ಬುಧವಾರ, ಫೆಬ್ರವರಿ 24, 2021
24 °C

ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್: ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್: ಪರಮೇಶ್ವರ

ಬೆಂಗಳೂರು: ‘ಮುಂದಿನ ಚುನಾವಣೆಯಲ್ಲಿ ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹೇಳಿದ್ದಾರೆ. ‌

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಸಿ. ಮಹದೇವಪ್ಪ, ರಾಮಲಿಂಗಾರೆಡ್ಡಿ ತಮ್ಮ ಮಕ್ಕಳಿಗೆ ಟಿಕೆಟ್ ಕೊಡುವ ಪ್ರಯತ್ನ ನಡೆಸಿರುವ ಮಧ್ಯೆಯೇ ಪರಮೇಶ್ವರ ಕುಟುಂಬ ರಾಜಕಾರಣದ ಬಗ್ಗೆ ಗರಂ ಆಗಿ ಮಾತನಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್, ಮೂರು ಬಾರಿ ಸತತವಾಗಿ ಸೋತವರಿಗೆ ಟಿಕೆಟ್‌ ಇಲ್ಲ ಎಂಬ ನಿಯಮ ಪಕ್ಷದಲ್ಲಿದೆ. ಆದರೆ, ಇದನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ಯಾವ ರೀತಿಯ ಮಾರ್ಗಸೂಚಿಗಳನ್ನು ನೀಡುತ್ತದೊ ಆ ಪ್ರಕಾರ ಟಿಕೆಟ್ ಹಂಚಿಕೆ ಮಾಡಲಾಗುವುದು’ ಎಂದರು.

‘ವಿಧಾನಸಭಾ ಚುನಾವಣೆಗೆ ದೃಷ್ಟಿಯಿಂದ ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿಯವರು ಯಾತ್ರೆ ಮಾಡಿದ ತಕ್ಷಣ ಅವರು ಚುನಾವಣೆಗೆ ತಯಾರಾಗಿದ್ದಾರೆ ಎಂದಲ್ಲ. ನಾವು ಯಾರನ್ನೂ ಅನುಸರಿಸುವುದಿಲ್ಲ. ನಮ್ಮದೇ ಆದ ರಣತಂತ್ರ ಇದೆ. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದರು.

‘ರಾಜ್ಯದಲ್ಲಿ ಯಾತ್ರೆ ಕೈಗೊಳ್ಳುವ ಸಂಬಂಧ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾವೆಲ್ಲ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರಮ್ಯಾ ಎಲ್ಲೂ ಹೇಳಿಲ್ಲ. ಪಕ್ಷದಿಂದಲೂ ಆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅವರು ಯಾರೊಂದಿಗೆ ಸಂಪರ್ಕದಲ್ಲಿ ಇದ್ದಾರೊ ಗೊತ್ತಿಲ್ಲ. ಅವರ ಹುಟ್ಟುಹಬ್ಬದ ದಿನದಂದು ನಾನೇ ಕರೆ ಮಾಡಿ ಶುಭಾಶಯ ತಿಳಿಸಿದ್ದೇನೆ’ ಎಂದು ಪರಮೇಶ್ವರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.