7

ಆತಂಕ ಸೃಷ್ಟಿಸಿದ ಪರ,ವಿರುದ್ಧ ಪ್ರತಿಭಟನೆ

Published:
Updated:

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸೋದರ ಗುರುನಾಥಗೌಡ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಪರ ಹಾಗೂ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮುಖಾಮುಖಿ

ಯಾಗಿ ನಡೆಸಿದ ಪ್ರತಿಭಟನೆ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿತು.

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ಸಚಿವ ವಿನಯ ಕುಲಕರ್ಣಿ ಅವರು ಡಿವೈಎಸ್ಪಿ ತುಳಜಪ್ಪ ಸುಲ್ಫಿ ಅವರನ್ನು ಸಂಧಾನಕಾರರಾಗಿ ಕಳುಹಿಸಿರುವ ವಿಷಯ ಮಾಧ್ಯಮಗಳಲ್ಲಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆ 11.30ಕ್ಕೆ ಪ್ರತಿಭಟನೆ ಆರಂಭಿಸಿದರು.

ಮತ್ತೊಂದೆಡೆ, ಕಾಂಗ್ರೆಸ್‌ ಕಾರ್ಯಕರ್ತರು, ‘ಸಚಿವ ವಿನಯ ಕುಲಕರ್ಣಿ ಅವರ ಏಳಿಗೆ ಸಹಿಸದೆ ಬಿಜೆಪಿಯವರು ಅವರ ತೇಜೋವಧೆ ಮಾಡುತ್ತಿದ್ದಾರೆ. ಜತೆಗೆ ಇವರ ಕೈಗೊಂಬೆಯಂತೆ ವಾಹಿನಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿ ಘೋಷಣೆ ಕೂಗುತ್ತಾ ಕಲಾಭವನದಿಂದ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ಕಡೆ ಬಂದರು.

ಜಿಲ್ಲಾಧಿಕಾರಿ ಕಾಂಪೌಂಡ್‌ ಗೇಟಿನ ಮುಂಭಾಗದಲ್ಲಿ ಬಿಜೆಪಿ ಮುಖಂಡರು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲೇ, ಸ್ಥಳಕ್ಕೆ ಬಂದ ಯುವ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಆಗ ಸಚಿವರ ಪರ ಹಾಗೂ ವಿರುದ್ಧ ಘೋಷಣೆಗಳು ಎರಡೂ ಕಡೆಯಿಂದ ಮೊಳಗಿದವು.

ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರನ್ನು ಸಮಾಧಾನಪಡಿಸಲು ಡಿಸಿಪಿ ರೇಣುಕಾ ಸುಕುಮಾರ್‌ ನೇತೃತ್ವದಲ್ಲಿ ಪೊಲೀಸರು ಹರಸಾಹಸಪಟ್ಟರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಸ್ಥಳಕ್ಕೆ ಬಂದು ಎರಡೂ ಕಡೆ ಮುಖಂಡರಿಗೆ ಮಾತನಾಡಿ, ಮನವಿ ಕೊಟ್ಟು ಮರಳುವಂತೆ ಕೋರಿದರು. ಪ್ರತಿಭಟನಾಕಾರರು ಸುಮ್ಮನಾಗಲಿಲ್ಲ.

ಪರಿಸ್ಥಿತಿ ಕೈಮೀರುವ ಸಾಧ್ಯತೆ ಇರುವುದನ್ನು ಅರಿತ ಪೊಲೀಸರು, ಬಿಜೆಪಿ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಾಂಪೌಂಡ್‌ ಒಳಭಾಗಕ್ಕೆ ಕಳುಹಿಸಿ, ಗೇಟ್‌ ಹಾಕಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸಿದರು. ಇದರಿಂದ ಮತ್ತೆ ಕೆರಳಿದ ಬಿಜೆಪಿ ಕಾರ್ಯಕರ್ತರು ಗೇಟ್‌ ಬಳಿ ಬಂದು ಪ್ರತಿಭಟನೆ ಮುಂದುವರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರೇ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಪ್ರತಿಭಟನೆ ತಿರುಗಿತು. ಎರಡೂ ಬಣಗಳ ನಡುವೆ ಜಟಾಪಟಿ ಹೆಚ್ಚಾಯಿತು. ಇಬ್ಬರೂ ಸ್ಥಳದಿಂದ ಕದಲದೆ, ಪರಸ್ಪರರ ಬಂಧನಕ್ಕೆ ಒತ್ತಾಯಿಸಿದರು. ಶಾಸಕ ಅರವಿಂದ ಬೆಲ್ಲದ ಅಧಿವೇಶನ ಮುಗಿಸಿ ಪ್ರತಿಭಟನಾ ಸ್ಥಳಕ್ಕೆ ಬಂದಾಗ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಯಿತು. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಎರಡೂ ಕಡೆಯ ನಾಯಕರ ಮನವೊಲಿಸಲು ಯತ್ನಿಸಿದರೂ ಫಲ ನೀಡದಿದ್ದಾಗ ಎರಡೂ ಕಡೆಯವರನ್ನು ಬಂಧಿಸುವಂತೆ ಆದೇಶಿಸಿದರು.

ಡಿಸಿಪಿ ರೇಣುಕಾ ಸುಕುಮಾರ್, ಇನ್‌ಸ್ಪೆಕ್ಟರ್ ಎಸ್‌.ಆರ್‌.ನಾಯಕ, ಮಹಾಂತೇಶ ಹೊಸಪೇಟೆ ಪ್ರತಿಭಟನಾಕಾರರ ಮನವೊಲಿಸಲು ನಡೆಸಿದ ಯತ್ನ ವಿಫಲವಾಯಿತು. ಅಂತಿಮವಾಗಿ ಎರಡೂ ಬಣಗಳ ಕಾರ್ಯಕರ್ತರನ್ನು ಬಂಧಿಸಿ, ನಾಲ್ಕು ವಾಹನಗಳಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಲಾಯಿತು. ಪೊಲೀಸ್ ಆಯುಕ್ತ ಎಂ.ಎನ್‌.ನಾಗರಾಜ ಕೊನೆಯಲ್ಲಿ ಬಂದು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅಸ್ವಸ್ಥಗೊಂಡ ಚೈತ್ರಾ, ಮಲ್ಲಮ್ಮ

ಧಾರವಾಡ: ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಪ್ರತಿಭಟನೆಯ ಕಾವಿನಿಂದಾಗಿ ತೀವ್ರವಾಗಿ ಬಳಲಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹಾಗೂ ಯೋಗೀಶಗೌಡ ಗೌಡರ ಪತ್ನಿ ಮಲ್ಲಮ್ಮ ಅಸ್ವಸ್ಥಗೊಂಡರು.

ಆಸ್ಪತ್ರೆಯಿಂದ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಮಲ್ಲಮ್ಮ ಅವರು ಪ್ರತಿಭಟನೆಯಲ್ಲಿ ಸ್ವಲ್ಪ ಹೊತ್ತು ಭಾಗವಹಿಸಿದ್ದರು. ತೀವ್ರವಾಗಿ ಬಳಲಿದ್ದ ಕಾರಣ ವಾಪಸ್ಸಾದರು. ಚೈತ್ರಾ ಅವರು ತಲೆ ಸುತ್ತು ಬಂದು ಬೀಳುವಂತಾದರು. ನಂತರ ಅವರಿಗೆ ಕಾರ್ಯಕರ್ತರು ನೀರು ಕುಡಿಸಿ, ಕೂರಿಸಿದರು.

* *

ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ನೀಡಿ ಸ್ಥಳದಿಂದ ಹೊರಡದೇ ಇದ್ದುದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಯಿತು

ಎಂ.ಎನ್‌.ನಾಗರಾಜ ಪೊಲೀಸ್‌ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry