7

ನಾಡಗೀತೆ, ನಾಡಧ್ವಜದಂತೆ ನಾಡಪಠ್ಯ ಅಗತ್ಯ

Published:
Updated:
ನಾಡಗೀತೆ, ನಾಡಧ್ವಜದಂತೆ ನಾಡಪಠ್ಯ ಅಗತ್ಯ

ಮೈಸೂರು: ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ನಾಡಪಠ್ಯ ಬೋಧಿಸುವ ವ್ಯವಸ್ಥೆ ಜಾರಿಯಾಗಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಇಲ್ಲಿ ಶುಕ್ರವಾರ ಆಗ್ರಹಿಸಿದರು.

83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದರು. ‘ನಾಡ ಪಠ್ಯದ ಬದಲಾಗಿ ಕೇಂದ್ರೀಯ ಪಠ್ಯ ಜಾರಿಮಾಡಲಾಗುತ್ತಿದೆ. ಅದೇ ಶ್ರೇಷ್ಠ ಎಂಬ ಭಾವನೆ ಮೂಡಿಸಲಾಗುತ್ತಿದೆ. ಹಾಗಾದರೆ ರಾಜ್ಯದ ಶಿಕ್ಷಣ ವ್ಯವಸ್ಥೆ ಏನು. ಇಲ್ಲಿನ ಶಿಕ್ಷಣ ತಜ್ಞರ ಗತಿ ಏನು’ ಎಂದು ಪ್ರಶ್ನಿಸಿದರು.

‘ಶಿಕ್ಷಣ ಪದ್ಧತಿ ರೂಪಿಸುವುದು ಟುಟೋರಿಯಲ್ ನಡೆಸಲು, ಶಿಕ್ಷಣ ಕ್ಷೇತ್ರವನ್ನು ದಂಧೆ ಮಾಡಿಕೊಳ್ಳುವ ಸಲುವಾಗಿ ಅಲ್ಲ. ಜ್ಞಾನಮುಖಿ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದ್ದು, ಅದಕ್ಕಾಗಿ ನಾಡಪಠ್ಯವೇ ಇರಬೇಕು. ಆ ಮೂಲಕ ಒಕ್ಕೂಟ ವ್ಯವಸ್ಥೆಯ ಹಕ್ಕು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಈಗಾಗಲೇ ಅಂಗೀಕರಿಸಿರುವ ಸಾಂಸ್ಕೃತಿಕ ನೀತಿಯನ್ನು ಚುನಾವಣೆ ನೀತಿಸಂಹಿತೆಗೂ ಮುನ್ನ ಜಾರಿಗೊಳಿಸಬೇಕು. ಸಮಾನ ಶಿಕ್ಷಣ ನೀತಿಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು, ಶೀಘ್ರ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಬರಗೂರು ರಾಮಚಂದ್ರಪ್ಪ

ನಾಡಗೀತೆ: 2004ರಲ್ಲೇ ನಾಡಗೀತೆಯನ್ನು ಒಪ್ಪಿಕೊಳ್ಳಲಾಗಿದೆ. ಆದರೆ ರಾಗ ಸಂಯೋಜನೆ ಹಾಗೂ ನಾಡಗೀತೆ ಎಷ್ಟು ಸಾಲು ಇರಬೇಕು ಎಂಬ ನಿರ್ಧಾರವನ್ನು ಈವರೆಗೂ ತೆಗೆದುಕೊಂಡಿಲ್ಲ. ತಕ್ಷಣ ಈ ಕೆಲಸ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಮಾತು ಮತೀಯವಾಗುತ್ತಿದ್ದು, ಘರ್ಷಣೆ ಹುಟ್ಟುಹಾಕುತ್ತಿದೆ. ಇಂತಹ ವ್ಯವಸ್ಥೆಯಲ್ಲಿ ಕಲಬುರ್ಗಿ, ಗೌರಿ ಲಂಕೇಶ್ ಕಳೆದುಕೊಂಡಿದ್ದೇವೆ. ಸುಫಾರಿ ಸಂಸ್ಕೃತಿ ವಿಜೃಂಬಿಸುತ್ತಿದೆ. ನಾಲಗೆ, ಕೈ, ಕತ್ತು ಕತ್ತರಿಸಿದರೆ ಬಹುಮಾನ ನೀಡುವುದಾಗಿ ಹೇಳುತ್ತಿದ್ದಾರೆ. ಸಾಂಸ್ಕೃತಿಕ ಸರ್ವಾಧಿಕಾರದ ಕಡೆಗೆ ಸಮಾಜ ಹೋಗುತ್ತಿದ್ದು, ಈಗ ಅದರ ವಿರುದ್ಧ ಹೋರಾಟ ರೂಪಿಸಬೇಕಾಗಿದೆ. ಸಾಂಸ್ಕೃತಿಕ ಕ್ಷೇತ್ರವೇ ಪ್ರತಿ ನಾಯಕತ್ವ ವಹಿಸಬೇಕಾಗಿದೆ ಎಂದು ಹೇಳಿದರು.

1970–80ರ ದಶಕದಲ್ಲಿ ಪ್ರಗತಿಪರರಲ್ಲಿ ಇದ್ದ ಒಗ್ಗಟ್ಟು ಈಗ ಕಾಣಿಸುತ್ತಿಲ್ಲ. ಕಟ್ಟಿಹಾಕಿರುವ ದೋಣಿಗೆ ಹುಟ್ಟು ಹಾಕುವ ಜನರಾಗಿದ್ದೇವೆ. ದೋಣಿಯ ಕಟ್ಟು ಬಿಚ್ಚಿ ಹುಟ್ಟು ಹಾಕುವಂತ ಸಂಸ್ಕೃತಿ ಬೆಳೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅನುದಾನ ನಿಲ್ಲಿಸಿ: ಕನ್ನಡೇತರ ಶಾಲೆಗಳಲ್ಲಿ ಕನ್ನಡ ಬೋಧನೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದನ್ನು ಅನುಷ್ಠಾನ ಮಾಡದ ಶಾಲೆ, ಕಾಲೇಜುಗಳಿಗೆ ಅನುದಾನ ನಿಲ್ಲಿಸಬೇಕು. ಸೌಲಭ್ಯ ಕಡಿತಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಆಗ್ರಹಿಸಿದರು.

ಹಂಪಿ ವಿ.ವಿ ಕಾಯ್ದೆಯಿಂದ ಹೊರಗೆ

ಹೊಸ ವಿಶ್ವವಿದ್ಯಾಲಯ ಕಾಯಿದೆ ವ್ಯಾಪ್ತಿಯಿಂದ ಹಂಪಿ ಕನ್ನಡ ವಿದ್ಯಾಲಯವನ್ನು ಹೊರಗಿಡಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಪ್ರಕಟಿಸಿದರು.

ವಿಷಯಾಧಾರಿತ ವಿಶ್ವವಿದ್ಯಾಲಯಗಳನ್ನು ಹೊಸ ವಿ.ವಿ ಕಾಯಿದೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಬರಗೂರು ರಾಮಚಂದ್ರಪ್ಪ ಬೇಡಿಕೆಗೆ ಸಚಿವರು ಈ ಭರವಸೆ ನೀಡಿದರು.

ನಾಲ್ವಡಿ ರಾಷ್ಟ್ರೀಯ ಪ್ರಶಸ್ತಿ: ಕನ್ನಡ ಸಾಹಿತ್ಯ ಪರಿಷತ್ ಆರಂಭ, ಸಾಹಿತ್ಯ ಸಮ್ಮೇಳನ ನಡೆಸಲು ಮುನ್ನುಡಿ ಬರೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಬೇಕು. ನಿರ್ದಿಷ್ಟ ವಲಯಕ್ಕೆ ಈ ಪ್ರಶಸ್ತಿ ನೀಡುವ ಮೂಲಕ ಪ್ರತಿ ವರ್ಷವೂ ನಾಲ್ವಡಿಯವರನ್ನು ನೆನಪಿಸಿಕೊಳ್ಳುವ ಕೆಲಸ ಆಗಬೇಲು ಎಂದು ಬರಗೂರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry