7

ಪೋಲಿಯೊ ಪೀಡಿತ ವಕೀಲನಾದ ಯಶೋಗಾಥೆ

Published:
Updated:
ಪೋಲಿಯೊ ಪೀಡಿತ ವಕೀಲನಾದ ಯಶೋಗಾಥೆ

ಶ್ರೀನಿವಾಸಪುರ: ಅಂಗವೈಕಲ್ಯ ವೈಫಲ್ಯ ಮೆಟ್ಟಿ ಬದುಕು ಕಟ್ಟಿಕೊಂಡ ಮಟ್ಟಿನಿಂತು ಯಶಸ್ವಿ ವಕೀಲನಾದ ತಾಲ್ಲೂಕಿನ ಜಿ.ರೆಡ್ಡಿವಾರಿಪಲ್ಲಿ ಗ್ರಾಮದ ಆರ್‌.ಗಂಗಿರೆಡ್ಡಿ ಇತರರಿಗೆ ಮಾರ್ಗದರ್ಶಕರಾಗಿದ್ದಾರೆ.

ಗಂಗಿರೆಡ್ಡಿ ಮೂರು ವರ್ಷದ ಮಗುವಾಗಿರುವಾಗಲೇ ಪೋಲಿಯೊ ಪೀಡಿತರಾದರು. ಯಾವುದೇ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡವು. ನಡೆಯಲೂ ಸಾಧ್ಯವಾಗಲಿಲ್ಲ. ತೆವಳುತ್ತ ಮುಂದೆ ಸಾಗಬೇಕಾಯಿತು. ಆದರೆ ಅವರ ತಂದೆ ರಾಮಚಂದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಮಗನ ಸಮಸ್ಯೆ ಸವಾಲಾಗಿ ಸ್ವೀಕರಿಸಿ ಶಿಕ್ಷಣ ಕೊಡಿಸಿದರು.

ಮಗನನ್ನು ತಮ್ಮ ಗ್ರಾಮದಿಂದ ಒಂದು ಕಿ.ಮೀ ದೂರದ ಗೌನಿಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದರು. ತಂದೆ ರಾಮಚಂದ್ರಪ್ಪ ಪ್ರತಿ ದಿನ ನಡೆಯಲಾಗದ ಮಗನನ್ನು ಹೆಗಲ ಮೇಲೆ ಹೊತ್ತು ತಂದು ಶಾಲೆಯಲ್ಲಿ ಬಿಡುತ್ತಿದ್ದರು. ಶಾಲೆ ಮುಗಿದ ಮೇಲೆ ಮನೆಗೆ ಹೊತ್ತೊಯ್ಯುತ್ತಿದ್ದರು. ಇಷ್ಟಾದರೂ ಶಾಲೆಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆವಳಿಕೊಂಡು ಹೋಗಬೇಕಾಗಿತ್ತು.

ಹೆತ್ತವರಿಗೆ ವ್ಯವಸಾಯದ ನಡುವೆ ಮಗನನ್ನು ನೋಡಿಕೊಳ್ಳುವುದು ಕಷ್ಟವೆನಿಸಲಿಲ್ಲ. ಓದಿನಲ್ಲಿ ಚೂಟಿಯಾಗಿದ್ದ ಈ ಬಾಲಕ ಶಿಕ್ಷಕರ ವಿಶೇಷ ಪ್ರೀತಿಗೆ ಪಾತ್ರನಾದ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಾಹಿತಿ ಸ.ರಘುನಾಥ, ಇನ್ನೊಬ್ಬ ಶಿಕ್ಷಕ ಬಿ.ವಿ.ವೆಂಕಟಾಚಲಪತಿ ಅವರು ತಮ್ಮ ಬಗ್ಗೆ ತೋರಿದ ವಿಶೇಷ ಕಾಳಜಿಯನ್ನು ಗಂಗಿರೆಡ್ಡಿ ಈಗಲೂ ನೆನೆಪು ಮಾಡಿಕೊಳ್ಳುತ್ತಾರೆ.

ಗೌನಿಪಲ್ಲಿ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 8ನೇ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡಿದರು. ಈ ಅವಧಿಯಲ್ಲಿ ತಂದೆ ಬೈಕ್‌ನಲ್ಲಿ ಕರೆತಂದು ಬಿಡುತ್ತಿದ್ದರು. ಊರುಗೋಲು ನೆರವಿನಿಂದ ನಡೆಯುವುದನ್ನು ರೂಢಿ ಮಾಡಿಕೊಂಡರು.

ರಾಮಚಂದ್ರಪ್ಪ ತಮ್ಮ ಮಗ ವಕೀಲನಾಗಬೇಕು ಎಂದು ಇಚ್ಛಿಸಿದ್ದರು. ತಮ್ಮ ಇಚ್ಛೆಯನ್ನು ಮಗನಿಗೆ ತಿಳಿಸಿದರು. ಆ ಕಾರಣದಿಂದಲೇ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ

ಪದವಿ ಪಡೆದ ಬಳಿಕ, ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, 2008ರಲ್ಲಿ ವಕೀಲರಾಗಿ ಕಾರ್ಯಾರಂಭ ಮಾಡಿದರು. 2012ರವರೆಗೆ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಬೇರೆ ಬೇರೆ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು. ಈಗ ಶ್ರೀನಿವಾಸಪುದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಯಶಸ್ವಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆರ್‌.ಗಂಗಿರೆಡ್ಡಿ

ತಮ್ಮ ಗ್ರಾಮದಿಂದ ಅಂಗವಿಕಲರ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಕಾರ್‌ನಲ್ಲಿ ನ್ಯಾಯಾಲಯಕ್ಕೆ ಬಂದು ಹೋಗುತ್ತಾರೆ. ಸ್ವತಃ ಕಾರ್‌ ಚಾಲನೆ ಮಾಡುತ್ತಾರೆ. ಸ್ಟ್ರೆಚಸ್ ಸಹಾಯದಿಂದ ನಡೆದಾಡುತ್ತಾರೆ. ಆ ಮಟ್ಟಿಗೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿರುವ ಪತ್ನಿ ಎಂ.ಎನ್‌.ಅನುರಾಧ ಅವರೂ ಸಹ ಅಂಗವಿಕಲರಾಗಿದ್ದಾರೆ.

ಅಂಗವಿಕಲತೆ ಶಾಪವಲ್ಲ. ಬೇರೆ ಬೇರೆ ಕಾರಣಗಳಿಂದ ಅಂಗವಿಕಲತೆ ಉಂಟಾಗಬಹುದು. ಸಮಾಜದಲ್ಲಿನ ಅಂಗವಿಕಲರ ಬಗ್ಗೆ ಅನುಕಂಪ ವ್ಯಕ್ತಪಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅವರಿಗೆ ಬೇಕಾಗಿರುವುದು ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಅಗತ್ಯ ನೆರವು ಮಾತ್ರ ಎಂಬುದು ಗಂಗಿರೆಡ್ಡಿ ಅವರ

ಅಭಿಪ್ರಾಯ.

* * 

ಮನಸ್ಸು ಮಾಡಿದರೆ ಅಂಗವಿಕಲತೆಯನ್ನು ಮೀರಿ ಬದುಕಬಹುದು. ಸ್ವಾವಲಂಬನೆ ಸಾಧ್ಯವಾದಾಗ ತಾನಾಗಿಯೇ ಎಲ್ಲ ಕಡೆಗಳಿಂದ ಗೌರವ ಪ್ರಾಪ್ತವಾಗುತ್ತದೆ. ಆರ್‌.ಗಂಗಿರೆಡ್ಡಿ, ವಕೀಲ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry