7

ಕರುಣೆ, ಕನಿಕರ, ಕನ್ನಡ ಸೂತ್ರ ಅಳವಡಿಸಿಕೊಳ್ಳಿ

Published:
Updated:
ಕರುಣೆ, ಕನಿಕರ, ಕನ್ನಡ ಸೂತ್ರ ಅಳವಡಿಸಿಕೊಳ್ಳಿ

ಮೈಸೂರು: ಕರುಣೆ, ಕನಿಕರ, ಕನ್ನಡ... ಈ ಮೂರು ಸೂತ್ರಗಳನ್ನು ಪಾಲಿಸಿದರೆ ವೈದ್ಯರಿಗೆ ಯಾವುದೇ ಕಷ್ಟ ಎದುರಾಗದು. ಕನ್ನಡವನ್ನು ಉಳಿಸಿಕೊಂಡರೆ ವೈದ್ಯರೂ ಉಳಿದು ಕೊಳ್ಳುವರು ಎಂದು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಸಲಹೆ ನೀಡಿದರು.

ಸಮಾನಾಂತರ ವೇದಿಕೆಯಾದ ಶತಮಾನೋತ್ಸವ ಭವನದಲ್ಲಿ ನಡೆದ ‘ವಿಜ್ಞಾನ ತಂತ್ರಜ್ಞಾನ: ಕನ್ನಡದ ಬಳಕೆ’ ಗೋಷ್ಠಿಯಲ್ಲಿ ವೈದ್ಯ ವಿಜ್ಞಾನದ ಕುರಿತು ಅವರು ವಿಷಯ ಮಂಡಿಸಿದರು.

ವೈದ್ಯರು ರೋಗಿಗಳ ಜತೆ ಕನ್ನಡ ದಲ್ಲೇ ಮಾತನಾಡಬೇಕು. ಔಷಧಗಳ ಮಾಹಿತಿಯನ್ನು ಕನ್ನಡದಲ್ಲೇ ಬರೆಯ ಬೇಕು. ಶಸ್ತ್ರಚಿಕಿತ್ಸೆ ಮತ್ತು ತುರ್ತುಚಿಕಿತ್ಸೆಗೆ ಮುನ್ನ ರೋಗಿಗಳ ಸಹಿ ಪಡೆಯಲು ಸಿದ್ಧಪಡಿಸುವ ಒಪ್ಪಿಗೆ ಪತ್ರ ಕನ್ನಡದಲ್ಲೇ ಇರಬೇಕು ಎಂದು ಹೇಳಿದರು.

ಕನ್ನಡ ಗೊತ್ತಿರುವ ಹೆಚ್ಚಿನ ವೈದ್ಯರು ರೋಗಿಗಳ ಜತೆ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ. ಇಂಗ್ಲಿಷ್‌ ತಿಳಿಯದ ರೋಗಿ ಹಾಗೂ ಆತನ ಕುಟುಂಬದವರು ವೈದ್ಯರ ಮಾತುಗಳನ್ನು ತಪ್ಪಾಗಿ ತಿಳಿದುಕೊಳ್ಳುವರು. ರೋಗಿ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣಬಿಟ್ಟರೆ ಕುಟುಂಬದವರು ವೈದ್ಯರ ಮೇಲೆ ಆಕ್ರೋಶಗೊಳ್ಳುವರು. ರೋಗಿಗಳ ಜತೆ ಮಾತೃಭಾಷೆಯಲ್ಲಿ ಸಂವಹನ ನಡೆಸಿದರೆ ವೈದ್ಯರ ಮೇಲಿನ ಹಲ್ಲೆ ಘಟನೆಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಕಿವಿಮಾತು ಹೇಳಿದರು.

‘ಮನೋವಿಜ್ಞಾನ’ ಕುರಿತು ವಿಷಯ ಮಂಡನೆ ಮಾಡಿದ ಮನೋವಿಜ್ಞಾನಿ ಡಾ.ಸಿ.ಆರ್‌.ಚಂದ್ರಶೇಖರ್‌, ‘ಮನಸ್ಸು ಅನ್ನುವುದು ವಿಸ್ಮಯ. 25 ವರ್ಷ ಜತೆಯಾಗಿ ಬಾಳಿದ ದಂಪತಿಗೂ ಪರಸ್ಪರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ’ ಎಂದರು.

ಮನಸ್ಸಿನ ತಾಕಲಾಟ ಎಲ್ಲ ಸಮಸ್ಯೆ ಗಳಿಗೆ ಕಾರಣವಾಗುತ್ತದೆ. ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಆತ್ಮಹತ್ಯೆಗೆ ಪ್ರಯತ್ನಿಸುವರು. ಇದರಲ್ಲಿ ಒಂದು ಲಕ್ಷ ಜನರು ಪ್ರಾಣ ಕಳೆದುಕೊಳ್ಳುವರು ಎಂದು ಮಾಹಿತಿ ನೀಡಿದರು.

ಮಾನಸಿಕ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕರ್ನಾಟಕದಲ್ಲಿ ಮನೋವಿಜ್ಞಾನಿಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಆರು ಕೋಟಿ ಜನರಿಗೆ ಕೇವಲ 250 ಮನೋವಿಜ್ಞಾನಿಗಳಿದ್ದಾರೆ ಎಂದರು.

ತರ್ಜುಮೆ ನಡೆಯಲಿ: ಅಧ್ಯಕ್ಷೀಯ ಭಾಷಣ ಮಾಡಿದ ವೈದ್ಯವಿಜ್ಞಾನ ಸಾಹಿತಿ ಡಾ.ಪಿ.ಎಸ್‌.ಶಂಕರ್‌, ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಇಂಗ್ಲಿಷಿನಲ್ಲಿ ಹಲವಾರು ಪುಸ್ತಕಗಳಿವೆ. ಅವುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸ ನಡೆಯಲಿ. ಭೌತವಿಜ್ಞಾನ, ರಸಾಯನ ವಿಜ್ಞಾನದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ವಿಜ್ಞಾನಿಗಳ ಪುಸ್ತಕ, ಅಧ್ಯಯನ ವರದಿಗಳು ಕನ್ನಡಕ್ಕೆ ಅನುವಾದವಾಗಬೇಕು ಎಂದು ಹೇಳಿದರು.

‘ತಂತ್ರಜ್ಞಾನ ಕ್ಷೇತ್ರ’ದ ಬಗ್ಗೆ ಮಾತನಾಡಿದ ಐಬಿಎಂ ಕಂಪೆನಿಯ ಉನ್ನತಾಧಿಕಾರಿ ಉದಯಶಂಕರ ಪುರಾಣಿಕ, ‘ತಂತ್ರಜ್ಞಾನದಲ್ಲಿ ಕನ್ನಡದ ಬಳಕೆಗೆ ಹಲವಾರು ಅವಕಾಶಗಳಿವೆ. ಆದರೆ ಆಸಕ್ತಿ ಕೂಡಾ ಮುಖ್ಯ’ ಎಂದರು.

‘ದೂರದರ್ಶನದಲ್ಲಿ ಕನ್ನಡ ಬಳಸಲು ತಂತ್ರಾಂಶ, ಸಹಕಾರಿ ಬ್ಯಾಂಕಿಂಗ್‌ ಮತ್ತು ಎಟಿಎಂಗಳಲ್ಲಿ ಕನ್ನಡ ಬಳಸಲು ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಇದರಿಂದ ಎಷ್ಟೋ ಮಂದಿಗೆ ಅನುಕೂಲವಾಗಿದೆ. ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಹೆಚ್ಚಿದಂತೆ ಜನರಿಗೆ ಅನುಕೂಲವೂ ಹೆಚ್ಚಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry