7

ವಿಶ್ವ ಯುವ ಸಮ್ಮೇಳನಕ್ಕೆ ತೆರೆ

Published:
Updated:
ವಿಶ್ವ ಯುವ ಸಮ್ಮೇಳನಕ್ಕೆ ತೆರೆ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ನಡೆದಿದ್ದ ‘ವಿಶ್ವ ಯುವ ಸಮ್ಮೇಳನ’ ಮತ್ತು ‘ಜಾಗತಿಕ ಸಂಗೀತೋತ್ಸವ’ಕ್ಕೆ ಗುರುವಾರ ಭಗವಾನ್ ಸತ್ಯ ಸಾಯಿಬಾಬಾ ಅವರ 92ನೇ ಜಯಂತ್ಯುತ್ಸವ ಆಚರಣೆಯೊಂದಿಗೆ ತೆರೆ ಬಿತ್ತು.

ಸಮ್ಮೇಳನದಲ್ಲಿ ಭಾಗವಹಿಸಿದ್ದ 34 ದೇಶಗಳ ಪ್ರತಿನಿಧಿಗಳು ‘ಒಂದೇ ವಿಶ್ವಕ್ಕಾಗಿ ಮತ್ತು ಜಗತ್ತಿನ ಕಲ್ಯಾಣಕ್ಕೆ ಯುವ ಜನತೆ ಸಂಘಟಿತರಾಗಿದ್ದಾರೆ’ ಎಂದು ಐಕ್ಯತೆಯ ಸಂದೇಶ ಸಾರಿದರು. ಜತೆಗೆ ‘ಭಗವಂತನ ಜತೆಗೂಡಿ ಒಳಿತಿನ ಕಡೆಗೆ ಸಾಗೋಣ’ ಎಂದು ಪ್ರತಿಜ್ಞೆಗೈದರು.

ಸತ್ಯಸಾಯಿ ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಬಾಬಾ ಅವರ ಜನ್ಮದಿನದ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮದ ಮುಖ್ಯಬೀದಿಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಸಾಂಸ್ಕೃತಿಕ ಪೋಷಾಕುಗಳೊಂದಿಗೆ ತಮ್ಮ ದೇಶದ ಧ್ವಜವನ್ನು ಹಿಡಿದು ಸ್ವಾಗತ ಗೀತೆ ಹಾಡುತ್ತ ಸಾಗಿದ್ದು, ಮನಮೋಹಕವಾಗಿತ್ತು.

ತಾಳ, ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಾಯಿ ಏಂಜೆಲ್ಸ್ ಬ್ಯಾಂಡ್‌ ತಂಡ ಸಲ್ಲಿಸಿದ ಗೌರವ ರಕ್ಷೆ, ಮುಗಿಲು ಮುಟ್ಟುವಂತೆ ಮಾರ್ದನಿಸಿದ ವೇದ ಘೋಷಗಳು, ವಿದೇಶಿ ಭಕ್ತರ ಭಕ್ತಿ ಸಂಗೀತದ ಪ್ರಾರ್ಥನೆ, ಪ್ರೇಮಾಮೃತ ಸಭಾಭವನದಲ್ಲಿ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹದ ಹರ್ಷೋದ್ಗಾರದ ನಡುವೆ ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂದನ ನಾಯ್ಡು ಅವರು ಬೃಹತ್‌ ಗಾತ್ರದ ಕೇಕ್‌ ಕತ್ತರಿಸಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್, ‘ನಮ್ಮಲ್ಲಿರುವ ವೈರುಧ್ಯಗಳನ್ನು ಮರೆತು ನಾವೆಲ್ಲ ಜಾಗತಿಕ ಮಟ್ಟದ ಏಕತೆಯನ್ನು ಮೈಗೂಡಿಸಿಕೊಂಡಾಗ ಆತ್ಮ ಸಾಕ್ಷಾತ್ಕಾರದ ಅರಿವಾಗುತ್ತದೆ. ಆತ್ಮ ಸಾಕ್ಷಾತ್ಕಾರದ ಅರಿವಾದಾಗ ದಿವ್ಯತೆಯ ಆನಂದ ದೊರೆಯುತ್ತದೆ’ ಎಂದು ಹೇಳಿದರು.

‘ಯುಗಯುಗಗಳಿಂದಲೂ ಮಹಾತ್ಮರು ಸಾರಿಕೊಂಡು ಬಂದ ಸಾರ್ವಕಾಲಿಕ ಸತ್ಯ ಇದೇ ಆಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವಿತದ ಉದ್ದೇಶ ಸದಾ ಅಭಿವೃದ್ಧಿಯ ಕಡೆಗಿರಬೇಕು. ಬಾಬಾ ಅವರು ಇಂದಿಗೂ ಮಾನವ ಜನಾಂಗಕ್ಕೆ ಸುಜ್ಞಾನ ನೀಡಿ, ಸತ್ಪಥದತ್ತ ಒಯ್ಯುತ್ತಿದ್ದಾರೆ. ಈ ಅವಕಾಶವನ್ನು ನಾವೆಲ್ಲ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಲೋಕ ಶಿಕ್ಷಣ ಸೇವಾ ಸಂಸ್ಥೆ ಮುಖ್ಯಸ್ಥ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಬಾಬಾ ಅವರು ಭೌತಿಕವಾಗಿ ನಮ್ಮನ್ನು ಅಗಲಿದರೂ ಸೂಕ್ಷ್ಮ ಶರೀರದ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಇದ್ದು ಸದಾ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ 30 ದೇಶಗಳಲ್ಲಿ ಸತ್ಯಸಾಯಿ ಬಾಬಾ ಅವರ ಫೌಂಡೇಷನ್‌ಗಳನ್ನು ಸ್ಥಾಪಿಸಿ ಮನುಕುಲದ ಸೇವೆ ಮಾಡಲಾಗುತ್ತಿದೆ. ಆ ಪೈಕಿ ಭಾರತದಲ್ಲಿ 12 ಫೌಂಡೇಷನ್‌ಗಳಿವೆ’ ಎಂದು ಹೇಳಿದರು.

‘ಭಾರತದಲ್ಲಿ ನಮ್ಮ 14 ಶಿಕ್ಷಣ ಸಂಸ್ಥೆಗಳಿದ್ದು ಅವುಗಳಲ್ಲಿ ಜಾತಿ, ಮತ ಬೇಧವಿಲ್ಲದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉಚಿತ ಊಟ, ವಸತಿ ಜತೆಗೆ ಶಿಕ್ಷಣ ನೀಡುವ ಮಹತ್ಕಾರ್ಯ ನಡೆದಿದೆ. ಎರಡು ಅತ್ಯಾಧುನಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ನ. 26 ರಂದು ಮುಂಬೈನಲ್ಲಿ ಹೃದಯಾಲಯದ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ’ ಎಂದರು.

‘ಅನ್ನಪೂರ್ಣ ಟ್ರಸ್ಟ್ ಮೂಲಕ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ನಿತ್ಯ ಬೆಳಿಗ್ಗೆ ಉಚಿತ ಉಪಾಹಾರ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ ಸತ್ಯ ಸಾಯಿ ಲೋಕಸೇವಾ ಸಮೂಹ ಸಂಸ್ಥೆಯ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದಕ್ಕೆಲ್ಲ ಉದ್ಯಮಿಗಳು, ಸೇವಾಸಕ್ತ ಭಕ್ತರು ನಮಗೆ ನೆರವು ನೀಡುತ್ತಿದ್ದಾರೆ’ ಎಂದು ತಿಳಿಸಿದರು.

‘ಶ್ರೀ ಸತ್ಯ ಸಾಯಿ ಉವಾಚ’ ಕೃತಿಯ ಜರ್ಮನಿ, ಗ್ರೀಕ್, ಇಟಾಲಿಯನ್ ಸೇರಿದಂತೆ ಅನೇಕ ವಿದೇಶಿ ಭಾಷೆಗಳ ಅನುವಾದ ಕೃತಿಗಳನ್ನು ಮತ್ತು ಮಧುಸೂದನ ನಾಯ್ಡು ಅವರ ‘ಇನ್ನರ್ ವ್ಯೂ’ ಕೃತಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಅಮೆರಿಕದ ಉದ್ಯಮಿ ಐಸಾಕ್ ಟೈಗ್ರೆಟ್, ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌, ಸತ್ಯಸಾಯಿ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮುಖ್ಯಸ್ಥ ಸಿ.ಶ್ರೀನಿವಾಸ್, ಸತ್ಯಸಾಯಿ ಲೋಕಶಿಕ್ಷಣ ಸಂಸ್ಥೆ ಪದಾಧಿಕಾರಿಗಳಾದ ನಾರಾಯಣ ರಾವ್, ಸಂಜೀವ್‌ ಶೆಟ್ಟಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry