ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಮುಕ್ತ ತೊಗರಿ ತಳಿ ಅಭಿವೃದ್ಧಿಪಡಿಸಿ

Last Updated 26 ನವೆಂಬರ್ 2017, 7:29 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯದ 10 ಲಕ್ಷ ಎಕರೆಯಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಇಳುವರಿ, ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡನೆ ಹೆಚ್ಚಾಗಿದೆ. ರಾಸಾಯನಿಕಗಳನ್ನು ಬಳಸದೆ ಬೆಳೆಯಬಹುದಾದ ತೊಗರಿ ತಳಿಯನ್ನು ಕೃಷಿ ವಿಜ್ಞಾನಿಗಳು ಅಭಿವೃದ್ಧಿ ಪಡಿಸಬೇಕು’ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪಾ ಸಲಹೆ ನೀಡಿದರು.

ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕೃಷಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಔಷಧಿ ಸಿಂಪಡಿಸುವುದರಿಂದ ತೊಗರಿ ವಿಷಯುಕ್ತವಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ತೊಗರಿ ಬೇಳೆಯು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಿಲ್ಲೆಯ ಚಿತ್ತಾಪುರ, ಸೇಡಂ ಹಾಗೂ ಕಲಬುರ್ಗಿ ತಾಲ್ಲೂಕಿನಲ್ಲಿ ಹೆಚ್ಚು ತೊಗರಿ ಬೆಳೆಯುತ್ತಾರೆ. ಈ ಭಾಗವನ್ನು ತೊಗರಿ ಕಣಜ ಎಂದು ಕರೆಯುತ್ತಾರೆ. ತೊಗರಿಯ ಉತ್ಪಾದನೆ ಹೆಚ್ಚಳಕ್ಕೂ ಆದ್ಯತೆ ನೀಡಬೇಕಾಗಿದೆ’ ಎಂದು ಹೇಳಿದರು.

‘ರೈತರು ಸಾಲ ಮಾಡುವ ಪ್ರವೃತ್ತಿಯಿಂದ ಹೊರಬರಬೇಕು. ಸಾಲದ ಹಣಕ್ಕೆ ಬಡ್ಡಿ ಕಟ್ಟುವಲ್ಲಿಯೇ ಶ್ರಮ ವ್ಯಯವಾಗುತ್ತಿದೆ. ತೊಗರಿಯ ಜತೆಗೆ ಜೋಳ, ಹೆಸರು, ಉದ್ದು ಬೆಳೆಗಳನ್ನು ಬೆಳೆದು ಆರ್ಥಿಕ ಉನ್ನತಿ ಸಾಧಿಸಬೇಕು’ ಎಂದು ಹೇಳಿದರು.

‘ಕೃಷಿ ಜತೆಗೆ ಹೈನುಗಾರಿಕೆಗೂ ಆದ್ಯತೆ ನೀಡಬೇಕು. ಆಡು ಸಾಕಾಣಿಕೆಗೆ ಪ್ರೋತ್ಸಾಹ ನೀಡಬೇಕು. ಜಿಲ್ಲೆಯಲ್ಲಿ ಆಡಿನ ಹಾಲಿನ ಡೈರಿಗಳನ್ನು ಪ್ರಾರಂಭಿಸಬೇಕು. ಇದರಿಂದ ರೈತರ ಸ್ವಾವಲಂಬನೆ ಸಾಧ್ಯವಾಗಲಿದೆ’ ಎಂದು ತಿಳಿಸಿದರು.

‘ರೈತರಿಗೆ ತರಬೇತಿ ನೀಡಬೇಕಾಗಿದೆ. ರೈತರ ಮಕ್ಕಳಿಗೆ ತರಬೇತಿ ನೀಡುವ ಕೆಲಸವನ್ನು ಕೃಷಿ ಕಾಲೇಜುಗಳು ಮಾಡಬೇಕು. ಶರಣಬಸವ ವಿಶ್ವವಿದ್ಯಾಲಯದಲ್ಲಿಯೂ ಕೃಷಿ ಕೋರ್ಸ್‌ ಪ್ರಾರಂಭಿಸಲಾಗುವುದು’ ಎಂದು ಅವರು ತಿಳಿಸಿದರು.

ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಮಾತನಾಡಿ, ‘ಕೃಷಿ ವಿಶ್ವವಿದ್ಯಾಲಯಗಳು ರೈತರ ಸಂಕಷ್ಟಗಳನ್ನು ದೂರ ಮಾಡಬೇಕು. ಅವರಿಗೆ ಅಗತ್ಯವಾಗಿರುವ ಸಂಶೋಧನೆಗಳನ್ನು ನಡೆಸಬೇಕು. ಕೇಂದ್ರ ಸರ್ಕಾರದ ಫಸಲ್‌ ಬಿಮಾ, ಸಿಂಚಯ್‌ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕೃಷಿ ಮಹಾವಿದ್ಯಾಲಯದ ಡೀನ್‌ ಜೆ.ಆರ್‌.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮೂರು ದಿನ ಕೃಷಿ ಮೇಳ ನಡೆಯಲಿದೆ. ಹಲವು ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇಳುವರಿ ಹೆಚ್ಚು, ಸರಳ ಕೃಷಿ, ವೆಚ್ಚ ತಗ್ಗಿಸುವಿಕೆ ಹಾಗೂ ಸಾಧನೆ ಕುರಿತು ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ಹಲವಾರು ತೊಗರಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಜಿಎಸ್‌–1, ಮಾರುತಿ, ಟಿಎಸ್‌–3 ತಳಿಗಳು ಹೆಚ್ಚಿನ ಇಳುವರಿ ನೀಡುತ್ತಿದೆ ಹಾಗೂ ಅಧಿಕ ಸಂಖ್ಯೆಯಲ್ಲಿ ಬಳಕೆಯಾಗುತ್ತಿದೆ’ ಎಂದು ತಿಳಿಸಿದರು.

ಶಿವಮೊಗ್ಗದ ಚೌಕಿ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ‘ಪ್ರತಿ ಕ್ಷೇತ್ರದಲ್ಲಿಯೂ ತಾಳ್ಮೆ ಇರಬೇಕು. ತಕ್ಷಣವೇ ಫಲ ಸಿಗಬೇಕು ಎಂಬ ಅಪೇಕ್ಷೆ ಇರಬಾರದು. ರೈತರೂ ಶ್ರಮ, ತಾಳ್ಮೆಯಿಂದ ದುಡಿದರೆ ಯಶಸ್ಸು ಖಚಿತ’ ಎಂದು ಹೇಳಿದರು.

ತೊಗರಿ ಮಂಡಳಿಯ ಅಧ್ಯಕ್ಷ ಭಾಗಣಗೌಡ ಸಂಕನೂರ ಪಾಟೀಲ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶರಣಬಸಪ್ಪ ಅಷ್ಟಗಿ ಇದ್ದರು.

60 ಕೆ.ಜಿ. ಮಾಂಸ ನೀಡುವ ಬಾರ್ಬರಿ ಆಡುಗಳು!
ಜೇವರ್ಗಿ ತಾಲ್ಲೂಕಿನ ಖಾದ್ಯಾಪುರದ ರೈತ ಜಯಪ್ರಕಾಶ ಅವರು ಸಾಕಾಣಿಕೆ ಮಾಡಿರುವ ಬಾರ್ಬರಿ ತಳಿಯ ಆಡುಗಳು ಕೃಷಿ ಮೇಳದ ಮೊದಲ ದಿನ ಪ್ರಮುಖ ಆಕರ್ಷಣೆಯಾಗಿದ್ದವು.

50ರಿಂದ 60 ಕೆ.ಜಿ. ಮಾಂಸ ಈ ಆಡುಗಳಿಂದ ಪಡೆಯಬಹುದು. ಉತ್ತರಪ್ರದೇಶದಿಂದ ₹30 ಸಾವಿರ ನೀಡಿ 1ಹೆಣ್ಣು, 2 ಆಡು ತಂದಿದ್ದು, ಒಂದು ವರ್ಷದಲ್ಲಿ ಆಡುಗಳ ಸಂಖ್ಯೆ 13ಕ್ಕೆ ಏರಿದೆ. ‘ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳ ಸಲಹೆ ಹಾಗೂ ಮಾರ್ಗದರ್ಶನದ ಪಡೆದು ಇವುಗಳನ್ನು ಸಾಕಾಣಿಕೆ ಮಾಡುತ್ತಿದ್ದೇನೆ. ಉತ್ತಮ ಮೇವು ಒದಗಿಸಿದರೆ 1 ಕ್ಟಿಂಟಲ್‌ ವರೆಗೆ ಮಾಂಸ ನೀಡುತ್ತವೆ. ಇವುಗಳ ಮಾಂಸ ಸ್ವಾದಿಷ್ಟವಾಗಿರುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಅಗ್ಗದ ಬೆಲೆಯ ಸೋಲಾರ್‌ ಸಾಧನ
ಹಂದಿಗಳ ಉಪಟಳ ತಡೆಗೆ ರೈತಸ್ನೇಹಿ ಸೋಲಾರ್‌ ಸಾಧನವನ್ನು ತಾಲ್ಲೂಕಿನ ಹಾಲಸುಲ್ತಾನಪುರದ ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ಅವರು ಅಭಿವೃದ್ಧಿ ಪಡಿಸಿದ್ದಾರೆ. ₹6 ಸಾವಿರ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. ಮೂರು ಗಂಟೆ ಬಿಸಿಲಿನಲ್ಲಿ ಚಾರ್ಜ್‌ ಮಾಡಿದರೆ ಇಡೀ ರಾತ್ರಿ ಕೆಲಸ ಮಾಡಬಲ್ಲದು.

‘ಜಿಲ್ಲೆಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ತೊಗರಿ ಬೆಳೆಗಾರರು ಇದರಿಂದ ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಈ ಸಾಧನ ರೈತರಿಗೆ ವರದಾನವಾಗಲಿದೆ’ ಎಂದು ಶರಣವಸಪ್ಪ ತಿಳಿಸಿದರು.

* 8

10 ವರ್ಷಗಳಿಂದ ಕೃಷಿ ಮೇಳ ಹಮ್ಮಿಕೊಳ್ಳುತ್ತಿದ್ದೇವೆ. ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ರೈತರ ಸಂಖ್ಯೆ ಹೆಚ್ಚುತ್ತಲಿದೆ. ಈ ಮೇಳ ತೊಗರಿ ಬೆಳೆಗಾರರಿಗೆ ಉಪಯುಕ್ತವಾಗಲಿದೆ
ಜೆ.ಆರ್‌.ಪಾಟೀಲ,
ಕೃಷಿ ಮಹಾವಿದ್ಯಾಲಯದ ಡೀನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT