ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿರಿಧಾನ್ಯ ರಾಶಿಯ ಕಣ’ವಾದ ರೈತ ಸಮಾವೇಶ

Last Updated 29 ನವೆಂಬರ್ 2017, 5:06 IST
ಅಕ್ಷರ ಗಾತ್ರ

ಮಳವಳ್ಳಿ: ‘ಪ್ರಜಾವಾಣಿ’ ವತಿಯಿಂದ ಪಟ್ಟಣದ ರೈತ ಸಭಾಂಗಣದಲ್ಲಿ ಮಂಗಳವಾರ ನಡೆದ ರೈತ ಸಮಾವೇಶದ ವೇದಿಕೆ ‘ಸಿರಿಧಾನ್ಯ ರಾಶಿಯ ಕಣ’ದಂತಾಗಿತ್ತು. ವೇದಿಕೆಯ ಮೇಲಿದ್ದ ನವಣೆ ರಾಶಿ ರೈತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಪ್ರಗತಿಪರ ರೈತರಾದ ನಾಗರಾಜಮೂರ್ತಿ ಹಾಗೂ ನಾಗರಾಜು ನವಣೆ ರಾಶಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಂದಿದ್ದ 500ಕ್ಕೂ ಹೆಚ್ಚು ರೈತರು ಪರ್ಯಾಯ ಬೆಳೆಗಳ ಕುರಿತು ಮಾಹಿತಿ ಪಡೆದಿರು. ಸಭಾಂಗಣದ ಹೊರಗೆ ಕೃಷಿ ಇಲಾಖೆಯ ವತಿಯಿಂದ ಹನಿ ನೀರಾವರಿ ಕುರಿತ ಮಾದರಿ ನಿರ್ಮಿಸಲಾಗಿತ್ತು. ಅಧಿಕಾರಿಗಳು ಸಮಗ್ರ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು. ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಸಿರಿಧಾನ್ಯಗಳ ಬಗ್ಗೆ ಉಪನ್ಯಾಸ ನೀಡಿದ ಮಂಡ್ಯ ವಿ.ಸಿ.ಫಾರಂ ಬೇಸಾಯ ವಿಜ್ಞಾನದ ತಜ್ಞರಾದ ಡಾ.ಕೆ.ಎಸ್‌.ಶುಭಶ್ರೀ ‘ಹವಾಮಾನ ವೈಪರೀತ್ಯದಿಂದಾಗಿ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಮುಂಗಾರು ಮಳೆ ಅಕಾಲಿಕವಾಗಿ ಸುರಿಯುತ್ತಿದೆ. ಹೀಗಾಗಿ ರೈತರು ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಪರ್ಯಾಯ ಬೆಳೆಯತ್ತ ಗಮನ ಹರಿಸಬೇಕು. ಕಡಿಮೆ ನೀರಿನಿಂದ ಬೆಳೆಯುವ ಹಾಗೂ ಅಲ್ಪಾವಧಿ ಬೆಳೆಗಳಾದ ಸಿರಿಧಾನ್ಯಗಳಿಗೆ ಆದ್ಯತೆ ನೀಡಬೇಕು. ರಾಸಾಯನಿಕ ಗೊಬ್ಬರ ಬಳಸದೆ ಸಿರಿಧಾನ್ಯ ಬೆಳೆಯಬಹುದು. ನಾರಿನ ಅಂಶ, ಖನಿಜ, ಕಬ್ಬಿಣಾಂಶವುಳ್ಳ ಸಿರಿಧಾನ್ಯ ಸಂಜೀವಿನಿಯಾಗಿದೆ’ ಎಂದು ಹೇಳಿದರು.

ಟಿಪಿಎಂಎಲ್‌ ಸಂಸ್ಥೆಯ ಸಿಇಒ ಕಾರ್ತಿಕ್‌ ಬಾಲಕೃಷ್ಣನ್‌ ಮಾತನಾಡಿ ‘ಪ್ರಜಾವಾಣಿ ಪತ್ರಿಕೆ ಕೃಷಿ ಕ್ಷೇತ್ರದ ಧ್ವನಿಯಾಗಿದೆ. ಮೊಟ್ಟಮೊದಲ ಬಾರಿಗೆ ಕೃಷಿಗಾಗಿ ಪುರವಣಿಯನ್ನು ಮೀಸಲಿಟ್ಟ ಪತ್ರಿಕೆ ಪ್ರಜಾವಾಣಿ. ಕೃಷಿ ಮೇಳ ನಡೆದಾಗ ಪುಟಪೂರ್ತಿ ಸುದ್ದಿ ನೀಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಓದುಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಧುನಿಕ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಕೃಷಿ ಸಮಾವೇಶ ಆಯೋಜನೆ ಮಾಡುತ್ತಿದ್ದೇವೆ. ಅಭ್ಯುದಯ ಪತ್ರಿಕೋದ್ಯಮಕ್ಕೆ ಇದು ಮಾದರಿಯಾಗಿದೆ’ ಎಂದು ವಿವರಿಸಿದರು.

‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ದೊಡ್ಡವರ ಮಾತು ದೇಶ, ಭಾಷೆಯನ್ನು ಮೀರಿದೆ. ದೇಶ ಎಷ್ಟೇ ಅಭಿವೃದ್ಧಿ ಹೊಂದಿದರೂ ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಬಾರದು. ಕಾಲ ಬದಲಾದಂತೆ ರೈತರು ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಕೈಗೊಳ್ಳಬೇಕು. ರಾಸಾಯನಿಕ ಬಳಸದೆ ಸಾವಯವ ಕೃಷಿಯತ್ತ ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿದರು. ‘ಪ್ರಜಾವಾಣಿ’ ವಿತರಕರಾದ ಎ.ಎಸ್‌.ಪ್ರಭಾಕರ್‌, ಅಣ್ಣೂರು ಲಕ್ಷ್ಮಣ್‌ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಶ್ವಾಸ್‌, ಉಪಾಧ್ಯಕ್ಷ ಮಾದು, ತಹಶೀಲ್ದಾರ್‌ ದಿನೇಶಚಂದ್ರ, ‘ಪ್ರಜಾವಾಣಿ’ ಪ್ರಸರಣ ವಿಭಾಗ ಪ್ರಧಾನ ವ್ಯವಸ್ಥಾಪದ ಆಲಿವರ್‌ ಲೆಸ್ಲಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಜಗನ್ನಾಥ್‌ ಜೋಶಿ, ವ್ಯವಸ್ಥಾಪಕ ಟಿ.ಎನ್‌.ಬಸವರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT