ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಣದಾಳದಿಂದ ಆರ್‌ಟಿಪಿಎಸ್‌ವರೆಗೂ ಪಾದಯಾತ್ರೆ

Last Updated 28 ನವೆಂಬರ್ 2017, 5:53 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ತಾಲ್ಲೂಕಿಗೆ 24*7 ಗಂಟೆ ವಿದ್ಯುತ್‌ ಪೂರೈಸುವಂತೆ ಒತ್ತಾಯಿಸಿ ಶಾಸಕರಾದ ತಿಪ್ಪರಾಜು ಹವಾಲ್ದಾರ್‌ ಹಾಗೂ ಡಾ.ಶಿವರಾಜ ಪಾಟೀಲ ಅವರು ಆರಂಭಿಸಿದ ಪಾದಯಾತ್ರೆಯನ್ನು ದೇವದುರ್ಗ ಶಾಸಕ ಶಿವನಗೌಡ ನಾಯಕ ಬೆಂಬಲಿಸಿದ್ದು, ತಾಲ್ಲೂಕಿನ ಗಾಣದಾಳ ಪಂಚಮುಖಿ ಹನುಮಾನ ದೇವಸ್ಥಾನದಲ್ಲಿ ಸೋಮವಾರ ಪಾದಯಾತ್ರೆಯನ್ನು ಉದ್ಘಾಟಿಸಿದರು.

ಆನಂತರ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೆಟ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಹೋರಾಟ ರೂಪಿಸಿರುವುದು ಅಭಿನಂದನೀಯ. ಬೇಡಿಕೆಗೆ ನನ್ನ ಬೆಂಬಲವಿದ್ದು, ಡಿಸೆಂಬರ್‌ 1 ರಿಂದ ಆರ್‌ಟಿಪಿಎಸ್‌ ಎದುರು ಆರಂಭಿಸುವ ಉಪವಾಸ ಸತ್ಯಾಗ್ರಹದಲ್ಲಿ ನಾನು ಪಾಲ್ಗೊಂಡು ಉಪವಾಸ ಮಾಡುತ್ತೇನೆ’ ಎಂದರು.

‘ಕಾಂಗ್ರೆಸ್‌ ಸರ್ಕಾರದ ಕಣ್ಣು ತೆರೆಸುವ ತನಕ ಹೋರಾಟ ಸ್ಥಗಿತಗೊಳಿಸುವುದು ಬೇಡ. ಉಪವಾಸದಿಂದ ಇಬ್ಬರೂ ಶಾಸಕರು ಸಾವನ್ನಪ್ಪಿದ್ದರೂ ಜನರು ಮುಂದಿನ 100 ವರ್ಷ ಸ್ಮರಿಸುತ್ತಾರೆ. ರೈತರಿಗೆ ನ್ಯಾಯ ಒದಗಿಸಲು ಸಾಯುವವರೆಗೂ ಹೋರಾಡೋಣ. ಪಾದಯಾತ್ರೆಯಲ್ಲಿ ಪೊಲ್ಗೊಂಡಿರುವ ರೈತರು ಯಾರದೋ ಮಾತು ಕೇಳಿಕೊಂಡು ಹಿಂದಕ್ಕೆ ಸರಿಯಬಾರದು’ ಎಂದು ಮನವಿ ಮಾಡಿದರು.

ಇದು ಪಕ್ಷಾತೀತ ಹೋರಾಟವಾಗಿದೆ. ಗುಜರಾತ್‌ನಲ್ಲಿ ಹಾರ್ದಿಕ್‌ ಪಟೇಲ್‌ ನಡೆಸಿದ್ದ ಹೋರಾಟದ ರೀತಿಯಲ್ಲಿ ಇದನ್ನು ಮುಂದುವರಿಸೋಣ. ರಾಜ್ಯದಲ್ಲಿ ಮುಂದಿನ ಅವಧಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತ. ಬಿಜೆಪಿ ಅಧಿಕಾರಕ್ಕೆ ಬಂದ ಒಂದು ನಿಮಿಷದಲ್ಲಿ ರಾಯಚೂರಿಗೆ 24 ಗಂಟೆ ವಿದ್ಯುತ್‌ ಪೂರೈಕೆಗೆ ಆದೇಶಿಸುತ್ತೇವೆ. ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ₹10 ಸಾವಿರ ಕೋಟಿ ಅನುದಾನ ಕೊಡಿಸುತ್ತೇವೆ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಆರ್‌ಟಿಪಿಎಸ್‌, ವೈಟಿಪಿಎಸ್‌ ಸ್ಥಾಪನೆಯಿಂದಾಗಿ ರಾಯಚೂರಿನ ಅನೇಕ ಗ್ರಾಮಗಳ ಜನರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ರಾಯಚೂರು ತಾಲ್ಲೂಕಿನ 14 ಗ್ರಾಮಗಳು ವಿಧಾನಸಭೆ ನಗರ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ರೈತರ ಹಿತ ಕಾಪಾಡಲು ನಿರಂತರ ವಿದ್ಯುತ್‌ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ಮಾಡುವುದು ಅನಿವಾರ್ಯ’ ಎಂದು ಹೇಳಿದರು.

ಶಾಸಕ ತಿಪ್ಪರಾಜು ಹವಾಲ್ದಾರ್‌ ಮಾತನಾಡಿ, ಮೊದಲಿನಿಂದಲೂ ರೈತರ ಪರ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಈಗಾಗಲೇ ಕೆಲವು ಜಿಲ್ಲಾ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಆರಂಭಿಸಿದ ಶಾಸಕರನ್ನು ರಾಜಕೀಯದಲ್ಲಿ ಮಣ್ಣುಪಾಲು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಆದರೆ ನಮ್ಮನ್ನು ಮಣ್ಣುಪಾಲು ಮಾಡಿದರೆ ಐದು ಲಕ್ಷ ರೈತರನ್ನು ಮಣ್ಣುಪಾಲು ಮಾಡಿದಂತಾಗುತ್ತದೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ, ಗಾಣದಾಳ ಪಂಚಮುಖಿ ಹನುಮಾನ ದೇವಸ್ಥಾನದ ಅರ್ಚಕರು, ಚೌಕಿಮಠದ ಸ್ವಾಮೀಜಿ, ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಮಿಟ್ಟಿಮಲ್ಕಾಪುರದ ನಿಜಾನಂದ ಸ್ವಾಮೀಜಿ ಅವರರು ಪಾದಯಾತ್ರೆ ಬೆಂಬಲಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಾಯಚೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಾರದಮ್ಮ ಬಾಲರಾಜ, ಮುಖಂಡರಾದ ರವೀಂದ್ರ ಜಾಲ್ದಾರ್‌, ಬಂಡೇಶ್‌, ಶ್ರೀನಿವಾಸರೆಡ್ಡಿ, ಕೇಶವರೆಡ್ಡಿ, ಹಂಪನಗೌಡ, ಶಿವಕುಮಾರ, ಶಿವಶಂಕರ, ಅಶೋಕ ಜೈನ್‌, ಶಿವಕುಮಾರ ಯಾದವ್‌, ತಿಮ್ಮಪ್ಪ ನಾಡಗೌಡ ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT