7
ಇಲ್ಲಿ 'ಜೀವ'ವೀಣೆ ಮಿಡಿಯುತ್ತಿಲ್ಲ

ಸಿಂಪಾಡಿಪುರದ ವೀಣೆಬ್ರಹ್ಮರು

Published:
Updated:
ಸಿಂಪಾಡಿಪುರದ ವೀಣೆಬ್ರಹ್ಮರು

ಈ ಊರಿನಲ್ಲಿ ವೀಣೆಗಳು ತಯಾರಾಗುತ್ತವೆ. ವೀಣೆಯ ಮಾಧುರ್ಯ ಮಾತ್ರ ಊರಿನಿಂದ ಹೊರಗೇ ಉಳಿದಿದೆ! ಈ ಊರಿನ ಹೆಸರು ಸಿಂಪಾಡಿಪುರ. ತನ್ನ ಹೆಸರಲ್ಲೇ ಸಂಗೀತದ ಸೆಳಕನ್ನು ಒಳಗೊಂಡಿರುವ ಊರಿದು. ಸಿಂಪಾಡಿಪುರ ಹೆಸರುವಾಸಿ ಆಗಿರುವುದು ಕೂಡ ಸಂಗೀತದ ಕಾರಣದಿಂದಲೇ. ವೀಣೆಗಳನ್ನು ತಯಾರಿಸುವ ಕರ್ನಾಟಕದ ಏಕಮಾತ್ರ ಊರು ಎನ್ನುವುದು ಇದರ ಅಗ್ಗಳಿಕೆ. ತಮಿಳುನಾಡಿನ ತಂಜಾವೂರನ್ನು ಬಿಟ್ಟರೆ ದಕ್ಷಿಣ ಭಾರತದಲ್ಲಿ ವೀಣೆಗಳ ತಯಾರಿಕೆಯ ಮತ್ತೊಂದು ವಿಳಾಸ ಸಿಂಪಾಡಿಪುರದ್ದು.

ತಂಜಾವೂರಿನ ವೀಣೆಗಳಿಗೆ ಇಲ್ಲದ ಎರಡು ವಿಶೇಷ ಸಿಂಪಾಡಿಪುರದ ವೀಣೆಗಳಿಗಿದೆ. ಇವುಗಳ ತಯಾರಿಕೆಯ ಯಾವ ಹಂತದಲ್ಲೂ ಯಂತ್ರಗಳ ಬಳಕೆಯಾಗುವುದಿಲ್ಲ ಎನ್ನುವುದು ಮೊದಲ ವಿಶೇಷ. ಕೊಡ ಕೆತ್ತುವುದರಿಂದ ಹಿಡಿದು, ತಲೆಯ ಚಿತ್ತಾರ ಬಿಡಿಸುವವರೆಗಿನ ಎಲ್ಲ ಕೆಲಸಗಳನ್ನೂ ಯಂತ್ರಗಳ ನೆರವಿಲ್ಲದೆ ಕಸುಬುದಾರರೇ ಮಾಡುತ್ತಾರೆ. ಆ ಮಟ್ಟಿಗಿದು ಅಕ್ಷರಶಃ ಕರಕುಶಲ ಕಲೆ!

ಎರಡನೆಯ ವಿಶೇಷ ಇರುವುದು ವೀಣೆಗಳಲ್ಲಲ್ಲ; ಅವುಗಳ ತಯಾರಕರಲ್ಲಿ. ಸಿಂಪಾಡಿಪುರದಲ್ಲಿ ವೀಣೆಗಳನ್ನು ತಯಾರಿಸುವವರೆಲ್ಲ ದಲಿತ ವರ್ಗದವರು.

ವೀಣೆಯ ಜೊತೆಗಿನ ರಮ್ಯ ಭಾವನೆಗಳೆಲ್ಲ ಇಲ್ಲಿಗೆ ಕೊನೆಗೊಳ್ಳುತ್ತವೆ. ಪಳಗಿದ ಬೆರಳುಗಳು ನುಡಿಸಿದಂತೆ ವೀಣೆಯಿಂದ ಮಧುರವಾದ ಸ್ವರಗಳು ಹೊಮ್ಮುತ್ತವೆ. ಆದರೆ,  ವೀಣೆಯ ಧ್ವನಿಕಂಪನಗಳ ಜಾಡುಹಿಡಿದು ಹೋದರೆ, ಅವುಗಳನ್ನು ರೂಪಿಸುವವರ ಬದುಕಿನ ಸ್ವರಗಳು ಅಷ್ಟೇನೂ ಹಿತಕರವಾಗಿಲ್ಲ. ಸಿಂಪಾಡಿಪುರಕ್ಕೆ ಹೋಗಿ ನೋಡಿದರೆ, ತಂತಿಗಳಿಲ್ಲದ ಬೋಳು ವೀಣೆಗಳು ಕಾಣಿಸುತ್ತವೆ ಹಾಗೂ ಅವುಗಳ ಕಲಾವಿದರ ಸಂಕಟದ ದನಿಗಳಷ್ಟೇ ಕೇಳಿಸುತ್ತವೆ.

ಸಿಂಪಾಡಿಪುರ ಬೆಂಗಳೂರಿಗೆ ದೂರದ ಊರೇನಲ್ಲ. ವಿಧಾನಸೌಧಕ್ಕೆ ಸುಮಾರು 50 ಕಿ.ಮೀ. ದೂರದಲ್ಲಿರುವ ಪುಟ್ಟ ಊರಿದು. ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯಲ್ಲಿನ ಕೇಂದ್ರಸ್ಥಳ ಮಧುರೆ. ಶನಿದೇಗುಲದ ಕಾರಣದಿಂದಾಗಿ ಮಧುರೆ ನಾಡಿನಲ್ಲೆಲ್ಲ ಪರಿಚಿತ. ಇಲ್ಲಿಂದ ಆರೇಳು ಕಿ.ಮೀ. ದೂರದಲ್ಲಿ ಸಿಂಪಾಡಿಪುರವಿದೆ. ಮಧುರೆಯವರೆಗೂ ಬಸ್‌ ಸವಲತ್ತಿದೆ. ಅಲ್ಲಿಂದ ಸಿಂಪಾಡಿಪುರಕ್ಕೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕು.

ವೀಣೆಗಳ ಊರಿಗೆ ಹೋಗುವ ದಾರಿಯುದ್ದಕ್ಕೂ ಮೋಹಕ ಹಸಿರಿದೆ. ರಾಗಿ–ಜೋಳದ ಹೊಲಗಳು, ತೆಂಗು–ಅಡಿಕೆಯ ತೋಟಗಳಿವೆ. ನೀಲಗಿರಿ ತೋಪುಗಳೂ ಅಲ್ಲಲ್ಲಿವೆ. ಅರೆ ಮಲೆನಾಡಿನ ತುಣುಕಿನಂತೆ ಕಾಣಿಸುವ ಪರಿಸರವನ್ನು ಹಾದೇ ಸಿಂಪಾಡಿಪುರ ತಲುಪಬೇಕು. ಇದು ಸುಮಾರು 150 ಮನೆಗಳಿರುವ ಪುಟ್ಟ ಊರು. ವಿವಿಧ ಸಮುದಾಯಗಳ ಕುಟುಂಬಗಳು ಅಲ್ಲೊಂದು ಇಲ್ಲೊಂದು ಇದ್ದರೂ ಊರಿನಲ್ಲಿ ದಲಿತರದೇ ಮೇಲುಗೈ. ದನಕರು, ಹೊಲ–ಮನೆ ಎಂದುಕೊಂಡು ಬದುಕು ಸಾಗಿಸುತ್ತಿರುವ ಜನರಿವರು.

ಮಧುರೆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ, ಅರ್ಚಕರೂ ಆದ ಗೋಪಿನಾಥ್ ಅವರಿಗೆ ಸಿಂಪಾಡಿಪುರದ ಗತವೈಭವ ಚೆನ್ನಾಗಿ ನೆನಪಿದೆ. ‘ನಾವು ಹುಡುಗರಾಗಿದ್ದಾಗ ದಿನವೂ ವೀಣೆಗಳು ಇಲ್ಲಿಂದ ಬೆಂಗಳೂರಿಗೆ ಹೋಗುತ್ತಿದ್ದವು. ಆ ಕಾಲ ಈಗಿಲ್ಲ. ಮೊದಲೆಲ್ಲ ವೀಣೆಯ ಸ್ಮರಣಿಕೆಗಳಿಗೆ ಡಿಮ್ಯಾಂಡ್‌ ಇತ್ತು. ಈಗ ಸ್ಮರಣಿಕೆಗಳ ರೂಪ ಬದಲಾಗಿದೆ. ಹಿಂದೆ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ಇತ್ತು. ಆಗ ಸಿಂಪಾಡಿಪುರಕ್ಕೆ ಹೆಚ್ಚು ಬೇಡಿಕೆ ಇತ್ತು. ಮಧುರೆಯಲ್ಲಿ ಒಂದು ಎಕರೆ ಭೂಮಿಗೆ ₹ 1 ಲಕ್ಷ ಬೆಲೆ ಇದ್ದರೆ, ಸಿಂಪಾಡಿಪುರದಲ್ಲಿ ಭೂಮಿಯ ಬೆಲೆ ಹಲವು ಪಟ್ಟು ಹೆಚ್ಚಾಗಿತ್ತು. ಅದನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಲಾಗಿತ್ತು. ಈಗ ಎಲ್ಲವೂ ಒಂದೇ ಆಗಿದೆ. ವೀಣೆ ಮಾಡುವವರು ತೀರಾ ಕಡಿಮೆಯಾಗಿದ್ದಾರೆ’ ಎಂದು ಗೋಪಿನಾಥ್‍ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಮಧುರೆಯಲ್ಲಿ ನಿಂತು ಯಾರನ್ನು ಕೇಳಿದರೂ ಸಿಂಪಾಡಿಪುರದಲ್ಲಿನ ವೀಣೆ ಮಾಡುವ ಕಸುಬುದಾರರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು ಕಷ್ಟ. ಒಂದಾನೊಂದು ಕಾಲದಲ್ಲಿ ಎಂದೇ ಮಾತು ಆರಂಭವಾಗುತ್ತದೆ. ಆಗ ಊರಿನಲ್ಲಿ ನೂರಕ್ಕೆ 80-90 ಜನ ವೀಣೆ ಮಾಡುವವರೇ ಆಗಿದ್ದರು. ಪೆನ್ನೋಬಳಯ್ಯ ಎನ್ನುವವರು ಐವತ್ತು ವರ್ಷಗಳ ಹಿಂದೆ ಊರಿಗೆ ವೀಣೆಯ ಗುಂಗು ಹತ್ತಿಸಿದರು. ಆವರೆಗೆ ಹೊಲ, ಜಾನುವಾರು ಎಂದು ಓಡಾಡಿಕೊಂಡಿದ್ದ ಊರವರು ಹಲಸಿನ ಮರದ ದಿಮ್ಮಿಗಳ ನಂಟು ಬೆಳೆಸಿದರು. ಸಂಗೀತ ಕಲಿಯುವವರು ಹೆಚ್ಚಾಗಿದ್ದ ದಿನಗಳವು. ಪ್ರತಿ ತಿಂಗಳು ನೂರಾರು ವೀಣೆ ಹಾಗೂ ತಂಬೂರಿಗಳು ಸಿಂಪಾಡಿಪುರದಿಂದ ಬೆಂಗಳೂರು ತಲುಪುತ್ತಿದ್ದವು. ಕಾಲ ಬದಲಾಯಿತು. ಈಗ ವೀಣೆ ಕೊಳ‍್ಳುವವರು ಕಡಿಮೆಯಾಗಿದ್ದಾರೆ. ತಂಬೂರಿಯಂತೂ ಅಳಿವಿನಂಚಿನಲ್ಲಿರುವ ವಾದ್ಯ. ಫೈಬರ್‍ ಕೊಡದ ವೀಣೆಗಳು ಬಂದ ಮೇಲಂತೂ ಕುಶಲಕರ್ಮಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ವೀಣೆ ಮಾಡುವವರು ಬೇರೆ ಕೆಲಸ ಹುಡುಕಿಕೊಂಡಿದ್ದಾರೆ. ಎಲ್ಲೋ ಹಳೆಯ ತಲೆಮಾರಿನ ಒಬ್ಬಿಬ್ಬರು ಈಗ ಉಸಿರಾಡುತ್ತಿರಬಹುದಷ್ಟೇ… ಈ ರೀತಿಯ ನಿರುತ್ಸಾಹದ ಮಾತುಗಳೇ ಸಿಂಪಾಡಿಪುರದ ಬಗ್ಗೆ ಕೇಳಿಸುತ್ತವೆ. ಆದರೆ, ಒಂದಾನೊಂದು ಕಾಲದ ಕಥೆಗಳಿಂದ ಈ ಹೊತ್ತಿನ ಸಿಂಪಾಡಿಪುರಕ್ಕೆ ಬಂದರೆ... ಊರು ಹೇಳುವುದು ಬೇರೆಯದೇ ಕಥೆಯನ್ನು.

(ಸಿಂಪಾಡಿಪುರಕ್ಕೆ ವೀಣೆಯನ್ನು ಪರಿಚಯಿಸಿದ ಪೆನ್ನೋಬಳಯ್ಯ)

ಊರಿನ ಆರಂಭಕ್ಕೆ ಮೊದಲು ಎದುರಾದವರು ಗಂಗಣ್ಣ. ಊರ ಮುಂದಲ ಹನುಮನಗುಡಿಗೆ ಕೊಡೆಯಂತೆ ಹಬ್ಬಿಕೊಂಡ ಅರಳಿಮರದ ನೆರಳಲ್ಲಿ ಗಂಗಣ್ಣ ವೀಣೆಯ ದೇಹದ ಅಂಗವೊಂದನ್ನು ಬಿಡಿಸುತ್ತಿದ್ದರು. ಮರದ ಮೇಲೆ ಕೈಯಾಡಿಸುತ್ತಲೇ ಮಾತಿಗೆ ತೊಡಗಿದರು.

‘ಇಪ್ಪತ್ತೈದು ವರ್ಷದಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಎಲ್ಲ ಸಾಮಗ್ರಿ ಸಿದ್ಧವಿದ್ದು, ಸಹಾಯಕ್ಕೆ ಹುಡುಗರು ದೊರೆತರೆ ವಾರಕ್ಕೆರಡು ವೀಣೆ ತಯಾರಿಸಬಹುದು. ಒಂದು ವೀಣೆಗೆ 6 ಸಾವಿರದಿಂದ 8 ಸಾವಿರ ರೂಪಾಯಿ ದೊರೆಯುತ್ತದೆ’ ಎಂದರು ಗಂಗಣ್ಣ. ಮರದ ನೆರಳಿಗೆ ಕುತೂಹಲದಿಂದ ಬಂದ ಅಜ್ಜನೊಬ್ಬನನ್ನು ಕರೆದ ಅವರು, ‘ಇವರ ಜೊತೆ ಹೋಗಿ, ವೀಣೆ ಮಾಡುವ ಮನೆಗಳನ್ನು ತೋರಿಸುತ್ತಾರೆ’ ಎಂದು ತಮ್ಮ ಕೆಲಸದಲ್ಲಿ ತೊಡಗಿಕೊಂಡರು.

‘ಬನ್ನಿ, ನಮ್ಮ ಮನೆಗೆ ಹೋಗೋಣ’ ಎಂದು ಕರೆದೊಯ್ದ ಅಜ್ಜನ ಹೆಸರು ಮುನಿಯಪ್ಪ. ತಮ್ಮ ಮನೆಯ ಕೋಣೆಯೊಂದರಲ್ಲಿ ಆಕಾರ ತಳೆದು ನಿಂತಿದ್ದ ವೀಣೆಗಳನ್ನು ತೋರಿಸುವಾಗ ಅವರ ಮುಖದಲ್ಲಿ ಹಳೆಯ ನೆನಪುಗಳು ಕದಲಿದಂತೆ ಕಾಣಿಸಿತು. ‘ವಯಸ್ಸೆಷ್ಟು ಅಜ್ಜಾ’ ಎಂದರೆ, ಅರವತ್ತೋ ಎಪ್ಪತ್ತೋ ಇರಬೇಕು ಅಂದರು. ಈಗವರ ಕೈಗಳಲ್ಲಿ ವೀಣೆ ಕಡೆಯುವಷ್ಟು ಕಸುವಿಲ್ಲ. ಅವರ ಮಗನಿಂಗಣ್ಣ ಅಪ್ಪನ ಕಸುಬು ಮುಂದುವರಿಸಿದ್ದಾರೆ. ಮುನಿಯಪ್ಪನವರ ಕಾಲದಲ್ಲಿ ವೀಣೆಯೊಂದಕ್ಕೆ ₹ 150 ದೊರೆಯುತ್ತಿತ್ತಂತೆ. ಆ ಮೊತ್ತ ಈಗ ಹತ್ತಾರು ಪಟ್ಟುಹೆಚ್ಚಿದ್ದರೂ ಕೈಯಲ್ಲಿ ಕಾಸು ಉಳಿಯುವುದಿಲ್ಲ ಎನ್ನುವ ಕೊರಗು ಅವರದು.

‘ವೀಣೆ ಮಾಡೋದರ ಜೊತೆಗೆ ಆರಂಭಾನು (ಕೃಷಿ) ಮಾಡ್ತೀವಿ. ಯಾರಾದರೂ ಕೆಲಸಕ್ಕೆ ಕರೆದರೆ ಹೋಗ್ತೀವಿ. ಸ್ವಲ್ಪ ಜಮೀನು ಇದೆ. ರಾಗಿ–ಜೋಳ ಬೆಳೀತೀವಿ, ಮಳೆ ಬಂದ್ರೆ’ ಎಂದು ಅಜ್ಜ ಕುಟುಂಬದ ಸುಖ-ದುಃಖ ಹೇಳಿಕೊಂಡರು.

ಮುನಿಯಪ್ಪನವರ ಮನೆಗೆ ಸಮೀಪದಲ್ಲೇ ಅರುಣ್‌ಕುಮಾರ್‌ ಮನೆಯಿದೆ. ಅರುಣ್‌ಗಿನ್ನೂ ಇಪ್ಪತ್ತನಾಲ್ಕು ವರ್ಷ. ಡಿಗ್ರಿ ಮುಗಿಯುವವರೆಗೂ ಅಪ್ಪನ ಕೆಲಸವನ್ನು ಕಲಿಯುವ ಯೋಚನೆಯನ್ನೂ ಅವರು ಮಾಡಿರಲಿಲ್ಲ. ಬಿ.ಎ. ಮುಗಿದ ನಂತರ ಒಂದು ವರ್ಷ ದೊಡ್ಡಬಳ್ಳಾಪುರದ ಉದ್ದಿಮೆಯೊಂದರಲ್ಲಿ ಕೆಲಸ ಮಾಡಿದರು. ಸ್ವತಂತ್ರವಾಗಿ ಕೆಲಸ ಮಾಡಬೇಕೆಂಬ ಹುಕಿ ಹುಟ್ಟಿದ್ದೇ ತಡ, ಅಂಗಳದಲ್ಲಿ ಕುಳಿತು ಹಲಸಿನ ದಿಮ್ಮಿ ಕೈಗೆತ್ತಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ ವೀಣೆಯೇ ಅವರಿಗೆ ಬದುಕಾಗಿದೆ. ಅವರ ತಂದೆ ನಾಗಣ್ಣ ಸುಮಾರು ಮೂರು ದಶಕದಿಂದ ವೀಣೆ ತಯಾರಿಸುವುದನ್ನೇ ನೆಚ್ಚಿಕೊಂಡವರು. ಈಗ ಅಪ್ಪ–ಮಗ ಇಬ್ಬರೂ ಒಂದೇ ಸೂರಿನಲ್ಲಿ ಕೆಲಸ ಮಾಡುತ್ತಾರೆ.

ಅರುಣ್‌ ಮಾತ್ರವಲ್ಲ, ಸಿಂಪಾಡಿಪುರದಲ್ಲಿ ವೀಣೆ ತಯಾರಿಕೆಯನ್ನೇ ಬದುಕನ್ನಾಗಿ ನೆಚ್ಚಿಕೊಂಡ ತರುಣರ ಪುಟ್ಟ ತಂಡವೊಂದಿದೆ. ಅಪ್ಪ ನೆಟ್ಟ ಆಲಕ್ಕೆ ಜೋತುಬೀಳುವುದು ಬೇಡ ಎಂದು ತರುಣತರುಣಿಯರೆಲ್ಲ ಊರುಕೇರಿಗಳಿಂದ ನಗರಗಳತ್ತ ಮುಖ ಮಾಡುತ್ತಿರುವ ದಿನಗಳಲ್ಲಿ, ಸಿಂಪಾಡಿಪುರದ ಯುವಕರು ಅಜ್ಜ–ಅಪ್ಪಂದಿರ ಕಸುಬು ಮುಂದುವರಿಸಿದ್ದಾರೆ. ಮೆಡಿಕಲ್‌ ಸ್ಟೋರೊಂದರಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್‌ ಎನ್ನುವ ಚಿಗುರುಮೀಸೆ ಹುಡುಗ, ಔಷಧಿ ಅಂಗಡಿಯ ಬದಲು ಊರಲ್ಲಿದ್ದರೆ ಸರಾಗವಾಗಿ ಉಸಿರಾಡಬಹುದು ಎಂದು ಭಾವಿಸಿ ಊರಿಗೆ ಬಂದು ಹತಾರ ಕೈಗೆತ್ತಿಕೊಂಡಿದ್ದಾನೆ. ಕಾಲೇಜು ಮೆಟ್ಟಿಲು ಹತ್ತಿಬಂದ ಶಿವರಾಜ್‌, ಮಂಜುನಾಥ್‌ ಕೂಡ ಅಪ್ಪನ ಕಸುಬಿನ ವಾರಸುದಾರರಾಗಿದ್ದಾರೆ. ಅವರ ಕಣ್ಣುಗಳಲ್ಲಿ ಕನಸುಗಳಿವೆ. ಕೆಲಸ ಮಾಡಿದರೆ ಸಾಕಷ್ಟು ಬೇಡಿಕೆಯೂ ಇದೆ ಎನ್ನುವುದು ಅವರಿಗೆ ಗೊತ್ತಾಗಿದೆ.

ಹುಡುಗರು ಮಾತಿಗೆ ನಿಂತಿದ್ದನ್ನು ನೋಡಿದ ಮುನಿಯಪ್ಪನವರು, ‘ನಾನು ದನ ಬಿಡಬೇಕು’ ಎಂದು ಕೆಲಸ ನೆನಪಿಸಿಕೊಂಡು ಅಲ್ಲಿಂದ ಹೊರಟರು. ಅರುಣ್ ಮಾತು ಮುಂದುವರಿಸಿದರು.

‘ಡಿಮ್ಯಾಂಡ್‌ ಚೆನ್ನಾಗಿದೆ. ನಾವು ಕೆಲಸ ಮಾಡಿದಂತೆಲ್ಲ ದುಡ್ಡು ದೊರೆಯುತ್ತದೆ. ಎನಿ ಟೈಮ್‌ ಆರ್ಡರ್‌ ಇರುತ್ತೆ’ ಎಂದರು. ಹಾಗಾದರೆ, ಬದುಕು ಚೆನ್ನಾಗಿರಬೇಕಲ್ಲವಾ ಎಂದು ಕೇಳಿದರೆ, ಅರುಣ್‌ ಮೌನವಾದರು. ಮಾತು ಮುಂದುವರಿಸಿದ್ದು ಅವರದೇ ಹೆಸರಿನ ಮತ್ತೊಬ್ಬ ಯುವಕ.

‘ನಮ್ಮೆಲ್ಲರದೂ ಒಂದೇ ಸಮಸ್ಯೆ – ಬಂಡವಾಳದ್ದು. ಸರ್ಕಾರದಿಂದ ಯಾವ ಸವಲತ್ತೂ ದೊರೆತಿಲ್ಲ. ಬ್ಯಾಂಕ್‌ಗಳಿಗೆ ಎಷ್ಟು ಅಲೆದರೂ ಚಿಕ್ಕಾಸಿನ ಸಾಲವೂ ದೊರೆಯುವುದಿಲ್ಲ. ಮರ ತರುವಾಗ ಪೊಲೀಸರು ಕೂಡ ನಮ್ಮನ್ನು ಸುಲಿದು ತಿನ್ನುತ್ತಾರೆ’ – ಅರುಣ್‌ ಮಾತುಗಳಲ್ಲಿ ವಿಷಾದ ಸ್ಪಷ್ಟವಾಗಿ ಇಣುಕುತ್ತಿತ್ತು. ‘ಪರಿಸ್ಥಿತಿ ಚೆನ್ನಾಗಿಲ್ಲ. ಹೀಗೇ ಆದರೆ ಈ ಕೆಲಸ ನಮ್ಮ ತಲೆಗೆ ಕೊನೆಗೊಳ್ಳುತ್ತದೇನೋ?’ ಎನ್ನುವ ಆತಂಕ ಅವರದು.

ಗೆಳೆಯರೆಲ್ಲ ಅಳಲು ತೋಡಿಕೊಂಡರೆ, ರವಿಕುಮಾರ್‌ ಮಾತುಗಳಲ್ಲಿ ಕೊಂಚಆಕ್ರೋಶವೂ ಇತ್ತು. ‘ಸರ್ಕಾರದ ನೆರವಿರಲಿ, ಬಸ್‌ ಕೂಡ ನಮ್ಮೂರಿನಿಂದ ದೂರವೇ ಉಳಿದಿದೆ. ಬೆಂಗಳೂರಿಗೆ ವೀಣೆಗಳನ್ನು ತೆಗೆದುಕೊಂಡು ಹೋಗಲು ಬಸ್‌ ಹಿಡಿಯಬೇಕೆಂದರೆ, ವೀಣೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಾಲ್ಕೈದು ಕಿ.ಮೀ. ದೂರದ ಹೊನ್ನಾವರ ಗೇಟ್‌ವರೆಗೆ ನಡೆಯಬೇಕು’ ಎನ್ನುವ ಅವರ ಮಾತಿನಲ್ಲಿ ತಮ್ಮ ನೆರವಿಗೆ ಬಾರದ ವ್ಯವಸ್ಥೆಯ ಬಗ್ಗೆ ಆಕ್ರೋಶ ಇಣುಕುತ್ತಿತ್ತು.

‘ಗಾಳಿ, ಮಳೆಯಿಂದ ವೀಣೆಗಳನ್ನು ಕಾಪಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನಮ್ಮೂರಲ್ಲಿ ಮಾತ್ರ ವೀಣೆ ಮಾಡೋದು. ಆದರೆ, ಊರಿನ ಹೆಸರನ್ನು ಯಾರೂ ಹೇಳೊಲ್ಲ. ತಂಜಾವೂರಿನ ವೀಣೆ ಎಂದು ಹೇಳಿ ನಮ್ಮೂರಿನ ವೀಣೆಗಳನ್ನು ಮಾರುತ್ತಾರೆ’ ಎಂದರು ರವಿ.

ವಿಶ್ವದ ಅತಿ ದೊಡ್ಡ ವೀಣೆ ಎಂದು ಭಾವಿಸಲಾಗಿರುವ ವೀಣೆಯೊಂದು ಶೃಂಗೇರಿಯ ಶಾರದಾಪೀಠದಲ್ಲಿದೆ. ಬೆಂಗಳೂರಿನ ಮಲ್ಲೇಶ್ವರದ ‘ಶಿವ ಮ್ಯೂಸಿಕಲ್ಸ್’ ಸಹಯೋಗದಲ್ಲಿ ಸಿಂಪಾಡಿಪುರದ ಕಲಾವಿದರು ಈ ‘ಸಾರ್ವಭೌಮ ವೀಣೆ’ಯನ್ನು ರೂಪಿಸಿದ್ದಾರೆ. ಈ ಬಗ್ಗೆ ಊರಿನವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜೊತೆಗೇ ತಮ್ಮೂರಿಗೆ ದೊರೆಯಬೇಕಾದ ಮಾನ್ಯತೆ ದೊರೆತಿಲ್ಲ ಎನ್ನುವ ನೋವು ಅವರಿಗಿದೆ.

‘ನಾವ್ಯಾರೂ ಸರ್ಕಾರಿ ಕೆಲಸ ಬಯಸಿದವರಲ್ಲ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟಕೃಷಿ ಕೆಲಸ ಮಾಡುತ್ತೇವೆ. ವೀಣೆ ತಯಾರಿಸುವುದರಲ್ಲಿ ಬದುಕು ಕಟ್ಟಿಕೊಳ್ಳುವ ಬಯಕೆ ನಮ್ಮದು. ಬ್ಯಾಂಕ್‌ ಲೋನ್‌ ದೊರೆತರೆ ಷೆಡ್‌ ಕಟ್ಟಿಕೊಳ್ಳಬಹುದು. ಸಣ್ಣಪುಟ್ಟ ಯಂತ್ರಗಳನ್ನು ತರಬಹುದು. ಈಗ ಮರ ತರಲಿಕ್ಕೆ ಸಾಲ ಮಾಡಬೇಕು. ಅದನ್ನ ತರುವಾಗ ಪೊಲೀಸರ ರಾಮಾಯಣ ಬೇರೆ. ಅವರಿಗೂ ಕೊಡಬೇಕು’ ಎಂದರು ರವಿಕುಮಾರ್‌. ನಂತರ ಅವರ ಸಿಟ್ಟು ಹರಿದುದು ಜಿಎಸ್‌ಟಿ ಕಡೆಗೆ. ‘ಜಿಎಸ್‌ಟಿ ಬಂತು. ಫೆವಿಕಾಲ್‌ ರೇಟ್‌ ಜಾಸ್ತಿ ಆಯ್ತು. ಪಾಲಿಷ್‌ ರೇಟ್ ಜಾಸ್ತಿ ಆಯ್ತು. ಆದರೆ ವೀಣೆಗೆ ಮಾತ್ರ ಒಂದು ರೂಪಾಯಿ ಜಾಸ್ತಿ ಸಿಗೊಲ್ಲ. ಅಂಗಡಿಯವರನ್ನ ಕೇಳಿದ್ರೆ ಹೆಚ್ಚು ಕೊಡೋಕೆ ಆಗೊಲ್ಲ ಅಂತಾರೆ’ ಎಂದು ತುಸು ಸಿಡುಕಿನಿಂದಲೇ ಹೇಳಿದರು.

‘ಇತ್ತೀಚೆಗೆ ನಾವು ಗೆಳೆಯರೆಲ್ಲ ಸಂಘಟನೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ತಾತಂದಿರ ಕಾಲದಿಂದ ಮಾಡ್ತಿದ್ದೇವೆ. ಯಾರಿಂದಲೂ ರೂಪಾಯಿ ನೆರವು ದೊರೆತಿಲ್ಲ. ತಂತಿ ಕಟ್ಟುವುದನ್ನೂ ಕಲಿಯುತ್ತಿದ್ದೇವೆ. ಏನು ಬೇಕಾದರೂ ಕಲಿಯುತ್ತೇವೆ. ಹುಮ್ಮಸ್ಸು ಇದೆ. ಬಂಡವಾಳ ಇಲ್ಲ. ಈಗ ನಾವು ಕೆಲಸ ಮಾಡುತ್ತಿರುವವರೆಲ್ಲಾ ವಿದ್ಯಾವಂತರೇ. ಗಾರ್ಮೆಂಟು, ಫ್ಯಾಕ್ಟರಿ ಎಂದೆಲ್ಲ ಹೋಗುವುದು ಬೇಡ ಎಂದುಕೊಂಡು ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇವೆ. ನಾವು ಸರ್ಕಾರಿ ಕೆಲಸ ಕೇಳುವುದಿಲ್ಲ. ಅನುಕೂಲ ಮಾಡಿಕೊಟ್ಟರೆ ಸಾಕು’ ಎಂದು ಅರುಣ್‌ಕುಮಾರ್‌ ತಮ್ಮ ದನಿಯನ್ನೂ ಸೇರಿಸಿದರು.

‘ನಮ್ಮೂರಲ್ಲಿ ಬೇಜಾನ್‌ ಜನ ಶಾರದೆ ಮೇಲೆ ನಂಬಿಕೆ ಇಟ್ಕೊಂಡಿದ್ದಾರೆ. ಶಾರದೆ ನಮಗೆ ಒಲಿದಂಗೆ ಬೇರೆಯವರಿಗೆ ಒಲಿಯಲ್ಲ. ಶಾರದೆ ಕೈ ಬಿಡಬಾರದು ಅಂತ ಈ ಕೆಲಸ ಮಾಡ್ತಿದ್ದೀವಿ’– ಅರುಣ್‌ರ ಮಾತುಗಳಲ್ಲಿ ಸಿಂಪಾಡಿಪುರಕ್ಕೂ ವೀಣೆ ತಯಾರಿಕೆಗೂ ಇರುವ ನಂಟಿನ ಕಾರಣ ತಿಳಿಸುವ ಉಮೇದು ಇದ್ದಂತಿತ್ತು.

‘ಮರದೊಂದಿಗೆ ಗುದ್ದಾಡಿ ಬೆನ್ನುನೋವು, ಕೈ ನೋವು ಬರುತ್ತದೆ. ನೂರು ವರ್ಷ ಬದುಕೋನು ಐವತ್ತು ವರ್ಷ ಬದುಕುತ್ತಾನೆ. ಅರ್ಜೆಂಟಿಗೆ ಆಸ್ಪತ್ರೆಗೆ ಹೋಗಬೇಕೆಂದರೂ ನಾವು ಮಧುರೆಗೆ ಹೋಗಬೇಕು’ ಎಂದರು.

ಅರುಣ್ ಮತ್ತು ಗೆಳೆಯರಿಂದ ಬೀಳ್ಕೊಂಡು ಹೊರಟಿದ್ದು ಮಂಜುನಾಥ್‍ ಎನ್ನುವವರ ಮನೆಗೆ. ಷೋಕೇಸ್‍ಗಳಲ್ಲಿ ಇಡಬಹುದಾದ ಪುಟಾಣಿ ವೀಣೆಗಳ ಅಂತಿಮ ಸಿಂಗಾರದಲ್ಲಿ ಅವರು ತೊಡಗಿಕೊಂಡಿದ್ದರು. ‘ನಾವು ವೀಣೆಗಳಿಗೆ ಮ್ಯಾಳ (ತಂತಿ) ಕಟ್ಟುವುದಿಲ್ಲ. ಅಂಗಡಿಯವರೇ ಕಟ್ಟಿಕೊಳ್ಳುತ್ತಾರೆ. ಆದರೆ, ಪುಟಾಣಿ ವೀಣೆಗಳಿಗೆ ನಾವೇ ಮ್ಯಾಳ ಕಟ್ಟುತ್ತೇವೆ’ ಎಂದರು ಮಂಜುನಾಥ್.

ಮಂಜುನಾಥ್‌ ಬಿ.ಎಡ್ ಮಾಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ಸೋತಿದ್ದಾರೆ. ಡಿಗ್ರಿ ಮುಗಿದ ಮೇಲೆ ಅಲ್ಲಿ ಇಲ್ಲಿ ಒಂದು ರೌಂಡು ಓಡಾಡಿಕೊಂಡು, ಕೊನೆಗೆ ನಮ್ಮೂರೇ ಮೇಲು ಎಂದು ಅಪ್ಪನ ಕಸುಬು ಕೈಗೆತ್ತಿಕೊಂಡಿದ್ದಾರೆ. ‘ಐದಾರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ನಾವಿಲ್ಲಿ ಎದೆ ಒಡೆದುಕೊಳ್ಳುತ್ತೇವೆ. ಮರ ತೋಡುವುದು ಎಷ್ಟು ಕಷ್ಟ ಗೊತ್ತಾ? ನಮ್ಮಂಥವರಿಗೆ ಏನೂ ಸಿಗೊಲ್ಲ. ಸಾಲ ಸೌಲಭ್ಯ ಸಿಗಲ್ಲ. ಸಾಲ ಮಾಡಿ ಬಂಡವಾಳ ಹೊಂಚಿಕೊಳ್ಳಬೇಕು. ವೀಣೆ ಮಾರಿದ ನಂತರ ಚರುಪು ಹಂಚಿದಂತೆ ಸಾಲಗಾರರಿಗೆ ಕೊಡಬೇಕು’ ಎಂದವರು ತಮ್ಮ ನೋವು ತೋಡಿಕೊಂಡರು.

ಮಂಜುನಾಥ್ ಪಾಲಿಷ್ ಹಚ್ಚಿದಂತೆಲ್ಲ ವೀಣೆ ಮಿರ ಮಿರ ಮಿಂಚತೊಡಗಿತ್ತು. ಆದರೆ, ಬದುಕು ಮೆರುಗು ಕಳೆದುಕೊಳ್ಳುತ್ತಿರುವ ಸೂಚನೆ ಅವರ ಮಾತುಗಳಲ್ಲಿತ್ತು. ತಮ್ಮ ಕಣ್ಣಮುಂದಿನ ಹುಡುಗರು ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಳ‍್ಳುವಂತೆ ಮುನಿಯಪ್ಪನವರು ಅಲ್ಲೇ ಅಡ್ಡಾಡುತ್ತಿದ್ದರು. ‘ಇವರನ್ನು ನೋಡಿ, ಕೈ ನಡುಗುತ್ತದೆ ಇವರಿಗೆ. ಆದರೂ ವೀಣೆಯ ಕೊಡ ತೋಡುವುದರಲ್ಲಿ ನೆರವಾಗುತ್ತಾರೆ’ ಎಂದರು ಮಂಜುನಾಥ್.

ಸಿಂಪಾಡಿಪುರದ ತುಂಬ ನೋವಿನ ದನಿಗಳೇ ಹೊರಹೊಮ್ಮುವಂತಿದ್ದವು. ಹಿರಿಯರು-ಯುವಕರ ಮಾತಿರಲಿ, ಹುಡುಗರು ಏನನ್ನುತ್ತಾರೆ ಎಂದು ಹುಡುಗನೊಬ್ಬನನ್ನು ಮಾತಿಗೆಳೆದರೆ, ‘ನಂಗೆ ವೀಣೆ ಮಾಡೋದು ಕಲಿಯೋಕೆ ಆಸಕ್ತಿ ಇಲ್ಲ’ ಎಂದ. ಏಕೆ ಎಂದರೆ, ‘ಸ್ಕೂಲಿಗೆ ಹೋಗ್ತೇನೆ’ ಎನ್ನುವ ಉತ್ತರ. ಸ್ಕೂಲಿಗೆ ಹೋದರೂ ಕಲಿಯಬಹುದಲ್ಲವಾ ಎಂದು ಕೆಣಕಿದರೆ, ‘ತಾತ ಕಲಿಸಲಿಲ್ಲ’ ಎಂದ ಹುಡುಗ. ದಿಲೀಪ್‍ ಕುಮಾರ್‍ ಎನ್ನುವ ಆ ಹುಡುಗ ಹತ್ತನೇ ತರಗತಿ ಓದುತ್ತಿದ್ದಾನೆ. ಮಾತನಾಡುತ್ತ ಆಡುತ್ತ ದಿಲೀಪನ ಮನೆಯ ಬಳಿಗೆ ಬಂದೆವು. ಜೊತೆಗೆ ಅರುಣ್‍ ಕೂಡ ಇದ್ದರು. ದಿಲೀಪನ ಅಜ್ಜ ಕಾಣಿಸಿದರು.

‘ತಿಥಿ’ ಸಿನಿಮಾದ ಸೆಂಚುರಿ ಗೌಡನಂತೆ ಕಾಣಿಸುವ ದಿಲೀಪನ ಅಜ್ಜ ಬೇರೆ ಯಾರೂ ಅಲ್ಲ– ಪೆನ್ನೋಬಳಯ್ಯ! ಸಿಂಪಾಡಿಪುರವನ್ನು ವೀಣೆಯೊಂದಿಗೆ ಬೆಸೆದ ಹಿರೀಕರು. ‘ಇವರೇ ನಮ್ಮೂರಿನಲ್ಲಿ ಫಸ್ಟು ವೀಣೆ ಮಾಡಿದ್ದು’ ಎಂದರು ಅರುಣ್.

‘ಫಸ್ಟು ವೀಣೆ ಮಾಡಿದ್ದು ನಾನೇ. ಈಗ ನಂಗೇ ಇಲ್ಲ. ಸೈಟು ಅಂತ ಮಾಡಿದ್ದೀವಿ. ಒಂದು ವರ್ಷ ಆಯ್ತು. ಅದನ್ನ ಕಟ್ಟೋಕೆ ಆಗ್ತಿಲ್ಲ. ಅವರನ್ನ ನೋಡಿ ಇವರನ್ನ ನೋಡಿ ಆಯ್ತು. ಮನೆ ಕಟ್ಟಲಿಕ್ಕೆ ಆಗಲಿಲ್ಲ. ಕಣ್ಣು ಹೋದ್ವು’ ಎಂದು ತಾವು ವಾಸ ಮಾಡುತ್ತಿದ್ದ ಮನೆಗೆ ಹೊಂದಿಕೊಂಡ, ಪಾಯ ಹಾಕಿರುವ ನಿವೇಶನವನ್ನು ತೋರಿಸಿದರು.

‘ಬೆಂಗಳೂರುನಾಗೆ ರಂಗರಾಯರು ಅಂತ ಬ್ರಾಂಬ್ರು ಇದ್ರು. ಅವರ ಮೊಮ್ಮಗಅಂಜಿನಪ್ಪನೋರು ಹೋಗಿ ಕಲ್ತುಕೊಂಡು ಬಂದಿದ್ರು. ಅವರ ಜೊತೆ ಸೇರಿಕೊಂಡು ದಿನಗೂಲಿ ಮಾಡಿಕೊಂಡು ಕಲಿತೆ. ವೀಣೆ ಕೆಲಸ ಮಾಡೋ ರಾಮಣ್ಣೋರು, ಕೃಷ್ಣಪ್ಪನೋರು ಅಂತ ಇದ್ರು. ಅವರ ಹತ್ರ ಎಲ್ಲ ಕೆಲಸ ಮಾಡಿದೆ. ಇಲ್ಲಿಗೆ ಬಂದೆ. ಹೊಲ ತಗೊಂಡೆ. ನನ್ನ ಕೆಲಸವನ್ನು ಬೇರೆಯವರಿಗೂ ಹೇಳಿಕೊಟ್ಟೆ’ ಎಂದರು. ಶಬ್ದಗಳನ್ನು ಜೋಡಿಸಿ ಅರ್ಥವನ್ನು ಕಟ್ಟಿಕೊಳ್ಳಬೇಕು ಎನ್ನುವಂತಿದ್ದವು ಅವರ ಮಾತುಗಳು. ಅಜ್ಜನಿಗೀಗ 90 ವರ್ಷವಂತೆ. ‘ಇಲ್ಲ ಸುಳ್ಳು... ನೂರೋ ನೂರಾ ಹತ್ತೋ ಆಗಿರಬೇಕು’ ಎಂದರು ಅಲ್ಲಿದ್ದವರೊಬ್ಬರು.

‘ನನ್ನ ಮಕ್ಕಳು ಯಾರೂ ವೀಣೆ ಮಾಡಲ್ಲ. ಕೂಲಿ ನಾಲಿ ಮಾಡ್ತಾರೆ. ನೀಲಗಿರಿ ಮರಾನೂ ಹೋಯ್ತು. ಯಾವುದೂ ಕೆಲಸ ಇಲ್ಲ’ ಎಂದರು ಪೆನ್ನೋಬಳಯ್ಯ. ಅಜ್ಜನ ಮಾತುಗಳನ್ನು ಕೇಳಿಸಿಕೊಳ್ಳುತ್ತ, ಮಿಕಿ ಮಿಕಿ ಕಣ್ಣು ಬಿಡುತ್ತ ಗೋಡೆಗೆ ಆತುಕೊಂಡು ಕುಳಿತಿದ್ದ ದಿಲೀಪ ಕೂಡ ತಂತಿ ಕಟ್ಟದ ವೀಣೆಯಂತೆ ಕಾಣಿಸಿದ.

ಸಂಸ್ಕೃತಿಯ ಮಹತ್ವದ ಬಗ್ಗೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಅಗತ್ಯದ ಬಗ್ಗೆ ಜನಸಾಮಾನ್ಯರೂ ಉತ್ಸಾಹದಿಂದ ಮಾತನಾಡುತ್ತಿರುವ ದಿನಗಳಿವು. ಆದರೆ, ಸಾಂಸ್ಕೃತಿಕ ಆಯಾಮವಿರುವ ಸಿಂಪಾಡಿಪುರದ ಕಸುಬುದಾರರ ತಲ್ಲಣಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ.

ವೀಣೆಯನ್ನು ರೂಪಿಸುವ ಸಿಂಪಾಡಿಪುರದ ಕಸುಬುದಾರರಿಗೆ ತಂತಿ ಕಟ್ಟುವ ವಿದ್ಯೆ ತಿಳಿದಿಲ್ಲ. ಹಾಗಾಗಿ ವೀಣೆಯ ಮಾಧುರ್ಯ ಊರಿನಿಂದ ಹೊರಗೇ ಉಳಿದಿದೆ. ನುಡಿಯದ, ಮಿಡಿಯದ ವೀಣೆಗಳು ಇಲ್ಲಿನವರ ಬದುಕಿನ ವೈರುಧ್ಯದ ರೂಪಕಗಳಂತೆಯೂ ಕಾಣಿಸುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry