ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಳೆಗೆ ಅಂಗಮಾರಿ ರೋಗ

Last Updated 27 ನವೆಂಬರ್ 2017, 6:37 IST
ಅಕ್ಷರ ಗಾತ್ರ

ಜನವಾಡ: ಬೀದರ್‌ನ ತೋಟಗಾರಿಕೆ ಕಾಲೇಜಿನ ಡೀನ್‌ ಡಾ. ರವೀಂದ್ರ ಮುಲಗೆ ನೇತೃತ್ವದ ತಂಡ ಶನಿವಾರ ತಾಲ್ಲೂಕಿನ ಮರ್ಜಾಪುರದ ರೈತ ಬಕ್ಕಪ್ಪ ಅವರ ಹೊಲಕ್ಕೆ ಭೇಟಿ ನೀಡಿ ಟೊಮೆಟೊ ಬೆಳೆಯಲ್ಲಿ ಕಂಡು ಬಂದಿರುವ ಕೀಟಬಾಧೆಯನ್ನು ಪರಿಶೀಲಿಸಿದರು.

ವಿಸ್ತರಣಾ ಮುಂದಾಳು ಡಾ. ಶ್ರೀನಿವಾಸ ಎನ್., ಸಹಾಯಕ ಪ್ರಾಧ್ಯಾಪಕರಾದ ಡಾ.ಸತ್ಯ ನಾರಾಯಣ ಸಿ. ಹಾಗೂ ಅರುಣಕುಮಾರ ಕೆ.ಟಿ., ಅವರು ಟೊಮೆಟೊ ಬೆಳೆಗೆ ಅಂಗಮಾರಿ ರೋಗ, ಬಿಳಿನೊಣ, ಕಾಯಿಕೊರಕ ಮತ್ತು ಎಲೆ ಸುರಂಗ ಹುಳುಗಳು ಬಾಧೆ ಕಂಡು ಬಂದಿರುವುದನ್ನು ಗಮನಿಸಿ ನಿರ್ವಹಣಾ ಕ್ರಮಗಳನ್ನು ಅನುಸರಿಸಲು ಸೂಚಿಸಿದರು.

ಅಂಗಮಾರಿ ರೋಗದ ಲಕ್ಷಣ: ಟೊಮೆಟೊ ಗಿಡಗಳ ಎಲೆಗಳ ಮೇಲ್ಭಾಗದಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ವಕ್ರಾಕಾರದ ಕಂದು, ಕಪ್ಪು ಮಿಶ್ರಿತ ಚುಕ್ಕೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಆಮೇಲೆ ಒಂದಕ್ಕೊಂದು ಸೇರಿ ಕೊಂಡು ಎಲೆಗಳು ಒಣಗುತ್ತವೆ.

ಅಂಗಮಾರಿ ರೋಗಕ್ಕೆ 2 ಗ್ರಾಂ. ಕ್ಲೋರೋಥಾಲೊನಿಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಹದಿನೈದು ದಿನಗಳ ನಂತರ 1 ಎಂ.ಎಲ್. ಡೈಫೆನ್‍ಕೊನೊಜೋಲ್ ಪ್ರತಿ ಲೀಟರ್‌ ನೀರಲ್ಲಿ ಬೆರೆಸಿ ಎರಡನೆಯ ಬಾರಿಗೆ ಸಿಂಪರಣೆ ಮಾಡಬೇಕು.

ಬಿಳಿ ನೊಣಗಳು ಎಲೆಗಳ ಕೆಳಭಾಗದಿಂದ ರಸ ಹೀರುತ್ತವೆ. ಈ ಕೀಟವು ಮುಟುರು ರೋಗವನ್ನು ಹರಡುತ್ತದೆ. ರೋಗ ನಿಯಂತ್ರಣಕ್ಕೆ ರೊಗರ್ -1.75 ಮೀ.ಲೀ. ಪ್ರತಿ ಲೀಟರ್‌ ನೀರಿಗೆ ಅಥವಾ ಕಾನ್‍ಫಿಡಾರ್-0.2 ಮೀ.ಲೀ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಳದಿ ಬಣ್ಣದ ಆಕರ್ಷಿತ ಬಲೆಗಳನ್ನು ನೇತು ಹಾಕಬೇಕು.

ಕಾಯಿಕೊರಕ: ಮೊದಲ ಹಂತದ ಮರಿ ಹುಳುಗಳು ಹೂವಿನ ಮೊಗ್ಗುಗಳನ್ನು ಹಾಗೂ ಹೂವುಗಳನ್ನು ತಿನ್ನುತ್ತವೆ. ನಂತರ ಮರಿ ಹುಳುಗಳು ಹಣ್ಣನ್ನು ಕೊರೆದು ಒಳ ಭಾಗವನ್ನು ತಿನ್ನುತ್ತವೆ. ಕಾಯಿಕೊರಕ ನಿಯಂತ್ರಣಕ್ಕೆ ಪ್ರತಿ ನಾಲ್ಕು ಸಾಲು ಟೊಮೆಟೊ ಬೆಳೆಗೆ ಒಂದು ಸಾಲು ಚಂಡು ಹೂವು ಬೆಳೆಯಬೇಕು. 2 ಮಿಲಿ ಡರ್ಸಬಾನ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.

ಎಲೆ ಸುರಂಗ ಹುಳು:ಮರಿ ಹುಳುಗಳು ಎಲೆಯ ಎರಡು ಪದರುಗಳ ನಡುವೆ ಸೇರಿ ಹಸಿರು ಪದಾರ್ಥವನ್ನು ತಿನ್ನುತ್ತವೆ. ಇದರಿಂದ ಹಾವಿನ ಆಕಾರದ ಬಿಳಿ ಮಚ್ಚೆಗಳು ಕಾಣುತ್ತವೆ. ಅಸಿಫೀಟ್ 1 ಗ್ರಾಂ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ತೋಟಗಾರಿಕೆ ತಜ್ಞರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT