6

ರಾಜ್ಯದಲ್ಲಿ ಏಜೆಂಟರ ಸರ್ಕಾರ

Published:
Updated:

ಮುದ್ದೇಬಿಹಾಳ: ‘ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಅಬಕಾರಿ, ಸಕ್ಕರೆ ಲಾಬಿ ಮೇಲೆ ನಡೆಸುತ್ತಿದೆ, ಇದು ಏಜೆಂಟರ ಸರ್ಕಾರ. ಈ ಸರ್ಕಾರಕ್ಕೆ ಕೇವಲ ನಾಲ್ಕು ತಿಂಗಳ ಅವಕಾಶ ಇದ್ದು, ಮುಂದಿನ ಬಾರಿ ನಮಗೆ ಅವಕಾಶ ನೀಡುವಂತೆ’ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಮನವಿ ಮಾಡಿದರು.

ಪಟ್ಟಣದ ವಿಬಿಸಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಬಿಜೆಪಿ ಪರಿವರ್ತನಾ ಯಾತ್ರೆ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಕ್ಕಿ, ಗೋದಿಗೆ ಹಣ ನೀಡ್ತಿರೋದು ಪ್ರಧಾನಿ ನರೇಂದ್ರ ಮೋದಿ, ಆದರೆ ಫೋಟೊ ಮಾತ್ರ ಸಿದ್ಧರಾಮಯ್ಯನದು’ ಎಂದು ಕಿಡಿಕಾರಿದರು.

‘ಪ್ರಜಾಸತ್ತೆಯಲ್ಲಿ ಮಾಲೀಕರು ನೀವು. ಜನಹಿತ ಮರೆತಿರುವ ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ, ಅಧಿಕಾರ ಮುಗಿಯುತ್ತ ಬಂದಿದ್ದರೂ ಇನ್ನೂ ಅನೇಕ ಭರವಸೆಗಳ ಭಾಗ್ಯವನ್ನೇ ಮಾತನಾಡುತ್ತಿದೆ. ಸಿಒಡಿ, ಎಸಿಬಿ ಯಿಂದ ಆರೋಪಮುಕ್ತ ಎಂದು ಕರೆಸಿಕೊಳ್ಳುತ್ತಿರುವ ಎಲ್ಲರನ್ನೂ ಮರಳಿ ತನಿಖೆಗೆ ಒಳಪಡಿಸಲಾಗುವುದು’ ಎಂದರು.

‘ಮುದ್ದೇಬಿಹಾಳದಲ್ಲಿ ಯಾವುದೇ ಕಾಮಗಾರಿ ಮಾಡದ ಕಾಂಗ್ರೆಸ್ ಸರ್ಕಾರ, ನಾನು ಅಧಿಕಾರದಲ್ಲಿದ್ದಾಗ ಮಾಡಿದ ಯೋಜನೆಗಳನ್ನೇ ಅನುಷ್ಠಾನಕ್ಕೆ ತರುತ್ತಿದೆ. ನೀರಾವರಿ ಸಚಿವ ಎಂ.ಬಿ.ಪಾಟೀಲ ₹ 50 ಸಾವಿರ ಕೋಟಿ ಖರ್ಚು ಮಾಡಬೇಕಿತ್ತು, ಮಾಡಿದ್ದು ಕೇವಲ ₹ 6,400 ಕೋಟಿ. ಇವರ ಸಾಧನೆ ಶೂನ್ಯ. ಮಾತು, ಮಾತಿಗೆ ದಲಿತರ ಪರ ಕಾಳಜಿ ತೋರುವ ಕಾಂಗ್ರೆಸ್ ಡಾ.ಅಂಬೇಡ್ಕರ್ ಅವರ ಶವ ಶಂಸ್ಕಾರಕ್ಕೆ ರಾಜ್‌ಘಾಟ್‌ನಲ್ಲಿ ಸ್ಥಳ ನೀಡದೇ ಅವಮಾನ ಮಾಡಿತು. ಅವರಿಗೆ ದಲಿತರು ಮತ ನೀಡಬೇಡಿ’ ಎಂದರು.

‘ಈ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ನಾನಾಗಲಿ, ಅಮೀತ ಷಾ ಮಾಡುವುದಿಲ್ಲ. ಅದನ್ನು ಎರಡು ಬಾರಿ ಸಮೀಕ್ಷೆ ನಡೆಸಿ ಇಲ್ಲಿಯ ಜನರ ಅಭಿಪ್ರಾಯವನ್ನೇ ಪರಿಗಣಿಸಲಾಗುವುದು’ ಎಂದು ಹೇಳಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕ ಅರವಿಂದ ಲಿಂಬಾವಳಿ ಮಾತನಾಡಿದರು. ಆರ್.ಎಸ್.ಪಾಟೀಲ ಕೂಚಬಾಳ ಸ್ವಾಗತಿಸಿದರು. ಶಂಕರಗೌಡ ಹಿರೇಗೌಡರ ನಿರೂಪಿಸಿದರು. ಮಂಗಳಾದೇವಿ ಬಿರಾದಾರ, ಎಂ.ಡಿ.ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry