ಸೋಮವಾರ, ಮಾರ್ಚ್ 1, 2021
24 °C
₹2ಸಾವಿರಕ್ಕೆ ಚೀಲ ಕೇಳುವವರಿಲ್ಲ: ರೈತರ ಕಳವಳ

ಚಿಂಚೋಳಿ: ಈರುಳ್ಳಿ ಬೀಜ ರಸ್ತೆಗೆ ಸುರಿದು ಜೆಡಿಎಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಈರುಳ್ಳಿ ಬೀಜ ರಸ್ತೆಗೆ ಸುರಿದು ಜೆಡಿಎಸ್‌ ಪ್ರತಿಭಟನೆ

ಚಿಂಚೋಳಿ: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳಿಂದ ತಾಲ್ಲೂಕಿನಲ್ಲಿ ಸಾರ್ವಜನಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಜೆಡಿಎಸ್‌ ಆರೋಪಿಸಿದೆ.

ತಾಲ್ಲೂಕಿನಲ್ಲಿ ಬೆಳೆದ ಈರುಳ್ಳಿ ಬೀಜಕ್ಕೆ ಪ್ರಸಕ್ತ ವರ್ಷ ಬೇಡಿಕೆಯಿಲ್ಲದೇ ಬೆಳೆಗಾರರು ಕಂಗಾಲಾಗಿದ್ದಾರೆ. 2012ರಲ್ಲಿ (70ಕೆ.ಜಿ) ಚೀಲಕ್ಕೆ ₹85 ಸಾವಿರ ದರ ಲಭಿಸಿತ್ತು. ಈಗ ₹2ಸಾವಿರಕ್ಕೆ ಚೀಲ ಈರುಳ್ಳಿ ಬೀಜ ಕೇಳುವವರಿಲ್ಲದಂತಾಗಿದೆ. ತೊಗರಿ, ಉದ್ದು, ಹೆಸರು, ಸೋಯಾ, ಕಬ್ಬು, ಅರಿಶಿಣ ಹಾಗೂ ಈರುಳ್ಳಿ ಬೆಳೆಗಾರರು ತಮ್ಮ ಉತ್ಪನ್ನಕ್ಕೆ ಸೂಕ್ತ ಬೆಲೆ ಲಭಿಸದೇ ತೊಂದರೆಗೆ ಸಿಲುಕಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣವಾಗಿವೆ ಎಂದು ಜೆಡಿಎಸ್‌ ದೂರಿದೆ.

ದಿನಕ್ಕೊಂದು ನಿಯಮಗಳನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರ ಆಹಾರ ಭದ್ರತಾ ಕಾಯ್ದೆ ಹೆಸರಲ್ಲಿ ಬಡವರನ್ನು ಶೋಷಣೆಗೆ ತಳ್ಳುತ್ತಿದೆ. ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸದೇ ಬಯೋಮೆಟ್ರಿಕ್‌ ನಿಯಮ ಜಾರಿ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದ ಜೆಡಿಎಸ್‌ ಕಾರ್ಯಕರ್ತರು, ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಕೈಬಿಟ್ಟು ಬಯೋಮೆಟ್ರಿಕ್‌ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಎಚ್‌ಕೆಡಿಬಿ ನೆರವಿನ ಕಾಮಗಾರಿಗಳನ್ನು ಕೆಆರ್‌ಐಡಿಸಿಎಲ್‌ ಕಳಪೆ ಗುಣಮಟ್ಟದಿಂದ ನಡೆಸುತ್ತಿದ್ದು, ಸರ್ಕಾರದ ಅನುದಾನ ದುರುಪಯೋಗ ತಡೆಯಬೇಕು ಎಂದು ಒತ್ತಾಯಿಸಿದರು.

ಕೇಂದ್ರದ ನೋಟು ರದ್ದತಿಯ ನಿರ್ಧಾರ ದೇಶದಲ್ಲಿ ತಲ್ಲಣ ಉಂಟಾಗಿದ್ದು ಜನರ ನೆಮ್ಮದಿ ಕಸಿಯಲಾಗಿದೆ. ಬಡವರ, ಚಿಕ್ಕ ವ್ಯಾಪಾರಿಗಳ ಜೀವನ ಮುರಾಬಟ್ಟೆಯಾಗಿದೆ ಎಂದು ದೂರಿದರು. ಮಿನಿ ವಿಧಾನಸೌಧಕ್ಕೆ ನೀಡಿದ ಜಮೀನು ಅಕ್ರಮ ಪರಭಾರೆಯಾಗಿದ್ದು ಇದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಹಿರಿಯ ಮುಖಂಡರಾದ ಸುಶೀಲಾಬಾಯಿ ಬಸವರಾಜ ಕೊರವಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜೀದ್‌ ಪಟೇಲ್‌, ಆರ್‌.ಆರ್‌.ಪಾಟೀಲ, ರವಿಶಂಕರರೆಡ್ಡಿ ಮುತ್ತಂಗಿ ಮಾತನಾಡಿದರು. ದೌಲಪ್ಪ ಸುಣಗಾರ, ಸಿದ್ದಯ್ಯ ಸ್ವಾಮಿ, ರಜಾಕ್‌ ಪಟೇಲ್‌, ಸಂಜು ಮುತ್ತಟ್ಟಿ, ಶಿವಕುಮಾರ ಶೇರಿಕಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

***

ತಾಲ್ಲೂಕಿನ ವಿವಿಧೆಡೆ ರೈತರು ಬೆಳೆದ ಈರುಳ್ಳಿ ಬೀಜ ಕೇಳುವವರೇ ಇಲ್ಲದಂತಾಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ನಷ್ಟಕ್ಕೊಳಗಾದ ರೈತರಿಂದ ಈರುಳ್ಳಿ ಬೀಜ ಖರೀದಿಗೆ ಮುಂದಾಗಬೇಕು.

–ರವಿಶಂಕರರೆಡ್ಡಿ ಮುತ್ತಂಗಿ, ಜೆಡಿಎಸ್‌ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.