7

ಸಮುದ್ರದಾಳದಲ್ಲಿ ಮೀನಾಗಿ...

Published:
Updated:
ಸಮುದ್ರದಾಳದಲ್ಲಿ ಮೀನಾಗಿ...

ಸಮುದ್ರದ ನಡುವೆ ಬೋಟ್‌ನಲ್ಲಿ ಕರೆದೊಯ್ದು ಎಂಜಿನ್ ಆಫ್ ಮಾಡಿದಾಗ ದಡದ ದಿಕ್ಕೇ ತೋಚದಂತೆ ಸುತ್ತಲೂ ಹರಡಿದ್ದ ಆ ಜಲರಾಶಿಯನ್ನು ನೋಡಿ ಭಯವಾಗಿತ್ತು. ಆದರೆ, ಜೊತೆಯಲ್ಲಿದ್ದ ತರಬೇತುದಾರರು ಧೈರ್ಯ ತುಂಬಿದರು. ಅವರೊಂದಿಗೆ ಸಮುದ್ರದೊಳಗೆ ಸ್ವಲ್ಪ ಭಯದಿಂದಲೇ ಕಣ್ಮುಚ್ಚಿ ಡೈವ್ ಮಾಡಿದೆ’

–ಮೊದಲ ಬಾರಿ ಸ್ಕೂಬಾ ಡೈವ್ ಮಾಡಿದ, ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆಂತೋಣಿ ಮರಿಯಾ ಇಮ್ಯಾನ್ಯುಯಲ್ ಅವರ ಅನುಭವದ ಮಾತಿದು.

‘ನೀರಿಗೆ ಜಿಗಿದ ಮೇಲೆ ಕಣ್ಬಿಟ್ಟೆ ನೋಡಿ, ತರಬೇತುದಾರರು ನನ್ನ ಕೈಹಿಡಿದು ನಿಧಾನವಾಗಿ ತಳಭಾಗಕ್ಕೆ ಕರೆದುಕೊಂಡು ಹೋಗಿದ್ದರಿಂದ ನಂತರ ಅಷ್ಟು ಭಯವಾಗಲಿಲ್ಲ. ಕೇವಲ ಡಿಸ್ಕವರಿ ಚಾನೆಲ್‌ನಲ್ಲಿ ಸಮುದ್ರದಾಳದ ದೃಶ್ಯಗಳನ್ನು ಕಂಡಿದ್ದ ನನಗೆ, ಕಡಲ ತಡಿಯಲ್ಲಿನ ನೈಜ ಸುಂದರ ಲೋಕವನ್ನು ಕಣ್ತುಂಬಿಕೊಳ್ಳುವ ಅವಕಾಶ. ಆಗ ಸ್ವರ್ಗದಲ್ಲೇ ಇದ್ದಂತೆ ಭಾಸವಾಗಿತ್ತು’ ಎಂದು ಅವರು ನೆನೆಯುತ್ತಾರೆ.

ಉಡುಪಿಯ ಕಾಪು ಕಡಲ ತೀರದಲ್ಲಿ ವ್ಯವಸ್ಥೆ ಮಾಡಲಾದ ಸ್ಕೂಬಾ ಡೈವಿಂಗ್‌ ಜಲಕ್ರೀಡೆಯಲ್ಲಿ ಪಾಲ್ಗೊಂಡ ಬಹುತೇಕರು, ಸಮುದ್ರದ ತಲಸ್ಪರ್ಶಿ ನೋಟವನ್ನು ಕಣ್ತುಂಬಿಕೊಂಡು ಆಂತೋಣಿ ಅವರಂತೆಯೇ ರೋಮಾಂಚನಗೊಂಡಿದ್ದಾರೆ.

ಸ್ಕೂಬಾ ಡೈವಿಂಗ್‌ನಲ್ಲಿ ಪಾಲ್ಗೊಂಡು ನೀರಿನಿಂದ ಹೊರಬಂದ ಯಾರನ್ನೇ ಮಾತನಾಡಿಸಿ ನೋಡಿ, ‘ಜೀವನದಲ್ಲಿ ಕೆಲವೇ ಬಾರಿ ಸಿಗುವ ಅತ್ಯದ್ಭುತ ಅವಕಾಶಗಳಲ್ಲಿ ಇದೂ ಒಂದು. ಸಮುದ್ರದಾಳದ ಸುಂದರ ಮತ್ಸ್ಯಲೋಕ, ಕಪ್ಪೆಚಿಪ್ಪು ಜಗತ್ತು, ಕಲ್ಲುಬಂಡೆಗಳ ಮೇಲೆ ಬೆಳದಿರುವ ಸಸ್ಯವರ್ಗ... ಅಬ್ಬಬ್ಬಾ, ಅಮೋಘ’ ಎಂಬ ಬಣ್ಣನೆಯ ಮಾತುಗಳು ಕೇಳಿ ಬರುತ್ತವೆ.

ಇಂದಿನ ಯುವ ಜನತೆ ಹೊಸತನಕ್ಕೆ ಹಾತೊರೆಯುವ ಸಾಹಸೀ ಪ್ರವೃತ್ತಿ ಉಳ್ಳವರಾಗಿದ್ದು, ಅಂಥವರಿಗಾಗಿ ಹೇಳಿ ಮಾಡಿಸಿದ ಜಲಸಾಹಸ ಕ್ರೀಡೆ ಸ್ಕೂಬಾ ಡೈವಿಂಗ್.

ವಿದೇಶಗಳಲ್ಲಿ ಈಗಾಗಲೇ ಹೆಚ್ಚು ಪ್ರಚಲಿತದಲ್ಲಿರುವ ಈ ಜಲ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಭಾರತದಲ್ಲಿ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಮಾತ್ರ ಅವಕಾಶವಿದೆ.

ಟಿ.ವಿಯಲ್ಲಿ ಮಾತ್ರ ನೋಡಿ ಆನಂದಿಸುತ್ತಿದ್ದ, ಸಮುದ್ರದಾಳದ ಅದ್ಭುತ ಜೀವ ವೈವಿಧ್ಯ, ಆಕರ್ಷಕ ಮೀನು, ವಿವಿಧ ಪ್ರಭೇದದ ಸಸ್ಯ ಸಂಪತ್ತು ಹಾಗೂ ಸೌಂದರ್ಯವನ್ನು ವೀಕ್ಷಿಸಲು ಸ್ಕೂಬಾ ಡೈವಿಂಗ್‌ನಿಂದ ಮಾತ್ರ ಸಾಧ್ಯ.

ಉಡುಪಿ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಈ ಜಲ ಸಾಹಸ ಕ್ರೀಡೆ ಶುರುವಾಗಿದೆ. ಬೋಟ್ ಫೆಡರೇಷನ್ ನೀಡಿದ ಆಭಿಪ್ರಾಯದಂತೆ ಕಾಪು ಬೀಚ್‌ನಿಂದ ಸಮುದ್ರದಲ್ಲಿ ಎಂಟು ಕಿ.ಮೀ. ದೂರದ ಮೂಲ್ಕಿ ಪಾರ್ ಎಂಬಲ್ಲಿ ಸ್ಕೂಬಾ ಡೈವಿಂಗ್‌ಗೆ ಸೌಲಭ್ಯ ಕಲ್ಪಿಸಲಾಗಿದೆ.

ಇಲ್ಲಿನ ಸಮುದ್ರದಾಳದಲ್ಲಿ ಹವಳದ ದಿಬ್ಬಗಳು, ಆಕರ್ಷಕ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ. ಅಲ್ಲದೆ, ಇಲ್ಲಿ ನೀರಿನಾಳದ ದೃಶ್ಯಗಳು ಇತರೆಡೆಗಿಂತ ಅತ್ಯಂತ ಸ್ಪಷ್ಟವಾಗಿ ಕಾಣುತ್ತವೆ. ಸ್ಕೂಬಾ ಡೈವಿಂಗ್ ನಡೆಸಲು ‘ವೆಸ್ಟ್ ಕೋ ಅಡ್ವೆಂಚರ್ಸ್’ ಕಂಪನಿ ಗುತ್ತಿಗೆ ಪಡೆದಿದ್ದು, ಇದೇ ಕಂಪನಿ ಗೋವಾ, ಮುಂಬೈ ಮತ್ತು ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲೂ ಸ್ಕೂಬಾ ಡೈವಿಂಗ್ ಸೌಲಭ್ಯ ಕಲ್ಪಿಸಿದೆ.

ಸ್ಕೂಬಾ ಡೈವಿಂಗ್ ಮಾಡಲು ಈಜು ಬಲ್ಲವರಾಗಿರಬೇಕು ಎಂಬ ನಿಯಮವೇನಿಲ್ಲ. ಹತ್ತು ವರ್ಷ ಮೇಲಿನ ಎಲ್ಲರೂ ಭಾಗವಹಿಸಬಹುದು. 71 ವರ್ಷದ ವೃದ್ಧೆಯೊಬ್ಬರು ಈಗಲೂ ಈ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಮುದ್ರಕ್ಕೆ ಧುಮುಕುವ ಮುನ್ನ ಹೃದಯರೋಗ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬುದರ ಕುರಿತು ಸ್ವಯಂಘೋಷಿತ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ. ನುರಿತ ತರಬೇತುದಾರರ ಮಾರ್ಗದರ್ಶನ ಸಿಗಲಿದ್ದು, ಡೈವಿಂಗ್‌ನಲ್ಲಿ ಪ್ರತಿಯೊಬ್ಬರ ಜತೆಗೂ ಒಬ್ಬರು ಸಹಾಯಕರು ಇರುತ್ತಾರೆ.

ಡೈವಿಂಗ್‌ಗೆ ತೆರಳುವ ಮೊದಲು ಅರ್ಧಗಂಟೆ, ಜೀವ ರಕ್ಷಕ ಸಾಧನಗಳ ಬಳಕೆ, ಸಮುದ್ರದ ಬಗೆಗಿನ ವಿವರ, ಸಮುದ್ರದಾಳದಲ್ಲಿ ಕಂಡು ಬರುವ ವೈವಿಧ್ಯ ಹಾಗೂ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ನಂತರ ತೀರದಿಂದ ಎಂಟು ಕಿ.ಮೀ. ದೂರಲ್ಲಿರುವ ಬಂಡೆಗಳಿಂದ ಸುತ್ತುವರೆದ ಮೂಲ್ಕಿ ಪಾರ್‌ಗೆ ಬೋಟ್‌ನಲ್ಲಿ ತೆರಳಿ, ಅಲ್ಲಿ ಡೈವಿಂಗ್ ಮಾಡಿಸಲಾಗುತ್ತದೆ. ಇಲ್ಲಿ ಸಮುದ್ರ ಸುಮಾರು 15 ಮೀಟರ್ ಆಳವಿದ್ದು, ಸುತ್ತಮುತ್ತ

ಬಂಡೆಗಳಿಂದ ಆವೃತ ವಾಗಿರುವ ಕಾರಣ ಯಾವುದೇ ಮೀನುಗಾರಿಕಾ ದೋಣಿಗಳು ಇಲ್ಲಿ ಸುಳಿಯುವುದಿಲ್ಲ. ಹೀಗಾಗಿ ಸಮುದ್ರದಾಳದಲ್ಲಿ ವೈವಿಧ್ಯಮಯ ಮೀನು ಪ್ರಭೇದಗಳು, ಸಸ್ಯ ವರ್ಗಗಳು ಯಥೇಚ್ಚವಾಗಿ ಬೆಳವಣಿಗೆಯಾಗಿವೆ.

ಮಳೆಗಾಲದ ನಾಲ್ಕು ತಿಂಗಳು ಹೊರತುಪಡಿಸಿದರೆ, ಎಂಟು ತಿಂಗಳು ಸ್ಕೂಬಾ ಡೈವ್‌ಗೆ ಅವಕಾಶವಿದೆ. ಮೊದಲ ಬಾರಿ ಸ್ಕೂಬಾ ಡೈವ್ ಮಾಡುವವರಿಗೆ 12 ಮೀಟರ್‌ ಆಳದವರೆಗೆ ಕರೆದೊಯ್ಯಲಾಗುತ್ತದೆ. ಸ್ಕೂಬಾ ಡೈವ್‌ನಲ್ಲಿ ತರಬೇತಿ ಪಡೆದವರಿಗೆ ಗರಿಷ್ಠ 40 ಮೀಟರ್‌ ಆಳದವರೆಗೆ ಕರೆದುಕೊಂಡು ಹೋಗಲಾಗುತ್ತದೆ.

ಸಾಹಸೀ ಪ್ರವೃತ್ತಿ ಹೊಂದಿರುವವರಿಗೆ, ರೋಮಾಂಚನ ಕಾರಿ ಅನುಭವ ನೀಡುವ ಈ ಸ್ಕೂಬಾ ಡೈವಿಂಗ್ ಮೂಲಕ ವಿದೇಶಿ ಪ್ರವಾಸಿಗರನ್ನು ಕಾಪು ಬೀಚ್‌ಗೆ ಆಕರ್ಷಿಸಿ, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿಸುವ ಉದ್ದೇಶ ಉಡುಪಿ ಜಿಲ್ಲಾಡಳಿತದ್ದಾಗಿದೆ.

‘ಸಮುದ್ರದ ಆಳದಲ್ಲಿ ವೀಕ್ಷಿಸಲು ಅನುಕೂಲವಾಗುವಂತಹ ಕನ್ನಡಕ ನೀಡಿದ್ದರಿಂದ ದೃಶ್ಯಗಳು ಅತ್ಯಂತ ಸ್ಪಷ್ಟವಾಗಿ ಕಾಣಿಸಿದವು. ಜೀವಮಾನ ದಲ್ಲಿ ಒಮ್ಮೆಯಾದರೂ ಇಂತಹ ಅನುಭವ ಪಡೆಯಬೇಕು. ಉಸಿರಾಟಕ್ಕೆ ಅನುಕೂಲವಾಗುವಂತಹ ಉಪಕರಣ ಹಾಗೂ ಡೈವ್‌ಗೆ ಅನುಕೂಲವಾಗುವಂತಹ ಉಡುಪುಗಳನ್ನು ಒದಗಿಸಿ, ಅತ್ಯಂತ ಸುರಕ್ಷಿತವಾಗಿ ಸಮುದ್ರದಾಳಕ್ಕೆ ಹೋಗಿ ಬರಲು ತರಬೇತುದಾರರು

ಸಹಕಾರ ನೀಡಿದರು’ ಎಂದು ಆಂತೋಣಿ ನೆನೆಯುತ್ತಾರೆ.

ಪ್ರಾರಂಭಿಕ ಶುಲ್ಕವಾಗಿ ಒಬ್ಬರಿಗೆ ₹3,500 ನಿಗದಿಪಡಿಸಿದೆ. ನೇತ್ರಾಣಿ ದ್ವೀಪದಲ್ಲಿ ಇದೇ ಡೈವಿಂಗ್‌ಗೆ ಒಬ್ಬರಿಗೆ ₹6,000 ದರವಿದೆ. ಕಾಪು ಕಡಲತೀರದ ಸಮೀಪದಲ್ಲಿ ವೆಸ್ಟ್ ಕೋ ಅಡ್ವೆಂಚರ್ಸ್ ಕಂಪನಿಯ ಕಚೇರಿಯಿದೆ. ವಿವರಗಳಿಗೆ ಸಂಪರ್ಕ ಸಂಖ್ಯೆ: 7057066669.

***

ಜಿಗಿಯುವ ಮುನ್ನ...

ಸ್ಕೂಬಾ ಡೈವಿಂಗ್‌ ಮನರಂಜನಾತ್ಮಕ ಕ್ರೀಡೆ. ಆದರೂ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯ. ಅದಕ್ಕೆ ಒಂದಿಷ್ಟು ನಿಯಮಗಳೂ ಇವೆ.

* ಆರೋಗ್ಯದಲ್ಲಿ ಸಮಸ್ಯೆಯಿದ್ದರೆ ಸ್ಕೂಬಾ ಡೈವಿಂಗ್‌ಗೆ ಹೋಗುವುದು ಸೂಕ್ತವಲ್ಲ. ಅದರಲ್ಲೂ ಉಸಿರಾಟ ಸಮಸ್ಯೆಯಿದ್ದವರಿಗೆ ನಿಷಿದ್ಧ.

* ವಯಸ್ಸು, ಲಿಂಗ, ದೇಹದ ತೂಕ–ಎತ್ತರ (ಬಾಡಿ ಮಾಸ್ ಇಂಡೆಕ್ಸ್), ಧೂಮಪಾನ, ಅಸ್ತಮಾ, ಮಧುಮೇಹ, ಹೃದಯದ ಸ್ವಾಸ್ಥ್ಯ ಹೀಗೆ ಹಲವು ಅಂಶಗಳನ್ನು ಪರಿಗಣಿಸಿ ಡೈವಿಂಗ್‌ಗೆ ಬಿಡಲಾಗುತ್ತದೆ.

* ವಿದೇಶಗಳಲ್ಲಿ ಅನುಭವಿ ಗಳು ಸ್ಕೂಬಾ ಡೈವಿಂಗ್‌ ಅನ್ನು 130 ಅಡಿ ಆಳದವರೆಗೂ ನಡೆಸುತ್ತಾರೆ. ಗಾಳಿ ತುಂಬಿರುವ ಟ್ಯಾಂಕ್‌ಗೆ ಸಂಪರ್ಕಿಸಿರುವ ಮೌತ್ ಪೀಸ್ ಮೂಲಕ ಸಾಗರದಾಳದಲ್ಲಿ ಉಸಿರಾಟ ನಡೆಯುತ್ತದೆ.

* ಒಬ್ಬರೇ ಡೈವ್ ಮಾಡಲು ಅವಕಾಶವಿಲ್ಲ.

* ನಿಯಂತ್ರಿತ ಪ್ರದೇಶದ ಒಳಗೇ ಡೈವ್ ಮಾಡಬೇಕು.

* ಡೈವ್ ಮಾಡುವ ಮೊದಲು ಸಾಧನಗಳನ್ನು ಪರೀಕ್ಷಿಸಿಕೊಳ್ಳಬೇಕು. ಮುಖಕ್ಕೆ ತಕ್ಕ ಮಾಸ್ಕ್ ಇರಬೇಕು. ಇಲ್ಲವೆಂದರೆ ‘ಡಿಕಂಪ್ರೆಶನ್ ಸಿಕ್‌ನೆಸ್’ ಉಂಟಾಗುವ ಸಾಧ್ಯತೆ ಇರುತ್ತದೆ. ಸ್ಕೂಬಾ ಗಿಯರ್ ನಿಮಗೆ ಹೊಂದುವಂತಿರಬೇಕು.

* ಮದ್ಯ ಸೇವಿಸಿ ಡೈವಿಂಗ್ ಮಾಡುವಂತಿಲ್ಲ.

* ಯಾವ ರೀತಿಯ ಮೀನುಗಳು, ಕೊರಾಲ್‌ಗಳು ಅಪಾಯಕಾರಿ ಎಂಬುದನ್ನು ತಿಳಿದುಕೊಂಡರೆ ಕಡಲ ಒಳಗೆ ಗಾಯವಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯ.

* ಗೊಂದಲ, ಭಯ, ಆತಂಕವಾದರೆ ಇದ್ದ ಕಡೆಯೇ ನಿಂತು ವಿಶ್ರಾಂತಿ ಪಡೆಯಬೇಕು.

* ಸ್ಕೂಬಾ ಡೈವಿಂಗ್‌ನಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ ಕಿವಿಯಲ್ಲಿನ ಒತ್ತಡ. ಇದು ಕಿವಿಗಳಲ್ಲಿ ನೋವನ್ನು ತರುತ್ತದೆ. ಆಳಕ್ಕೆ ಹೋಗುತ್ತಿದ್ದಂತೆ ಈ ನೋವಿನ ಪ್ರಮಾಣವೂ ಹೆಚ್ಚಾಗುತ್ತದೆ. ಈ ಒತ್ತಡವನ್ನು ಆಕಳಿಸುವ ಮೂಲಕ, ಉಸಿರಾಟದ ಮೂಲಕ ನಿಯಂತ್ರಿಸಬಹುದು. ಪಾಪಿಂಗ್ ಮಾಡಬೇಕು.

* ತ್ಯಾಜ್ಯಗಳು, ಫಿಶಿಂಗ್ ಲೈನ್‌ಗಳಿಂದ ತೊಂದರೆ ಆಗಂತೆ ಎಚ್ಚರವಹಿಸಬೇಕು.

* ಅತಿ ವೇಗವಾಗಿ ತಳಕ್ಕೆ ಹೋದರೆ ಇನ್ನರ್ ಇಯರ್ ಬ್ಯಾರೊಟ್ರೌಮ ಉಂಟಾಗುವ ಸಾಧ್ಯತೆ ಇರುತ್ತದೆ. ದೇಹ ನೈಟ್ರೋಜನ್ ಬಿಡುಗಡೆ ಮಾಡುವುದರಿಂದ ರಕ್ತ ಹರಿಯುವಿಕೆಯಲ್ಲಿ ಗುಳ್ಳೆಗಳು ಉಂಟಾಗುತ್ತದೆ. ಇದರಿಂದ ರಕ್ತ ನಾಳಗಳು ಬ್ಲಾಕ್ ಆಗುತ್ತವೆ. ಮೆದುಳು, ಶ್ವಾಸಕೋಶ ಅಥವಾ ಸ್ಪೈನಲ್ ಕಾರ್ಡ್‌ಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದರೆ ಇಂಥ ಘಟನೆಗಳು ವಿರಳ.

* ಸ್ಕೂಬಾ ಡೈವಿಂಗ್ ಮಾಡಿದ 24 ಗಂಟೆ ಒಳಗೆ ಹಾರಾಟ ನಿಷಿದ್ಧ.

* ಮಾಸ್ಕ್‌ನಲ್ಲಿ ಯೆಲ್ಲೊ ಫಿಲ್ಟರ್ ವೈಸರ್ ಕೂಡ ಇರಬೇಕು. ಇದು ಬೆಳಕು ಉತ್ಪಾದಿಸುವ ಕೆಲ ಜೀವಿಗಳ ಪ್ರತಿಫಲಿತ ಬೆಳಕನ್ನು ತಡೆಯುತ್ತದೆ.

* ಸಾಗರದಾಳದಲ್ಲಿನ ಜೀವಸಂಕುಲ ಲೆಕ್ಕವಿಲ್ಲದಷ್ಟು. ಅವುಗಳಲ್ಲಿ ಕೆಲವನ್ನು ಸ್ಕೂಬಾ ಡೈವಿಂಗ್‌ನಲ್ಲಿ ಕಾಣಬಹುದು. ವಿದೇಶಗಳಲ್ಲಂತೂ ವೇಲ್‌ಗಳು, ಸೀ ಹಾರ್ಸ್‌ಗಳು, ಕೊರಾಲ್‌ಗಳು, ಸೀ ಕ್ರೇಟ್ ಹಾವು, ಆಕ್ಟೊಪಸ್‌ಗಳು, ಸೀಲ್, ಡಾಲ್ಫಿನ್, ರೀಫ್ ಫಿಶ್‌ಗಳು ನೋಡಲು ಸಿಗುತ್ತವೆ. ನೂರಾರು ಜಾತಿಯ ಮೀನುಗಳಂತೂ ಸಿಕ್ಕೇ ಸಿಗುತ್ತವೆ. ಇವುಗಳೊಂದಿಗೆ ಕೋನ್‌ ಶೆಲ್‌ಗಳು, ಕೊರಾಲ್‌ಗಳು, ಸೀ ಅರ್ಚಿನ್‌ಗಳು, ಸೀ ಸ್ಲಗ್‌ಗಳನ್ನು ಕೆಲ ಕಡೆ ನೋಡಬಹುದು.

ಅಂಡರ್ ವಾಟರ್ ಫೋಟೊಗ್ರಫಿ

* ಸ್ಕೂಬಾ ಡೈವಿಂಗ್ ಪ್ರಸಿದ್ಧಿ ಪಡೆಯುತ್ತಿದ್ದಂತೆ ಅಂಡರ್ ವಾಟರ್ ಫೋಟೊಗ್ರಫಿ ಕೂಡ ಜನಪ್ರಿಯಗೊಂಡಿದೆ. ಕಡಲ ತಳದಲ್ಲಿ ತಾವೇ ಬೆಳಕನ್ನು ಉತ್ಪಾದಿಸಬಲ್ಲ ಕೆಲವು ಫ್ಲೋರೋಸೆನ್ಸ್ ಜೀವಿಗಳಿವೆ. ಅಂಥ ಜೀವಿಗಳನ್ನು ಚಿತ್ರದಲ್ಲಿ ಸೆರೆಹಿಡಿಯುವುದು ಮತ್ತೂ ರೋಮಾಂಚಕ. ಸಾಗರದಾಳದಲ್ಲಿ ಚಿತ್ರ ತೆಗೆಯಲು ವಿಶೇಷ ಲೈಟ್‌ಗಳು, ಲೆನ್ಸ್‌ಗಳು ಇವೆ. ವೈಡ್ ಆ್ಯಂಗಲ್‌ ಹಾಗೂ ಮ್ಯಾಕ್ರೊ ಲೆನ್ಸ್‌ಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಇದಿನ್ನೂ ಆರಂಭಿಕ ಹಂತದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry