ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳಲ್ಲಿ ಸಮ್ಮೇಳನ ಪಕ್ಷಿಗಳು!

Last Updated 26 ನವೆಂಬರ್ 2017, 6:15 IST
ಅಕ್ಷರ ಗಾತ್ರ

ಮೈಸೂರು: ‘ನಿನ್ನೆ ಪೂರಾ ಸಮ್ಮೇಳನಾದಾಗ ಇದ್ದಿವ್ರಿ. ಇವತ್ತು ಪ್ಯಾಕೇಜ್‌ ಟೂರ್ ಹೊಂಟೇವ್ರಿ. ನಸುಕಿನ್ಯಾಗ ಎದ್ದು ಚಾಮುಂಡಿಬೆಟ್ಟದಾಗ ದೇವಿ ದರ್ಶನ ಮಾಡೇವ್ರಿ. ಇನ್ನೂ ಶ್ರೀರಂಗಪಟ್ಟಣ, ಕೆಆರ್‌ಎಸ್‌ಗೆ ಹೋಗಬೇಕ್ರಿ...’ ಎಂದು ಧಾರವಾಡದ ಶಿಕ್ಷಕಿ ಡಿ.ವಿ.ಡೋಣೂರಮಠ ಒಂದೇ ಉಸಿರಿಗೆ ಹೇಳುವಾಗ ಮುಂದಿದ್ದ ಸಹೋದ್ಯೋಗಿಗಳು ‘ಟೇಮ್‌ ಆತು ಲಗುನಾ ಬರ್ರಿ..’ ಎಂದು ಕೂಗುತ್ತಿದ್ದರು.

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮಾತಿಗೆ ಸಿಕ್ಕ ಇವರು ಅವಸರದಲ್ಲಿದ್ದರು. ‘ಪ್ರವಾಸಕ್ಕ ಕರ್ಕಂಡ್‌ ಬಂದ್‌ ಗಾಡಿ ಡ್ರೈವರ್‌ ಬಾಳ ಟೇಮು ಕೊಟ್ಟಿಲ್ರಿ..’ ಎನ್ನುತ್ತಾ ಮುಂದೆ ಸಾಗಿದರು. ಸಮ್ಮೇಳನದ ಪ್ರತಿನಿಧಿಗಳಿಗೆ ಮೃಗಾಲಯಕ್ಕೆ ಉಚಿತ ಪ್ರವೇಶ ಕಲ್ಪಿಸಿದ ಮಾಹಿತಿ ಇಲ್ಲದೇ ಟಿಕೆಟ್‌ಗೆ ₹ 70 ತೆತ್ತಿದ್ದ ಕೊರಗು ಇವರನ್ನು ಕಾಡುತ್ತಿತ್ತು.

ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆ ಯಿಂದ ಧಾವಿಸಿದ ಪ್ರತಿನಿಧಿಗಳಲ್ಲಿ ಬಹುತೇಕರು ಎರಡನೇ ದಿನವಾದ ಶನಿವಾರ ಪ್ರವಾಸಿ ತಾಣಗಳಲ್ಲಿ ಕಳೆದರು. ಚಾಮುಂಡಿಬೆಟ್ಟ, ಅಂಬಾವಿಲಾಸ ಅರಮನೆ, ಸೇಂಟ್‌ ಫಿಲೋಮಿನಾ ಚರ್ಚ್‌ ಆಕರ್ಷಿಸಿದ್ದವು. ಬೆಂಗಳೂರು, ಕೇರಳ ಹಾಗೂ ತಮಿಳುನಾಡು ಪ್ರವಾಸಿಗರು ವಾರಾಂತ್ಯಕ್ಕೆ ಲಗ್ಗೆಯಿಟ್ಟಿದ್ದರಿಂದ ಬಹುತೇಕ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದ್ದವು.

‘ನಾವು ಒಟ್ಟ್‌ ಏಳು ಮಂದಿ ಇದೇವ್ರಿ. ಗಾಡಿ ಚಾರ್ಜು ಅಂತ ತಲಿಗೆ ₹ 150, ಎಲ್ಲ ಕಡೆ ಟಿಕೇಟಿಗೆ ಅಂತ ₹ 250 ಕೊಟ್ಟೇವ್ರಿ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ ತಂಕ ಟೂರ್‌ ಮಾಡ್ತೇವ್ರಿ..’ ಎಂದು ಡೋಣೂರಮಠ ಅವರ ಜೊತೆಗಾರರು ಧ್ವನಿಗೂಡಿಸಿದರು.

ಟ್ರಾವೆಲ್‌ ಏಜೆನ್ಸಿಗಳ ಟೆಂಪೊ, ಮಿನಿ ಬಸ್‌ಗಳಲ್ಲಿ ಇವರು ಸುತ್ತುತ್ತಿದ್ದಾರೆ. ಬಂಡಿಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ತೆರಳುವವರು ಕಾರುಗಳನ್ನು ಬಾಡಿಗೆಗೆ ಪಡೆದಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಶಿಕ್ಷಕರಾದ ಕೆ.ಬಿ.ಹರ್ಲಾಪುರ ಹಾಗೂ ಮಂಜುನಾಥ ಮಡಿವಾಳ ಅವರಿಗೆ ಪ್ಯಾಕೇಜ್‌ ಟೂರ್‌ ದುಬಾರಿ ಎನಿಸಿದೆ. ಹೀಗಾಗಿ, ಅವರು ನಗರ ಸಾರಿಗೆಯ ದಿನದ ಪಾಸ್‌ ಖರೀದಿಸಿದ್ದರು.

‘ಹರಿಬರಿಯಲ್ಲಿ ನೋಡಾಕ ನಂಗ ಆಗಲ್ರಿ. ಸಾವಕಾಶದಿಂದ ನೋಡೊ ಹವ್ಯಾಸ ನಮ್ದು. ಒಂದೂ ಸಾಹಿತ್ಯ ಸಮ್ಮೇಳನ ಬಿಡದಂಗ 18 ವರ್ಸದಿಂದ ನೋಡ್ತಿದೇನ್ರಿ. ಆಯಾ ಭಾಗಕ್ಕೆ ಹೋದಾಗ ಸುತ್ತಮುತ್ತ ತಿರುಗಾಡೋದು ಅಭ್ಯಾಸ ಆಗೇತ್ರಿ. ಸಾಲಿ ಮಕ್ಕಳ ಜತಿ ಬಂದಾಗ ಹಿಂಗ ನೋಡಾಕ ಆಗಲ್ರಿ...’ ಎನ್ನುತ್ತಾ ಅರಮನೆಯಿಂದ ಹೊರಡಲು ಅಣಿಯಾದ ಮಂಜುನಾಥ ಮಡಿವಾಳ, ‘ನಂಜನಗೂಡಿಗೆ ಪ್ಯಾಲೇಸ್ ಹತ್ರಾನ ಬಸ್‌ ಸಿಗ್ತಾವ್‌ ಅಲ್ವೇನ್ರಿ..’ ಎನ್ನುತ್ತ ಹೆಜ್ಜೆ ಹಾಕಿದರು.

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗದಿಂದ ಬಂದಿದ್ದ 15 ಸಿಬ್ಬಂದಿಯ ತಂಡ ಕೂಡ ಪ್ರವಾಸದ ಉತ್ಸಾಹದಲ್ಲಿತ್ತು. ಬಸ್‌ ಚಾಲಕರು, ನಿರ್ವಾಹಕರು, ಉಗ್ರಾಣ ಅಧಿಕಾರಿಗಳು, ನಿಯಂತ್ರಣಾಧಿಕಾರಿಗಳ ಈ ತಂಡ ಪ್ರತಿ ಸಾಹಿತ್ಯ ಸಮ್ಮೇಳನಕ್ಕೂ ತಪ್ಪದೇ ಹಾಜರಾಗುತ್ತದೆ.

‘ಉತ್ತರ ಕರ್ನಾಟಕದ ಸಾರಿಗೆ ಸಿಬ್ಬಂದಿಗೆ ಕನ್ನಡದ ಮೇಲೆ ಪ್ರೀತಿ ಜಾಸ್ತೀರಿ. ಕನ್ನಡ ಕ್ರಿಯಾ ಸಮಿತಿ ಎಂಬ ಸಂಘ ಕಟ್ಟಿಕೊಂಡು ಪ್ರತಿ ವರ್ಷ ರಾಜ್ಯೋತ್ಸವ ಆಚರಿಸ್ತೇವ್ರಿ. ಸಮ್ಮೇಳನಕ್ಕೆ ಅನ್ಯಕಾರ್ಯ ನಿಮಿತ್ತ ರಜೆ (ಒಒಡಿ) ಸೌಲಭ್ಯ ಸಿಗ್ತದೆ. ಹಿಂಗಾಗಿ ಯಾವ ವರ್ಷಾನೂ ಬಿಡಲ್ಲ. ಸಂಜೀಕ ಕೆಆರ್‌ಎಸ್‌ ನೋಡ್ಬೇಕ್ರಿ..’ ಎಂದು ಸಂತಸ ಹಂಚಿಕೊಂಡರು ಬಾಗಲಕೋಟೆಯ ರಾಜು ಹಾದಿಮನಿ.

ಬೆಂಗಳೂರಿನ ಬಿಎಂಟಿಸಿಯ ಚಾಲಕ ಕೃಷ್ಣ ಅವರಿಗೆ ಇದು ಮೊದಲ ಸಮ್ಮೇಳನ. ಕನ್ನಡ ಸಾಹಿತ್ಯ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಬಹು ವರ್ಷದ ಆಸೆ ಈಡೇರಿದ ಖುಷಿ ಅವರ ಮುಖದಲ್ಲಿ ಕಾಣುತ್ತಿತ್ತು.

‘ನಾನು ಪಿಯುಸಿವರೆಗೆ ಓದೇನಿ. ಸಾಹಿತ್ಯ, ವಿದ್ವಾಂಸರ ಭಾಷಣ ತಲೆಗೆ ಹೋಗೊದು ಸ್ವಲ್ಪ ಕಷ್ಟ. ಆದರೆ, ಕನ್ನಡದ ಮೇಲೆ ವ್ಯಾಮೋಹ ಹೆಚ್ಚು. ನನ್ನೂರು ಚಿಂತಾಮಣಿಯಲ್ಲಿ ಸುವರ್ಣ ಕನ್ನಡ ಜನಶಕ್ತಿ ವೇದಿಕೆ ರಚಿಸಿಕೊಂಡು ಕಾರ್ಯಕ್ರಮ ಮಾಡ್ತೇವಿ. ಸಹೋದ್ಯೋಗಿ ರಾಮನಾಥ, ಅರಮನೆಯನ್ನು ನೋಡಿರ್ಲಿಲ್ಲ. ಹೀಗಾಗಿ, ಇಬ್ಬರು ಒಟ್ಟಿಗೆ ಬಂದೇವಿ’ ಎಂದು ಅಂಬಾವಿಲಾಸ ಅರಮನೆಯ ಮರದ ನೆರಳಿನಲ್ಲಿ ಕುಳಿತು ಕಟ್ಟಡದ ವಾಸ್ತುಶಿಲ್ಪವನ್ನು ತದೇಕಚಿತ್ತದಿಂದ ಗಮನಿಸುವಲ್ಲಿ ಮಗ್ನರಾದರು ಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT