ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ರಂಗಪ್ರತಿಭೆಗೆ ವೇದಿಕೆ

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ರಂಗಭೂಮಿಯ ಯುವಪ್ರತಿಭೆಗಳಿಗೆ ವೇದಿಕೆ ಒದಗಿಸುವ ಸಲುವಾಗಿ ‘ಡೆಕ್ಕನ್‌ ಹೆರಾಲ್ಡ್‌’ ನಾಟಕೋತ್ಸವದಲ್ಲಿ ಇದೇ ಮೊದಲ ಬಾರಿಗೆ ‘ಅಂತರ ಕಾಲೇಜು ನಾಟಕೋತ್ಸವ’ ಆಯೋಜಿಸಲಾಗಿದೆ. ಡಿ.4ರಂದು ವಸಂತನಗರದ ಅಲೆಯನ್ಸ್‌ ಫ್ರಾನ್ಸೆಯಲ್ಲಿ ‘ವಾಯ್ಜೆಕ್’, ‘ದಿ ಆ್ಯಕ್ಟರ್ಸ್‌ ನೈಟ್‌ಮೇರ್‌’ ಮತ್ತು ‘ದ್ರೌಪದಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಸಂಜೆ 5 ಗಂಟೆಗೆ ‘ವಾಯ್ಜೆಕ್‌’ ನಾಟಕವನ್ನು ಸೇಂಟ್‌ ಜೋಸೆಫ್‌ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಜರ್ಮನಿಯ ನಾಟಕಕಾರ ‘ಜಾರ್ಜ್‌ ಬಂಚರ್’ ಇದನ್ನು ರಚಿಸಿದ್ದಾರೆ. ಜರ್ಮನಿಯ ಪುಟ್ಟ ಹಳ್ಳಿಯಲ್ಲಿ ಸೈನಿಕ ‘ವಾಯ್ಜಕ್‌’ ತನ್ನ ಗೆಳತಿ ಮೇರಿ ಹಾಗೂ ಮಗುವಿನೊಂದಿಗೆ ವಾಸವಿರುತ್ತಾನೆ. ಪರಸ್ಪರ ಮದುವೆಯಾಗದ ಕಾರಣ ಸಮಾಜದಿಂದ ದೂರ ಉಳಿಯುತ್ತಾರೆ.

ವಾಯ್ಜಕ್‌ನ ಮಾನಸಿಕ ತೊಳಲಾಟದ ಸುತ್ತ ಈ ನಾಟಕ ಕೇಂದ್ರೀಕೃತವಾಗಿದೆ. ಗೆಳತಿ ಆತನಿಂದ ದೂರ ಹೋಗಲು ನಿರ್ಧರಿಸಿದಾಗ ವಾಯ್ಜಕ್‌ ಎದುರಿಸುವ ಸಂದಿಗ್ಧತೆಯನ್ನು ನಾಟಕ ಬಿಂಬಿಸುತ್ತದೆ.

‘ವಾಯ್ಜಕ್ ಎದುರಿಸುವ ತೊಳಲಾಟಗಳು ನಾನು ನಮ್ಮ ನಿತ್ಯದ ಜೀವನದಲ್ಲಿ ಎದುರಿಸುವ ಸವಾಲುಗಳ ಪ್ರತಿಬಿಂಬ. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿನ ಬಡತನ ಹಾಗೂ ದಬ್ಬಾಳಿಕೆಯನ್ನು ಇದು ಕಟ್ಟಿಕೊಡುತ್ತದೆ. ಕಲಾವಿದರಿಗೆ ಈ ಪಾತ್ರವನ್ನು ನಿರ್ವಹಿಸುವುದು ಸವಾಲಿನ ಸಂಗತಿ. ದೊಡ್ಡ ವೇದಿಕೆಯಲ್ಲಿ ನಮ್ಮ ಪ್ರತಿಭೆ ಪ್ರದರ್ಶಿಸಲು ‘ಡೆಕ್ಕನ್ ಹೆರಾಲ್ಡ್‌’ ಅವಕಾಶ ಒದಗಿಸಿದೆ’ ಎಂದು ಸಂತಸ ಹಂಚಿಕೊಂಡರು ಈ ನಾಟಕದಲ್ಲಿ ಅಭಿನಯಿಸುತ್ತಿರುವ ಲೋಲಿತ್ ಪಿಂಟೋ.

ಸಂಜೆ 6 ಗಂಟೆಗೆ ಆರಂಭವಾಗುವ ‘ದಿ ಆ್ಯಕ್ಟರ್ಸ್‌ ನೈಟ್‌ಮೇರ್‌’ ಒಂದು ಹಾಸ್ಯ ನಾಟಕ. ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿಗಳು ಈ ನಾಟಕ ಪ್ರದರ್ಶಿಸಲಿದ್ದಾರೆ. ‘ಜಾರ್ಜ್ ಸ್ಪೆಲ್ವಿನ್’ ಎಂಬ ಅಕೌಂಟೆಂಟ್‌ನ ಸುತ್ತ ಹೆಣೆದಿರುವ ಕತೆ ಇದಾಗಿದೆ. ಅಕೌಂಟೆಂಟ್‌ ನಾಟಕವೊಂದರಲ್ಲಿ ಒತ್ತಾಯಪೂರ್ವಕವಾಗಿ ಅಭಿನಯಿಸುತ್ತಾನೆ. ಆದರೆ ಅವನಿಗೆ ನಾಟಕದ ಸಂಭಾಷಣೆಗಳ ಅರಿವೇ ಇರುವುದಿಲ್ಲ. ಜಾರ್ಜ್‌ ಎದುರಿಸುವ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಲಿವೆ.

ಇದರಲ್ಲಿ ಅಭಿನಯಿಸಿರುವ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಬಿಬಿಎ ವಿದ್ಯಾರ್ಥಿ ಸಹನಾ ವೆಂಕಟೇಶ್, ‘ನಮ್ಮ ಭಾವನೆಗಳ ಅಭಿವ್ಯಕ್ತಿಗೆ ರಂಗಭೂಮಿ ಉತ್ತಮ ಮಾಧ್ಯಮ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಕಲಾಪ್ರಕಾರವೂ ಹೌದು. ನನ್ನ ನಟನೆಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ.

ನಾಟಕದಲ್ಲಿ ಲವಲವಿಕೆ ತುಂಬಲು ಯತ್ನಿಸಿದ್ದೇವೆ’ ಎಂದರು. ಕ್ರೈಸ್ಟ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿನಯಿಸಿರುವ ‘ದ್ರೌಪದಿ’ ನಾಟಕವು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಹಲವು ಒಳಿತು ಕೆಡಕುಗಳನ್ನು ಬಿಂಬಿಸುವ ನಾಟಕ ಇದು. ಸಂತೋಷ, ದುಃಖ, ಹಾಸ್ಯ ಹೀಗೆ ಎಲ್ಲ ಬಗೆಯ ಭಾವನೆಗಳ ಅಭಿವ್ಯಕ್ತಿ ಇದರಲ್ಲಿದೆ.

ಡೆಕ್ಕನ್‌ ಹೆರಾಲ್ಡ್‌ ಅಂತರ ಕಾಲೇಜು ನಾಟಕೋತ್ಸವ: ಸಂಜೆ 5ಕ್ಕೆ ಸೇಂಟ್‌ ಜೋಸೆಫ್‌ ಕಾಲೇಜು–ವಾಯ್ಜೆಕ್‌, ಸಂಜೆ 6ಕ್ಕೆ ಮೌಂಟ್‌ ಕಾರ್ಮೆಲ್‌ ಕಾಲೇಜು–ದಿ ಆ್ಯಕ್ಟರ್ಸ್‌ ನೈಟ್‌ಮೇರ್‌, ಸಂಜೆ7ಕ್ಕೆ ಕ್ರೈಸ್ಟ್‌ ವಿಶ್ವವಿದ್ಯಾಲಯ–ದ್ರೌಪದಿ ಸ್ಥಳ–ಅಲೆಯನ್ಸ್‌ ಫ್ರಾನ್ಸೆ, ವಸಂತನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT