7

‘ನಾಸಿರಾತ್‌’ ಪ್ರಚಾರ ಬಯಸದ ಸಮಾಜಸೇವೆ!

Published:
Updated:
‘ನಾಸಿರಾತ್‌’ ಪ್ರಚಾರ ಬಯಸದ ಸಮಾಜಸೇವೆ!

ಯಾದಗಿರಿ: ಸಮಾಜಮುಖಿ ಸೇವಾ ಕೈಂಕರ್ಯಗಳಲ್ಲಿ ಮುಸ್ಲಿಂ ಮಹಿಳಾ ಸಂಘಟನೆಗಳ ಪಾತ್ರ ತೀರಾ ವಿರಳ. ಆದರೆ, ನಗರದಲ್ಲಿ ಎಲೆಮರೆ ಕಾಯಿಯಂತೆ ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿರುವ ‘ನಾಸಿರಾತ್’ ಸಂಘಟನೆಯಲ್ಲಿ ಇರುವುದು ಮಹಿಳೆಯರಲ್ಲ, ಬಾಲಕಿಯರು!

‘ನಾಸಿರಾತ್’ ಬಹುಸಮಾಜ ಸೇವಾ ಕಾರ್ಯಕ್ಕೆ ತನ್ನನ್ನು ಸಮರ್ಪಿಸಿಕೊಂಡ 15 ವರ್ಷ ವರ್ಷದೊಳಗಿನ ಬಾಲಕಿಯರ ಒಂದು ಸಂಘಟನೆ. 15ಕ್ಕೂ ಮೇಲ್ಪಟ್ಟವರ ಮಹಿಳಾ ಸಂಘಟನೆಯೂ ಇದೆ. ಅದಕ್ಕೆ ‘ಲಜನಾ ಇಮೊಲ್ಲಾ’ ಎಂದು ಕರೆಯುತ್ತಾರೆ. ಆದರೆ, 15 ವರ್ಷದೊಳಗಿನವರ ‘ನಾಸಿರಾತ್’ ಸಂಘಟನೆಯಲ್ಲಿನ ಬಾಲಕಿಯರು ನಡೆಸುತ್ತಿರುವ ಸಮಾಜ ಸೇವಾಕಾರ್ಯ ಎಂಥವರೂ ತಲೆದೂಗಲೇಬೇಕು ಎನ್ನುವಂತಿದೆ.

ನಾಜಿಯಾ ಪರ್ವೀನ್, ರೋಹತ್ ಬೇಗಂ ‘ನಾಸಿರಾತ್’ ಸಂಘಟನೆಯ ಪ್ರಮುಖರಾಗಿದ್ದು, ಒಟ್ಟು 20ಕ್ಕೂ ಹೆಚ್ಚು ಬಾಲಕಿಯರು ಈ ಸಂಘಟನೆಯ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಹಮ್ಮದ್ ಪೈಗಂಬರ್‌ ಬೋಧಿಸಿದ, ಕುರಾನ್‌ ಪ್ರತಿಪಾದಿಸುವ ಸಾಮಾಜಿಕ ಶಾಂತಿ, ದಾನ, ಸೌಹಾರ್ದ ನೀತಿಯನ್ನೇ ‘ನಾಸಿರಾತ್’ ಸಂಘಟನೆಯ ಸದಸ್ಯರು ಧ್ಯೇಯವಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಈ ಬಾಲಕಿಯರು ಕೈಯಲ್ಲಿ ದಿನಪತ್ರಿಗಳಿಂದ ಮಾಡಿದ ಪಾಕೆಟ್‌ಗಳ ರಾಶಿ ಹಿಡಿದು ಅಂಗಡಿಗಳ ಮಾಲೀಕರಿಗೆ ಸಲಹೆಗಳನ್ನಿಟ್ಟು ಪಾಕೆಟ್‌ಗಳನ್ನು ನೀಡುತ್ತಿದ್ದದ್ದು ಕಂಡುಬಂತು. ಪ್ರಚಾರದಿಂದ ದೂರ ಉಳಿದು ಸಾಮಾಜಿಕ ಸೇವೆ ಸಲ್ಲಿಸಬೇಕು ಎಂಬುದೂ ಅವರ ಧ್ಯೇಯಗಳಲ್ಲೊಂದಾಗಿರುವುದರಿಂದ ಈ ಬಾಲಕಿಯರು ಗುಂಪುಗುಂಪಾಗಿ ಸಮಾಜ ಸೇವಾಕಾರ್ಯಕ್ಕೆ ತೆರಳುವುದಿಲ್ಲ. ಹಾಗಾಗಿ, ಯಾರ ಗಮನವೂ ಇವರತ್ತ ಸೆಳೆಯುವುದಿಲ್ಲ.

‘ನಾಸಿರಾತ್’ ನ ಬಾಲಕಿಯರು ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತು ಅರಿವು ಜಾಗೃತಿ ಮೂಡಿಸಿದ್ದಾರೆ. ಅದೂ ಬರೀ ಬಾಯಿ ಮಾತಿನಿಂದಲ್ಲ. ಸ್ವತಃ ದಿನಗಟ್ಟಲೇ ಪೇಪರ್‌ನಿಂದ ಪಾಕೆಟ್ ತಯಾರಿಸಿ ಅವನ್ನು ಅಂಗಡಿ ಮಾಲೀಕರ ಕೈಗಿಟ್ಟು ಅರಿವು ಮೂಡಿಸಿದ್ದಾರೆ. ಬಾಲಕಿಯರ ಕಳಕಳಿ ಕಂಡು ನಾನೂ ಪ್ಲಾಸ್ಟಿಕ್ ಬಳಸುವುದನ್ನು ಬಿಟ್ಟಿದ್ದೇನೆ’ ಎನ್ನುತ್ತಾರೆ ತಳ್ಳುಗಾಡಿ ವ್ಯಾಪಾರಿ ಬಷೀರ್.

‘ಜಿಲ್ಲಾಡಳಿತ, ನಗರಸಭೆಯಂತಹ ಸ್ಥಳೀಯ ಸಂಸ್ಥೆಗಳು ಪ್ಲಾಷ್ಟಿಕ್‌ ನಿಷೇಧ ಕುರಿತು ಜಾಥಾ, ಬೀದಿ ನಾಟಕಗಳಿಗೆ ಸೀಮಿತಗೊಂಡಿವೆ. ಆದರೆ, ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ಮಾರ್ಗದ ಬಗ್ಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಆಲೋಚಿಸಿಲ್ಲ. ದೊಡ್ಡ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರೂ, ಅಧಿಕಾರಿಗಳ ದಾಳಿಗೆ ಬಡ ವ್ಯಾಪಾರಿಗಳೇ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದ ಬಡ ವ್ಯಾಪಾರಿಗಳನ್ನು ಉಳಿಸುವ ನಿಟ್ಟಿನಲ್ಲಿ ಅವರಿಗೆ ಪೇಪರ್‌ ಪಾಕೆಟ್‌ ನೀಡಿ ಪ್ಲಾಸ್ಟಿಕ್‌ ನಿಂದ ಮುಕ್ತಿಗೊಳಿಸುವ ಉದ್ದೇಶ ಸಂಘಟನೆ ಆಲೋಚಿಸಿ ಕಾರ್ಯಗತಕ್ಕೆ ಇಳಿಯಿತು. ಈಗ ಶೇ 60ರಷ್ಟು ಬಡ ವ್ಯಾಪಾರಿಗಳು ಪೇಪರ್‌ ಪಾಕೆಟ್ ಬಳಸುತ್ತಿದ್ದಾರೆ’ ಎಂದು ಸಂಘಟನೆಯ ನಾಜಿಯಾ ಪರ್ವಿನ್‌ ಹೇಳುತ್ತಾರೆ.

ಇದಲ್ಲದೇ ಕಂಪ್ಯೂಟರ್ ಜ್ಞಾನ, ಸಾಮಾನ್ಯ ಜ್ಞಾನ ನೀಡುವುದು. ಕಸದಿಂದ ರಸ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ನಾಸಿರಾತ್’ ಬಾಲಕಿಯರು ಕೈಜೋಡಿಸಿದ್ದಾರೆ. ಅಚ್ಚರಿ ಎಂದರೆ ಇವರು ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ ಅವುಗಳಿಗೆ ಹೊಸ ರೂಪ ಕೊಟ್ಟು ಬಡವರಿಗೆ ಹಂಚುತ್ತಾರೆ!

* * 

ಸಮಾಜಮುಖಿ ಕೆಲಸದಲ್ಲಿ ತೊಡಗಿಸಲು ಬಾಲ್ಯದಿಂದಲೇ ಮನೋಭೂಮಿಕೆ ಒದಗಿಸುವ ನಿಟ್ಟಿನಲ್ಲಿ ನಾಸಿರಾತ್ ಸಂಘಟನೆ ಸಾಗುತ್ತಿದೆ.</p>

ನಾಜಿಯಾ ಪರ್ವಿನ್

ನಾಸಿರಾತ್ ಸಂಘಟನೆ ಸದಸ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry