7

ಗಿಡ ಬೆಳೆಸಲು ಮುಂದಾದ ಪರಿಸರ ಪ್ರೇಮಿ

Published:
Updated:
ಗಿಡ ಬೆಳೆಸಲು ಮುಂದಾದ ಪರಿಸರ ಪ್ರೇಮಿ

ಕಲಿತಿದ್ದು ಎಸ್ಸೆಸ್ಸೆಲ್ಸಿ. ಆದರೆ ಇವರ ಪರಿಸರ ಕಾಳಜಿ ಮಾತ್ರ ಯಾವ ವಿಜ್ಞಾನಿಗಳಿಗಿಂತ ಕಡಿಮೆಯೇನಲ್ಲ. ಚಿಕ್ಕವರಿದ್ದಾಗಲೇ ದೇಶದ ಸೈನಿಕರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಇವರು ನಂತರದ ದಿನಗಳಲ್ಲಿ ಪರಿಸರ ರಕ್ಷಣೆ ಕೂಡ ತಮ್ಮ ಕರ್ತವ್ಯ ಎನ್ನುವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹೌದು, ಇವರು ಬೂದಿನಪಾಳ್ಯದ ಗೋವಿಂದರಾಜು. ಧನಕರುಗಳ ದಲ್ಲಾಳಿಯಾಗಿ ಕೆಲಸ ಮಾಡುವ ಇವರು ತಾನು ಸಂಪಾದಿಸಿದ ಹಣದಲ್ಲಿಯೇ ತನ್ನೂರು ಮತ್ತು ಊರಿನ ಸುತ್ತಮುತ್ತ ಇರುವ ಊರುಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆಗೆ ಮುಂದಾಗಿ, ತಾವು ಗಳಿಸುವ ಕಡಿಮೆ ಮೊತ್ತದಲ್ಲಿಯೂ ಸಮಾಜಕ್ಕೆ ಏನನ್ನಾದರೂ ನೀಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.

ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕನ ಊರಿಗೆ ಸಮೀಪವೇ ಇವರ ಊರು ಇರುವುದರಿಂದ ಅವರು ರಸ್ತೆಯ ಪ‍ಕ್ಕದಲ್ಲಿ ನೆಟ್ಟು ಬೆಳೆಸಿರುವ ಮರಗಳ ನೆರಳಿನಲ್ಲಿಯೇ ಶಾಲೆಗೆ ಓಡಾಡುತ್ತಿದ್ದರು. ಹೀಗೆ ಓಡಾಡುವಾಗಲೆಲ್ಲಾ ಅವರು, ತಿಮ್ಮಕ್ಕ ಒಂದು ಮಹಿಳೆಯಾಗಿ ಈ ರೀತಿಯ ಪರಿಸರ ಕಾಳಜಿ ಮೆರೆದಿರುವಾಗ ನಾವ್ಯಾಕೆ ಮಾಡಬಾರದು? ಎಂದು ಪ್ರಶ್ನೆ ಕೇಳಿಕೊಂಡಿದ್ದುಂಟು.

ನಂತರ 1997ರಲ್ಲಿ ರೇಷ್ಮೆ ಕೈಗಾರಿಕೆಯೊಂದರಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾಗ ಸ್ವಾತಂತ್ರ್ಯ ಬಂದ 50ನೇ ವರ್ಷದ ನೆನಪಿಗಾಗಿ ಎಲ್ಲಾ ನೌಕರರಿಗೆ 50 ಗಿಡಗಳನ್ನು ನೀಡಿದ್ದರು. ಆ 50 ಗಿಡಗಳನ್ನು ಬಹಳ ಪ್ರೀತಿಯಿಂದಲೇ ಸ್ವೀಕರಿಸಿದ ಅವರು ಅವುಗಳನ್ನು ತಂದು ತಮ್ಮ ಜಮೀನಿನಲ್ಲಿಯೇ ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಿಸಲು ಆರಂಭಿಸಿದರು. ಅಂದಿನಿಂದ ಶುರುವಾಗಿತ್ತು ಗೋವಿಂದರಾಜು ಮತ್ತು ಗಿಡಗಳ ನಡುವಿನ ಸಂಬಂಧ.

ಮಾಗಡಿ ತಾಲ್ಲೂಕಿನ ಸುಗ್ಗನಹಳ್ಳಿಯ ಗುಂಡು ತೋಪಿನಲ್ಲಿ 500ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಇವರು ತಮ್ಮ ಊರಿನ ರಸ್ತೆಯ ಅಕ್ಕಪಕ್ಕದಲ್ಲಿಯೂ ನೂರಾರು ಗಿಡಗಳನ್ನು ನೆಟ್ಟಿದ್ದಾರೆ. ಸದ್ಯ ಹೊನ್ನುಡಿಕೆಯ ಸ್ವರ್ಣಾಂಬ ಪ್ರೌಢಶಾಲೆಯ ಆವರಣವನ್ನು ಹಸಿರುಮಯ ಮಾಡಲು ಮುಂದಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಪಾಠ ಮಾಡುತ್ತಿರುವ ಅವರು ಮಕ್ಕಳಿಂದ ಕೂಡ ಗಿಡವನ್ನು ನಡೆಸುತ್ತಿದ್ದಾರೆ.

ತಮ್ಮ ಸ್ವಂತ ಖರ್ಚಿನಲ್ಲಿಯೇ ಗಿಡಗಳನ್ನು ಖರೀದಿಸಿ ತಂದು ನೆಡುವ ಇವರ ಕಾರ್ಯಕ್ಕೆ ಮೊದ ಮೊದಲು ಹೆಚ್ಚು ಯಾರೂ ಸಹಾಯ ನೀಡದಿದ್ದರೂ ಕ್ರಮೇಣವಾಗಿ ಗ್ರಾಮದ ಜನರು ಮತ್ತು ಮಕ್ಕಳು ಕೂಡ ಸಾಥ್‌ ನೀಡುತ್ತಿದ್ದಾರೆ.

ತಂದೆ ತಾಯಿಗಳು ಪರಿಸರ ಪ್ರೇಮಿಗಳೇ: ಕೂಲಿ ನಾಲಿ ಮಾಡುತ್ತಿದ್ದ ನನ್ನ ತಂದೆ ತಾಯಿಯರಿಬ್ಬರಿಗೂ ಕೂಡ ಗಿಡಗಳೆಂದರೆ ಬಲು ಪ್ರೀತಿ. ಮರಗಳನ್ನು ಕಡಿದು ನಾಶ ಮಾಡುವ ಬದಲು ಅವುಗಳನ್ನು ಬೆಳೆಸಬೇಕು ಎಂದು ಯಾವಾಗಲೂ ನನಗೆ ಹೇಳುತ್ತಿದ್ದರು. ನಮ್ಮ ಜಮೀನಿನಲ್ಲಿದ್ದ ಯಾವುದಾದರೂ ಮರ ಬಿದ್ದರೆ ಆ ಜಾಗದಲ್ಲಿ ಬೇರೊಂದು ಗಿಡ ನೆಟ್ಟು ಬರುವಂತೆ ನನಗೆ ಹೇಳುತ್ತಿದ್ದರು ಎಂದು ಅವರ ತಂದೆ ತಾಯಿಯ ಪರಿಸರ ಕಾಳಜಿಯ ಬಗ್ಗೆಯೂ ವಿವರಿಸುತ್ತಾರೆ ಗೋವಿಂದರಾಜು.

ಸೈನಿಕರ ಕಲ್ಯಾಣ ನಿಧಿಗೆ ಹಣ: ಸೈನಿಕರ ಮೇಲೆ ಅಪಾರ ಕಾಳಜಿ ಹೊಂದಿರುವ ಇವರು ತಮ್ಮ ದುಡಿಮೆಯ ಶೇ 10ರಷ್ಟನ್ನು ಸೈನಿಕರ ನಿಧಿಗೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಶಾಲೆಯ ಮಕ್ಕಳಿಗೂ ಕೂಡ ಹುಟ್ಟಿದ ದಿನದಂದು ಅಥವಾ ಇನ್ನಿತರ ಶುಭ ಸಂದರ್ಭಗಳಲ್ಲಿ ಹಣವನ್ನು ಬೇರೆ ಯಾವುದೋ ರೀತಿಯಲ್ಲಿ ಹಣ ಹಾಳು ಮಾಡದೇ ಸೈನಿಕರ ನಿಧಿಗೆ ಹಣ ನೀಡುವ ಬಗ್ಗೆ ಹೇಳುತ್ತಿದ್ದಾರೆ.

ಪ್ಲಾಸ್ಟಿಕ್‌ ಮತ್ತು ಯೂಸ್‌ ಆ್ಯಂಡ್‌ ಥ್ರೋ ವಸ್ತುಗಳನ್ನು ಬಳಸುವುದರಿಂದ ಪರಿಸರ ನಾಶ ಆಗುತ್ತಿರುವ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಹೇಳುತ್ತಿರುವ ಇವರು, ಪ್ಲಾಸ್ಟಿಕ್‌ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವಂತೆ ಸಲಹೆ ನೀಡುತ್ತಿದ್ದಾರೆ.

9 ಮರಗಳ ವೈಜ್ಞಾನಿಕ ಲಾಭ

ಯಾವುದೇ ದೇವಸ್ಥಾನಕ್ಕೆ ಹೋಗಲಿ, ಸಸ್ಯೋದ್ಯಾನಗಳಿಗೆ ಹೋಗಲಿ ಅರಳಿ, ಅತ್ತಿ, ಆಲ, ನೆಲ್ಲಿ, ನೇರಳೆ, ಹಿಪ್ಪೆ, ಬೇವು, ಬ್ಯಾಲ ಮತ್ತು ಬನ್ನಿ ಮರಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಮರಗಳನ್ನೇ ಇಂತಹ ಪ್ರದೇಶದಲ್ಲಿ ಹೆಚ್ಚು ಬೆಳೆಯುವುದಕ್ಕೂ ಬಲವಾದ ಕಾರಣವಿದೆ. ಈ ಒಂಬತ್ತು ಜಾತಿಯ ಮರಗಳು ಗಾಳಿ, ನೀರು ಮತ್ತು ಬೆಳಕನ್ನು ಸ್ವಚ್ಛಗೊಳಿಸುವ ‘ಫಿಲ್ಟರ್‌’ಗಳಿದ್ದಂತೆ. ಪ್ರಾಣಿ ಪಕ್ಷಿಗಳಿಗೆ ವರ್ಷಪೂರ್ತಿ ಆಹಾರವನ್ನು ಮತ್ತು ಆಶ್ರಯ ತಾಣವನ್ನು ಒದಗಿಸುವ ಈ ಮರಗಳು ವೈಜ್ಞಾನಿಕವಾಗಿಯೂ ಜೀವ ಸಂಕುಲಕ್ಕೆ ಲಾಭವನ್ನು ನೀಡಬಹುದಾದ ಶಕ್ತಿಯನ್ನು ಹೊಂದಿರುವುದರಿಂದ ನಾನು ಹೆಚ್ಚಿನ ಕಡೆಗಳಲ್ಲಿ ಇಂತಹ ಜಾತಿಯ ಗಿಡಗಳನ್ನೇ ನೆಡುತ್ತಿದ್ದೇನೆ ಎನ್ನುತ್ತಾರೆ ಗೋವಿಂದರಾಜು ಅವರು.

* * 

ಗೋವಿಂದರಾಜು ಅವರಿಗೆ ಗಿಡಗಳೆಂದರೆ ಪ್ರೀತಿ. ಶಾಲೆಯ ಆವರಣದಲ್ಲಿರುವ ಗಿಡಗಳನ್ನು ನೋಡಲು ಬೆಳಿಗ್ಗೆ 6 ಗಂಟೆಗೆ ಬರುತ್ತಾರೆ. ಮತ್ತೊಮ್ಮೆ ಸಂಜೆ ಬಂದು ನೋಡಿಕೊಂಡು ಹೋಗುತ್ತಾರೆ.

ಜಗದಾಂಬ, ಮುಖ್ಯ ಶಿಕ್ಷಕಿ, ಸ್ವರ್ಣಾಂಬ ಪ್ರೌಢಶಾಲೆ ಹೊನ್ನುಡಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry