ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಮಿಲಾದ್‌; ಭವ್ಯ ಮೆರವಣಿಗೆ

Last Updated 3 ಡಿಸೆಂಬರ್ 2017, 9:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರವಾದಿ ಮಹಮ್ಮದ್‌ ಪೈಗಂಬರ್ ಅವರ ಜನ್ಮ ದಿನ ‘ಈದ್‌ ಮಿಲಾದ್‌’ ಅನ್ನು ನಗರದಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಈದ್‌ ಮಿಲಾದ್‌ ಅಂಗವಾಗಿ ನಗರದಲ್ಲಿ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಸಹಸ್ರಾರು ಮುಸ್ಲಿಮರು ಪಾಲ್ಗೊಂಡಿದ್ದರು.

ಹಳೆ ಹುಬ್ಬಳ್ಳಿಯ ಇಸ್ಲಾಂಪುರ ರಸ್ತೆಯಲ್ಲಿರುವ ಗೌಸಿಯಾ ಮದರಸಾ ಹಾಗೂ ಗಣೇಶಪೇಟೆಯ ಮಸೀದಿಯಿಂದ ಮಧ್ಯಾಹ್ನ ಏಕಕಾಲಕ್ಕೆ ಆರಂಭವಾದ ಮೆರವಣಿಗೆಯು ಸಿಬಿಟಿ, ಶಾಹ ಬಜಾರ್‌, ದುರ್ಗದಬೈಲ್‌, ಪೆಂಡಾರ ಓಣಿ, ಮುಲ್ಲಾ ಓಣಿ, ಕೌಲಪೇಟೆ, ಡಾಕಪ್ಪ ಸರ್ಕಲ್‌, ಪಿ. ಬಿ.ರಸ್ತೆ, ನ್ಯೂ ಇಂಗ್ಲಿಷ್‌ ಸ್ಕೂಲ್‌, ಬಂಕಾಪುರ ಚೌಕಿ ಮೂಲಕ ಸಾಗಿ ಆಸಾರ್‌ ಮೊಹಲ್ಲಾದಲ್ಲಿರುವ ದರ್ಗಾವನ್ನು ತಲುಪಿತು.

ಮೆರವಣಿಗೆ ಸಾಗುವ ಮಾರ್ಗಗಳು ಹಸಿರು ಬಣ್ಣದ ತೋರಣದಿಂದ ಕಂಗೊಳಿಸುತ್ತಿತ್ತು. ಈದ್‌ ಮಿಲಾದ್‌ ಶುಭ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಮಸೀದಿ, ದರ್ಗಾಗಳನ್ನು ಬಣ್ಣ, ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಮೆಕ್ಕಾ, ಮದೀನದ ಆಕರ್ಷಕ ಪ್ರತಿಕೃತಿಗಳು, ಪ್ಲೆಕ್ಸ್‌ಗಳು ಗಮನ ಸೆಳೆದವು. ಧ್ವನಿವರ್ದಕಗಳ ಅಬ್ಬರ ಜೋರಾಗಿತ್ತು. ಕೈಯಲ್ಲಿ ಇಸ್ಲಾಂ ಧರ್ಮ ಧ್ವಜವನ್ನು ಹಿಡಿದ ಮಕ್ಕಳು, ಯುವಕರು ಗಮನಸೆಳೆದರು.

ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಿಹಿ, ಹಣ್ಣು, ಶರಬತ್‌, ನೀರನ್ನು ವಿತರಿಸಲಾಯಿತು. ಸಹಸ್ರಾಹರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಧಾರ್ಮಿಕ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡು ಈದ್‌ ಮಿಲಾದ್‌ ಶುಭಾಷಯ ಕೋರಿದರು. ಸಾಮೂಹಿಕ ಮೆರವಣಿಗೆಯಲ್ಲಿ ಧಾರ್ಮಿಕ ಗೀತೆಗಳು, ದೇವರ ಶ್ಲೋಕಗಳನ್ನು ಪಠಣ ಮಾಡಲಾಯಿತು.

ಕೇಶ ದರ್ಶನ: ಹಳೆ ಹುಬ್ಬಳ್ಳಿಯ ಆಸಾರ್‌ ಮೊಹಲ್ಲಾದ ದರ್ಗಾಕ್ಕೆ ಮೆರವಣಿಗೆಯಲ್ಲಿ ಬಂದ ಸಹಸ್ರಾರು ಜನರು ಸರದಿಯಲ್ಲಿ ನಿಂತು, ತಡೆ ರಾತ್ರಿವರೆಗೂ ಮಹಮ್ಮದ್‌ ಪೈಗಂಬರ್‌ ಅವರ ಕೇಶ ದರ್ಶನ ಪಡೆದರು. ಭಾನುವಾರ ಮಹಿಳೆಯರು ಕೇಶದರ್ಶನ ಮಾಡಲಿದ್ದಾರೆ. ದರ್ಗಾದ ಹೊರಭಾಗದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಮಕ್ಕಳು ಬಗೆಬಗೆಯ ಆಟಿಕೆ ವಸ್ತುಗಳನ್ನು ಹಾಗೂ ತಿಂಡಿ, ತಿನಿಸುಗಳನ್ನು ಖರೀದಿಸಿ ಸಂಭ್ರಮಿಸಿದರು.

ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಅಂಜುಮನ್‌ ಸಂಸ್ಥೆ ಅಧ್ಯಕ್ಷ ಜಬ್ಬಾರ್‌ ಖಾನ್‌ ಹೊನ್ನಳ್ಳಿ, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನ್ವರ್‌ ಮುಧೋಳ, ಮಾಜಿ ಸಂಸದ ಐ.ಜಿ.ಸನದಿ, ಬಿಜೆಪಿ ಮುಖಂಡ ಶಂಕ್ರಣ್ಣ ಬಿಜವಾಡ, ಯೂಸೂಫ್‌ ಸವಣೂರು, ಶಿರಾಜ್‌ ಅಹಮ್ಮದ್‌ ಕುಡಚಿವಾಲೆ, ಅಲ್ತಾಫ್‌ ಕಿತ್ತೂರ, ಅಲ್ತಾಫ್‌ ಹಳ್ಳೂರ, ಧರ್ಮಗುರುಗಳಾದ ತಾಜುದ್ದೀನ್‌ ಖಾದ್ರಿ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಭದ್ರತೆ: ಈದ್‌ ಮಿಲಾದ್‌ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿರು.

ಚಾದರ ವಿತರಣೆ: ಪೈಗಂಬರ್‌ ಜನ್ಮದಿನದ ಅಂಗವಾಗಿ ಅಮನ್ ಫೌಂಡೇಶನ್ ವತಿಯಿಂದ ಕೇಶ್ವಾಪುರ ಅನಾಥ ಆಶ್ರಮ ಹಾಗೂ ವೃದ್ಧಾಶ್ರಮದ ನಿವಾಸಿಗಳಿಗೆ ಚಾದರ ವಿತರಿಸಲಾಯಿತು. ಬಳಿಕ ಹಂಚಿ ಸಿಹಿ ಹಂಚುವ ಮೂಲಕ ಹಬ್ಬದ ಶುಭಾಷಯ ಕೋರಲಾಯಿತು. ಅಮನ್ ಫೌಂಡೇಶನ್ ಅಧ್ಯಕ್ಷ ನವೀದ್ ಮುಲ್ಲಾ, ರಫೀಕ ಚವ್ಹಾಣ, ಇಫ್ತೆಕಾರ್‌ ಜವಳಿ, ಮಂಜೂರ ಅಥಣಿ, ಶಾ ನವಾಜ್‌ ಮೊಮಿನ್ ಹಾಗೂ ಫಿರೋಜ್ ಮೊಮಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT