಯಾ ಡಿಎಲ್ಎಕ್ಸ್  ₹62,269

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.