ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೋಯಿನ್‌ಗೆ ಗಂಟುಬಿದ್ದ ಸಂಚಾರಿ ವಿಜಯ್!

Last Updated 16 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ರಂಗಪ್ಪ ಹೋಗ್ಬಿಟ್ನಾ?!’ ನಟ ಸಂಚಾರಿ ವಿಜಯ್‌ ನಟನೆಯ ಮೊದಲ ಚಿತ್ರ. ಇದು ಪಕ್ಕಾ ಹಾಸ್ಯ ಚಿತ್ರ. ಈ ಚಿತ್ರದ ಬಳಿಕ ಅವರು ಹೆಚ್ಚಾಗಿ ಗಂಭೀರ ಸಿನಿಮಾಗಳಲ್ಲಿಯೇ ನಟಿಸಿದರು. ‘ನನ್‌ ಮಗಳೇ ಹಿರೋಯಿನ್‌’ ಚಿತ್ರದ ಮೂಲಕ ಮತ್ತೆ ಕಾಮಿಡಿ ಅಂಕಣಕ್ಕೆ ಲಗ್ಗೆ ಇಟ್ಟಿದ್ದಾರೆ. ಬಾಹುಬಲಿ ನಿರ್ದೇಶನದ ಈ ಚಿತ್ರ ಇಂದು (ನ. 17) ತೆರೆ ಕಾಣುತ್ತಿದೆ. ಈ ಕುರಿತು ಅವರ ಜತೆ ನಡೆಸಿದ ಮಾತುಕತೆ ಇಲ್ಲಿದೆ.

* ‘ನನ್‌ ಮಗಳೇ ಹಿರೋಯಿನ್’ ಚಿತ್ರದ ಬಗ್ಗೆ ಹೇಳಿ.
ಇದು ಸಂಪೂರ್ಣ ಹಾಸ್ಯಭರಿತ ಚಿತ್ರ. ಸಿನಿಮಾದ ಒಳಗೊಂದು ಸಿನಿಮಾ ನಡೆಯುತ್ತದೆ. ನನ್ನದು ಆ ಚಿತ್ರದ ನಿರ್ದೇಶಕನ ಪಾತ್ರ. ಸಿನಿಮಾ ನಿರ್ದೇಶಿಸಬೇಕೆಂಬ ಕನಸು ಹೊತ್ತು ಬಂದವನ ತೊಳಲಾಟ ಇಲ್ಲಿದೆ. ಬಣ್ಣದ ಬದುಕು ಎಲ್ಲರನ್ನೂ ಸೆಳೆಯುತ್ತದೆ. ಚಿತ್ರದಲ್ಲಿನ ಪಾತ್ರವೂ ನನ್ನನ್ನು ಹಾಗೆಯೇ ಸೆಳೆಯುತ್ತದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಕಾಮಿಡಿಯ ರಸದೌತಣ ಸಿಗಲಿದೆ.

* ಈ ಪಾತ್ರಕ್ಕೆ ಮಾನಸಿಕ ಸಿದ್ಧತೆ ಹೇಗಿತ್ತು?
‘ರಂಗಪ್ಪ ಹೋಗ್ಬಿಟ್ನಾ?!’ ಚಿತ್ರದಲ್ಲಿ ಕಾಮಿಡಿ ಪಾತ್ರಧಾರಿಯಾಗಿ ನಟಿಸಿದ್ದೆ. ಅಂದಿನಿಂದ ನನಗೆ ಎಲ್ಲ ಗಂಭೀರ ಪಾತ್ರಗಳೇ ಸಿಕ್ಕಿವೆ. ನಾನು ಹಲವು ಹಾಸ್ಯ ನಾಟಕ ನಿರ್ದೇಶಿಸಿದ್ದೇನೆ. ಜೊತೆಗೆ ಕಾಮಿಡಿ ಪಾತ್ರಗಳಲ್ಲಿಯೂ ನಟಿಸಿದ್ದೇನೆ. ಸಿನಿಮಾದ ಹಾಸ್ಯ ಪಾತ್ರಗಳಲ್ಲಿ ನಟಿಸಬೇಕೆಂಬ ಮಹದಾಸೆ ಇತ್ತು. ‘ನನ್‌ ಮಗಳೇ ಹಿರೋಯಿನ್’ ಚಿತ್ರದ ಕಥೆ ಕೇಳಿದ ತಕ್ಷಣ ಇಷ್ಟವಾಯಿತು. ಈ ಪಾತ್ರಕ್ಕಾಗಿ ನಾನು ವಿಶೇಷ ಪೂರ್ವ ತಯಾರಿ ಮಾಡಿಕೊಂಡಿಲಿಲ್ಲ. ಆದರೆ, ಯಾವುದೇ ಸಿನಿಮಾ ಮಾಡುವುದಕ್ಕೂ ಮೊದಲು ಒಂದಷ್ಟು ತಯಾರಿ ಅತ್ಯಗತ್ಯ. ಸಿನಿಮಾ ಜಗತ್ತಿನಲ್ಲಿ ನಿರ್ದೇಶಕನಾಗುವುದು ಸುಲಭವಲ್ಲ. ಚಿತ್ರಕಥೆಯಿಂದ ಹಿಡಿದು ತೆರೆಯ ಮೇಲೆ ಸಿನಿಮಾವನ್ನು ತರುವವರೆಗೂ ಅವನದ್ದು ಅವಿರತಶ್ರಮ. ಅವನ ಮೇಲೆ ಒತ್ತಡ ಹೆಚ್ಚಿರುತ್ತದೆ. ನಿರ್ದೇಶಕನೇ ಸಿನಿಮಾದ ನಾವಿಕ. ಇದನ್ನು ಹಾಸ್ಯದ ಮೂಲಕ ಹೇಳಿದ್ದೇವೆ.

* ಈ ಚಿತ್ರದ ವಿಶೇಷ ಅಂಶ ಏನು?
ಹಾಸ್ಯನಟರ ದಂಡೇ ಚಿತ್ರದಲ್ಲಿದೆ. ಇದೇ ಚಿತ್ರದ ಧನಾತ್ಮಕ ಅಂಶ. ಚಿತ್ರೀಕರಣದ ಅನುಭವವೂ ಖುಷಿ ಕೊಟ್ಟಿದೆ. ತಬಲಾ ನಾಣಿ, ಬುಲೆಟ್‌ ಪ್ರಕಾಶ್‌, ಪವನ್‌ಕುಮಾರ್, ಬಿ.ಸಿ. ಪಾಟೀಲ್‌, ವಿಜಯ್‌ ಚೆಂಡೂರ್ ಇದ್ದಾರೆ. ಜತೆಗೆ, ಇಬ್ಬರು ನಾಯಕಿಯರು. ನಿರ್ದೇಶಕನ ಪಾತ್ರಧಾರಿಯಾದ ನನ್ನಲ್ಲಿ ಅಹಂ ಇರುತ್ತದೆ. ನಾನು ಮಾಡಿದ್ದೇ ಶ್ರೇಷ್ಠ ಎಂದು ಬೀಗುತ್ತಿರುತ್ತೇನೆ. ಆದರೆ, ನನ್ನ ಸಹಾಯಕ ನಿರ್ದೇಶಕರು ದಾರಿ ತಪ್ಪಿಸುತ್ತಾ ಹೋಗುತ್ತಾರೆ. ಇದನ್ನೇ ಚಿತ್ರದ ನಿರ್ದೇಶಕ ಬಾಹುಬಲಿ ಅವರು ಭಿನ್ನವಾದ ಹಾಸ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.

* ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ?
ಚಿತ್ರದಲ್ಲಿ ಕೇವಲ ಕಾಮಿಡಿ ಮಾತ್ರ ಇಲ್ಲ. ತಾಯಿ, ತಂಗಿಯ ಸೆಂಟಿಮೆಂಟ್‌ ಕೂಡ ಇದೆ. ಶ್ರೀಮಂತಿಕೆಯ ಹಿನ್ನೆಲೆಯುಳ್ಳವರು ಚಿತ್ರರಂಗಕ್ಕೆ ಬರುವುದಿಲ್ಲ. ವಿವಿಧ ವರ್ಗದ ಜನರು ಕನಸು ಕಟ್ಟಿಕೊಂಡು ಈ ಕ್ಷೇತ್ರ ಪ್ರವೇಶಿಸುತ್ತಾರೆ. ಅವರ ಬದುಕಿನ ಹಿನ್ನೆಲೆಯೂ ಭಿನ್ನವಾಗಿರುತ್ತದೆ. ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಅವರು ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದನ್ನು ಹೇಳಿದ್ದೇವೆ. ಸಿನಿರಂಗ ಪ್ರವೇಶಿಸುವ ಹೊಸಬರನ್ನು ಈ ಚಿತ್ರ ಸೆಳೆಯಲಿದೆ.

* ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆಯೇ?
ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಇದೆ. ಆದರೆ, ಕಾಲ ಇನ್ನೂ ಪಕ್ವವಾಗಿಲ್ಲ. ಚಿತ್ರ ನಿರ್ದೇಶಿಸುವ ಮೊದಲು ಅದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಬೇಕು. ಸಂಪೂರ್ಣ ಹಾಸ್ಯಮಯ ಮತ್ತು ಗಂಭೀರವಾದ ಚಿತ್ರ ನಿರ್ದೇಶಿಸುವ ಮಹದಾಸೆಯಿದೆ. ಪ್ರತಿ ದೃಶ್ಯವೂ ಪ್ರೇಕ್ಷಕರನ್ನು ಸೆಳೆಯುವಂತಹ ಸಿನಿಮಾ ನೀಡುವುದೇ ನನ್ನ ಗುರಿ. ಈ ನಿಟ್ಟಿನಲ್ಲಿಯೂ ತಯಾರಿ ನಡೆದಿದೆ. ಸದ್ಯಕ್ಕೆ ಈ ಚಿತ್ರದಲ್ಲಿ ನಿರ್ದೇಶಕನಾಗಿದ್ದೇನೆ ಎಂಬುದೇ ಖುಷಿಯ ಸಂಗತಿ. ‌‌

* ನಿಮ್ಮ ಮುಂದಿನ ಯೋಜನೆಗಳೇನು?
‘6ನೇ ಮೈಲಿ’ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ‘ಕೃಷ್ಣತುಳಸಿ’ ಚಿತ್ರದಲ್ಲಿ ದೃಷ್ಟಿದೋಷವುಳ್ಳ ಪ್ರವಾಸಿ ಗೈಡ್‌ ಒಬ್ಬರ ಬದುಕು, ಪ್ರೀತಿಯ ಸುತ್ತ ಹೆಣೆದಿರುವ ಕಥನವಿದೆ. ಈ ಸಿನಿಮಾ ಮುಂದಿನ ವರ್ಷದ ಜನವರಿ ವೇಳೆಗೆ ಪ್ರೇಕ್ಷಕರ ಮುಂದೆ ಬರಲಿದೆ. ‘ಪಾದರಸ’ ಚಿತ್ರದ ಕೆಲಸವೂ ಮುಗಿದಿದೆ. ‘ವರ್ತಮಾನ’ ಮತ್ತು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರದ ಕೆಲಸವೂ ಸಾಗಿದೆ. ‘ಆಡುವ ಗೊಂಬೆ’ ಚಿತ್ರದ ಶೂಟಿಂಗ್‌ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT