7

ಪಪ್ಪಾಯ ಕೃಷಿ: ರೈತನಿಗೆ ಖುಷಿ

Published:
Updated:
ಪಪ್ಪಾಯ ಕೃಷಿ: ರೈತನಿಗೆ ಖುಷಿ

ಲಕ್ಷ್ಮೇಶ್ವರ: ಇಲ್ಲಿನ ಬಜಾರದಲ್ಲಿ ಮಸಾಲೆ ಪದಾರ್ಥಗಳ ವ್ಯಾಪಾರ ಮಾಡುವ ದಾವಲ್‌ಸಾಬ್‌ ಅಲ್ಲಾಸಾಬ್‌ ಮಾಗಡಿ ಸ್ವತಃ ತೋಟ ಮಾಡಿ ಪಪ್ಪಾಯ ಮತ್ತು ದಾಳಿಂಬೆ ಬೆಳೆದು ಯಶಸ್ಸು ಕಂಡಿದ್ದಾರೆ.

ದಾವಲ್‌ಸಾಬ್‌ರ ನೀರಾವರಿ ಆಶ್ರಿತ ಆರು ಎಕರೆ ತೋಟದಲ್ಲಿ 2,000 ಪಪ್ಪಾಯ ಗಿಡಗಳು, 1,685 ದಾಳಿಂಬೆ, 400 ಲಿಂಬು, 100 ಕರಿಬೇವು ಮತ್ತು 200 ನುಗ್ಗೆ ಗಿಡಗಳಿವೆ. ಸದ್ಯ ಇವು ಹಸಿರಿನಿಂದ ಕಂಗೊಳಿಸುತ್ತಿದ್ದು ಪಪ್ಪಾಯ ಗಿಡಗಳಲ್ಲಿ ಕಾಯಿಗಳು ತುಂಬಿಕೊಂಡಿವೆ.

ಕಳೆದ ವರ್ಷ ಜೂನ್‌ನಲ್ಲಿ ಮಹಾರಾಷ್ಟ್ರದ ಜಲಗಾಂವ್‌ನ ಜೈನ್‌ ಕಂಪೆನಿಯಿಂದ ದಾಳಿಂಬೆ ಸಸಿಗಳನ್ನು ಪ್ರತಿ ಸಸಿಗೆ ₹ 32 ನೀಡಿ ಮತ್ತು ಬೆಂಗಳೂರಿನಿಂದ ರೆಡ್‌ಲೆಸ್‌–786 ಪಪ್ಪಾಯ ಸಸಿಗಳನ್ನು ಪ್ರತಿ ಸಸಿಗೆ ₹ 11 ನೀಡಿ ಖರೀದಿಸಿದ್ದರು. ಗಿಡದಿಂದ ಗಿಡಕ್ಕೆ 10 ಅಡಿ ಅಂತರದಲ್ಲಿ ಪಪ್ಪಾಯ ಹಾಗೂ 5 ಅಡಿ ಅಂತರದಲ್ಲಿ ದಾಳಿಂಬೆ ಸಸಿಗಳನ್ನು ನಾಟಿ ಮಾಡಿದ್ದರು. ಕೇವಲ ಹನ್ನೊಂದು ತಿಂಗಳಿಗೆ ದಾಳಿಂಬೆ ಗಿಡಗಳು ಫಲ ನೀಡಿದ್ದು ದಾವಲ್‌ಸಾಬ್‌ರ ಹುರುಪು ಹೆಚ್ಚಿಸಿದೆ. ಪಪ್ಪಾಯ ಕೂಡ ಕೊಯ್ಲಿಗೆ ಬಂದಿದೆ.

ಅಂತರ ಬೆಳೆಯಾಗಿ ಲಿಂಬೆ ಮತ್ತು ಕರಿಬೇವು ಹಾಗೂ ತೋಟದ ಬದುವುಗುಂಟ ನುಗ್ಗೆಕಾಯಿ ಗಿಡಗಳನ್ನು ವೈಜ್ಞಾನಿಕವಾಗಿ ಬೆಳೆಯುತ್ತಿದ್ದು, ಅವುಗಳೂ ಸಹ ಫಲ ನೀಡುವ ಹಂತದಲ್ಲಿವೆ. ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಈ ರೈತರಿಗೆ ಮಾರ್ಗದರ್ಶನ ಮಾಡಿದ್ದು ಇಲಾಖೆಯಿಂದ ರಿಯಾಯ್ತಿಯಲ್ಲಿ ಸ್ಪಿಂಕ್ಲರ್‌

ಸೆಟ್‌ ಮತ್ತು ಸಸಿಗಳನ್ನು ತರಿಸಿಕೊಟ್ಟು ತಾಂತ್ರಿಕ ಸಲಹೆ ನೀಡಿದ್ದಾರೆ. ಹೀಗಾಗಿ, ರೈತ ತೋಟಗಾರಿಕೆಯಿಂದ ಉತ್ತಮ ಆದಾಯ ಗಳಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಖರ್ಚು: ಸಸಿಗಳನ್ನು ನಾಟಿ ಮಾಡಿ ಅವು ಬೆಳೆಯುವವರೆಗೆ ಆಳುಕಾಳು, ಗೊಬ್ಬರ, ಕ್ರಿಮಿನಾಶಕ ಸೇರಿ ₹ 5 ಲಕ್ಷ ಖರ್ಚಾಗಿದೆ. ಈ ವರ್ಷ ದಾಳಿಂಬೆಯಿಂದ ₹ 2.50 ಲಕ್ಷ ಆದಾಯ ಬಂದಿದೆ. ಕಳೆದ ಆರು ತಿಂಗಳಿಂದ ಪ್ರತಿ ತಿಂಗಳಿಗೆ ₹ 20 ಸಾವಿರ ಪಪ್ಪಾಯ ಮಾರಾಟದಿಂದ ಬರುತ್ತಿದೆ. ಪ್ರತಿ 15 ದಿನಕ್ಕೊಮ್ಮೆ 3 ಟನ್‌ನಂತೆ ತಿಂಗಳಲ್ಲಿ ಎರಡು ಬಾರಿ ಪಪ್ಪಾಯ ಕೊಯ್ಲಿಗೆ ಬರುತ್ತದೆ. ‘ಸದ್ಯ ದರ ಕಡಿಮೆ ಇದೆ. ಹೀಗಾಗಿ, ಆದಾಯ ಕಡಿಮೆಯಾಗಿದೆ’ ಎನ್ನುತ್ತಾರೆ ದಾವಲ್‌ಸಾಬ್‌.

ವ್ಯಾಪಾರಸ್ಥರೇ ನೇರವಾಗಿ ತೋಟಕ್ಕೆ ಬಂದು ಹಣ್ಣುಗಳನ್ನು ಖರೀದಿ ಮಾಡುವುದರಿಂದ ಇವರಿಗೆ ಮಾರುಕಟ್ಟೆ ಸಮಸ್ಯೆಎದುರಾಗಿಲ್ಲ. ಹಾವೇರಿ, ಸವಣೂರ, ಬೆಳಗಾವಿ, ಸವದತ್ತಿ ದಾವಣಗೆರೆ, ಧಾರವಾಡ ಜಿಲ್ಲೆ ಗಳಿಂದ ವ್ಯಾಪಾರಸ್ಥರು ಇಲ್ಲಿಗೆ ಬಂದು ಹಣ್ಣು ಖರೀದಿಸುತ್ತಾರೆ. ‘ತ್ವಾಟ ನನ್ನ ಕೈ ಹಿಡದೇತ್ರಿ. ವ್ಯಾಪಾರ ಮಾಡದಕಿಂತ ಇಲ್ಲಿದುಡ್ಯದ ಖುಷ ಕೊಡತೈತಿ’ ಎಂದು ದಾವಲ್‌ಸಾಬ್ ಸಂತೋಷದಿಂದ ಹೇಳಿದರು.

ಆರು ಎಕರೆ ತೋಟದ ಜಮೀನಿನಲ್ಲಿ ಪಪ್ಪಾಯ ಕೃಷಿ

ದಾಳಿಂಬೆಯಿಂದ ಪ್ರಸಕ್ತ ವರ್ಷ ₹ 2.05 ಲಕ್ಷ ವರಮಾನ

ಪ್ರತಿ ತಿಂಗಳು ಪಪ್ಪಾಯದಿಂದ ₹ 20 ಸಾವಿರ ಆದಾಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry