7

ಕಾಂಗ್ರೆಸ್ ವೈಫಲ್ಯದ ಕೂಸು ಬಿಜೆಪಿ

Published:
Updated:
ಕಾಂಗ್ರೆಸ್ ವೈಫಲ್ಯದ ಕೂಸು ಬಿಜೆಪಿ

ಸಿದ್ದಾಪುರ: ದೇಶದ ಆಡಳಿತ ವ್ಯವಸ್ಥೆಯನ್ನು ಹೀನಾಯ ಸ್ಥಿತಿಗೆ ತಂದ ಪಕ್ಷ ಕಾಂಗ್ರೆಸ್; ಆ ಪಕ್ಷದ ವೈಫಲ್ಯವೇ ದೇಶದಲ್ಲಿ ಬಿಜೆಪಿ ಪ್ರವೇಶಕ್ಕೆ ಕಾರಣವಾಯಿತು. ಆದರೆ, ಬಿಜೆಪಿ ಕೂಡ ತಾವೇನು ಕಮ್ಮಿಯಿಲ್ಲ ಎಂಬಂತೆ ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿದೆ ಎಂದು ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್ ಆರೋಪಿಸಿದರು.

ಸಿಪಿಐ(ಎಂ) ಪಕ್ಷದ 22ನೇ ಮಹಾಧಿವೇಶನದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಕೊಡಗು ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನೋಟ್ ಅಮಾನ್ಯ ಯೋಜನೆ, ಜಿಎಸ್‌ಟಿ ಮೂಲಕ ಜನರಿಗೆ ದ್ರೋಹ ಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪರ್ಯಾಯವಾಗಿ ದೇಶದಲ್ಲಿ ಎಡಪಂಥೀಯ ಚಿಂತನೆಗಳ ಸರ್ಕಾರ ಬರಬೇಕಿದೆ. ಭಾರತದಲ್ಲಿ ಚುನಾವಣಾ ಆಯೋಗದ ಪ್ರಶಂಸೆಗೆ ಪಾತ್ರವಾದ ದೇಶದ ಏಕೈಕ ಪಕ್ಷ ಮತ್ತು ನೈಜ ಜಾತ್ಯತೀತ ನಿಲುವನ್ನು ಎತ್ತಿ ಹಿಡಿದ ಪಕ್ಷ ಸಿಪಿಐ (ಎಂ) ಎಂದು ಹೇಳಿದರು.

ಕೇರಳದ ಶಾಸಕ ಶಂಷೀರ್ ಮಾತನಾಡಿ, ಕೋಮುವಾದಿಗಳ ಪರ ಕಾಂಗ್ರೆಸ್ ಪಕ್ಷದ ಮೃಧು ಧೋರಣೆ ಅನುಸರಿಸುತ್ತಿರುವುದು ಆ ಪಕ್ಷದ ಇಬ್ಬಗೆಯ ನೀತಿಗೆ ಸಾಕ್ಷಿಯಾಗಿದೆ. ಅಧಿಕಾರದ ವ್ಯಾಮೋಹದಿಂದ ಅಕ್ರಮಗಳ ವಿರುದ್ಧ ಮಾತನಾಡದೆ ಮೌನ ವಹಿಸಿರುವ ಕಾಂಗ್ರೆಸ್, ತಮ್ಮ ಜಾತ್ಯತೀತ ನಿಲುವಿನ ಗತವೈಭವವನ್ನು ಮರಳಿ ಪಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ದುರ್ಗಾಪ್ರಸಾದ್, ಸಮ್ಮೇಳನದ ಸ್ವಾಗತ ಸಮಿತಿಯ ಸದಸ್ಯ ಐ.ಆರ್. ಪ್ರಮೋದ್, ಪ್ರದಾನ ಕಾರ್ಯದರ್ಶಿ ಎನ್.ಡಿ.ಕುಟ್ಟಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್, ಕಾರ್ಮಿಕ ಮುಖಂಡ ಮಹದೇವ್, ಆದಿವಾಸಿ ಮಂಚ್ ಜಿಲ್ಲಾ ಸಮಿತಿ ಸದಸ್ಯ ಗಣೇಶ್, ಪಕ್ಷದ ಸ್ಥಾನೀಯ ಸಮಿತಿಯ ಕಾರ್ಯದರ್ಶಿ ಬೈಜು, ಎನ್.ಕೆ. ಅನಿಲ್, ಕೇರಳದ ಇರಿಟ್ಟಿಯ ಪಕ್ಷದ ಪ್ರಮುಖರಾದ ಶ್ರೀಧರನ್ ಭಾಗವಹಿಸಿದ್ದರು. ಎಸ್.ಮಹೇಶ್ ಕ್ರಾಂತಿ ಗೀತೆ ಹಾಡಿದರು.

* * 

ಕೋಮುವಾದಿಗಳ ಪರ ಕಾಂಗ್ರೆಸ್ ಪಕ್ಷ ಮೃಧು ಧೋರಣೆ ಅನುಸರಿಸುತ್ತಿರುವುದು ಆ ಪಕ್ಷದ ಇಬ್ಬಗೆಯ ನೀತಿಗೆ ಸಾಕ್ಷಿ

ಶಂಷೀರ್, ಕೇರಳ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry