7

ನಿರೀಕ್ಷೆ ಮೀರಿ ಸೇರಿದ ಜನ; ಊಟಕ್ಕಾಗಿ ತಳ್ಳಾಟ

Published:
Updated:
ನಿರೀಕ್ಷೆ ಮೀರಿ ಸೇರಿದ ಜನ; ಊಟಕ್ಕಾಗಿ ತಳ್ಳಾಟ

ಮೈಸೂರು: ಸಮ್ಮೇಳನದ ಎರಡನೇ ದಿನವಾದ ಶನಿವಾರ ಕೂಡ ನಿರೀಕ್ಷೆ ಮೀರಿ ಜನ ಸೇರಿದರು. ಇದರಿಂದ ಊಟದ ಪೆಂಡಾಲುಗಳಲ್ಲಿ ಸಾಕಷ್ಟು ನೂಕುನುಗ್ಗಲು ಉಂಟಾಯಿತು. ಗಣ್ಯರು ಹಾಗೂ ಪತ್ರಕರ್ತರಿಗೆ ಮೀಸಲಾಗಿದ್ದ ಕಡೆಯಂತೂ ಪದೇಪದೇ ವಾಗ್ವಾದ ನಡೆಯಿತು.

ಶುಕ್ರವಾರ ಅಡುಗೆ ಕಡಿಮೆಯಾದ ಕಾರಣ ಆಯೋಜಕರು ಶನಿವಾರ ಹೆಚ್ಚು ಮುತುವರ್ಜಿ ವಹಿಸಿದ್ದರು. ಆದರೆ, ವಾರಾಂತ್ಯ ರಜೆಯಿಂದಾಗಿ ನಿರೀಕ್ಷೆಗಿಂತ ದುಪ್ಪಟ್ಟು ಮಂದಿ ಊಟಕ್ಕೆ ಬಂದರು. ಗಣ್ಯರ ಪೆಂಡಾಲಿನಲ್ಲಂತೂ ಮಧ್ಯಾಹ್ನ 1ರ ಸುಮಾರಿಗೆ ಜನಸಾಗರವೇ ಹರಿದು ಬಂತು. ಹಿರಿಯ ಲೇಖಕಿ ಕಮಲಾ ಹಂಪನಾ ಸೇರಿದಂತೆ ಹಲವು ಗಣ್ಯರು ಕೆಲಕಾಲ ಕಾದುನಿಂತು ಒಳಹೋಗಬೇಕಾಯಿತು.

ಮತ್ತೊಂದೆಡೆ, ಪತ್ರಕರ್ತರ ಭಾಗದಲ್ಲಿ ಸಾರ್ವಜನಿಕರೂ ಊಟಕ್ಕೆ ಹೋದರು. ಒಳಗೆ ಸಂದಣಿ ಹೆಚ್ಚಾಗಿದ್ದರಿಂದ ಹಲವರನ್ನು ಪೊಲೀಸರು ಗೇಟ್‌ ಬಳಿಯೇ ತಡೆದರು. ಕೊರಳಿನಲ್ಲಿ ಗುರುತಿನಚೀಟಿ ಹಾಕಿಕೊಂಡವರನ್ನೂ ಒಳಗೆ ಬಿಡಲಿಲ್ಲ. ಇದರಿಂದ ಕೋಪಗೊಂಡ ಮಾಧ್ಯಮ ಪ್ರತಿನಿಧಿಗಳು ಆಯೋಜಕರು ಹಾಗೂ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

ಅತ್ತ, ಸಾರ್ವಜನಿಕ ವಿಭಾಗದಲ್ಲಿ ಮಧ್ಯಾಹ್ನ 3.30ರ ಹೊತ್ತಿಗೆ ಸಿಹಿತಿಂಡಿಗಳು ಖಾಲಿಯಾದ್ದರಿಂದ, ಕೊನೆಗೆ ಬಂದವರಿಗೆ ಅನ್ನ– ಸಾರು, ಪಲಾವು ನೀಡಲಾಯಿತು. ನೋಂದಾಯಿತ ಪ್ರತಿನಿಧಿಗಳ ಕಡೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು.

ಹೋಳಿಗೆ–ತುಪ್ಪ ಚಪ್ಪರಿಸಿದರು

ಮೈಸೂರು: ಹೋಳಿಗೆ– ತುಪ್ಪ, ಅಕ್ಕಿರೊಟ್ಟಿ– ಸಾಗು, ಪಲಾವು– ಹಪ್ಪಳ, ಮೊಸರನ್ನ– ಉಪ್ಪಿನಕಾಯಿ, ಬೂಂದಿಲಾಡು, ಕಳ್ಳೆಹುಳಿ, ಅನ್ನ– ಸಾರು... ಇದು ಶನಿವಾರದ ಮೆನು.

ಅಪಾರ ಸಂಖ್ಯೆಯಲ್ಲಿ ಸೇರಿದ ಕನ್ನಡ ರಸಿಕರು ಹೋಳಿಗೆ ತುಪ್ಪ ಚಪ್ಪರಿಸಿ ಖುಷಿಪಟ್ಟರು. ಮಹಾರಾಜ ಕಾಲೇಜು ಮೈದಾನದಲ್ಲಿ ಸಾಹಿತ್ಯದ ಪಾಕವಾದರೆ; ಸ್ಕೌಟ್ಸ್‌ ಅಂಡ್‌ ಗೈಡ್ ಮೈದಾನದಲ್ಲಿ ಭರ್ಜರಿ ಭೋಜನ ಜನರಿಗಾಗಿ ಕಾಯುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry