ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಧರ್ಮಾಚರಣೆ ಹಕ್ಕು ಬೇಕು

2015ರ ಭೇಟಿಯಲ್ಲಿ ನರೇಂದ್ರ ಮೋದಿಗೆ ಹೇಳಿದ್ದನ್ನು ನೆಪಿಸಿಕೊಂಡ ಬರಾಕ್‌ ಒಬಾಮ
Last Updated 1 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಧಾರ್ಮಿಕ ಸಹಿಷ್ಣುತೆ ಮತ್ತು ಪ್ರತಿ ವ್ಯಕ್ತಿಗೂ ತನ್ನ ಧರ್ಮವನ್ನು ಆಚರಿಸುವ ಹಕ್ಕು ಇರುವುದು ಬಹಳ ಮುಖ್ಯ ಎಂದು 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಮೋದಿ ಅವರ ಜತೆಗಿನ ಖಾಸಗಿ ಸಂಭಾಷಣೆಯಲ್ಲಿ ಹೇಳಿದ್ದೆ ಎಂಬುದನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ನೆನಪಿಸಿಕೊಂಡಿದ್ದಾರೆ.

ತಮ್ಮ ಭೇಟಿಯ ಕೊನೆಯ ದಿನ ನಡೆದ ಸಾರ್ವಜನಿಕ ಸಂವಾದದಲ್ಲಿಯೂ ಇಂತಹುದೇ ಕರೆ ಕೊಟ್ಟಿದ್ದಾಗಿ ಅವರು ಹೇಳಿದರು. ‘ಅದು ಎಲ್ಲರಿಗೂ ನೀಡಿದ ಸಂದೇಶವಾಗಿತ್ತು. ಅದನ್ನು ಮೋದಿ ಅವರಿಗೆ ಖಾಸಗಿಯಾಗಿ ಹೇಳಿದ್ದೆ. ಈಗ ಆಗುತ್ತಿರುವ ಬದಲಾವಣೆಗಳಿಂ
ದಾಗಿ ಸಂಸ್ಕೃತಿಗಳ ನಡುವಣ ತಿಕ್ಕಾಟ ಎಲ್ಲೆಡೆಯೂ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಮ್ಮನ್ನು ಭಾರತೀಯರು ಎಂದು ಪರಿಗಣಿಸುವ ದೊಡ್ಡ ಸಂಖ್ಯೆಯ ಮುಸ್ಲಿಂ ಸಮುದಾಯವನ್ನು ಭಾರತವು ಸಂರಕ್ಷಿಸಿ ಬೆಳೆಸಬೇಕು ಎಂದು ಒಬಾಮ ಹೇಳಿದ್ದಾರೆ.

ಭಾರತದಾದ್ಯಂತ ನಡೆಯುತ್ತಿರುವ ಧಾರ್ಮಿಕ ಧ್ರುವೀಕರಣದ ಬಗ್ಗೆ ಒಬಾಮ ಮಾತನಾಡಿದರು. ‘ತಮ್ಮನ್ನು ಭಾರತೀಯರು ಎಂದು ಪರಿಗಣಿಸುವ, ಯಶಸ್ವಿಯಾದ ಮತ್ತು ಸಮ್ಮಿಳಿತಗೊಂಡಿರುವ ದೊಡ್ಡ ಮುಸ್ಲಿಂ ಸಮುದಾಯ ಇದೆ. ಬೇರೆ ಕೆಲವು ದೇಶಗಳ ಅಲ್ಪಸಂಖ್ಯಾತರು ಹೀಗೆ ಇಲ್ಲ. ಹಾಗಾಗಿ ಭಾರತದ ಮುಸ್ಲಿಂ ಸಮುದಾಯವನ್ನು ಸಂರಕ್ಷಿಸಿ ಬೆಳೆಬೇಕು‍’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜನವರಿಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಒಬಾಮ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದು.

‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಒಗ್ಗಟ್ಟಿನಲ್ಲಿ ನಂಬಿಕೆ ಇರಿಸಿದ್ದಾರೆ ಎಂಬುದು ನನಗೆ ಗೊತ್ತಿದೆ. ಖಾಸಗಿ ಸಂಭಾಷಣೆಗಳನ್ನು ಬಹಿರಂಗಗೊಳಿಸುವುದು ನನ್ನ  ಭೇಟಿಯ ಉದ್ದೇಶ ಅಲ್ಲ. ಭಾರತದ ಒಗ್ಗಟ್ಟನ್ನು ಗುರುತಿಸುವುದೇ ಅವರಲ್ಲಿರುವ (ಮೋದಿ) ಭಾವನೆಯೂ ಆಗಿದೆ ಎಂದು ನಾನು ಭಾವಿಸಿದ್ದೇನೆ. ದೇಶದ ಪ್ರಗತಿಗೆ ಒಗ್ಗಟ್ಟು ಅಗತ್ಯ ಎಂಬುದು ಅವರು ದೃಢ ಭಾವನೆ ಎಂದು ಅಂದುಕೊಂಡಿದ್ದೇನೆ’ ಎಂದು ಒಬಾಮ ಹೇಳಿದ್ದಾರೆ.

ಮೋದಿ, ಸಿಂಗ್‌ಗೆ ಒಬಾಮ ಮೆಚ್ಚುಗೆ

‘ನಾನು ಮೋದಿ ಅವರನ್ನು ಇಷ್ಟಪಡುತ್ತೇನೆ. ದೇಶದ ಅಭಿವೃದ್ಧಿ ಬಗ್ಗೆ ಅವರಲ್ಲೊಂದು ದೃಷ್ಟಿಕೋನ ಇದೆ. ಅವರು ಹಲವು ರೀತಿಯಲ್ಲಿ ಅಧಿಕಾರಶಾಹಿಯನ್ನು ಆಧುನಿಕಗೊಳಿಸುತ್ತಿದ್ದಾರೆ. ಡಾ. ಮನಮೋಹನ್‌ ಸಿಂಗ್‌ ಅವರೂ ನನಗೆ ಒಳ್ಳೆಯ ಗೆಳೆಯ. ಅವರು ಭಾರತದ ಆಧುನಿಕ ಅರ್ಥವ್ಯವಸ್ಥೆಗೆ ಚಾಲನೆ ಕೊಟ್ಟರು’ ಎಂದು ಒಬಾಮ ಬಣ್ಣಿಸಿದ್ದಾರೆ.

ಪ್ಯಾರಿಸ್‌ ಹವಾಮಾನ ಒಪ್ಪಂದ ರೂಪುಗೊಳ್ಳುವಲ್ಲಿ ಮೋದಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪ್ಯಾರಿಸ್‌ ಹವಾಮಾನ ಒಪ್ಪಂದ ಬಹಳ ದೊಡ್ಡ ಸಾಧನೆ. ಆದರೆ, ಜಾಗತಿಕ ತಾಪಮಾನ ಏರಿಕೆ ತಡೆಯುವಲ್ಲಿ ಮಹತ್ವದ್ದಾದ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಗ್ಗೆ ಒಬಾಮ ಏನನ್ನೂ ಹೇಳಲಿಲ್ಲ.

ದಾಲ್‌ ಪ್ರವೀಣ ಒಬಾಮ

ಪಾಕಶಾಸ್ತ್ರದಲ್ಲಿ ತಮ್ಮ ಪ್ರಾವೀಣ್ಯದ ಬಗ್ಗೆ ಒಬಾಮ ಹೆಮ್ಮೆಪಟ್ಟುಕೊಂಡಿದ್ದಾರೆ. ‘ಅಮೆರಿಕದ ಅಧ್ಯಕ್ಷರಲ್ಲಿ ದಾಲ್‌ ಮಾಡಲು ಗೊತ್ತಿದ್ದ ಮೊದಲಿಗ ನಾನು ಎಂಬುದರಲ್ಲಿ ಅನುಮಾನವೇ ಇಲ್ಲ. ಖೀಮಾ ಕೂಡ ಚೆನ್ನಾಗಿಯೇ ಮಾಡುತ್ತೇನೆ. ಕೋಳಿಯ ಖಾದ್ಯವೂ ಪರವಾಗಿಲ್ಲ’ ಎಂದು ಒಬಾಮ ಹೇಳಿದ್ದಾರೆ.

‘ಹಿಂದಿನ ರಾತ್ರಿ ದಾಲ್ ಬಡಿಸುವಾಗ ಅದನ್ನು ತಯಾರಿಸುವುದು ಹೇಗೆ ಎಂದು ವೇಟರ್‌ ವಿವರಿಸಲು ಮುಂದಾದರು. ದಾಲ್‌ ಮಾಡಲು ನನಗೆ ಗೊತ್ತಿದೆ. ವಿದ್ಯಾರ್ಥಿಯಾಗಿದ್ದಾಗ ಕೊಠಡಿಯಲ್ಲಿ ಜತೆಗಿದ್ದ ಭಾರತೀಯ ಸಹಪಾಠಿ ಅದನ್ನು ಕಲಿಸಿಕೊಟ್ಟಿದ್ದ ಎಂದು ವೇಟರ್‌ಗೆ ತಿಳಿಸಿದೆ’ ಎಂದು ಒಬಾಮ ಹೇಳಿದರು. ಆದರೆ ಚಪಾತಿ ಮಾಡುವುದು ಭಾರಿ ಕಷ್ಟ. ತಮಗೆ ಚಪಾತಿ ಮಾಡಲು ಬರುವುದಿಲ್ಲ ಎಂದರು.

ಸಾಕ್ಷ್ಯ ಇಲ್ಲ
9/11 ದಾಳಿಯ ಸಂಚುಕೋರ ಒಸಾಮಾ ಬಿನ್‌ ಲಾದೆನ್ ಅಬೊಟಾಬಾದ್‌ನಲ್ಲಿ  ಇದ್ದ ಎಂಬ ಬಗ್ಗೆ ಪಾಕಿಸ್ತಾನಕ್ಕೆ ಅರಿವಿತ್ತು ಎಂದು ಹೇಳಲು ನಮ್ಮಲ್ಲಿ ಯಾವುದೇ ಸಾಕ್ಷ್ಯ ಇರಲಿಲ್ಲ ಎಂದೂ ಒಬಾಮ ಹೇಳಿದ್ದಾರೆ.

2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ, ಉಗ್ರ ಸಂಘಟನೆಗಳನ್ನು ನಾಶ ಮಾಡಬೇಕು ಎಂದು ಭಾರತದಷ್ಟೇ ತೀವ್ರವಾಗಿ ಅಮೆರಿಕವೂ ಯೋಚಿಸಿತ್ತು ಎಂದು ಅವರು ತಿಳಿಸಿದ್ದಾರೆ.

‘ಭಾರತ ಬಹಳ ಮುಖ್ಯ’
ಅಮೆರಿಕದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಮುಂದಿನ ತಲೆಮಾರಿನ ನಾಯಕತ್ವಕ್ಕೆ ತರಬೇತಿ ನೀಡುವುದಕ್ಕಾಗಿಯೇ ತಮ್ಮ ಮುಂದಿನ ಜೀವನವನ್ನು ಮುಡಿಪಾಗಿಡುವುದಾಗಿ ಒಬಾಮ ಹೇಳಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ ಭಾರತ. ಹಾಗಾಗಿ ಭಾರತ ತಮಗೆ ಬಹಳ ಮುಖ್ಯವಾದ ಸ್ಥಳ ಎಂದು ಅವರು ಹೇಳಿದರು. ಭಾರತದ ವಿವಿಧ ಸ್ಥಳಗಳಿಂದ ಬಂದ ಯುವ ನಾಯಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಡೊನಾಲ್ಡ್‌ ಟ್ರಂಪ್‌ಗೆ ಟಾಂಗ್‌

ಡೊನಾಲ್ಡ್‌ ಡಕ್‌ ಅಥವಾ ಡೊನಾಲ್ಡ್‌ ಟ್ರಂಪ್‌–  ಇವರಲ್ಲಿ ಅಮೆರಿಕವನ್ನು ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆಗೆ ಒಬಾಮ ನೇರ ಉತ್ತರ ನೀಡಲಿಲ್ಲ.  ಆದರೆ, ಟ್ವಿಟರ್‌ನಲ್ಲಿ ಪೋಸ್ಟ್‌ ಹಾಕುವ ವಿಚಾರದಲ್ಲಿ ಟ್ರಂಪ್‌ ಅವರ ಕಾಲೆಳೆದರು. ‘ನಾನು ಟ್ವಿಟರ್‌ನಲ್ಲಿ ಬರೆಯುವಾಗ ವಿರಾಮ ಚಿಹ್ನೆಗಳನ್ನು ಬಳಸುತ್ತೇನೆ. ಆಗಾಗ ಟ್ವಿಟರ್‌ ಬಳಸುವವರಿಗಿಂತ ನನಗೆ ಹೆಚ್ಚು ಹಿಂಬಾಲಕರಿದ್ದಾರೆ’ ಎಂದರು.

‘ಅಮೆರಿಕದಿಂದ ಕೇಳಿ ಬರುವ ಹಲವು ಧ್ವನಿಗಳೇ ಆ ದೇಶದಲ್ಲಿ ನಾನು ಪ್ರೀತಿಸುವ ಅಂಶ. ಆ ದೇಶದ ವೈರುಧ್ಯಗಳೇ ಅಲ್ಲಿನ ಹಿಗ್ಗು ಮತ್ತು ಹತಾಶೆ. ನಾವು ಏಕಕಾಲಕ್ಕೆ ದಯಾಪರರೂ ಕ್ರೂರಿಗಳೂ ಆಗಿರುತ್ತೇವೆ. ಅದು ಭಾರತದಲ್ಲಿಯೂ ಹಾಗೆಯೇ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT