5

ಹಕ್ಕುಪತ್ರ ನೀಡಲು ಗ್ರಾಮಸ್ತರ ಒತ್ತಾಯ

Published:
Updated:

ಕಾರವಾರ: ‘ಕುಮಟಾ ತಾಲ್ಲೂಕಿನ ಹೊಲನಗದ್ದೆ ಗ್ರಾಮ ಅರಣ್ಯದ ಸರ್ವೆ ನಂ. 356 ‘ಅ’ ದಲ್ಲಿ ಅನಾದಿ ಕಾಲದಿಂದ ಇರುವ ವಾಸ್ತವ್ಯದ ಮನೆಗಳನ್ನು ಸಕ್ರಮಗೊಳಿಸಿ ಪಹಣಿ ಪತ್ರದ 9ನೇ ಕಾಲಂನಲ್ಲಿ ಹೆಸರು ನಮೂದಿಸಿ ನೀಡಬೇಕು’ ಎಂದು ಕುಮಟಾದ ಹೊಲನಗದ್ದೆಯ ನಿವಾಸಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಸುಮಾರು 150ಕ್ಕೂ ಅಧಿಕ ಕುಟುಂಬಗಳು ಇಲ್ಲಿನ ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸ್ತವ್ಯ ಮಾಡುತ್ತಿವೆ. ಪ್ರತಿ ಮನೆಗೆ ಮನೆ ಸಂಖ್ಯೆ ಇದ್ದು, ಕರವನ್ನು ಕೂಡ ಅನೇಕ ವರ್ಷಗಳಿಂದ ಪಾವತಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ, ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಚೀಟಿ, ಬ್ಯಾಂಕ್ ಖಾತೆ, ಅಡುಗೆ ಅನಿಲ ಸಂಪರ್ಕಗಳನ್ನು ಕೂಡ ಇದೇ ವಿಳಾಸಕ್ಕೆ ಪಡೆದುಕೊಂಡಿದ್ದೇವೆ’ ಎಂದು ಹೊಲನಗದ್ದೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಪಟಗಾರ ಹೇಳಿದರು.

‘ಅರಣ್ಯ ಇಲಾಖೆಯವರು ಈ ಜಾಗದಲ್ಲಿ ಜಿಪಿಎಸ್ ಸರ್ವೆಯನ್ನು ಕೂಡ ನಡೆಸಿದ್ದಾರೆ. ಈ ಹಿಂದೆಯೇ ಪಂಚಾಯ್ತಿಯಿಂದ ಹಿಡುವಳಿ ಹಾಗೂ ಪಂಚನಾಮೆಯೊಂದಿಗೆ ಲಭ್ಯವಿರುವ ಎಲ್ಲ ದಾಖಲೆಗಳೊಂದಿಗೆ ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕಳೆದ 75 ವರ್ಷಗಳಿಂದ ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಸಮರ್ಥಿಸುವ ಪೂರಕ ದಾಖಲೆ ಇಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಮ್ಮ ಹಕ್ಕಿನ ಸ್ಥಳಗಳಿಗೆ ಹಕ್ಕುಪತ್ರ ನೀಡಲು ನಿರಾಕರಿಸಲಾಗಿದೆ’ ಎಂದು ಆರೋಪಿಸಿದರು.

‘ಅಘನಾಶಿನಿ ನದಿಯ ಸನಿಹವೇ ಇರುವ ಈ ಪ್ರದೇಶವನ್ನು ವಾಸಕ್ಕೆ ಯೋಗ್ಯವಾಗಿರುವಂತೆ ರೂಪಿಸಿಕೊಂಡಿದ್ದೇವೆ. ಒಂದು ವೇಳೆ ನಮ್ಮನ್ನು ಇಲ್ಲಿಂದ ಖುಲ್ಲಾಪಡಿಸಿದರೆ ಮುಂದಿನ ದಿನಗಳಲ್ಲಿ ಇಲ್ಲಿನ ಎಲ್ಲ ಕುಟುಂಬಗಳು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು. ಹೊಲನಗದ್ದೆ ಗ್ರಾಮದ ಭಾಸ್ಕರ ಹರಿಕಂತ್ರ, ಶಾಂತಿ ಬಯಲೂರು, ಮುಜೀಬ್‌ ಷರೀಫ್‌, ಅಬ್ದುಲ್‌ ಸತ್ತಾರ್‌, ಜನಾರ್ದನ ನಾಯ್ಕ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry