6

ಆತ್ಮಶಕ್ತಿ ಜಾಗೃತಗೊಳಿಸುವ ಭಗವದ್ಗೀತೆ

Published:
Updated:
ಆತ್ಮಶಕ್ತಿ ಜಾಗೃತಗೊಳಿಸುವ ಭಗವದ್ಗೀತೆ

ಬೀದರ್: ‘ಭಾರತೀಯರಷ್ಟೇ ಅಲ್ಲ, ವಿದೇಶಿಯರೂ ಭಗವದ್ಗೀತೆಯ ಪಠಣ ಮಾಡಿ ಆತ್ಮಶಕ್ತಿ ಜಾಗೃತಗೊಳಿಸಿಕೊಂಡಿದ್ದಾರೆ’ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ನಡೆದ ಭಗವದ್ಗೀತೆ ಜಯಂತಿ ಸಪ್ತಾಹದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಭಗವದ್ಗೀತೆಯಲ್ಲಿರುವ 18 ಅಧ್ಯಾಯಗಳ ಎಲ್ಲ 700 ಶ್ಲೋಕಗಳಲ್ಲಿನ ಅಂಶಗಳು ವ್ಯಕ್ತಿಯನ್ನು ಶ್ರೇಷ್ಠತೆಯತ್ತ ಒಯ್ಯುವ ಸಾಮರ್ಥ್ಯ ಹೊಂದಿವೆ. ಭಗವದ್ಗೀತೆ ಯಾವ ಜಾತಿ, ಜನಾಂಗ ಮತ್ತು ವರ್ಗಕ್ಕೆ ಸೀಮಿತವಲ್ಲ. ಸಮಸ್ತ ಮನುಕುಲದ ಉದ್ಧಾರವೇ ಅದರ ಆಶಯವಾಗಿದೆ’ ಎಂದು ಪ್ರತಿಪಾದಿಸಿದರು.

‘ಭಗವದ್ಗೀತೆ ಸತ್ಯದ ದರ್ಶನದ ಜತೆಗೆ ಆತ್ಮಶಕ್ತಿಯನ್ನು ಜಾಗೃತಗೊಳಿಸುತ್ತದೆ. ಮನಸ್ಸಿನ ಮೇಲೆ ನಿಯಂತ್ರಣ ಹೇರಿ ಶಕ್ತಿಶಾಲಿ ಹಾಗೂ ಮಹಾನ್ ಸಾಧಕರನ್ನಾಗಿ ಮಾಡುತ್ತದೆ’ ಎಂದರು.

ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಭಗವದ್ಗೀತೆಯು ಬ್ರಾಹ್ಮಣರಿಗಷ್ಟೇ ಸೀಮಿತವಾಗಿಲ್ಲ. ಇದು ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿದೆ’ ಎಂದರು. ‘ಜನರು ವಾಸ್ತವ ಅರಿಯಲು ಭಗವದ್ಗೀತೆಯ ಪಠಣ ಮಾಡಬೇಕು. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು’ ಎಂದು ತಿಳಿಸಿದರು.

‘ವಿಶ್ವದ ಅನೇಕ ಶ್ರೇಷ್ಠರು, ಮಹಾತ್ಮರು, ಸಾಧಕರು, ಸಂಶೋಧಕರು, ವಿಜ್ಞಾನಿಗಳಿಗೆ ಭಗವದ್ಗೀತೆ ಇಂದಿಗೂ ಅಚ್ಚುಮೆಚ್ಚು. ಇದರ ಅದಮ್ಯ ಜ್ಞಾನಶಕ್ತಿಯನ್ನು ಅರಿತುಕೊಂಡಿದ್ದರಿಂದಲೇ ಇದನ್ನು ಓದುತ್ತಿದ್ದಾರೆ. ಭಗವದ್ಗೀತೆಯು ಜಾತಿ, ಕಾಲ ಹಾಗೂ ಸೀಮೆ ಮೀರಿದ್ದಾಗಿದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಭಗವದ್ಗೀತೆ ಅಭಿಯಾನ ಸಮಿತಿಯ ಗೌರವಾಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ‘ಭಗವದ್ಗೀತೆ ಉತ್ತಮ ಬದುಕಿಗೆ ಸರಳ ಮಾರ್ಗ ತೋರಿಸುತ್ತದೆ. ಇದನ್ನು ಪೂಜಿಸುವುದಕ್ಕೆ ಸೀಮಿತ ಮಾಡುವುದು ಬೇಡ. ಎಲ್ಲರೂ ನಿತ್ಯ ಓದಿದರೆ ಭವಿಷ್ಯ ಸುಂದರ ಹಾಗೂ ಬದುಕು ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಬರ್ದಿಪುರದ ಡಾ.ಸಿದ್ಧೇಶ್ವರ ಸ್ವಾಮೀಜಿ, ಸಮಿತಿಯ ಅಧ್ಯಕ್ಷ ರಾಜಕುಮಾರ ಅಗ್ರವಾಲ್, ಪ್ರಧಾನ ಕಾರ್ಯದರ್ಶಿ ಉಪೇಂದ್ರ ದೇಶಪಾಂಡೆ, ಪ್ರಭಾಕರ ಮೈಲಾಪುರೆ, ರಾಮಕೃಷ್ಣ ಸಾಳೆ, ಹಣಮಯ್ಯ ಅರ್ಥಂ, ಶಂಕರರಾವ್ ಕೊಟರಕಿ, ಸಚಿನ್ ಗುರುನಾಥ ಕೊಳ್ಳೂರ್, ವೆಂಕಟರಮಣ ಹೆಗಡೆ ಇದ್ದರು.

ಸಪ್ತಾಹ ನಿಮಿತ್ತ ಜಿಲ್ಲೆಯ ಶ್ರದ್ಧಾ ಕೇಂದ್ರಗಳಲ್ಲಿ ಶ್ಲೋಕ ಪಠಣ ಮಾಡಿದ 500 ಮಹಿಳೆಯರು ಭಗವದ್ಗೀತೆಯ 6ನೇ ಅಧ್ಯಾಯವಾಗಿರುವ ಆತ್ಮ ಸಂಯಮ ಯೋಗದ (ಅಧ್ಯಾತ್ಮ ಯೋಗ) 47 ಶ್ಲೋಕಗಳನ್ನು ಸಾಮೂಹಿಕವಾಗಿ ಏಕಸ್ವರದಲ್ಲಿ ಪಠಿಸಿದರು. ಸಮವಸ್ತ್ರ ತೊಟ್ಟಿದ್ದ ಮಾತೆಯರೆಲ್ಲ ಒಂದೇ ಧಾಟಿಯಲ್ಲಿ ಹೇಳಿದ ಶ್ಲೋಕಗಳು ರಂಗಮಂದಿರದಲ್ಲಿ ಮಾರ್ದನಿಸಿದವು. ಪರಮೇಶ್ವರ ಭಟ್ ಹಾಗೂ ಓಂಪ್ರಕಾಶ ದಡ್ಡೆ ನಿರೂಪಿಸಿದರು.

* * 

ಸಮೃದ್ಧ ಹಾಗೂ ಸುಂದರ ಸಮಾಜ ನಿರ್ಮಿಸುವ  ಶಕ್ತಿ ಭಗವದ್ಗೀತೆಯಲ್ಲಿದೆ. ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳಿಗೂ ಅದರಲ್ಲಿ ಪರಿಹಾರ ಇದೆ.

ಶಿವಕುಮಾರ ಸ್ವಾಮೀಜಿ

ಸಿದ್ಧಾರೂಢ ಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry