7

ಸಂಭ್ರಮದ ‘ಈದ್‌ ಮಿಲಾದ್‌’ ಅಚರಣೆ

Published:
Updated:

ರಾಯಚೂರು: ಇಸ್ಲಾಂ ಧರ್ಮ ಪ್ರವರ್ತಕ ಮೊಹಮ್ಮದ್‌ ಪೈಗಂಬರ್‌ ಅವರ 1603ನೇ ಜನ್ಮದಿನದ ನಿಮಿತ್ತ ಜಿಲ್ಲೆಯಾದ್ಯಂತ ‘ಈದ್‌ ಮಿಲಾದ್‌’ ಸಂಭ್ರಮದಿಂದ ಆಚರಿಸಲಾಯಿತು.

ಮೊಹಮ್ಮದ್‌ ಪೈಗಂಬರ್‌ ಅವರು ಹೇಳಿರುವ ಧರ್ಮ ಸಂದೇಶಗಳನ್ನು ನೆನಪಿಸಿಕೊಳ್ಳುವುದು ಹಬ್ಬದ ಮುಖ್ಯ ಉದ್ದೇಶ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಮುಖ ರಸ್ತೆಗಳ ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಸಿರು ವರ್ಣದ ಬಂಟಿಂಗ್ಸ್‌ ಗಮನ ಸೆಳೆಯು ವಂತಿದ್ದವು. ಹಸಿರು ಹಾಗೂ ಶ್ವೇತ ವಸ್ತ್ರಗಳನ್ನು ವಿಶೇಷ ವಿನ್ಯಾಸಗಳಲ್ಲಿ ಜೋಡಿಸಲಾಗಿತ್ತು.

ಜಹೀರಾಬಾದ್ ವೃತ್ತ, ಜ್ಯೋತಿ ಕಾಲನಿ ವೃತ್ತ, ತಿನ್‌ ಕಂದಿಲ್‌ ವೃತ್ತ, ಶಶಿಮಲ್‌ ವೃತ್ತ, ಝಾಕೀರ್‌ ಹುಸೇನ್‌ ವೃತ್ತ, ಟಿಪ್ಪು ಸುಲ್ತಾನ ರಸ್ತೆ, ಈದ್ಗಾ ಮೈದಾನ, ಪೆಟ್ಲಾ ಬ್ರಿಡ್ಜ್‌ ಪ್ರದೇಶಗಳಲ್ಲಿ ಮಾಡಿದ್ದ ಅಲಂಕಾರವು ಗಮನ ಸೆಳೆದವು. ಗಣ್ಯರು ಶುಭಕೋರಿ ವಿವಿಧೆಡೆ ಫ್ಲೆಕ್ಸ್‌ ಗಳನ್ನು ಹಾಕಿದ್ದರು.

ಮೆರವಣಿಗೆ: ಸಂಜೆನಗರದ ವಿವಿಧ ಮಸೀದಿಗಳಿಂದ ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಯಿತು. ವೈವಿಧ್ಯಮಯ ವರ್ಣಗಳ ಹೂವುಗಳು, ವಸ್ತ್ರಗಳು ಹಾಗೂ ಕಾಗದಗಳನ್ನು ಬಳಸಿ ನಿರ್ಮಿಸಿದ್ದ ಮೆಕ್ಕಾ, ಮದೀನಾ ಹಾಗೂ ಸ್ಥಳೀಯ ಮಸೀದಿಗಳ ಸ್ತಬ್ಧಚಿತ್ರಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು. ಜಾಮೀಯಾ ಮಸೀದಿಯಿಂದ ಈದ್ಗಾ ಮೈದಾನವರೆಗೂ ಪ್ರಧಾನ ಮೆರವಣಿಗೆ ನಡೆಯಿತು.

ಏಕಮಿನಾರ್‌ ಮಸೀದಿ, ರಜಾಮು ಸ್ತಾಫ್‌ ಮಸೀದಿ, ದಾರು ಉಲಮಾ ಮಸೀದಿಗಳಿಂದ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಮುಸ್ಲಿಮರು. ಹೊಸ ವಸ್ತ್ರಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸ್ತಬ್ಧ ಚಿತ್ರಗಳೊಂದಿಗೆ ಕೂತಿದ್ದ ಮಕ್ಕಳ ವೇಷಭೂಷಣ ಚಿತ್ತಾಕರ್ಷಕವಾಗಿತ್ತು. ಪೊಲೀಸರು ನಗರದ ವಿವಿಧೆಡೆ ಬಂದೋಬಸ್ತ್‌ ಏರ್ಪಡಿಸಿದ್ದರು. ವಾಹನಗಳ ಸಂಚಾರವನ್ನು ನಿಯಂತ್ರಿಸಿ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಅನುಕೂಲ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry