ಗುರುವಾರ , ಫೆಬ್ರವರಿ 25, 2021
29 °C

ಚಂದಾವರ ಘಟನೆ: 50 ಮಂದಿ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದಾವರ ಘಟನೆ: 50 ಮಂದಿ ವಿರುದ್ಧ ದೂರು

ಹೊನ್ನಾವರ: ಈದ್ ಮಿಲಾದ್ ಆಚರಣೆಯ ಪ್ರಯುಕ್ತ ತಾಲ್ಲೂಕಿನ ಚಂದಾವರದಲ್ಲಿ ಶುಕ್ರವಾರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 50 ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಂದಾವರ ನಾಕಾದಲ್ಲಿ ಹಾರಿಸಿದ್ದ ಹಸಿರು ಬಾವುಟ ಹರಿದಿದ್ದಾರೆಂದು 9 ಜನರ ವಿರುದ್ಧ ದೂರು ದಾಖಲಾಗಿದೆ. ಗುಂಪು ಕಟ್ಟಿಕೊಂಡು ಮುಸ್ಲಿಂ ಅಂಗಡಿಗಳ ಮೇಲೆ ಕಲ್ಲು ತೂರಿದ್ದಾರೆ ಹಾಗೂ ಕಲ್ಲೇಟಿನಿಂದ ಮಹಿಳಾ ಪೊಲಿಸ್ ಕಾನ್‌ಸ್ಟೆಬಲ್‌ ಸೇರಿದಂತೆ ಕೆಲವು ಪೊಲೀಸರಿಗೆ ಗಾಯವಾಗಿದೆ ಎಂದು 28 ಜನರ ವಿರುದ್ಧ ಪೊಲೀಸರು ದೂರು ನೀಡಿದ್ದಾರೆ.

20 ಮಂದಿ ಬಿಡುಗಡೆ: ಕೋಮು ಘರ್ಷಣೆಗೆ ಸಂಬಂಧಿಸಿ ಶುಕ್ರವಾರ ಬಂಧಿಸಲಾಗಿದ್ದ 28 ಜನರ ಪೈಕಿ 20 ಮಂದಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನನ್ನ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ’ ಎಂದು ಬಿಜೆಪಿ ಮುಖಂಡ ಸೂರಜ್‌ ನಾಯ್ಕ 13 ಮಂದಿ ವಿರುದ್ಧ ದೂರು ನೀಡಿದ್ದು, ಹೆಸರು ತಿಳಿಯದ ಇನ್ನೂ ಮೂವರು ಗುಂಪಿನಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಮೆರವಣಿಗೆ: ಪೊಲೀಸ್ ಬಂದೋಬಸ್ತ್‌ನಲ್ಲಿ ಶನಿವಾರ ಈದ್ ಮಿಲಾದ್‌ ಮೆರವಣಿಗೆ ನಡೆಯಿತು. ಪಟ್ಟಣದ ಬಜಾರ್‌ನ ಮಸೀದಿಯಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಳಿಕ ಸಾರ್ವಜನಿಕ ಸಭೆ ನಡೆಯಿತು. ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು.

ಕೇಸರಿ ಧ್ವಜ ಪ್ರದರ್ಶನ: ಬಸ್‌ ನಿಲ್ದಾಣ ಸಮೀಪದ ಶನಿ ದೇವಸ್ಥಾನದ ಸಮೀಪ ಮೆರವಣಿಗೆ ಬಂದಾಗ ಕೆಲವರು ಕೇಸರಿ ಧ್ವಜ ಹಿಡಿದು ಘೋಷಣೆ ಕೂಗಿದಾಗ ಆತಂಕದ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಇದೇ ಜಾಗದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೋಮುವಾದಿಗಳ ಪಿತೂರಿ: ಸಿಪಿಐಎಂ ಆರೋಪ

ಕಾರವಾರ: ಹೊನ್ನಾವರ ತಾಲ್ಲೂಕಿನ ಚಂದಾವರದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರೆಲ್ಲರೂ ಸೌಹಾರ್ದದಿಂದ ಇದ್ದುದನ್ನು ಸಹಿಸದ ಬಿಜೆಪಿ ಮತ್ತು ಸಂಘ ಪರಿವಾರ ಚುನಾವಣೆಯ ಸ್ವಾರ್ಥಕ್ಕಾಗಿ ಗಲಭೆಯ ಪಿತೂರಿ ನಡೆಸಿ ಶಾಂತಿಯ ವಾತಾವರಣಕ್ಕೆ ಕೋಮುವಿಷ ಬೆರೆಸಿದ ಘಟನೆಯನ್ನು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

‘ಜಿಲ್ಲಾಡಳಿತದ ಶಾಂತಿ ಸಭೆಯ ನಿರ್ಣಯವನ್ನು ಪಾಲಿಸದೇ ಇರುವ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹಾಗೂ ಸಮಾಜ ವಿರೋಧಿ ಪಡೆ ಚುನಾವಣೆಯ ಷಡ್ಯಂತ್ರದ ಭಾಗವಾಗಿ ಮತ್ತು ತಮ್ಮ ಪಕ್ಷದ ಜನದ್ರೋಹಿ ನೀತಿಗಳನ್ನು ಮರೆ ಮಾಚಿ ಜನರ ಲಕ್ಷ್ಯ ಬೇರೆಡೆಗೆ ಸೆಳೆಯಲು ಚಂದಾವರದಲ್ಲಿ ಗಲಭೆ ಸೃಷ್ಟಿಸಿದ್ದಾರೆ. ಈ ಕೂಡಲೇ ಎಲ್ಲ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಯಮುನಾ ಗಾಂವ್ಕರ್ ಆಗ್ರಹಿಸಿದ್ದಾರೆ.

* * 

ಕೋಮು ಪ್ರಚೋದಕರ ಹಾಗೂ ಸಮಾಜವಿರೋಧಿ ಚಟುವಟಿಕೆ ಮಾಡುವವರ ವದಂತಿಗೆ ಹೊನ್ನಾವರ ಜನತೆ ಕಿವಿಗೊಡಬಾರದು

ಯಮುನಾ ಗಾಂವಕರ, ಸಿಪಿಐ (ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.