ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಖಿ ಚಂಡಮಾರುತ; ಕಡಲಿಗಿಳಿಯದ ದೋಣಿಗಳು

Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು/ಕಾರವಾರ: ‘ಒಖಿ’ ಚಂಡಮಾರುತದ ಪರಿಣಾಮ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೀನುಗಾರಿಕಾ ದೋಣಿಗಳು ಬಂದರಿನಲ್ಲಿ ಲಂಗರು ಹಾಕಿವೆ.

ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜ್ಯದ ವಿವಿಧೆಡೆಯ ಹಾಗೂ ಅನ್ಯ ರಾಜ್ಯಗಳ 50ಕ್ಕೂ ಅಧಿಕ ದೋಣಿಗಳು ಸುರಕ್ಷತೆ ದೃಷ್ಟಿಯಿಂದ ಕಾರವಾರ ಸಮೀಪದ ಬೈತಖೋಲ್‌ ಕಡಲಿನಲ್ಲಿ ಬೀಡುಬಿಟ್ಟಿವೆ.

‘ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಡಿಸೆಂಬರ್‌ 3ರ ತನಕ ಕಡಲಿಗಿಳಿಯದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಬೈತಖೋಲ್‌ ಬಂದರಿನಿಂದ ಯಾಂತ್ರೀಕೃತ ದೋಣಿಗಳು ಮತ್ಸ್ಯಬೇಟೆಗೆ ಹೋಗಿಲ್ಲ’ ಎಂದು ಕಾರವಾರದ ಮೀನುಗಾರ ಮುಖಂಡ ಮೋಹನ ಬೋಳಶೆಟ್ಟಿಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳೂರು ವರದಿ: ಲಕ್ಷದ್ವೀಪಕ್ಕೆ ಜೆಲ್ಲಿ, ಸಿಮೆಂಟ್‌, ಕಬ್ಬಿಣ ಸೇರಿದಂತೆ ವಿವಿಧ ಸರಕು ಹೊತ್ತೊಯ್ದಿದ್ದ ಮೂರು ಹಡಗುಗಳ ಪೈಕಿ ಎರಡು ‘ಒಖಿ’ ಚಂಡಮಾರುತಕ್ಕೆ ಸಿಲುಕಿ ಅವರಾತಿ ಸಮೀಪ ಮುಳುಗಿವೆ. ಇನ್ನೊಂದು ಹಡಗು ಕಾಣೆಯಾಗಿದೆ.

ಮೀನುಗಾರಿಕೆ ಮುಗಿಸಿ ಮರಳುತ್ತಿದ್ದಾಗ ತೊಂದರೆಗೆ ಸಿಲುಕಿದ್ದ ನಾಲ್ಕು ದೋಣಿಗಳಲ್ಲಿದ್ದ 20 ಮೀನುಗಾರರನ್ನು ಕೋಸ್ಟ್‌ ಗಾರ್ಡ್‌ನ ಮಂಗಳೂರು ತಂಡ ರಕ್ಷಣೆ ಮಾಡಿದೆ.

ಮುಂದಿನ 48 ಗಂಟೆಗಳವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಮೀನುಗಾರ ಸಮುದ್ರಪಾಲು: ಕಾಸರಗೋಡು ಬಳಿಯ ಉಪ್ಪಳದ ಸಮುದ್ರ ಅಲೆಗಳು ಅಪ್ಪಳಿಸಿ ಮೂರು ಮನೆ ಕೊಚ್ಚಿಹೋಗಿವೆ. ಕಾಞಂಗಾಡಿನಲ್ಲಿ ಮೀನುಗಾರರೊಬ್ಬರು ಸಮುದ್ರಪಾಲಾಗಿದ್ದಾರೆ.

ಭತ್ತ, ರಾಗಿ ಬೆಳೆ ನೀರುಪಾಲು (ಮೈಸೂರು ವರದಿ): ‘ಒಖಿ’ ಪರಿಣಾಮ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಾವೇರಿ ಕಣಿವೆಯಲ್ಲಿ ಕಟಾವು ಮಾಡಿದ ಭತ್ತ ಹಾಗೂ ರಾಗಿ ಬೆಳೆ ನೀರು ಪಾಲಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ, ಶನಿವಾರ ಉತ್ತಮ ಮಳೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಕೃಷಿ ಚಟುವಟಿಕೆಗೆ ಅಡಚಣೆಯಾಗಿದೆ. ಬೆಳೆ ಕಟಾವು ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ, ಗಾಳಿಗೆ ರಾಗಿ, ಭತ್ತದ ಬೆಳೆ ನೆಲ ಕಚ್ಚಿದೆ. ಈಗಾಗಲೇ ಕಟಾವು ಮಾಡಿ ಹೊಲದಲ್ಲಿ ಬಿಟ್ಟಿದ್ದ ರಾಗಿ ಹಾಳಾಗಿದೆ.

***
ಮುಂಬೈ/ಚೆನ್ನೈ/ತಿರುವನಂತಪುರ: ತಮಿಳುನಾಡು ಮತ್ತು ಕೇರಳದಲ್ಲಿ 14 ಜೀವಗಳನ್ನು ಬಲಿತೆಗೆದುಕೊಂಡಿರುವ ಒಖಿ ಚಂಡಮಾರುತವು ಶನಿವಾರ ಲಕ್ಷದ್ವೀಪವನ್ನು ದಾಟಿ ಮುಂದೆ ಸಾಗಿದೆ.

ಒಖಿಯ ಅಬ್ಬರಕ್ಕೆ ಸಿಲುಕಿದ್ದ ಹಲವಾರು ಮೀನುಗಾರರು ಮತ್ತು ಹಡಗುಗಳು ಆಗ್ನೇಯ ಕರಾವಳಿಯಲ್ಲಿ ಕಣ್ಮರೆಯಾಗಿವೆ. ಪತ್ತೆಗಾಗಿ ಯುದ್ಧನೌಕೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಮುಂದಿನ 48 ಗಂಟೆಗಳ ಅವಧಿಯಲ್ಲಿ ಮುಂಬೈ ಮತ್ತು ಗುಜರಾತ್‌ನತ್ತ ಸಾಗಲಿರುವ ಚಂಡಮಾರುತ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಹಾನಿ: ಶನಿವಾರ ಮುಂಜಾನೆ ಲಕ್ಷದ್ವೀಪಕ್ಕೆ ಅಪ್ಪಳಿಸಿರುವ ಒಖಿಯಿಂದ ದ್ವೀಪ ಪ್ರದೇಶದ ವಿವಿಧ ಕಡೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT