7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

225ನೇ ವರ್ಷಕ್ಕೆ ಕಾಲಿಟ್ಟ ಸಂತ ಅನ್ನಮ್ಮ ದೇವಾಲಯ

Published:
Updated:
225ನೇ ವರ್ಷಕ್ಕೆ ಕಾಲಿಟ್ಟ ಸಂತ ಅನ್ನಮ್ಮ ದೇವಾಲಯ

ವಿರಾಜಪೇಟೆ: ಪ್ರಕೃತಿ ಸೌಂದರ್ಯ, ವಿಶಿಷ್ಟ ಸಂಸ್ಕೃತಿ ಹಾಗೂ ವೀರತನಕ್ಕೆ ಹೆಸರಾಗಿರುವ ಕೊಡಗು ಜಿಲ್ಲೆಯ ಪ್ರಸಿದ್ಧ ಕ್ರೈಸ್ತ ದೇವಾಲಯವೊಂದು 225 ಹಾಗೂ ಶಿಕ್ಷಣ ಸಂಸ್ಥೆಯು 175ನೇ ವರ್ಷಕ್ಕೆ ಕಾಲಿಡುತ್ತಿದೆ.

ಹೌದು, ಪಟ್ಟಣದ ಸಂತ ಅನ್ನಮ್ಮ ದೇವಾಲಯಕ್ಕೆ 225 ವರ್ಷವಾದರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ 175ನೇ ವರ್ಷ ಪೂರ್ಣಗೊಂಡಿದೆ. ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳು ಈ ವರ್ಷವೇ ವಿವಿಧ ಮೈಲಿಗಲ್ಲನ್ನು ತಲುಪಿರುವುದು ಈ ಸಂಭ್ರಮ ಮತ್ತಷ್ಟು ಹೆಚ್ಚಾಗಲು ಕಾರಣ.

ದೇವಾಲಯದ ಇತಿಹಾಸ: ವಿರಾಜಪೇಟೆಯ ನಿರ್ಮಾತೃ ವೀರರಾಜೇಂದ್ರನ ಕಾಲದಲ್ಲಿ ಅಂದರೆ, 1792ರಲ್ಲಿ ನಿರ್ಮಾಣಗೊಂಡ ಸಂತ ಅನ್ನಮ್ಮ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಕೊಡಗಿನ ರಾಜ ವೀರರಾಜೇಂದ್ರನ ಸಹಕಾರದೊಂದಿಗೆ 1792ರಲ್ಲಿ ಅಸ್ತಿತ್ವಕ್ಕೆ ಬಂದ ಸಂತ ಅನ್ನಮ್ಮ ದೇವಾಲಯಕ್ಕೆ ಸ್ವಾಮಿ ಜುವಾಂವ್‌ ಡಿಕೋಸ್ಟ ಅವರು ಮೊದಲ ಧರ್ಮಗುರುವಾದರು.

1848ರವರೆಗೆ ಸಂತ ಅನ್ನಮ್ಮ ದೇವಾಲಯವು ಕೊಡಗಿನ ಏಕೈಕ ಕ್ರೈಸ್ತ ದೇವಾಲಯವಾಗಿತ್ತು. 1868ರಲ್ಲಿ ವೀರರಾಜೇಂದ್ರಪೇಟೆಯ ಧರ್ಮಕೇಂದ್ರದ ಧರ್ಮಗುರು ಸ್ವಾಮಿ ಗಿಲೋನ್‌ ಎಂಬುವವರು ಹಳೆಯ ದೇವಾಲಯ ಇದ್ದ ಸ್ಥಳದಲ್ಲಿಯೇ ಗೋಥಿಕ್‌ ಮಾದರಿಯ ಈಗಿನ ದೇವಾಲಯವನ್ನು ಕಟ್ಟಿಸಿದರು.

ಬ್ರಿಟಿಷ್‌ ಸರ್ಕಾರ ಹಾಗೂ ಸಾಹುಕಾರ್‌ ಸಾಲ್ವಾದೊರ್‌ ಪಿಂಟೊರವರ ಸಹಕಾರದಿಂದ ದೇವಾಲಯಕ್ಕೆ 150 ಅಡಿ ಎತ್ತರದ ಸುಂದರ ಗೋಪುರವನ್ನು ಕಟ್ಟಲಾಯಿತು. 1891ರಲ್ಲಿ ಸಂಗೀತಮಯ ನಿನಾದ ಕೊಡುವ 2 ದೊಡ್ಡ ಗಂಟೆಗಳನ್ನು ಪ್ಯಾರಿಸ್‌ನಿಂದ ತರಿಸಿ ಗೋಪುರದಲ್ಲಿ ಅಳವಡಿಸಲಾಗಿದೆ. 2015ರಲ್ಲಿ ದೇವಾಲಯದ ಧರ್ಮ ಗುರು ಡಾ.ಆರೋಗ್ಯ ಸ್ವಾಮಿಯವರು ದೇವಾಲಯಕ್ಕೆ ಮರುಕಾಯಕಲ್ಪ ನೀಡುವ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿದ್ದರು.

ವಿದ್ಯಾಸಂಸ್ಥೆಯ ಬೆಳವಣಿಗೆ: ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಯಶಸ್ವಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭದ ಮಾತಲ್ಲ. ಆದರೆ, ಜಿಲ್ಲೆಯಲ್ಲಿ ಸುಮಾರು 175 ವರ್ಷಗಳಿಂದ ವಿದ್ಯಾದಾನ ಮಾಡುತ್ತಾ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿರುವ ಹೆಗ್ಗಳಿಕೆ ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯದು. ನರ್ಸರಿಯಿಂದ ಪದವಿಯವರೆಗೆ ಯಶಸ್ವಿಯಾಗಿ ತರಗತಿಗಳನ್ನು ನಡೆಸುತ್ತಿರುವ ಈ ಸಂಸ್ಥೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ವ್ಯಾಸಂಗ ಮಾಡುತ್ತಿದ್ದಾರೆ.

ಧಾರ್ಮಿಕ ಕೇಂದ್ರವಾಗಿದ್ದ ಸಂತ ಅನ್ನಮ್ಮ ದೇವಾಲಯವು 1842ರಲ್ಲಿ ‘ರೋಮನ್‌ ಕೆಥೋಲಿಕ್‌ ಸ್ಕೂಲ್‌’ ಆರಂಭಿಸುವುದರೊಂದಿಗೆ ಶೈಕ್ಷಣಿಕ ಕೇಂದ್ರವು ಆಗಿ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ನೀಡಲು ಆರಂಭಿಸಿತು ಎನ್ನುತ್ತಾರೆ ಸ್ಥಳೀಯರು. ಪ್ರತಿ ವರ್ಷವೂ ಎಲ್ಲಾ ವಿಭಾಗದಲ್ಲಿ ಉತ್ತಮ ಫಲಿತಾಂಶವನ್ನು ನೀಡುವುದರೊಂದಿಗೆ, ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ.

ದೇವಾಲಯ ಹಾಗೂ ವಿದ್ಯಾಸಂಸ್ಥೆಗಳ ಮಹೋತ್ಸವದ ಅಂಗವಾಗಿ ದೇವಾಲಯದ ಪ್ರಧಾನ ಧರ್ಮಗುರುಗಳಾದ ರೆ.ಫಾ. ಮದಲೈ ಮುತ್ತು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನ.20ರಿಂದ (ನಾಳೆ) ಆರಂಭಗೊಳ್ಳಲಿದೆ. ನ.23ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಅದ್ಧೂರಿ ಸಮಾರಂಭದ ಮೂಲಕ ವಾರ್ಷಿಕೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

* * 

ಎರಡು ಶತಮಾನಗಳಿಂದ ವಿದ್ಯಾದಾನದ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಕಾಯ್ದುಕೊಂಡಿರುವ ಸಂಸ್ಥೆ ಮುಂದಿನ ದಿನಗಳಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದೆ

ರೆ.ಫಾ. ಮದಲೈ ಮುತ್ತು,

ಪ್ರಧಾನ ಧರ್ಮಗುರು, ಸಂತ ಅನ್ನಮ್ಮ ದೇವಾಲಯದ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry