7

ಜಿಎಸ್‌ಟಿ: ಮಾರಾಟ ಬಿಲ್‌ ಮಹತ್ವ

Published:
Updated:
ಜಿಎಸ್‌ಟಿ: ಮಾರಾಟ ಬಿಲ್‌ ಮಹತ್ವ

ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿಎಸ್‌ಟಿ) ಅಡಿಯಲ್ಲಿ ವರ್ತಕರು ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದಂತೆ ನಿರ್ವಹಿಸಬೇಕಾದ ದಾಖಲೆಗಳಲ್ಲಿ ಮಾರಾಟ ಬಿಲ್‌ (ತೆರಿಗೆ ಬೆಲೆಪಟ್ಟಿ) ಅತ್ಯಂತ ಪ್ರಮುಖವಾಗಿದೆ. ಇದನ್ನು ತೆರಿಗೆ ಬೆಲೆ ಪಟ್ಟಿ, ಬೆಲೆಪಟ್ಟಿ, ಟ್ಯಾಕ್ಸ್‌ ಇನ್‌ವೈಸ್‌, ಪೂರೈಕೆ ಬಿಲ್ಲು, ಬಿಲ್ ಆಫ್‌ ಸಪ್ಲಾಯ್- ಎಂದೆಲ್ಲ ಕರೆಯುತ್ತಾರೆ. ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ ಕಲಂ31 ಹಾಗೂ ನಿಯಮ 46 ರಲ್ಲಿ ತೆರಿಗೆ ಬೆಲೆಪಟ್ಟಿಯ ಮಾದರಿ ಮತ್ತು ಅದನ್ನು ಯಾರು, ಯಾವಾಗ ಮತ್ತು ಹೇಗೆ ನೀಡಬೇಕು ಎಂಬುದರ ಕುರಿತು ಇಲ್ಲಿ ವಿವರಣೆ ನೀಡಲಾಗಿದೆ.

ತೆರಿಗೆ ಬೆಲೆಪಟ್ಟಿ ಮತ್ತು ಪೂರೈಕೆ ಬಿಲ್‌

ತೆರಿಗೆ ಬೆಲೆಪಟ್ಟಿ ಮತ್ತು ಪೂರೈಕೆ ಬಿಲ್ಲುಗಳು ಒಂದೇ ಅಲ್ಲ. ಎರಡೂ ಬೇರೆ ಬೇರೆ. ಇವುಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿದ್ದು ವರ್ತಕರು ಮತ್ತು ಗ್ರಾಹಕರು ಯಾವುದೇ ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನೋಂದಾಯಿತ ವರ್ತಕರು ತಾವು ಪೂರೈಸಿದ (ಮಾರಾಟ ವಹಿವಾಟು) ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ಸಂಗಹಿಸುವ ಬೆಲೆಪಟ್ಟಿಗೆ ತೆರಿಗೆ ಬೆಲೆ ಪಟ್ಟಿ (ಇನ್‌ವೈಸ್) ಎನ್ನುತ್ತಾರೆ. ರಾಜಿ ವರ್ತಕರಲ್ಲದ ಸಾಮಾನ್ಯ ನೋಂದಾಯಿತ ವರ್ತಕರು ಇದನ್ನು ನೀಡಬೇಕು. ವಿಕ್ರಿ ವಹಿವಾಟಿಗೆ ಸಂಬಂಧಿಸಿದಂತೆ ತೆರಿಗೆ ಸಂಗ್ರಹಿಸದೇ ಕೇವಲ ಪೂರೈಕೆಯ ಮೌಲ್ಯವನ್ನು ಮಾತ್ರ ನಮೂದಿಸಿ ತೆರಿಗೆ ದರಗಳನ್ನು ನಮೂದಿಸದೆ ವಿತರಿಸುವ ಬಿಲ್ಲನ್ನು ‘ಪೂರೈಕೆ ಬಿಲ್‌’ (ಬಿಲ್ ಆಫ್‌ ಸಪ್ಲಾಯ್) ಎನ್ನುತ್ತಾರೆ.

ಯಾರಿಗೆ ಕಡ್ಡಾಯ?

ಜಿಎಸ್‌ಟಿ ಕಾಯ್ದೆಯಡಿಯಲ್ಲಿ ನೋಂದಾಯಿತ ಪ್ರತಿಯೊಬ್ಬ ವಹಿವಾಟುದಾರ ತೆರಿಗೆ ಪಾವತಿಸಬಹುದಾದ ಸರಕುಗಳನ್ನು ಮಾರಾಟ ಮಾಡಿದಾಗ ಅಥವಾ ಸೇವೆಗಳನ್ನು ಪೂರೈಸಿದಾಗ ಕಲಂ.31 ರ ಪ್ರಕಾರ ಕಡ್ಡಾಯವಾಗಿ ತೆರಿಗೆ ಬೆಲೆಪಟ್ಟಿ ನೀಡಬೇಕು. ಜಿಎಸ್‌ಟಿ ಅಡಿಯಲ್ಲಿ ನೋಂದಾಯಿತರಾಗದ ‘ಟಿನ್‌’ ಸಂಖ್ಯೆ ಇಲ್ಲದ ವರ್ತಕರು ಇದನ್ನು ನೀಡುವಂತಿಲ್ಲ.

ಯಾವಾಗ ಕಡ್ಡಾಯವಲ್ಲ?

ಪೂರೈಕೆ ಮಾಡಿದ ಸರಕು ಮತ್ತು ಸೇವೆಗಳ (ಮಾರಾಟ ಮಾಡಿದ) ಮೌಲ್ಯವು ₹ 200ಕ್ಕಿಂತ ಕಡಿಮೆ ಇದ್ದರೆ ತೆರಿಗೆ ಬೆಲೆಪಟ್ಟಿಯನ್ನು ನೀಡುವುದು ಕಡ್ಡಾಯವಲ್ಲ. ವರ್ತಕರ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವಿನಾಯ್ತಿ ನೀಡಲಾಗಿದೆ. ಆದರೆ, ಗ್ರಾಹಕರು ಅಪೇಕ್ಷಿಸಿದರೆ ನಿರಾಕರಿಸದೆ ತೆರಿಗೆ ಬೆಲೆಪಟ್ಟಿ ವಿತರಿಸಬೇಕಾಗುತ್ತದೆ. ₹ 200ಕ್ಕಿಂತ ಪೂರೈಕೆ ಮೌಲ್ಯ ಹೆಚ್ಚಿದ್ದಾಗ ತೆರಿಗೆ ಬೆಲೆ ಪಟ್ಟಿಯನ್ನು ಕಡ್ಡಾಯವಾಗಿ ನೀಡಬೇಕು. ಪ್ರತಿ ಪೂರೈಕೆಯ ಸಮಯದಲ್ಲೇ ನೀಡಬೇಕು.

ರಾಜಿ ತೆರಿಗೆ ವರ್ತಕರು ‘ಪೂರೈಕೆ ಬಿಲ್‌’ ನೀಡಬೇಕು

ಜಿಎಸ್‌ಟಿ ಕಾಯ್ದೆಯ ಕಲಂ.10 ರ ಅಡಿಯಲ್ಲಿ ಅವಕಾಶ ನೀಡಲಾಗಿರುವ ‘ರಾಜಿ ತೆರಿಗೆ’ (ಕಂಪೋಸಿಷನ್‌ ಸ್ಕೀಮ್‌) ಪದ್ಧತಿಯಡಿ ತೆರಿಗೆ ಪಾವತಿಸುವ ರಾಜಿ ವರ್ತಕರು ತೆರಿಗೆ ಬೆಲೆಪಟ್ಟಿ ನೀಡದೆ ‘ಪೂರೈಕೆಯ ಬಿಲ್’ ಮಾತ್ರ ನೀಡಬೇಕು. ಕಲಂ 10 (4) ಪ್ರಕಾರ, ರಾಜಿ ತೆರಿಗೆ ವರ್ತಕರು ತಾವು ಮಾಡುವ ವಿಕ್ರಿ ವಹಿವಾಟಿನ ಬಿಲ್‌ಗಳಲ್ಲಿ ತೆರಿಗೆ ಸಂಗ್ರಹಿಸುವ ಅಧಿಕಾರ ಹೊಂದಿಲ್ಲ. ₹ 200ಕ್ಕಿಂತ ಕಡಿಮೆಯಿದ್ದರೆ ಪೂರೈಕೆಯ ಬಿಲ್ಲನ್ನು ನೀಡದಿರಬಹುದು. ಆದರೆ ಗ್ರಾಹಕರು ಬೇಡಿದರೆ ಇಲ್ಲವೆನ್ನುವಂತಿಲ್ಲ. ರಾಜಿ ವರ್ತಕರು ತಾವು ನೀಡುವ ಪೂರೈಕೆ ಬಿಲ್‌ನ ಮೇಲೆ ‘ರಾಜಿ ತೆರಿಗೆ ವರ್ತಕ -ಪೂರೈಕೆಗಳ ಮೇಲೆ ತೆರಿಗೆ ಸಂಗ್ರಹಿಸುವ ಅಧಿಕಾರವಿಲ್ಲ” ಎಂದು ಗ್ರಾಹಕರಿಗೆ ಕಾಣುವಂತೆ ಸ್ಪಷ್ಟವಾಗಿ ಉಲ್ಲೇಖಿಸಬೇಕು.

ತೆರಿಗೆ ಬೆಲೆಪಟ್ಟಿ ಏನನ್ನು ಒಳಗೊಂಡಿರಬೇಕು

ಪೂರೈಕೆದಾರರ (ಮಾರಾಟಗಾರ) ಅಂಗಡಿಯ ಹೆಸರು, ವಿಳಾಸ ಮತ್ತು ಜಿಎಸ್‌ಟಿ ಗುರುತಿನ ಸಂಖ್ಯೆ (ಟಿನ್‌ ಸಂಖ್ಯೆ)16 ಅಂಕಿಗಳಿಗಿಂತ ಹೆಚ್ಚಲ್ಲದ ಕ್ರಮ ಸಂಖ್ಯೆ ಹೊಂದಿರಬೇಕು

ಬೆಲೆಪಟ್ಟಿ ನೀಡಿದ ದಿನಾಂಕ: ಸರಕು / ಸೇವೆಗಳನ್ನು ಸ್ವೀಕರಿಸುವವರ ಹೆಸರು, ವಿಳಾಸ ಮತ್ತು ಜಿಎಸ್‌ಟಿ ಗುರುತಿನ ಸಂಖ್ಯೆ (ಅನೋಂದಾಯಿತ ವರ್ತಕರಿದ್ದರೆ ಟಿನ್‌ ಸಂಖ್ಯೆ ಬರೆಯುವುದು ಅನ್ವಯಿಸುವುದಿಲ್ಲ).

ಎಚ್‌ಎಸ್‌ಎನ್‌ ಕೋಡ್‌: ವಾರ್ಷಿಕ ವಹಿವಾಟು ಒಂದೂವರಿ ಕೋಟಿ ರೂಪಾಯಿಗಳಿಗಿಂತ ಕಡಿಮೆಯಿದ್ದಾಗ ಇದು ಅನ್ವಯಿಸುವುದಿಲ್ಲ.

ತೆರಿಗೆ ಬೆಲೆಪಟ್ಟಿ ಇನವೈಸ್ ನೀಡುವ ರೀತಿ

ನಿಯಮ 48 ರ ಪ್ರಕಾರ, ತೆರಿಗೆ ಬೆಲೆಪಟ್ಟಿಯನ್ನು ತ್ರಿ-ಪ್ರತಿಯಲ್ಲಿ ತಯಾರಿಸಬೇಕು. ಅದರ ಮೂಲ ಪ್ರತಿ ಖರೀದಿದಾರನಿಗೂ, ದ್ವಿತೀಯ ಪ್ರತಿಯನ್ನು ಸಾಗಣೆದಾರನಿಗೂ ಮತ್ತು ತೃತೀಯ ಪ್ರತಿಯನ್ನು ಮಾರಾಟ ಮಾಡಿದ ವರ್ತಕರು ಇಟ್ಟುಕೊಳ್ಳಬೇಕು. ಗಣಕಯಂತ್ರದಲ್ಲಿ ಮಾರಾಟ ಬಿಲ್‌ ವಿತರಿಸುವ ವರ್ತಕರೂ ತ್ರಿ-ಪ್ರತಿಗಳಲ್ಲಿ ತೆರಿಗೆ ಬೆಲೆಪಟ್ಟಿ ನೀಡಬೇಕು. ತಮ್ಮದಾದ ತೃತೀಯ ಪ್ರತಿಯಲ್ಲಿ ಸಹಿಮಾಡಿ ಕಡತಕ್ಕೆ ಸೇರಿಸಿ ಇಟ್ಟುಕೊಳ್ಳಬೇಕು.

ಪೂರೈಕೆ ಬಿಲ್‌ ನೀಡುವ ವಿಧಾನ

ನಿಯಮ 49ರ ಪ್ರಕಾರ, ಪೂರೈಕೆ ಬಿಲ್‌ ತೆರಿಗೆ ಬೆಲೆಪಟ್ಟಿ ಹೊಂದಿರುವ ಅಂಶಗಳೆಲ್ಲವನ್ನು ಹೊಂದಿರಬೇಕು. ತೆರಿಗೆ ದರ ಅಥವಾ ರಾಜ್ಯ ತೆರಿಗೆ, ಕೇಂದ್ರ ತೆರಿಗೆ, ಸಮಗ್ರ ತೆರಿಗೆ, ಉಪಕರ ಇತ್ಯಾದಿ ತೆರಿಗೆಗಳ ಉಲ್ಲೇಖ ಮಾತ್ರ ಇದರಲ್ಲಿ ಇರುವುದಿಲ್ಲ. ಏಕೆಂದರೆ ಇದನ್ನು ವಿತರಿಸುವ ರಾಜಿ ತೆರಿಗೆ ವರ್ತಕರು ಮಾರಾಟ ಬಿಲ್‌ನಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶವಿಲ್ಲ. ಇದೇ ರೀತಿ ತೆರಿಗೆ ವಿನಾಯ್ತಿ ಸರಕು/ಸೇವೆಗಳನ್ನು ಪೂರೈಸುವವರು ತೆರಿಗೆ ಸಂಗ್ರಹಿಸುವಂತಿಲ್ಲ.

ತೆರಿಗೆ ಬೆಲೆಪಟ್ಟಿಗೆ ಸಂಬಂಧಿಸಿದ ದಂಡ

ತೆರಿಗೆ ಪಾವತಿಸುವವರು ತೆರಿಗೆ ಬೆಲೆಪಟ್ಟಿ ನೀಡದೆ ಸರಕು ಅಥವಾ ಸೇವೆಗಳನ್ನು ಪೋರೈಸಿದರೆ (ಮಾರಿದರೆ) ಮತ್ತು ತೆರಿಗೆ ಬೆಲೆಪಟ್ಟಿಯನ್ನು ತಪ್ಪಾಗಿ (ನಕಲಿ ಇತ್ಯಾದಿ) ನೀಡಿದರೆ ಜಿಎಸ್‌ಟಿ ಕಾಯ್ದೆಯ ಕಲಂ. 122 ರ ಅಡಿಯಲ್ಲಿ ಅದು ಅಪರಾಧವಾಗುತ್ತದೆ. ಅದೇ ರೀತಿ ಯಾವುದೇ ಸರಕು ಅಥವಾ ಸೇವೆಗಳನ್ನು ಪೂರೈಕೆ ಮಾಡದೆ ಕೇವಲ ತೆರಿಗೆ ಬೆಲೆಪಟ್ಟಿ ನೀಡುವುದು (ಬಿಲ್ ಟ್ರೇಡಿಂಗ್‌) ಕೂಡ ಸದರಿ ಕಲಂಗಳಡಿಯಲ್ಲಿ ಅಪರಾಧ.

ಈ ಅಪರಾಧಕ್ಕಾಗಿ ₹ 10 ಸಾವಿರ ಮತ್ತು ಕೇಂದ್ರ ತೆರಿಗೆಯ ಉಲ್ಲಂಘನೆಗೆ ಹತ್ತು ಸಾವಿರ ರೂಪಾಯಿಗಳು-ಒಟ್ಟು ₹ 20 ಸಾವಿರ ಪಾವತಿಸಬೇಕಾಗುತ್ತದೆ. ಅಥವಾ ಈ ಅಪರಾಧ ಎಸಗುವ ಮೂಲಕ ತಪ್ಪಿಸಲಾದ ತೆರಿಗೆ ಅಥವಾ ಅಕ್ರಮವಾಗಿ ತೆಗೆದುಕೊಂಡ ಹೂಡುವಳಿ ತೆರಿಗೆ-ಇವುಗಳಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ದಂಡವಾಗಿ ತುಂಬಬೇಕಾಗುತ್ತದೆ!

ವರ್ತಕರೆ ಬಿಲ್‌ ನೀಡಿ

ವರ್ತಕರು ಬಿಲ್‌ ನೀಡದೆ ಸರಕುಗಳ ಮಾರಾಟ (ಹೊರ ಪೊರೈಕೆ) ಮಾಡುವುದರಿಂದ ಒಂದಲ್ಲ ಒಂದು ದಿನ ತೆರಿಗೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದೆ ಬೀಳುತ್ತಾರೆ. ಏಕೆಂದರೆ, ಒಮ್ಮೆ ಖರೀದಿ ವಹಿವಾಟನ್ನು (ಒಳಪೊರೈಕೆ) ಲೆಕ್ಕಕ್ಕೆ ತೆಗೆದುಕೊಂಡು ಹೂಡುವಳಿ ತೆರಿಗೆ ಜಮೆ ಪಡೆದ ನಂತರ ಖರೀದಿಯ ಸರಕುಗಳು ಅಂಗಡಿಯ ದಾಸ್ತಾನಿನಲ್ಲಿರಬೇಕು ಇಲ್ಲವೆ ಮಾರಾಟವಾಗಿ ಹೊರಗೆ ಹೋಗಿರಬೇಕು. ತೆರಿಗೆ ಬೆಲೆಪಟ್ಟಿ ನೀಡದೆ ಹೊರ ಪೂರೈಕೆ ಮಾಡುವುದರಿಂದ ವರ್ತಕರ ಭೌತಿಕ ದಾಸ್ತಾನಿನ ಲೆಕ್ಕ ಏರುಪೇರಾಗಿರುತ್ತದೆ.

ಅಂದರೆ ವರ್ತಕರ ಲೆಕ್ಕಪತ್ರಗಳಲ್ಲಿ ಮೂಲಭೂತ ನ್ಯೂನತೆಗಳಿರುತ್ತವೆ. ತಪಾಸಣಾ ಅಧಿಕಾರಿಗಳು ವ್ಯವಹಾರ ಸ್ಥಳಕ್ಕೆ ಭೇಟಿ ನೀಡಿ ಭೌತಿಕ ದಾಸ್ತಾನು ಲೆಕ್ಕ ಪಡೆದಾಗ ಈ ಹುಳುಕು ಹೊರಗೆ ಬರುತ್ತದೆ. ಇದು ‘ಅಕ್ರಮ ವಹಿವಾಟು-ಬಚ್ಚಿಟ್ಟ ವಹಿವಾಟು’ ಎನಿಸುವುದರಿಂದ ಇದರ ಮೇಲಿನ ತೆರಿಗೆ ತಪ್ಪಿಸಿದ್ದಕ್ಕಾಗಿ ಎರಡು ಮೂರು ಪಟ್ಟು ದಂಡ ಪಾವತಿಸಬೇಕಾಗುತ್ತದೆ.

ಪ್ರತಿ ತಿಂಗಳೂ ಲೆಕ್ಕಪತ್ರ ವರದಿ ಸಲ್ಲಿಸುವ ಮೊದಲು ವರ್ತಕರು ಆ ತಿಂಗಳಲ್ಲಿ ಮಾಡಿದ ಖರೀದಿ ಎಷ್ಟು? ಮಾರಾಟ ಮಾಡಿದ್ದೆಷ್ಟು? ಒಟ್ಟು ಲಾಭಾಂಶವೆಷ್ಟು? ತಿಂಗಳ ಕೊನೆಗೆ ಅಂಗಡಿಯಲ್ಲಿರುವ ಭೌತಿಕ ದಾಸ್ತಾನು-ಈ ನಾಲ್ಕು ಅಂಶಗಳನ್ನು ಹೋಲಿಸಿ ನೋಡಿಕೊಳ್ಳಬೇಕು.ಇವುಗಳಲ್ಲಿ ಏರುಪೇರಾದರೆ ಯಾವುದರಲ್ಲೊ ಲೆಕ್ಕತಪ್ಪಿದೆ ಎಂದರ್ಥ. ಸಾಮಾನ್ಯವಾಗಿ ಮಾರಾಟ ಬಿಲ್‌ ನೀಡಿಕೆಯಲ್ಲಿನ ನಿರಾಸಕ್ತಿಯೇ ಎಲ್ಲ ಗೊಂದಲಗಳಿಗೆ ಕಾರಣವಾಗಿರುತ್ತದೆ.

ಗ್ರಾಹಕರ ಪಾತ್ರ

ಗ್ರಾಹಕರು ಸರಕುಗಳನ್ನು ಖರೀದಿಸುವಾಗ ಕಡ್ಡಾಯವಾಗಿ ಅಂಗಡಿಯವರಿಂದ ಬಿಲ್‌ ಕೇಳಿ ಪಡೆಯಬೇಕು.ಆ ಬಿಲ್‌ನಲ್ಲಿ ಮೇಲೆ ತಿಳಿಸಿದ (ಬಾಕ್ಸ್‌ನಲ್ಲಿ ಪ್ರತ್ಯೇಕವಾಗಿ ಕೊಡಲಾಗಿದೆ) ಅಂಶಗಳಿರಬೇಕು. ಈ ಎಲ್ಲ ವಿವರಗಳನ್ನು ಒಳಗೊಂಡಿರದ ಬಿಲ್‌ ನಕಲಿಯಾಗಿರುತ್ತದೆ. ಮುದ್ರಿತವಾಗಿರದ ಬಿಳಿ ಹಾಳೆಯ ಬಿಲ್‌ ನೀಡುವುದು ಅಪರಾಧವಾಗಿರುವುದರಿಂದ ಗ್ರಾಹಕರು ಎಚ್ಚರವಹಿಸಬೇಕು.

ತೆರಿಗೆ ತಪ್ಪಿಸುವ ಉದ್ದೇಶದಿಂದ ಕೆಲವು ವರ್ತಕರು ಬಿಲ್‌ ನೀಡಲು ಹಿಂದೆ ಮುಂದೆ ನೋಡುತ್ತಾರೆ. ಹಲವು ಸಬೂಬು ಹೇಳುತ್ತಾರೆ. ಕೆಲವೊಮ್ಮೆ ಬೆದರಿಕೆ ಹಾಕುವ ಪ್ರಸಂಗಗಳನ್ನೂ ನೋಡಿದ್ದೇವೆ.

ವರ್ತಕರು ಅಸಲಿ ಬಿಲ್‌ ನೀಡಿದರೆಂದರೆ ಮಾರಾಟ ವಹಿವಾಟು ಲೆಕ್ಕಕ್ಕೆ ಸೇರಿತೆಂದು ಅರ್ಥ. ಲೆಕ್ಕಕ್ಕೆ ಸೇರಿದರೆ ಸರ್ಕಾರಕ್ಕೆ ತೆರಿಗೆ ಪಾವತಿಯಾಗುತ್ತದೆ ಎಂದೂ ಅರ್ಥ. ಈ ಕಾರಣಕ್ಕೆ ಗ್ರಾಹಕರು ತಾವು ಖರೀದಿಸುವ ಪ್ರತಿಯೊಂದು ಸರಕು, ಸ್ವೀಕರಿಸಿದ ಸೇವೆಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಅಸಲಿ ಬಿಲ್‌ ಪಡೆಯಬೇಕು. ಅಸಲಿ ಬಿಲ್‌ ಕೊಡಲು ವರ್ತಕರು ನಿರಾಕರಿಸಿದರೆ ಸಂಬಂಧಿಸಿದ ಸ್ಥಳೀಯ ಜಿಎಸ್‌ಟಿ ಕಚೇರಿಯ ಗಮನಕ್ಕೆ ತರಬೇಕು. ಗ್ರಾಹಕರು ಹೀಗೆ ಜಾಗೃತರಾಗುವ ಮೂಲಕ ಸರ್ಕಾರದ ತೆರಿಗೆ ಸಂಗ್ರಹ ಕಾರ್ಯದಲ್ಲಿ ಪರೋಕ್ಷವಾಗಿ ಭಾಗವಹಿಸಬೇಕು.

(ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು)

***

ಅಸಲಿ ಬಿಲ್‌

ಸರಕು ಅಥವಾ ಸೇವೆಗಳ ವಿವರ, ಪ್ರಮಾಣ ಸರಕು/ಸೇವೆಗಳ ಒಟ್ಟು ಮೌಲ್ಯ. ತೆರಿಗೆ ದರ(ರಾಜ್ಯ ತೆರಿಗೆ, ಕೇಂದ್ರ ತೆರಿಗೆ, ಸಮಗ್ರ ತೆರಿಗೆ ಅಥವಾ ಉಪಕರ(ಸೆಸ್) ವರ್ತಕರ ಸಹಿ. ಮೇಲಿನ ಈಎಲ್ಲ ಅಂಶಗಳಿದ್ದರೆ ಅದು ಅಸಲಿ ಬಿಲ್‌. ಇಲ್ಲವಾದರೆ ಅದು ನಕಲಿ ಎಂದೇ ತೀರ್ಮಾನಕ್ಕೆ ಬರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry