ಸೋಮವಾರ, ಮಾರ್ಚ್ 8, 2021
31 °C

ಪರಿಷತ್ ಅಭ್ಯರ್ಥಿಗಳ ಪಟ್ಟಿ: ಬಿಜೆಪಿಯಲ್ಲಿ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಷತ್ ಅಭ್ಯರ್ಥಿಗಳ ಪಟ್ಟಿ: ಬಿಜೆಪಿಯಲ್ಲಿ ಅತೃಪ್ತಿ

ಬೆಳಗಾವಿ: ವಿಧಾನ ಪರಿಷತ್ತಿನ ಆರು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡಿದೆ. ಪಕ್ಷಕ್ಕಾಗಿ ದುಡಿದವರು, ಹಾಲಿ ಸದಸ್ಯರನ್ನು ಕೈಬಿಟ್ಟು ಕೊನೆಗಳಿಗೆಯಲ್ಲಿ ಟಿಕೆಟ್‌ಗಾಗಿ ಬಂದವರಿಗೆ ಆದ್ಯತೆ ನೀಡಿರುವುದಕ್ಕೆ ಅನೇಕ ಹಿರಿಯ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಸಭಾಪತಿ ಡಿ.ಎಚ್. ಶಂಕರಮೂರ್ತಿ ಪುತ್ರ ಡಿ.ಎಸ್. ಅರುಣ್‌ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ನಿರಾಕರಿಸಿ, ಈ ಕ್ಷೇತ್ರದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್‌ಗೆ ಟಿಕೆಟ್ ನೀಡಲಾಗಿದೆ.

‘ಸಂಘ ಪರಿವಾರದ ಹಳೆಯ ನಂಟು ಬಳಸಿ ಮಗನಿಗೆ ಟಿಕೆಟ್‌ ಕೊಡಿಸಲು ಶಂಕರಮೂರ್ತಿ ಪ್ರಭಾವ ಬೀರಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಅನೇಕರು ಪ್ರಮುಖರ ಸಮಿತಿ ಸದಸ್ಯರಾಗಿದ್ದಾರೆ. ಅವರಿಗೆ ಕರೆ ಮಾಡಿದರೆ ಕ್ಯಾಪ್ಟನ್‌ಗೆ (ಯಡಿಯೂರಪ್ಪ) ಹೇಳಿ ಎಂದು ಹೇಳುತ್ತಿದ್ದರು. ಪಕ್ಷಕ್ಕೆ ಇಂತಹ ಸ್ಥಿತಿ ಬಂದೊದಗಿದೆ’ ಎಂದು ಪರಿಷತ್ತಿನ ಹಿರಿಯ ಸದಸ್ಯರೊಬ್ಬರು ಸಿಟ್ಟು ಹೊರಹಾಕಿದರು.

‘ಕರ್ನಾಟಕದಲ್ಲಿ ನಾಯಕತ್ವವೇ ಇಲ್ಲ. ಯಡಿಯೂರಪ್ಪ ನಾಯಕರಾಗಿದ್ದರೆ ಎಲ್ಲರೂ ಅವರ ಮಾತು ಕೇಳಬೇಕು. ಆದರೆ, ಯಾರೊಬ್ಬರೂ ಅವರ ಮಾತು ಕೇಳುವುದಿಲ್ಲ. ಅಂದ ಮೇಲೆ ಪಕ್ಷ ನಾಯಕನಿಲ್ಲದ ಹಡಗಾಗಿದೆ’ ಎಂದು ಅವರು ಹೇಳಿದರು.

‘ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಜಯಶಂಕರ್‌, ಪಕ್ಷದ ಸಹ ವಕ್ತಾರ ಎ.ಎಚ್. ಆನಂದ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಹಿಂದಿನ ಎರಡು ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಅ. ದೇವೇಗೌಡ ಅವರನ್ನು ಕೊನೆಗಳಿಗೆಯಲ್ಲಿ ಪಕ್ಷಕ್ಕೆ ಕರೆ ತಂದ ವಿ. ಸೋಮಣ್ಣ, ಅವರಿಗೆ ಟಿಕೆಟ್ ಕೊಡಿಸಿರುವುದು ಮೂಲ ಬಿಜೆಪಿಯವರಿಗೆ ಸಿಟ್ಟು ತರಿಸಿದೆ’ ಎಂದು ಮೂಲಗಳು ಹೇಳಿವೆ.

ಈಶಾನ್ಯ ಪದವೀಧರ ಕ್ಷೇತ್ರ ಪ್ರತಿನಿಧಿಸುತ್ತಿರುವ ಅಮರನಾಥ ಪಾಟೀಲ ಬದಲು ಕೆ.ಬಿ. ಶ್ರೀನಿವಾಸ್‌ಗೆ ಟಿಕೆಟ್ ನೀಡಿರುವುದಕ್ಕೆ ಉತ್ತರ ಕರ್ನಾಟಕದ ಅನೇಕ ಶಾಸಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಪಾಟೀಲರು ಪದವೀಧರರಲ್ಲ. ಕಳೆದ ಬಾರಿ ಇದು ಯಾರಿಗೂ ಗೊತ್ತಿರಲಿಲ್ಲ. ಹೇಗೋ ಆಯ್ಕೆಯಾದರು. ಈ ಬಾರಿ ಕಾಂಗ್ರೆಸ್‌ನವರಿಗೆ ಗೊತ್ತಾಗಿದೆ. ಚುನಾವಣೆಗೆ ಸ್ಪರ್ಧಿಸಲು ಪದವೀಧರರಾಗಿರುವುದು ಕಡ್ಡಾಯವಲ್ಲ. ಆದರೆ, ಅದನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಶ್ರೀನಿವಾಸ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ’ ಎಂದು ಪ್ರಮುಖರ ಸಮಿತಿ ಸದಸ್ಯರೊಬ್ಬರು ತಿಳಿಸಿದರು.

‘ನೈರುತ್ಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿರುವ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ ಕಾರ್ಣಿಕ್‌ಗೆ ಮತ್ತೆ ಟಿಕೆಟ್ ನೀಡುವುದು ಬೇಡ ಎಂದು ಆರ್‌ಎಸ್ಎಸ್‌ ‍‍ಪ್ರಮುಖರು ಸಲಹೆ ನೀಡಿದ್ದರು. ಆದರೆ, ಪ್ರಮುಖರ ಸಮಿತಿ ಅವರ ಪರವಾಗಿತ್ತು. ಅದೇ ಕಾರಣಕ್ಕೆ ಕಾರ್ಣಿಕ್‌ಗೆ ಟಿಕೆಟ್ ನೀಡಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

**

ಪ್ರಮೋದ್‌ಗೆ ವಿವರಣೆ ಕೇಳಿದ ವೇಣುಗೋಪಾಲ್‌

ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ಅವರಿಗೆ ಕರೆ ಮಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಬಗ್ಗೆ ವಿವರಣೆ ಪಡೆದಿದ್ದಾರೆ.

‘ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ಅದು ಬಿಜೆಪಿಯವರು ಹಬ್ಬಿಸುತ್ತಿರುವ ಸುಳ್ಳು ಸುದ್ದಿ. ಈ ಕುರಿತು ವೇಣುಗೋಪಾಲ್ ಕರೆ ಮಾಡಿದ್ದರು. ಅವರಿಗೂ ಸ್ಪಷ್ಟ ಪಡಿಸಿದ್ದೇನೆ’ ಎಂದು ಪ್ರಮೋದ್‌, ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಮೋದ್ ಸದ್ಯವೇ ನಮ್ಮ ಜತೆ ಬರಲಿದ್ದಾರೆ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ತಮಾಷೆಗೆ ಹೇಳಿದ್ದಾರೆ. ನಾನು ಯಾವುದೇ ನಾಯಕರನ್ನೂ ಭೇಟಿ ಮಾಡಿಲ್ಲ’ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.