ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆ, ಸಂಜೆ ಚಳಿ, ಮಧ್ಯಾಹ್ನ ಉರಿ ಉರಿ

ಮಂಜಿನ ಮುಂಜಾವಿನಲ್ಲಿ ವಾಯು ವಿಹಾರ; ಕನಿಷ್ಠ 16, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
Last Updated 16 ನವೆಂಬರ್ 2017, 9:43 IST
ಅಕ್ಷರ ಗಾತ್ರ

ಗದಗ: ಆಗಿನ್ನೂ ಬೆಳಿಗ್ಗೆ 5.45. ನಗರದ ಹೊರವಲಯದ ಗದಗ– ಕಳಸಾಪುರ ರಸ್ತೆಯಲ್ಲಿ ದಟ್ಟ ಮಂಜು. ಮೈಕೊರೆಯುವ ಚಳಿ. ಬೀಸುತ್ತಿರುವ ಶೀತಗಾಳಿ. ಚಳಿಯಿಂದ ಪಾರಾಗಲು ಗುಡಿಸಲ ಮುಂದೆ ಬೆಂಕಿ ಹಾಕಿಕೊಂಡು, ಮೈ ಕಾಯಿಸಿಕೊಳ್ಳುತ್ತಿರುವ ಅಲೆಮಾರಿಗಳು. ಮಂಜಿನ ಮುಸುಕು ಸರಿಸಿ ಆಗಷ್ಟೇ ಹೊರಬರುತ್ತಿರುವ ಬೆಳಕು. ಮಬ್ಬುಗತ್ತಲಲ್ಲಿ ತಲೆಗೆ ಟೋಪಿ, ಮಫ್ಲರ್‌ ಸುತ್ತಿಕೊಂಡು ವಾಯು ವಿಹಾರಕ್ಕೆ ಹೊರಟ ಜನರು. 

ಟೀ ಕುಡಿದು, ದ್ವಿಚಕ್ರ ವಾಹನದಲ್ಲಿ ವ್ಯಾಪಾರಕ್ಕೆ ಹೊರಡಲು ಅಣಿಆಗುತ್ತಿರುವ ಉತ್ತರ ಭಾರತದಿಂದ ನಗರಕ್ಕೆ ರಗ್ಗು, ಸ್ವೆಟರ್ ಮಾರಾಲು ಬಂದಿರುವ ಯುವಕರು. ಬುಧವಾರ ನಸುಕಿನಲ್ಲಿ ನಗರದಲ್ಲಿ ಕಂಡ ದೃಶ್ಯಗಳಿವು.

ಈ ಬಾರಿ ನವೆಂಬರ್‌ ತಿಂಗಳಲ್ಲೇ ಚಳಿ ನಗರವನ್ನು ಗಾಢವಾಗಿ ತಬ್ಬಿಕೊಳ್ಳುತ್ತಿದ್ದು, ಕಳೆದ ಒಂದು ವಾರದಿಂದ ಬೆಳಿಗ್ಗೆ ಮತ್ತು ಸಂಜೆ ಮೈಕೊರೆಯುವ ಚಳಿಯ ಅನುಭವಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಮಧ್ಯಾಹ್ನದ ಹೊತ್ತಿಗೆ ನೆತ್ತಿ ಸುಡುವಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಸಂಜೆಯ ವೇಳೆಗೆ ಮತ್ತೆ ಬಿರು ಬಿಸಿಲಿನಿಂದ ಕಾದ ಭೂಮಿಗೆ ಮುಲಾಮು ಸವರು­ವಂತೆ ತಣ್ಣನೆಯ ಸುಳಿಗಾಳಿ ಬೀಸುತ್ತಿದೆ.

ನವೆಂಬರ್‌ ಮೊದಲ ವಾರದಿಂದ ನಗರದಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದ್ದು, ವಾಹನಗಳು ದೀಪ ಹಾಕಿಕೊಂಡು ಸಂಚರಿಸುತ್ತಿವೆ. ಬೆಳಿಗ್ಗೆ ಶಾಲೆಗೆ ಹೊರಟ ಪುಟಾಣಿಗಳು ಚಳಿಯಿಂದ ರಕ್ಷಿಸಿಕೊಳ್ಳಲು, ಸ್ವೆಟರ್‌ ಧರಿಸಿ, ತಲೆಗೆ ಉಣ್ಣೆಯ ಟೋಪಿ ಹಾಕಿಕೊಳ್ಳುತ್ತಿದ್ದಾರೆ.

ನವೆಂಬರ್‌ 12, 13, 14ರಂದು ನಗರದಲ್ಲಿ ಕನಿಷ್ಠ 16 ರಿಂದ 17 ಡಿಗ್ರಿ ಸೆಲ್ಸಿಯಸ್‌ ಮತ್ತು ಗರಿಷ್ಠ 30ರಿಂದ 31 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ.

2012ರಲ್ಲಿ ದಾಖಲೆ ಚಳಿ: ನಗರದಲ್ಲಿ 5 ವರ್ಷಗಳ ಹಿಂದೆ ಅಂದರೆ 2012ರ ನವೆಂಬರ್‌ 17ರಂದು ಅತಿ ಕಡಿಮೆ ಅಂದರೆ 12 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಕಳೆದ ವರ್ಷ ಚಳಿಯ ಪ್ರಮಾಣ ಸ್ವಲ್ಪ ಕಡಿಮೆ ಇತ್ತು. ಕನಿಷ್ಠ 13.2ರಷ್ಟು ಉಷ್ಣಾಂಶ ದಾಖಲಾಗಿತ್ತು.

‘ಈ ವರ್ಷ ಚಳಿ ಸ್ವಲ್ಪ ಬೇಗ ಆರಂಭವಾಗಿದೆ. ಬೆಳಗಿನ ಜಾವ ಮಂಜು, ಶೀತ ಗಾಳಿಯೂ ಬೀಸುತ್ತಿದೆ. ಮಕ್ಕಳಿಗೆ ಜ್ವರ, ನೆಗಡಿ, ಗಂಟಲು ನೋವು ಪ್ರಾರಂಭವಾಗಿದೆ’ ಎಂದು ಮಕ್ಕಳನ್ನು ಶಾಲೆಗೆ ಅಣಿಗೊಳಿಸುತ್ತಿದ್ದ ವಿವೇಕಾನಂದ ನಗರದ ಗೃಹಣಿ ಶೋಭಾ ಮೇಟಿ ಹೇಳಿದರು.

ಇಡೀ ನಗರವೇ ಮಂಜಿನ ಹೊದಿಕೆಯಲ್ಲಿ ಕಳೆದು ಹೋಗುವ ಈ ಕಾಲ ಪ್ರಕೃತಿ ಆರಾಧಕರಿಗೆ, ಕವಿಗಳಿಗೆ ಆಹ್ಲಾದ ತಂದರೆ, ಮುಂಜಾವಿನಲ್ಲೇ ಕೆಲಸಕ್ಕೆ ಹೊರಡುವವರಿಗೆ, ಹಾಲು, ಪೇಪರ್ ಹಾಕುವವರಿಗೆ, ತುಸು ಬೇಸರ ಮೂಡಿಸಿದೆ.

ಬುಧವಾರ ಬೆಳಿಗ್ಗೆ ಕಳಸಾಪುರ ರಸ್ತೆಯಲ್ಲಿ ಉದಯಿಸುತ್ತಿರುವ ಸೂರ್ಯನಿಗೆ ಎದುರಾಗಿ ನಿಂತು ಮನಮೋಹಕ ಮಂಜಿನ ಮುಂಜಾವಿನಲ್ಲಿ ಉತ್ಸಾಹಿಗಳು ವಾಯು ವಿಹಾರ, ವ್ಯಾಯಾಮ ಮಾಡುತ್ತಿದ್ದರು. ಮರಳಿ ಬರುವಾಗ ಇಡೀ ನಗರಕ್ಕೆ ಸ್ವಾಗತ ಕೋರುವಂತೆ ವಿಶಾಲವಾಗಿ ಹರಡಿಕೊಂಡಿರುವ ಭೀಷ್ಮ­ಕೆರೆಯ ನೀರು ಹೆಪ್ಪುಗಟ್ಟಿದಂತೆ\ ನಿಶ್ಚಲವಾಗಿತ್ತು. ಹಿನ್ನೆಲೆಯಲ್ಲಿ ಬೃಹತ್‌ ಬಸವೇಶ್ವರ ಮೂರ್ತಿ. ಸೂರ್ಯ ರಶ್ಮಿಗಳು ಕೆರೆಯ ನೀರಿನಲ್ಲಿ ಬಿದ್ದು, ವರ್ಣ ವೈಭವದ ಜತೆಗೆ ಶುಭೋದಯ ಕೋರುತ್ತಿದ್ದವು.

***

ನವೆಂಬರ್‌ ತಿಂಗಳಲ್ಲಿ ಗದುಗಿನಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶ

2016 - 13.6 ಡಿಗ್ರಿ ಸೆಲ್ಸಿಯಸ್
2015 - 16.1 ಡಿಗ್ರಿ ಸೆಲ್ಸಿಯಸ್
2014 - 13.2 ಡಿಗ್ರಿ ಸೆಲ್ಸಿಯಸ್
2013 - 13.4 ಡಿಗ್ರಿ ಸೆಲ್ಸಿಯಸ್
2012 - 12.0 ಡಿಗ್ರಿ ಸೆಲ್ಸಿಯಸ್
2011 - 14.1 ಡಿಗ್ರಿ ಸೆಲ್ಸಿಯಸ್
2010 - 17.2 ಡಿಗ್ರಿ ಸೆಲ್ಸಿಯಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT