5

‘ಕನ್ನಡ ಮಾತೃಭಾಷೆಯಲ್ಲ, ರಾಜ್ಯಭಾಷೆ’

Published:
Updated:
‘ಕನ್ನಡ ಮಾತೃಭಾಷೆಯಲ್ಲ, ರಾಜ್ಯಭಾಷೆ’

ಮೈಸೂರು: ‘ನನ್ನ ಪಾಟಿ ಕರಿಯದು, ಸುತ್ತು ಕಟ್ಟು ಬಿಳಿಯದು

ಬರೆಯಲಿಕ್ಕೆ ಬರುವುದು, ಬಹಳ ಚಂದ ಇರುವುದು

ಅಪ್ಪ ದುಡ್ಡು ಕೊಟ್ಟನು, ಬಳಪ ಒಂದು ತಂದೆನು

ರಠಈಕ ಬರೆದೆನು, ಅವ್ವನ ಮುಂದೆ ಹಿಡಿದೆನು

ಅವ್ವ ಉಂಡಿ ಕೊಟ್ಟಳು, ಗಪ ಗಪ ತಿಂದೆನು, ಥಕ ಥಕ ಕುಣಿದೆನು’

ಸಾಹಿತಿ ಜಯವಂತ ಕಾಡದೇವರ ಅವರು 1954ರಲ್ಲಿ ತಾವು 3ನೇ ಇಯತ್ತೆಯಲ್ಲಿ ಕಲಿತಿದ್ದ ಪದ್ಯ ಹಾಡಿದಾಗ ಬಾಲ್ಯದ ಸವಿನೆನಪಿಗೆ ಜಾರಿದ ಸಭಿಕರು ಚಪ್ಪಾಳೆಯ ಸುರಿಮಳೆಗೈದರು.

ಕಲಾಮಂದಿರದಲ್ಲಿ ಶನಿವಾರ ನಡೆದ ಮಕ್ಕಳ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು, ಚಿಕ್ಕವರಿದ್ದಾಗ ಕಲಿತಿದ್ದ ಹಲವು ಪದ್ಯಗಳನ್ನು ರಾಗಬದ್ಧವಾಗಿ ಹಾಡಿ ರಂಜಿಸಿದರು.

‘ನಮ್ಮ ತಾಯಿ ಕನ್ನಡ, ನಮ್ಮ ನಾಡು ಕನ್ನಡ’, ‘ಮೂಡುವನು ರವಿ ಮೂಡುವನು’, ‘ಬಾರೆಲೆ ಹಕ್ಕಿ, ಬಣ್ಣದ ಹಕ್ಕಿ’, ‘ಬಾ ಬಾರೊ ಕಂದ, ಬಾರೊ ಸುನಂದಾ’... ಹೀಗೆ ಹಲವು ಪ್ರಾಸಬದ್ಧ ಶಿಶುಗೀತೆಗಳ ಮೆಲುಕು ಹಾಕಿದರು.

‘ಅಂದಿನ ಶಿಶುಗೀತೆಗಳಿಗೆ ಲಯ, ಪ್ರಾಸ, ಗತ್ತು ಎಲ್ಲವೂ ಇದ್ದವು. ಬರೆಯುವ ಸಮರ್ಥ ಕವಿಗಳು ಇದ್ದರು. ಕಲಿಸಲು ಸಮರ್ಥ ಶಿಕ್ಷಕರಿದ್ದರು, ಸಮೃದ್ಧ ಓದುಗರಿದ್ದರು. ಹಳ್ಳಿಗಳಲ್ಲೂ ಕಾನ್ವೆಂಟ್‌ಗಳು ತಲೆ ಎತ್ತಿ ನಿಂತಿರುವ ಈ ಸಂದರ್ಭದಲ್ಲಿ ಮಕ್ಕಳು ಅತ್ತ ಕನ್ನಡವೂ ಇಲ್ಲದೇ, ಇಂಗ್ಲಿಷ್‌ಗೂ ಸಲ್ಲದೇ ಒದ್ದಾಡುತ್ತಿವೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಉಳಿಯಬೇಕೆಂದರೆ ಶಿಕ್ಷಕರು ಮಕ್ಕಳಿಗೆ ದಿನವೂ ಕನ್ನಡ ಪತ್ರಿಕೆಗಳನ್ನು ಓದಿಕೊಂಡು ಬರಲು ತಿಳಿಸಬೇಕು. ತಾಯಂದಿರು ಧಾರಾವಾಹಿಗಳ ಜಾಲ

ದಿಂದ ಹೊರಬಂದು ಮಕ್ಕಳ ಕಲಿಕೆಯೆಡೆ ಲಕ್ಷ್ಯ ಹಾಕಬೇಕು ಎಂದು ಸಲಹೆ ನೀಡಿದರು.

ಪಠ್ಯ ಕನ್ನಡದಲ್ಲೇ ಸಾಹಿತ್ಯವಿರಲಿ: ಸಾಹಿತಿ ಬೊಳುವಾರು ಮಹಮ್ಮದ್‌ ಕುಂಞಿ ಮಾತನಾಡಿ, ‘ಕನ್ನಡ ಕರ್ನಾಟಕದ ಮಾತೃಭಾಷೆ ಅಲ್ಲ. ಅದು ರಾಜ್ಯ ಭಾಷೆ. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ದಾವಾಪತ್ರಗಳಲ್ಲಿ ಮಾತೃಭಾಷೆ ತೆಗೆದು ರಾಜ್ಯಭಾಷೆ ಎಂದು ಎಲ್ಲಿಯವರೆಗೆ ತಿದ್ದುವುದಿಲ್ಲವೋ ಅಲ್ಲಿಯವರೆಗೂ ಖಾಸಗಿ ಶಾಲೆಗಳು ಮೇಲುಗೈ ಸಾಧಿಸುತ್ತವೆ. ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಒದಗಿಸಲು ರಾಜ್ಯಭಾಷೆ ಎಂಬುದನ್ನು ಸಾಧಿಸುವುದು ಅತ್ಯಗತ್ಯ’ ಎಂದರು.

ಕನ್ನಡ ಭಾಷೆಯಲ್ಲಿ ವೈವಿಧ್ಯವಿದೆ. ಹೀಗಾಗಿ ಪಠ್ಯ ಕನ್ನಡದಲ್ಲೇ ಮಕ್ಕಳ ಸಾಹಿತ್ಯ, ಕವನಗಳು ಇದ್ದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು. ಮಕ್ಕಳೊಂದಿಗೆ ಮಕ್ಕಳಂತಾಗಲು ಯತ್ನಿಸಬೇಕೇ ಹೊರತು, ಅವರನ್ನು ನಮ್ಮಂತಾಗಲು ಒತ್ತಾಯಿಸಬಾರದು ಎಂದರು. ಅವರು ಭಾಷಣದುದ್ದಕ್ಕೂ ಹೇಳಿದ ಕಥೆಗಳು, ಉದಾಹರಣೆಗಳು ಸಭಾಂಗಣದಲ್ಲಿ ನಗೆಯ ಅಲೆ ಹುಟ್ಟುಹಾಕಿದವು.

ಪ್ರೌಢ ಸಾಹಿತ್ಯದ ಬೇರು: ಸಾಹಿತಿ ಫ.ಗು.ಸಿದ್ದಾಪೂರ ಮಾತನಾಡಿ, ‘ಇಂದಿನ ಮಕ್ಕಳು ನಮಗಿಂತ ಹತ್ತು ಹೆಜ್ಜೆ ಮುಂದಿದ್ದಾರೆ. ಚಂದ್ರನ ಬಗ್ಗೆ ತಿಳಿದುಕೊಂಡು, ಮಂಗಳನತ್ತ ದೃಷ್ಟಿ ನೆಟ್ಟಿದ್ದಾರೆ. ಹೀಗಾಗಿ ಮಕ್ಕಳ ಸಾಹಿತ್ಯದಲ್ಲಿ ಹೊಸ ಹೆಜ್ಜೆ ಅಗತ್ಯ. ಅವರ ಮೆದುಳಿಗೆ ಒಳ್ಳೆಯ ಆಹಾರ ನೀಡಬೇಕಿದೆ’ ಎಂದು ಹೇಳಿದರು.

ದೇಶದ ಹಿರಿಮೆಯ ಬಗ್ಗೆ ಭಾವಾವೇಶದಿಂದ ಮಾತನಾಡಿದ ವಿಜಯಪುರದ ಯುವಪ್ರತಿಭೆ ಸಾನಿಯಾ ಧನ್ನೂರ್‌, ‘ಮಕ್ಕಳಿಗೆ ಮೂಲಾಕ್ಷರಗಳೊಡನೆ ದೇಶಪ್ರೇಮವನ್ನೂ ಕಲಿಸಬೇಕು. ‘ಎ’ ಫಾರ್‌ ಅಬ್ಬಕ್ಕ ಎಂಬ ಪಾಠದಿಂದಲೇ ಇದು ಶುರುವಾಗಲಿ’ ಎಂದಳು. ‘ಎ’ ದಿಂದ ‘ಝಡ್‌’ವರೆಗೂ ಎಲ್ಲ ಅಕ್ಷರಗಳಿಗೂ ದೇಶಪ್ರೇಮಿಗಳ ಹೆಸರನ್ನು ಆಕೆ ತಡವರಿಸದೇಘೋಷಿಸಿದರು.

‘ಡೇಂಜರ್‌ ಝೋನ್‌’ ಬೇಡ: ಶಿವಮೊಗ್ಗ ಜಿಲ್ಲೆಯ ಬಾಲಸಾಹಿತಿ ಅಂತಃಕರಣ ತಮ್ಮ 9 ಕನಸುಗಳನ್ನು ತೆರೆದಿಟ್ಟರು.

‘ಕುಂಯ್ಯಿ’ ಅಲ್ಲ ‘ಕುಂಞಿ’

‘ಕುಂಞಿ’ ಎಂಬ ತಮ್ಮ ಹೆಸರನ್ನು ಸರಿಯಾಗಿ ಮೂರು ಬಾರಿ ಹೇಳಿದವರಿಗೆ ‘ಜ್ಞಾನಪೀಠ ’ ಸಿಗಬೇಕು ಎಂದು ಬೊಳುವಾರು ಮಹಮ್ಮದ್‌ ಕುಂಞಿ’ ವಿನೋದವಾಗಿ ಹೇಳಿದರು. ತಮ್ಮ ಹೆಸರನ್ನು ಅನೇಕರು ‘ಕುಂಯ್ಯಿ’ ಎಂದು ಉಚ್ಚರಿಸುತ್ತಿದ್ದಾರೆ. ಅಕ್ಷರಮಾಲೆಯ ‘ಞ’ ಉಚ್ಚಾರವನ್ನೂ ಸರಿಯಾಗಿ ಮಾಡಲು ಬರದಿದ್ದಾಗ ₹ 10–15 ಕೋಟಿ ಖರ್ಚು ಮಾಡಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದರೆ ಏನು ಪ್ರಯೋಜನ’ ಎಂದವರು ವಿಷಾದಿಸಿದರು.

ವೇದಿಕೆಯಲ್ಲಿ ಸಂಘಟಕರಿಂದ ಹಿಡಿದು ಬಹುತೇಕ ಎಲ್ಲರೂ ಅವರ ಹೆಸರನ್ನು ‘ಕುಂಯ್ಯಿ’ ಎಂದೇ ಉಚ್ಚರಿಸಿದರು.

ಡೇಂಯ್‌ ಡೇಂಯ್‌ ಗೋ ಅವೆ ಮತ್ತು ದಾರ್‌ ಬೋರ್‌ ಬೊಮ್ಮಕ್ಕ...

ಬೋಳುವಾರು ಅವರು ಶಿವರಾಮ ಕಾರಂತರ ಜತೆಗಿನ ಒಡನಾಟವೊಂದನ್ನು ನೆನಪಿಸಿಕೊಂಡರು.

ಬೋಳುವಾರು ಅವರ ಮನೆಯ ಪಾಗಾರದ ಮೇಲೆ ಶೆಟ್ಟರ 3 ವರ್ಷದ ಮಗ ಕುಳಿತಿದ್ದ. ಅವನು ‘ಡೇಂಯ್‌ ಡೇಂಯ್‌ ಗೋ ಅವೆ ’ ಎಂದು ಹಾಡುತ್ತಿದ್ದ. ಅದು ‘ರೇನ್‌ ರೇನ್‌ ಗೋ ಅವೆ’ ಎಂಬ ಶಿಶುಗೀತೆಯಾಗಿತ್ತು. ಹೊರಗೋಡಿ ಬಂದ ಬೋಳುವಾರು ಹಾಡನ್ನು ತಿದ್ದಲು ಯತ್ನಿಸಿದರು. ಆದರೆ ಆ ಹುಡುಗ ಓಡಿ ಹೋಗಿ ಅವರ ಮನೆಯ ಮೆಟ್ಟಿಲ ಮೇಲೆ ಕುಳಿತು ಅಣಕಿಸುವಂತೆ ಮತ್ತೆ ಹಾಗೆಯೇ ಹಾಡಿದ.

ಈ ಘಟನೆಯನ್ನು ಶಿವರಾಮ ಕಾರಂತರ ಬಳಿ ಹೇಳಿಕೊಂಡರು. ಕಾರಂತರು ಕೇಳಿದರು, ‘ದಾರ್‌ ಬೋರ್‌ ಬೊಮ್ಮಕ್ಕ’ ಎಂದರೇನು ಹೇಳಿ...ಎಂದು. ಬೋಳುವಾರರು ಉತ್ತರಿಸಲಿಲ್ಲ. ಕಾರಂತರೇ ಅದರ ಅರ್ಥ ವಿವರಿಸಿದರು. ‘ಮೊಸರು ಕಡೆಯುವಾಗ ಬರುವ ಇಂಥ ಶಬ್ದ ಹಾಡಿನೊಂದಿಗೆ ಸೇರಿಕೊಂಡಿದೆ. ಮಕ್ಕಳ ಸಾಹಿತ್ಯದ ವಿವಿಧ ಶಬ್ದಗಳಿಗೆ ನಿಘಂಟಿನಲ್ಲಿ ಅರ್ಥ ಹುಡುಕಲು ಬರುವುದಿಲ್ಲ. ಕಿವಿಗೆ ಬಿದ್ದ ಶಬ್ದಗಳನ್ನೂ ಮಕ್ಕಳು ತಮ್ಮ ಹಾಡಿನಲ್ಲಿ ಸೇರಿಸಿಕೊಳ್ಳುತ್ತಾರೆ. ಇದೇ ಮಕ್ಕಳ ಸಾಹಿತ್ಯದ ವಿಶೇಷ’ ಎಂದರು.

ಮುಖ್ಯಾಂಶಗಳು

* ಕನ್ನಡ ರಾಜ್ಯಭಾಷೆ ಎಂಬುದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರತಿಪಾದಿಸಬೇಕು

* ದಿನವೂ ಕನ್ನಡ ಪತ್ರಿಕೆಗಳನ್ನು ಓದುವಂತೆ ಮಕ್ಕಳಿಗೆ ಶಿಕ್ಷಕರು ಬೋಧಿಸಲಿ

* ಮಕ್ಕಳ ಸಾಹಿತ್ಯದಲ್ಲಿ ಹೊಸ ಹೆಜ್ಜೆ ಅವಶ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry