ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ವಿದ್ಯುತ್ ಒದಗಿಸಲು ಸರ್ಕಾರ ಬದ್ಧ: ಎನ್.ಎಸ್.ಬೋಸರಾಜು

Last Updated 26 ನವೆಂಬರ್ 2017, 6:21 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ತಾಲ್ಲೂಕಿನ ರೈತರಿಗೆ ಇನ್ನೂ ಹೆಚ್ಚಿನ ಅವಧಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಸರ್ಕಾರವು ಬದ್ಧವಾಗಿದ್ದು, ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗರಿಷ್ಠ ಅವಧಿಗೆ ವಿದ್ಯುತ್ ಒದಗಿಸಬೇಕು ಎನ್ನುವ ಕಾರಣದಿಂದ ಕಳೆದ ನಾಲ್ಕುವರೆ ವರ್ಷಗಳಿಂದ ವಿವಿಧ ಕಡೆಗಳಲ್ಲಿ ಫೀಡರ್‌ಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಡಪನೂರು, ಯಾಪಲದಿನ್ನಿಗಳಲ್ಲಿ ಹೊಸ ಹೊಸ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 33 ಕೆವಿ ಇದ್ದ ಫೀಡರ್‌ಗಳನ್ನು 110 ಕೆವಿ ಹೆಚ್ಚಿಸಲಾಗಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದೊಳಗೆ ಸಬ್ ಸ್ಟೇಷನ್ ಕಾಮಗಾರಿ ಪೂರ್ಣವಾಗುತ್ತದೆ. ಇದರಿಂದಾಗಿ ವಿದ್ಯುತ್ ಪೂರೈಸುವ ಅವಧಿಯನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

‘ಪಂಪ್‌ಸೆಟ್‌ಗಳಿಗೆ 24 ಗಂಟೆ ವಿದ್ಯುತ್ ಪೂರೈಸುತ್ತೇವೆ ಎಂದು ನಾನು ಎಲ್ಲಿಯೂ ಘೋಷಿಸಿಲ್ಲ. ವಿದ್ಯುತ್ ಪೂರೈಕೆಗೆ ಬೇಕಾಗುವ ಸೌಕರ್ಯಗಳನ್ನು ಬಲಪಡಿಸುವ ಕೆಲಸ ನಡೆಯುತ್ತಿರುವ ಬಗ್ಗೆ ನಿರಂತರ ಪರಿಶೀಲಿಸಲಾಗುತ್ತಿದೆ. ಫೀಡರ್ ಹಾಗೂ ಸಬ್‌ಸ್ಟೇಷನ್‌ಗಳು ಹೆಚ್ಚುತ್ತಾ ಹೋದಂತೆ ವಿದ್ಯುತ್ ಪೂರೈಸುವ ಅವಧಿ ಕೂಡಾ ಏರಿಕೆಯಾಗಲಿದೆ. ವಿದ್ಯುತ್ ಪೂರೈಸುವುದಕ್ಕೆ ಸಮಸ್ಯೆಯಿಲ್ಲ. ಆದರೆ ವಿದ್ಯುತ್ ಪೂರೈಕೆಗೆ ಬೇಕಾಗುವ ಸೌಕರ್ಯಗಳ ಕೊರತೆ ಇದೆ’ ಎಂದು ಹೇಳಿದರು.

ದಿ. ವಿರೇಂದ್ರ ಪಾಟೀಲ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಿಂದಲೂ ರಾಯಚೂರು ಜಿಲ್ಲೆಗೆ ನಿರಂತರ ವಿದ್ಯುತ್ ಕೊಡಬೇಕು ಎನ್ನುವ ಒತ್ತಾಯ ಮಾಡುತ್ತಾ ಬಂದಿದ್ದೇವೆ. ಕಳೆದ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರು ರಾಯಚೂರಿಗೆ 24 ಗಂಟೆ ವಿದ್ಯುತ್ ಪೂರೈಸುವುದಾಗಿ ಘೋಷಿಸಿದ್ದರು. ಆದರೆ ಏಕೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸಮಸ್ಯೆಯ ಮೂಲ ಸುಧಾರಿಸುವ ಕೆಲಸ ಇಲ್ಲಿಯವರೆಗೂ ಆಗಿರಲಿಲ್ಲ. ವಿದ್ಯುತ್ ಪೂರೈಕೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಈಗ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೆ ಮುಗಿಯಲಿವೆ ಎಂದು ತಿಳಿಸಿದರು.

ತಾಲ್ಲೂಕಿನಾದ್ಯಂತ 40 ಫೀಡರ್‌ಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 10 ಸಾವಿರ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಏಳು ತಾಸು ಉಚಿತ ವಿದ್ಯುತ್ ಪೂರೈಕೆ ಆಗುತ್ತಿದೆ. ಈಗಿರುವ ಫೀಡರ್‌ಗಳಿಂದ ಗರಿಷ್ಠ 12 ಗಂಟೆ ಮಾತ್ರ ವಿದ್ಯುತ್‌ ಕೊಡುವುದಕ್ಕೆ ಸಾಧ್ಯವಿದೆ. ಉಚಿತ ವಿದ್ಯುತ್ ಕೊಡುವ ಬಗ್ಗೆ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆಯನ್ನು ಈಡೇರಿಸಿದೆ ಎಂದರು.

ಶಾಸಕರ ರಾಜಕೀಯ: ಚುನಾವಣೆಗಳು ಹತ್ತಿರ ಬಂದಾಗ ಪಾದಯಾತ್ರೆ ಅಥವಾ ಇನ್ನಾವುದೇ ಕಾರ್ಯಕ್ರಮಗಳನ್ನು ರೂಪಿಸಿದರೆ ಜನರಿಗೆ ಉದ್ದೇಶ ಅರ್ಥವಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ರಾಜಕೀಯ ಬಿಟ್ಟರೆ ಬೇರೆ ಇರುವುದಿಲ್ಲ. ವಿದ್ಯುತ್ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವುದು ಎಲ್ಲರ ಹಕ್ಕಾಗಿದೆ ಎಂದು ಹೇಳಿದರು.

ಈ ವರ್ಷದ ಬೆಳೆಗೆ ಧಕ್ಕೆಯಾಗದಂತೆ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸಬೇಕು ಎಂದು ಈಗಾಗಲೇ ವಿದ್ಯುತ್ ಸಚಿವರಿಗೆ ಹಾಗೂ ಕಾರ್ಯದರ್ಶಿಗಳಿಗೆ ಕೇಳಿಕೊಳ್ಳಲಾಗಿದೆ ಎಂದರು.

ಸಂಸದ ಬಿ.ವಿ.ನಾಯಕ, ನಗರಸಭೆ ಪ್ರಭಾರಿ ಅಧ್ಯಕ್ಷ ಜಯಣ್ಣ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಕರೀಂ, ರಾಯಚೂರು ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ ರಾಜಾ ರಾಯಪ್ಪ ನಾಯಕ, ರುದ್ರಪ್ಪ ಅಂಗಡಿ, ಪಾರಸಮಲ್ ಸುಖಾಣಿ, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT