ಶುಕ್ರವಾರ, ಮಾರ್ಚ್ 5, 2021
26 °C

ಚಿತ್ರ ಸೌಂದರ್ಯಕ್ಕೆ ಮರುಳಾಗಿ...

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಚಿತ್ರ ಸೌಂದರ್ಯಕ್ಕೆ ಮರುಳಾಗಿ...

ಕಣ್ಣು ಕಾಣುವ ಸುಂದರ ದೃಶ್ಯಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಬಂಧಿಯಾಗಿಸುವುದು ಇಂದಿನ ಅನೇಕರಿಗೆ ಗೀಳು. ದಾರಿಗುಂಟ ಹಿಂಬಾಲಿಸುವ ಕ್ಯಾಮೆರಾಗಳು ಪಯಣದ ನೆನಪುಗಳನ್ನು ಬೊಗಸೆಯಲ್ಲಿ ತುಂಬುಕೊಳ್ಳುತ್ತಾ ಸಾಗುತ್ತವೆ. ಈ ಪಯಣದ ಹಾದಿಯಲ್ಲಿ ನುಸುಳಿ ಜನಪ್ರಿಯತೆ ಗಳಿಸುತ್ತಿರುವ ಛಾಯಾಗ್ರಹಣದ ಪ್ರಕಾರಗಳಲ್ಲಿ ಆಹಾರ ಛಾಯಾಗ್ರಹಣವೂ (ಫುಡ್‌ ಫೋಟೊಗ್ರಫಿ) ಒಂದು.

ಬಗೆಬಗೆಯ ಆಹಾರದ ರುಚಿ ಸವಿಯುವುದು ಎಲ್ಲರಿಗೂ ಇಷ್ಟ. ಇದೇ ಕಾರಣಕ್ಕೆ ದಿನೇದಿನೇ ಹೋಟೆಲ್‌ಗಳ ಸಂಖ್ಯೆ ಏರುತ್ತಲೇ ಇದೆ, ಜೊತೆಗೆ ಸ್ಪರ್ಧೆಯೂ. ಆಹಾರೋದ್ಯಮದಲ್ಲಿರುವವರು ಜನರನ್ನು ಸೆಳೆಯಲು ನಾನಾ ರೀತಿಯ ತಂತ್ರವನ್ನು ಬಳಸುತ್ತಿದ್ದಾರೆ. ಅದರಲ್ಲಿ ಆಹಾರ ಛಾಯಾಗ್ರಹಣ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇಂದಿನ ದಿನಗಳಲ್ಲಿ ಆಹಾರಪ್ರಿಯರನ್ನು ಆಕರ್ಷಿಸಲು ಬಳಸುವ ಮೊದಲ ಅಸ್ತ್ರವೇ ಛಾಯಾಗ್ರಹಣ.

ಆಕರ್ಷಿಸುವ ಚಿತ್ರಭಿತ್ತಿಯಲ್ಲಿ ಹೊಸ ರೆಸಿಪಿಗಳನ್ನು ಕಣ್ಸೆಳೆವಂತೆ ಪ್ರದರ್ಶಿಸುವುದು ಆಹಾರ ಛಾಯಾಗ್ರಹಣದ ಉದ್ದೇಶ. ಛಾಯಾಚಿತ್ರ ನೋಡುತ್ತಿದ್ದಂತೆ ಬಾಯಲ್ಲಿ ನೀರೂರಬೇಕು. ನಾಲಿಗೆ ರುಚಿ ನೋಡುವುದಕ್ಕೂ ಮೊದಲು ಆಹಾರ ಕಣ್ಣಿಗೆ ರುಚಿಸಬೇಕು. ಇದು ಎಲ್ಲಾ ಛಾಯಾಗ್ರಾಹಕರು ಅನುಸರಿಸುತ್ತಿರುವ ನಿಯಮ. ಚಿತ್ರ ಕಣ್ಣಿಗೆ ರುಚಿಸಿದರೆ ನಾಲಿಗೆ ರುಚಿ ನೋಡುವಂತೆ ಪ್ರೇರೇಪಿಸುತ್ತದೆ. ಅಲ್ಲಿಗೆ ಆಹಾರೋದ್ಯಮದ ಉದ್ದೇಶ ನೆರವೇರಿದಂತೆ.

‘ಫ್ಯಾಷನ್‌ ಫೋಟೊಗ್ರಫಿಗೆ ದಕ್ಕುತ್ತಿರುವಷ್ಟೇ ಆದ್ಯತೆ ಫುಡ್ ಫೋಟೊಗ್ರಫಿಗೂ ಸಿಗುತ್ತಿದೆ. ಇಂದಿನವರು ಆಹಾರಪ್ರಿಯರು. ವಿಭಿನ್ನ ತಿಂಡಿ ಸವಿಯಲು ಊರೂರು ಅಲೆಯುವ ಮಂದಿಯೂ ನಮ್ಮ ಮಧ್ಯೆ ಇದ್ದಾರೆ. ಹೀಗಾಗಿ ಪ್ರಪಂಚದ ಮೂಲೆ ಮೂಲೆಯಲ್ಲಿರುವ ಜನರನ್ನು ತಲುಪುವುದು ಚಿತ್ರಗಳ ಮೂಲಕವೇ. ಚಿತ್ರ ಕಲಾತ್ಮಕವಾಗಿರಬೇಕು ಎಂಬುದು ಇಂದಿನ ಆದ್ಯತೆ. ಹೋಟೆಲ್‌ ಅಥವಾ ರೆಸ್ಟೊರೆಂಟ್‌ಗಳು ತಾವು ತಯಾರಿಸುವ ತಿಂಡಿಗಳನ್ನು ಜನರ ಮುಂದೆ ಹೇಗೆ ಪ್ರಸ್ತುತಪಡಿಸುತ್ತಾರೆ ಎನ್ನುವುದೂ ಬಹುಮುಖ್ಯ’ ಎಂದು ಮಾಹಿತಿ ನೀಡುತ್ತಾರೆ ಐ.ಟಿ. ಕಂಪೆನಿಯೊಂದರಲ್ಲಿ ವೆಬ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿರುವ, ನಾಲ್ಕು ವರ್ಷದಿಂದ ಛಾಯಾಗ್ರಹಣವನ್ನು ಹವ್ಯಾಸವನ್ನಾಗಿಯೂ ರೂಢಿಸಿಕೊಂಡಿರುವ ನಿಕೇಶ್‌ ಪೊನ್ನನ್‌.

‘ಫುಡ್‌ ಛಾಯಾಗ್ರಹಣದಷ್ಟೇ ಫುಡ್‌ ಸ್ಟೈಲಿಸ್ಟ್‌ಗಳಿಗೂ ಇಲ್ಲಿ ಬಹುಬೇಡಿಕೆ. ಅತ್ಯುತ್ತಮ ಆಹಾರ ವಿನ್ಯಾಸಕರ (ಫುಡ್ ಸ್ಟೈಲಿಸ್ಟ್‌) ಸೇವೆ ಬಳಸಿಕೊಳ್ಳುವ (ಹೈಯರ್‌) ಪ್ರವೃತ್ತಿಯೂ ಹೆಚ್ಚುತ್ತಿದೆ. ಕೆಲವರು ಎರಡೂ ಕಲೆಗಳನ್ನು (ಛಾಯಾಗ್ರಹಣ ಹಾಗೂ ಆಹಾರ ವಿನ್ಯಾಸ) ಪಳಗಿಸಿಕೊಂಡಿರುತ್ತಾರೆ. ಅಂಥವರಿಗೆ ದುಪ್ಪಟ್ಟು ಬೇಡಿಕೆ ಇದೆ’ ಎನ್ನುವುದು ಅವರ ಅನುಭವ.

‘ಆಹಾರ ವಿನ್ಯಾಸ ತುಂಬಾ ಕಷ್ಟದ ಕೆಲಸ. ಚಿತ್ರ ಆ ಉತ್ಪನ್ನದ ಕಥೆ ಹೇಳುವಂತಿರಬೇಕು. ಹೀಗಾಗಿ ರೆಸಿಪಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಅವುಗಳಿಗೆ ಅಗತ್ಯವಾದ ಪದಾರ್ಥಗಳ ಅರಿವೂ ಇರಬೇಕು. ಅವುಗಳನ್ನೇ ಸುಂದರವಾಗಿ ಕಲಾತ್ಮಕವಾಗಿ ಜೋಡಿಸಿ ಚಿತ್ರಕ್ಕೆ ಅರ್ಥ ಬರುವಂತೆ ಮಾಡಬೇಕು’ ಎಂದು ಈ ಕ್ಷೇತ್ರದ ಸವಾಲುಗಳನ್ನು ವಿವರಿಸುತ್ತಾರೆ ನಿಕೇಶ್‌.

ಮೊದಲಿಗಿಂತಲೂ ಈಗ ಆಹಾರ ಆಯ್ಕೆ ಹೆಚ್ಚಿದೆ. ವಿದೇಶಿ ಆಹಾರಗಳಿಗೂ ಇಲ್ಲಿ ಬೇಡಿಕೆ ಕುದುರುತ್ತಿದೆ. ಕಾಂಟಿನೆಂಟಲ್‌, ಮೆಕ್ಸಿಕನ್‌, ಏಷ್ಯನ್‌ ಹೀಗೆ ಬಗೆಬಗೆಯ ಹೆಸರಿನಲ್ಲಿ ಸಿಗುತ್ತಿರುವ ಖಾದ್ಯಗಳ ಆಯ್ಕೆಯೂ ಸಾಕಷ್ಟಿದೆ. ಗ್ರಾಹಕರನ್ನು ಸೆಳೆಯಲು ಶೆಫ್‌ಗಳು ಹೊಸರುಚಿಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಹೊಸ ಪ್ರಯೋಗಗಳನ್ನು ಜನರತ್ತ ಕೊಂಡೊಯ್ಯಲು ಮೊದಲ ಕೊಂಡಿಯಾಗುವುದು ಛಾಯಾಚಿತ್ರಗಳೇ ಆಗಿವೆ.

‘ಆನ್‌ಲೈನ್‌ ಮೂಲಕವೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಆಕರ್ಷಕವಾದ, ಕಣ್ಣಿಗೆ ರುಚಿಸುವಂಥ ಚಿತ್ರಗಳು ಬೇಕೇಬೇಕು. ಇದು ಮಾರಾಟದ ತಂತ್ರಗಾರಿಕೆಯೂ ಆಗಿದೆ. ರೆಸ್ಟೊರೆಂಟ್‌ನವರು, ಪಂಚತಾರಾ ಹೋಟೆಲ್‌ಗಳು ಹೆಚ್ಚಾಗಿ ವರ್ಷಕ್ಕೊಮ್ಮೆ ಅಥವಾ ಹೊಸ ರೆಸಿಪಿ ತಯಾರಿಸಿದಾಗ ಫೋಟೊ ಶೂಟ್‌ ಮಾಡಿಸುತ್ತಾರೆ. ಈಗೀಗ ಹೆಚ್ಚು ಬೇಡಿಕೆ ಗಳಿಸುತ್ತಿರುವ ಚಾಟ್‌ ಪಾಯಿಂಟ್‌ಗಳು ಹೊಸ ಹೊಸ ರೆಸಿಪಿಗಳನ್ನು ಮಾಡುತ್ತಿರುತ್ತಾರೆ. ಆಗೆಲ್ಲಾ ಛಾಯಾಗ್ರಾಹಕರಿಗೆ ಕಡ್ಡಾಯವಾಗಿ ಬುಲಾವ್‌ ಇದ್ದೇ ಇರುತ್ತದೆ’ ಎಂದು ವಿವರಿಸುತ್ತಾರೆ ಫಿಗ್ಮೆಂಟ್‌ ಫೊಟೊಆರ್ಟಿಸ್ಟ್‌ನ ದೀಪಾ ಚಿನ್ಮಯ್‌.

ಆಹಾರ ಛಾಯಾಗ್ರಾಹಕರಿಗೆ ಸಂಪಾದನೆಯೂ ಚೆನ್ನಾಗಿದೆ. ಡಿಶ್‌ ಯಾವುದು ಎನ್ನುವುದರ ಮೇಲೆ ಹಣ ನಿರ್ಧಾರವಾಗುತ್ತದೆ. ಅನುಭವಿಗಳಾಗಿದ್ದಲ್ಲಿ ಒಂದು ಚಿತ್ರಕ್ಕೆ ಕನಿಷ್ಠ ₹800ರಿಂದ ಬೆಲೆ ನಿಗದಿಮಾಡುತ್ತಾರೆ.

‘ಚಿತ್ರ ಸೆರೆಹಿಡಿಯುವಾಗ ಆಹಾರ ಫ್ರೆಶ್‌ ಆಗಿರುವುದೂ ಅಷ್ಟೇ ಮುಖ್ಯ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ಅಲ್ಲಿಗೇ ತೆರಳಿ ಚಿತ್ರ ಸೆರೆಹಿಡಿಯುತ್ತೇವೆ. ಸಿಹಿತಿಂಡಿ, ಅಥವಾ ಬೇರೆ ತಿನಿಸುಗಳಾದರೆ ನಮ್ಮ ಸ್ಟುಡಿಯೊಗೇ ತಂದು ಫೋಟೊಶೂಟ್‌ ಮಾಡುವ ಅವಕಾಶವೂ ಇರುತ್ತದೆ’ ಎನ್ನುತ್ತಾರೆ ದೀಪಾ.

ಕೆಲವು ವರ್ಷಗಳ ಹಿಂದೆ ಮನೆಯಿಂದ ಹೊರಗಡೆ ಆಹಾರ ಸೇವಿಸುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸ್ಥಳೀಯ ಆಹಾರವಷ್ಟೇ ಅಲ್ಲ, ದೇಶ ವಿದೇಶದ ವಿಭಿನ್ನ ಆಹಾರಗಳ ರುಚಿ ನೋಡುವ ಅವಕಾಶವೂ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ತಂತ್ರವಾಗಿ ಛಾಯಾಚಿತ್ರಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳುವ ಪರಿಕಲ್ಪನೆ ಬೆಳೆಯಿತು.

‘ಆಹಾರ ಉದ್ಯಮ ಎಗ್ಗಿಲ್ಲದೆ ಬೆಳೆಯುತ್ತಿದೆ. ಮನೆಯಿಂದ ಆಚೆ ತಿನ್ನುವ ಸಂಸ್ಕೃತಿ ಹೆಚ್ಚುತ್ತಿದೆ. ಇಂದಿನ ಜನರು ಫುಡಿಗಳು. ಅಲ್ಲದೆ ತಮ್ಮ ಹಣವನ್ನು ಆಹಾರಕ್ಕಾಗಿ ಖರ್ಚು ಮಾಡಲು ಯೋಚಿಸುವುದಿಲ್ಲ. ಹೀಗಾಗಿ ಆಹಾರ ಪ್ರಿಯ ಮನಸ್ಸುಗಳನ್ನು ಸೆಳೆಯಲು ಆಹಾರ ಛಾಯಾಗ್ರಹಣಕ್ಕೆ ಹೆಚ್ಚಿನ ಬೇಡಿಕೆ ಬಂತು’ ಎನ್ನುತ್ತಾರೆ ಎ.ಕೆ.ರಾಜು.

‘ಆಹಾರೋದ್ಯಮ ಬೆಳೆಯುತ್ತಿರುವುದರಿಂದ ಛಾಯಾಗ್ರಾಹಕರಿಗೂ ಬೇಡಿಕೆ ಹೆಚ್ಚಿದೆ. ಛಾಯಾಗ್ರಹಣದಲ್ಲಿ ಅನುಭವ ಹೆಚ್ಚಿರುವ, ಬೆಳಕಿನ ವಿನ್ಯಾಸದ ಬಗೆಗೆ ಅರಿವಿರುವ ಹಾಗೂ ಕಲಾತ್ಮಕವಾಗಿ ಚಿತ್ರ ಮೂಡಿಸುವ ಚಾಕಚಕ್ಯತೆ ಇರುವವರಿಗೆ ಇಲ್ಲಿ ಬೇಡಿಕೆ ಹೆಚ್ಚು’ ಎನ್ನುತ್ತಾರೆ ಅವರು.

ಒಟ್ಟಿನಲ್ಲಿ ಪ್ರಾಮುಖ್ಯತೆ ಪಡೆಯುತ್ತಿರುವ ಛಾಯಾಗ್ರಹಣದ ಈ ಕವಲುಗಳಲ್ಲಿ ಕೇವಲ ಚಿತ್ರಗಳೇ ಬಾಯಲ್ಲಿ ನೀರೂರಿಸುತ್ತಿವೆ. ವಿಭಿನ್ನ ಆಹಾರಗಳನ್ನು ಕಣ್ತುಂಬಿಕೊಳ್ಳುತ್ತಾ ಮನಸು ಬಯಸುವ ತಿನಿಸು ಸವಿದು ಜಿಹ್ವಾ ಚಾಪಲ್ಯ ತಣಿಸಿಕೊಳ್ಳುವುದೂ ಈಗ ಟ್ರೆಂಡ್‌ ಎನ್ನಿ.

**

ಚಿತ್ರ ನೋಡಿ ಬೇಡಿಕೆ

ಮೊದಲು ಹೋಟೆಲ್‌ಗಳ ಬಗೆಗೆ ಜನರಿಂದ ಜನರಿಗೆ ತಿಳಿಯುತ್ತಿತ್ತು. ಆದರೆ ಈಗ ಎಲ್ಲ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿಯೇ ಲಭ್ಯವಿವೆ. ಜನ ಹೋಟೆಲ್‌ಗೆ ಹೋಗಿ ರುಚಿ ನೋಡುವುದಕ್ಕೂ ಮುಂಚೆ ವೆಬ್‌ಸೈಟ್‌ಗಳಲ್ಲಿ ಹೋಟೆಲ್‌ನ ಒಳಾಂಗಣ ವಿನ್ಯಾಸ ಹೇಗಿದೆ, ಏನೇನು ಆಹಾರ ಸಿಗುತ್ತದೆ, ಹೋಟೆಲ್‌ ಬಗೆಗೆ ಜನರ ಅಭಿಪ್ರಾಯ ಏನು ಎನ್ನುವ ಅಭಿಪ್ರಾಯಗಳನ್ನು ಓದುತ್ತಾರೆ. ಹೀಗಾಗಿ ಹೋಟೆಲ್‌ ಅಥವಾ ರೆಸ್ಟೊರೆಂಟ್‌ಗಳು ಎಂಥ ಆಹಾರವನ್ನು ನೀಡುತ್ತವೆ ಎನ್ನುವ ಕುರಿತಾದ ಸುಂದರ, ಆಕರ್ಷಕ ಚಿತ್ರಗಳನ್ನು ಬಳಸಲೇ ಬೇಕಾಗುತ್ತದೆ. ಚಿತ್ರ ಸೌಂದರ್ಯವನ್ನು ನೋಡಿಯೇ ಅನೇಕರು ಇಂಥದ್ದೇ ತಿಂಡಿ ಬೇಕು ಎಂದು ಆರ್ಡರ್‌ ಮಾಡುತ್ತಾರೆ. ಹೀಗಾಗಿ ಆಹಾರ ಛಾಯಾಗ್ರಹಣವನ್ನು ಈ ಕ್ಷೇತ್ರ ನೆಚ್ಚಿಕೊಂಡಿದೆ.

-ಚಂದ್ರು, ಸೀನಿಯರ್‌ ಆಪರೇಶನ್‌ ಮ್ಯಾನೇಜರ್‌, ಕುಕಿಂಗ್‌ ಮಾಮ್‌, ಬೆಳ್ಳಂದೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.