ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ್ರೋಹಿ ಅಲ್ಲ;ಉತ್ತರ ಕರ್ನಾಟಕದ ಧ್ವನಿ’

Last Updated 15 ನವೆಂಬರ್ 2017, 20:34 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತರ ಕರ್ನಾಟಕ ಭಾಗದ ಜನರಿಗೆ ಅಧಿಕಾರ ಮತ್ತು ಅನುದಾನ ನೀಡುವ ವಿಷಯದಲ್ಲಿ ಎಲ್ಲ ಸರ್ಕಾರಗಳು ಅನ್ಯಾಯ ಮಾಡಿವೆ’ ಎಂದು ಕಾಂಗ್ರೆಸ್ ಉಚ್ಚಾಟಿತ ಶಾಸಕರ ಎ.ಎಸ್. ಪಾಟೀಲ ನಡಹಳ್ಳಿ ದೂರಿದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ವಿಶೇಷ ಚರ್ಚೆ ವೇಳೆ ಮಾತನಾಡಿದ ಅವರು, ‘ಈ ಭಾಗಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ನಿರಂತರವಾಗಿ ತಾರತಮ್ಯ ಮಾಡಿವೆ. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಕೂಡಲ ಸಂಗಮದೇವ’ ಎಂದು ಎರಡೂ ಸರ್ಕಾರಗಳ ಆಡಳಿತ ವೈಖರಿಯನ್ನು ಟೀಕಿಸಿದರು.

‘ನನ್ನನ್ನು ನಾಡದ್ರೋಹಿ ಎಂದು ಕರೆದಿದ್ದಾರೆ. ಅವರಿಗೆ ಉತ್ತರಿಸಬೇಕಿದೆ. ಹಾಗೆಯೇ ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ಅವರು ಏನೂ ಮಾಡಿಲ್ಲ ಎಂದೂ ಮಾತನಾಡುತ್ತಿದ್ದಾರೆ. ಅದನ್ನು ಸತ್ಯಕ್ಕೆ ದೂರ ಎಂದು ಸಾಬೀತುಪಡಿಸಬೇಕಿದೆ. ಹೀಗಾಗಿ, ಈ ಭಾಗದ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಬೇಕು. ಕೇವಲ 10 ದಿನಗಳ ಅಧಿವೇಶನದಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ’ ಎಂದು ನಡಹಳ್ಳಿ ಅಭಿಪ್ರಾಯಪಟ್ಟರು.

‘ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಉತ್ತರ ಕರ್ನಾಟಕ ಭಾಗಕ್ಕೆ ಶೇ 50ರಷ್ಟು ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಈ ಸರ್ಕಾರದಿಂದ ಯಾವುದೂ ಪಾಲನೆಯಾಗಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮತ್ತು ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸೂಕ್ತ ರೀತಿಯಲ್ಲಿ ಪ್ರಾತಿನಿಧ್ಯ ನೀಡಿಲ್ಲ’ ಎಂದು ನಡಹಳ್ಳಿ ದೂರಿದರು.

‘2010ರ ಒಳಗಾಗಿ ಸರ್ಕಾರ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ₹ 31,000 ಕೋಟಿ ನೀಡಬೇಕೆಂದು 2002ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ನಂಜುಡಪ್ಪ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವವರೆಗೂ ಈ ಭಾಗಕ್ಕೆ ನಯಾ ಪೈಸೆ ನೀಡಿರಲಿಲ್ಲ’ ಎಂದರು.

‘ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿರಲಿಲ್ಲ. ಬದಲಾದ ರಾಜಕೀಯ ಸ್ಥಿತ್ಯಂತರದಿಂದ ಮುಖ್ಯಮಂತ್ರಿ ಆಗಿದ್ದರು. ಆದರೂ ಈ ಭಾಗಕ್ಕೆ ಮೀಸಲಿಟ್ಟದ್ದ ಹಣದಲ್ಲಿ ಹಲವು ಅಭಿವೃದ್ಧಿ ಕಾರ್ಯವನ್ನು ಅನುಷ್ಠಾನಗೊಳಿಸಿದ್ದರು’ ಎಂದರು.

‘ಶಿಕ್ಷಣ ಕ್ಷೇತ್ರದಲ್ಲೂ ತಾರತಮ್ಯ ಆಗಿದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಅವಧಿ ಹೊರತುಪಡಿಸಿದರೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗಕ್ಕೆ 176 ಕಾಲೇಜುಗಳನ್ನು ಮಂಜೂರು ಆಗಿತ್ತು. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದಲ್ಲಿ 884 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹೆಚ್ಚಾಗಿದೆ. ಆದರೆ, ಅದಕ್ಕೆ ಅನುಗುಣವಾಗಿ ಸರ್ಕಾರ ಅನುದಾನ ನೀಡಲಿಲ್ಲ’ ಎಂದು ನಡಹಳ್ಳಿ ಹೇಳಿದರು.

‘ಈ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದಕ್ಕೆ ಸದನದಲ್ಲಿ ಹೆಚ್ಚಿನ ಸಮಯ ಬೇಕಾಗಿದೆ. ಹೀಗಾಗಿ ನಾನು ಈ ಬಾರಿ ಬೆಳಗಾವಿ ಅಧಿವೇಶನ 10 ದಿನಗಳ ಬದಲು 30 ದಿನ ನಡೆಸಬೇಕು ಎಂದು ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೆ. ಈ ಭಾಗಕ್ಕೆ ಆಗಿರುವ ಅನ್ಯಾಯಗಳನ್ನು ನಾನು ಸದನದಲ್ಲಿ ಸುದೀರ್ಘವಾಗಿ ಹೇಳಲು ಅವಕಾಶ ಕಲ್ಪಿಸಬೇಕು’ ಎಂದೂ ಒತ್ತಾಯಿಸಿದರು.

ಉತ್ತರ ಕರ್ನಾಟಕ ಜನರ ಆಶೀರ್ವಾದದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರಲಿಲ್ಲ. ಬದಲಾದ ರಾಜಕೀಯ ಸ್ಥಿತ್ಯಂತರದಿಂದ ಆಗಿದ್ದರು

-ಎ.ಎಸ್‌. ಪಾಟೀಲ ನಡಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT