7

ರಾಜ್ಯದಲ್ಲಿ ಕುಮಾರ ಪರ್ವ ಆರಂಭ

Published:
Updated:
ರಾಜ್ಯದಲ್ಲಿ ಕುಮಾರ ಪರ್ವ ಆರಂಭ

ಮದ್ದೂರು: ‘ರಾಜ್ಯದಲ್ಲಿ ಕುಮಾರಪರ್ವ ಆರಂಭಗೊಂಡಿದ್ದು, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. ಪಟ್ಟಣದಲ್ಲಿ ಗುರುವಾರ ‘ಯುವಕರ ನಡಿಗೆ ಕುಮಾರಣ್ಣನ ಕಡೆಗೆ’ – ಜೆಡಿಎಸ್‌ ಯುವ ಸಮಾವೇಶ ಉದ್ಘಾಟಿಸಿ ಅವರ ಮಾತನಾಡಿದರು.

ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಕಾಂಗ್ರೆಸ್‌ ವಿಫಲಗೊಂಡಿದ್ದು, ರಾಜ್ಯದ ಜನರಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್‌ ಕಡೆಗೆ ಮುಖ ಮಾಡಿದ್ದಾರೆ. ಬಯಲು ಸೀಮೆ ಅಲ್ಲದೇ ಉತ್ತರ ಕರ್ನಾಟಕ ಮಧ್ಯ ಕರ್ನಾಟಕದಲ್ಲೂ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

‘ಯಡಿಯೂರಪ್ಪನವರದು ಪರಿವರ್ತನಾ ಯಾತ್ರೆಯೋ ತೀರ್ಥಯಾತ್ರೆಯೋ ಗೊತ್ತಾಗುತ್ತಿಲ್ಲ. ಮೂರು ದಿನ ಯಾತ್ರೆಯಲ್ಲಿ ಪಾಲ್ಗೊಂಡರೆ, ಮೂರು ದಿನ ರಜೆ ಹಾಕುತ್ತಾರೆ. ಇಂತಹ ನಾಯಕರಿಂದ ರಾಜ್ಯದ ಹಿತವನ್ನು ಬಯಸಲು ಸಾಧ್ಯವೇ’ ಎಂದು ಟೀಕೆ ಮಾಡಿದರು.

‘ಕಾವೇರಿ ವಿಚಾರದಲ್ಲಿ ಸುಗ್ರೀವಾಜ್ಞೆ ಜಾರಿಗೆ ತರುವ ಮೂಲಕ ದಿಟ್ಟತನ ಪ್ರದರ್ಶಿಸಿದ ನನ್ನ ತಂದೆ ಬಂಗಾರಪ್ಪ ಅವರನ್ನು ಮಂಡ್ಯ ಜಿಲ್ಲೆಯ ಜನತೆ ಮರೆತಿಲ್ಲ. ಅದೇ ಪ್ರೀತಿಯನ್ನು ಜನರು ನನ್ನ ಮೇಲೂ ಇರಿಸಿರುವುದು ಸಂತಸ ತಂದಿದೆ’ ಎಂದರು.

‘ನಾಗಮಂಗಲ ಕ್ಷೇತ್ರದಲ್ಲಿ ನಮ್ಮಿಂದ ಅಧಿಕಾರವನ್ನು ಉಂಡು ಬೆಳೆದವರು ಇಂದು ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೊರ ಹೋಗಿದ್ದಾರೆ. ಅಂತಹ ಸಂಕಷ್ಟ ಸಂದರ್ಭದಲ್ಲಿ ಶಾಸಕರಾದ ಅಪ್ಪಾಜಿಗೌಡ, ಶ್ರೀಕಂಠೇಗೌಡ, ಮಾಜಿ ಶಾಸಕರಾದ ಸುರೇಶಗೌಡ, ಶಿವರಾಮೇಗೌಡರು ಬೆನ್ನೆಲುಬಾಗಿ ನಿಂತರು. ನಾಗಮಂಗಲದಲ್ಲಿ ಜೆಡಿಎಸ್ ಪಕ್ಷ ಇನ್ನಷ್ಟು ಶಕ್ತಿಶಾಲಿಯಾಗಿದೆ. ಆ ಕ್ಷೇತ್ರದ ಜನತೆ ಬೆನ್ನಿಗೆ ಚೂರಿ ಹಾಕಿದವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ’ ಎಂದರು.

ಶಾಸಕ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್‌ ಸದಸ್ಯರಾದ ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಅನ್ನದಾನಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಖಾನ್ ಮಾತನಾಡಿದರು.

ರಾಜ್ಯ ಯುವ ಉಪಾಧ್ಯಕ್ಷ ಬೆಳ್ಳಿ ಲೋಕೇಶ್‌ , ಜಿಲ್ಲಾ ಘಟಕದ ಅಧ್ಯಕ್ಷ ಶಶಿಧರ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಟಿ.ಶಂಕರ್, ಜೆಡಿಎಸ್ ಜಿಲ್ಲಾ ಘಟಕದಧ್ಯಕ್ಷ ಡಿ.ರಮೇಶ್, ಜಿ.ಪಂ ಸದಸ್ಯರಾದ ಬೋರಯ್ಯ, ಮರಿಹೆಗೆಡೆ, ಜಯಲಕ್ಷ್ಮಿ, ಲತಾ ಬಸವರಾಜು, ಅಶೋಕ್‌ ಜಯರಾಂ, ಕೀಲಾರ ರಾಧಾಕೃಷ್ಣ, ಎ.ಬಿ.ಬಿಳಿಗೌಡ, ಪದ್ಮ ಹರೀಶ್, ಚಿಕ್ಕಂಕನಹಳ್ಳಿ ಮನು, ಹನುಮಂತೇಗೌಡ ಇದ್ದರು.

* * 

ನಿಖಿಲ್‌ ಕುಮಾರಸ್ವಾಮಿ ನನ್ನ ಪ್ರೀತಿಯ ಸಹೋದರ. ಅವನು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಚೆನ್ನಾಗಿಯೇ ಇದ್ದೇವೆ

ಪ್ರಜ್ವಲ್‌ ರೇವಣ್ಣ

ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry