ಒಖಿ ಚಂಡಮಾರುತ: ಸಾವಿನ ಸಂಖ್ಯೆ 14; ಕಾಣೆಯಾದ 126 ಮಂದಿಗಾಗಿ ಶೋಧ

ತಿರುವನಂತಪುರಂ: ಕೇರಳದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಒಖಿ ಚಂಡಮಾರುತದ ಅಬ್ಬರಕ್ಕೆ ಶನಿವಾರ 7 ಮಂದಿ ಸಾವಿಗೀಡಾಗಿದ್ದಾರೆ. ಸಮುದ್ರದಲ್ಲಿ ಕಾಣೆಯಾದವರಲ್ಲಿ 450 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ನೂರಕ್ಕಿಂತಲೂ ಹೆಚ್ಚು ಮೀನುಗಾರರರು ನಾಪತ್ತೆಯಾಗಿದ್ದು ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಾಪತ್ತೆಯಾದ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ಭರದಿಂದ ಸಾಗಿದೆ. ಭಾರಿ ಮಳೆಯಿಂದಾಗಿ ಉಂಟಾದ ಅನಾಹುತದಲ್ಲಿ ಸಾವಿಗೀಡಾದವರ ಸಂಖ್ಯೆ 14 ಆಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಕಾಣೆಯಾಗಿರುವ 120 ಮಂದಿ ತಿರುವನಂತಪುರದ ವಿವಿಧ ಕೇಂದ್ರಗಳಿಂದ ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದವರಾಗಿದ್ದಾರೆ.ಆಲೆಪ್ಪಿಯಿಂದ 5 ಮಂದಿ ಹಾಗೂ ಕಾಸರಗೋಡಿನಿಂದ ಒಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಿರುವುದಾಗಿ ಕಂದಾಯ ಇಲಾಖೆ ಹೇಳಿದೆ.
Early morning visuals from Lakshadweep; destruction caused by strong winds & high tides. #CycloneOckhi pic.twitter.com/kO26bbSjlK
— ANI (@ANI) December 2, 2017
ಚಂಡಮಾರುತದ ಬಗ್ಗೆ ಎಚ್ಚರಿಕೆ ಲಭಿಸುವ ಮುನ್ನವೇ ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದವರು ನಾಪತ್ತೆಯಾಗಿದ್ದರೆ. ಸದ್ಯ ಗಾಳಿ ಮತ್ತು ಮಳೆ ಒಂಚೂರು ಕಡಿಮೆಯಾಗಿದ್ದರೂ ಕಡಲಬ್ಬರ ಇನ್ನೂ ಇಳಿದಿಲ್ಲ. ಕರಾವಳಿ ಪ್ರದೇಶದಲ್ಲಿ ವಾಸಿಸುವ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
ಕಡಲಿನ ಅಬ್ಬರ ಜಾಸ್ತಿಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಇದು ಅಡ್ಡಿಯಾಗುತ್ತಿದೆ. ಕೊಲ್ಲಂ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಎಲ್ಲರೂ ಸುರಕ್ಷಿತರಾಗಿ ಮರಳಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಸಚಿವೆ ಜೆ. ಮೆರ್ಸಿಕುಟ್ಟಿಯಮ್ಮ ಹೇಳಿದ್ದಾರೆ.
ನಾಪತ್ತೆಯಾದವರಲ್ಲಿ ನಾಲ್ಕು ಮಂದಿಯನ್ನು ರಕ್ಷಿಸಿ ಕೊಚ್ಚಿ ಕರಾವಳಿಗೆ ತಲುಪಿಸಿ ಅಲ್ಲಿಂದ ಅವರನ್ನು ಮನೆಗೆ ತಲುಪಿಸುವ ಕಾರ್ಯ ಮಾಡಲಾಗಿದೆ ಎಂದು ಶಾಸಕ ಮುಖೇಶ್ ತಿಳಿಸಿದ್ದಾರೆ. ಚಂಡಮಾರುತ ಮತ್ತು ಮಳೆಯಲ್ಲಿ ನಾಪತ್ತೆಯಾದವರೆಷ್ಟು ಮಂದಿ ಎಂಬುದರ ಬಗ್ಗೆ ಲೆಕ್ಕ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಗ್ರಾಮಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಶನಿವಾರ ಸಾವಿಗೀಡಾಗಿದ್ದು ನಾಲ್ವರು, ಶೋಧ ಕಾರ್ಯದಲ್ಲಿ ಭಾಗಿಯಾದ ಮೀನುಗಾರರು
ಒಖಿ ಚಂಡಮಾರುತದಿಂದಾಗಿ ನಾಶ ನಷ್ಟದ ಉಂಟಾಗಿದ್ದು ಶನಿವಾರ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಕಳೆದೆರಡು ದಿನದಲ್ಲಿ ಪ್ರಕೃತಿ ವಿಕೋಪದಿಂದಾಗಿ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಶಂಖುಮುಖದಲ್ಲಿ ಮೃತದೇಹ ಪತ್ತೆ
ರಕ್ಷಣಾ ಕಾರ್ಯಗಳು ಮುಂದುವರಿದಿದ್ದು ಶಂಖುಮಖದಲ್ಲಿ ಮೀನುಗಾರರೊಬ್ಬರ ಮೃತದೇಹ ಪತ್ತೆಯಾಗಿದೆ. ಆದರೆ ಇವರು ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸದ್ಯ ಲಭ್ಯವಾಗಿಲ್ಲ.
ಸಾವಿಗೀಡಾದವರ ಕುಟುಂಬಗಳಿಗೆ ₹10 ಲಕ್ಷ, ಗಾಯಾಳುಗಳಿಗೆ ₹20,000
ಒಖಿ ಚಂಡಮಾರುತದ ಅಬ್ಬರಕ್ಕೆ ಬಲಿಯಾದ ವ್ಯಕ್ತಿಗಳ ಕುಟುಂಬಕ್ಕೆ ಕೇರಳ ಸರ್ಕಾರ ₹10 ಲಕ್ಷ ಪರಿಹಾರ ಧನ ಮತ್ತು ಗಾಯಾಳುಗಳಿಗೆ ₹20,000 ಪರಿಹಾರ ಧನ ಘೋಷಿಸಿದೆ.
ಮುಂದುವರಿದ ಶೋಧ ಕಾರ್ಯ
ಸೇನಾಪಡೆ ಮತ್ತು ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯ ಮುಂದುವರಿಸಿದೆ, ಲಕ್ಷದ್ವೀಪದಲ್ಲಿ ಹೆಚ್ಚಿನ ನಾಶ ನಷ್ಟವುಂಟಾಗಿದೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.