ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,072 ತಜ್ಞ ವೈದ್ಯ ಹುದ್ದೆಗಳಿಗೆ ಕೇವಲ 707 ಅರ್ಜಿ!

Last Updated 3 ಡಿಸೆಂಬರ್ 2017, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1,072 ತಜ್ಞ ವೈದ್ಯರ ನೇಮಕಾತಿಗೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಹೊರಡಿಸಿದ ಅಧಿಸೂಚನೆಗೆ ಸ್ಪಂದಿಸಿದವರ ಸಂಖ್ಯೆ ಕೇವಲ 707!

ಅನಸ್ತೇಸಿಯ (ಅರಿವಳಿಕೆ), ಆರ್ಥೋಪೆಡಿಕ್‌ (ಕೀಲುಮೂಳೆ) ಹಾಗೂ ಇಎನ್‌ಟಿ (ಕಿವಿ, ಮೂಗು, ಗಂಟಲು) - ಈ ಮೂರು ವಿಷಯಗಳ ತಜ್ಞ ವೈದ್ಯ ಹುದ್ದೆಗಳನ್ನು ಹೊರತುಪಡಿಸಿ, ಉಳಿದ ವಿಷಯಗಳಲ್ಲಿ ಒಟ್ಟು ಹುದ್ದೆಗಳಿಗಿಂತ ತೀರಾ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ.

ಇಲಾಖೆಯಲ್ಲಿ ಖಾಲಿ ಇರುವ 476 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು (ಜಿಡಿಎಂ) ಮತ್ತು 1,072 ತಜ್ಞ ವೈದ್ಯರ ಭರ್ತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿ, ಸೆ. 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಆ. 5ರಂದು ಮೊದಲ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಆ ಅಧಿಸೂಚನೆಯಲ್ಲಿ 265 ಜಿಡಿಎಂ ಹುದ್ದೆಗಳು ಮತ್ತು ತಜ್ಞ ವೈದ್ಯರ ಹುದ್ದೆಗಳನ್ನು ಮಾತ್ರ ಪ್ರಸ್ತಾವಿಸಲಾಗಿತ್ತು. ಬಳಿಕ ಹೈದರಾಬಾದ್‌– ಕರ್ನಾಟಕ ಭಾಗಕ್ಕೆ 111 ಜಿಡಿಎಂ ಹುದ್ದೆಗಳನ್ನು ಸೇರಿಸಿ ಮತ್ತೆ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿತ್ತು. ಅಲ್ಲದೆ, ಅರ್ಜಿ ಸಲ್ಲಿಸಲು ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಜಿಡಿಎಂ ಹುದ್ದೆಗಳಿಗೆ 1,824 ಅರ್ಜಿಗಳು ಬಂದಿವೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆದರೆ, 10 ವಿವಿಧ ವಿಭಾಗಗಳ ತಜ್ಞ ವೈದ್ಯರ ಹುದ್ದೆಗಳ ಪೈಕಿ ಬಹುತೇಕ ಹುದ್ದೆಗಳಿಗೆ ಒಟ್ಟು ಹುದ್ದೆಗಳಿಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಸಾಮಾನ್ಯ ವೈದ್ಯ ವಿಜ್ಞಾನ (ಜನರಲ್‌ ಮೆಡಿಸಿನ್‌) ವಿಷಯದ 257 ಹುದ್ದೆಗಳಿಗೆ 68 ಅರ್ಜಿಗಳು, ಪ್ರಸೂತಿ ತಜ್ಞರ 167 ಮತ್ತು ಚರ್ಮರೋಗ ತಜ್ಞರ 79 ಹುದ್ದೆಗಳಿಗೆ ಕ್ರಮವಾಗಿ ಕೇವಲ 94 ಮತ್ತು 21 ಅರ್ಜಿಗಳು ಬಂದಿವೆ’ ಎಂದೂ ಅವರು ವಿವರಿಸಿದರು.

‘ಎಲ್ಲ ಹುದ್ದೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ದಾಖಲೆಗಳ ಪರಿಶೀಲನೆ ಕಳೆದ ತಿಂಗಳು ಪೂರ್ಣಗೊಂಡಿದೆ. ಕೆಲವು ಅಭ್ಯರ್ಥಿಗಳು ಮೂಲಕ ದಾಖಲೆಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡುವಂತೆ ಕೋರಿದ್ದಾರೆ. ಅರ್ಜಿ ಸಲ್ಲಿಸಿದವರ ಸಂಖ್ಯೆ ಕಡಿಮೆ ಇರುವುದರಿಂದ ಈ ಅಭ್ಯರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖೆಯಿಂದ ಸ್ಪಷ್ಟೀಕರಣವನ್ನೂ ಪಡೆಯಲಾಗಿದೆ. ನೇಮಕಾತಿ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಹದಿನೈದು ದಿನಗಳ ಒಳಗೆ ಆಯ್ಕೆಗೊಂಡವರ ಪಟ್ಟಿ ಪ್ರಕಟಿಸಲಾಗುವುದು’ ಎಂದರು.

‘ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿರುವ ಹುದ್ದೆಗಳಿಗೆ, ಅರ್ಜಿ ಸಲ್ಲಿಸಿದವರಲ್ಲಿ ಅಗತ್ಯ ಅರ್ಹತೆ ಹೊಂದಿದವರು ಹಾಜರುಪಡಿಸಿದ ದಾಖಲೆಗಳು ಯೋಗ್ಯವಾಗಿದ್ದರೆ ಎಲ್ಲರೂ ಆಯ್ಕೆಯಾಗಲಿದ್ದಾರೆ. ಆದರೆ, ಈ ಪೈಕಿ ಎಷ್ಟು ಮಂದಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಅರ್ಜಿಗಳು ಕಡಿಮೆ ಬಂದಿವೆ ಎಂಬ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆ ನಿಲ್ಲಿಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಆರೋಗ್ಯ ಇಲಾಖೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದರೆ ಭರ್ತಿಯಾಗದೆ ಉಳಿದ ಹುದ್ದೆಗಳಿಗೆ ಮೂರು ತಿಂಗಳ ಬಳಿಕ ಮತ್ತೆ ಅಧಿಸೂಚನೆ ಹೊರಡಿಸಲಾಗುವುದು’ ಎಂದರು.

ತಜ್ಞ ವೈದ್ಯರ ನೇಮಕ: ‘ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಮತ್ತು ಎಂಬಿಬಿಎಸ್‌ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಆಯುಷ್‌ ವೈದ್ಯರನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ. ತಜ್ಞ ವೈದ್ಯರನ್ನು ಬಿಡ್‌ ಮೂಲಕ ಭರ್ತಿ ಮಾಡಲಾಗುತ್ತಿದೆ’ ಎಂದೂ ಇಲಾಖೆ ಮೂಲಗಳು ಹೇಳಿವೆ.

 (ಕಲಾವಿದರಿಗೆ ನೀಡಲಾಗಿದೆ)

ಆರೋಗ್ಯ ಇಲಾಖೆಯ ವೈದ್ಯರ ಹುದ್ದೆಗಳ ವಿವರ

ಹುದ್ದೆ, ಮಂಜೂರು, ಒಟ್ಟು ಕಾರ್ಯನಿರತ ಖಾಲಿ

ತಜ್ಞ ವೈದ್ಯರು 3,435,  2,123 (ಗುತ್ತಿಗೆ–122),1,312

ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 2,586, 2,476 (ಗುತ್ತಿಗೆ–698), 110

ದಂತ ವೈದ್ಯರು 425, 370 (ಗುತ್ತಿಗೆ–27) 55

ಒಟ್ಟು 6,446, 4,969 (ಗುತ್ತಿಗೆ–847), 1477

**

ಕೆಪಿಎಸ್‌ಸಿಯಿಂದ ನೇಮಕಾತಿ ಪ್ರಕ್ರಿಯೆ

ವಿಷಯ ಹುದ್ದೆಗಳು ಬಂದ ಅರ್ಜಿ

ಸಾಮಾನ್ಯ ವೈದ್ಯ ವಿಜ್ಞಾನ 257 68

ಜನರಲ್‌ ಸರ್ಜನ್‌ 101 79

ಪ್ರಸೂತಿ ತಜ್ಞರು  167 94

ಅರಿವಳಿಕೆ ತಜ್ಞರು 99 124

ಮಕ್ಕಳ ತಜ್ಞರು 158 105

ಕಣ್ಣು ತಜ್ಞರು 80 60

ಕೀಲುಮೂಳೆ ತಜ್ಞರು 38 75

ಕಿವಿ, ಮೂಗು, ಗಂಟಲು (ಇಎನ್‌ಟಿ) ತಜ್ಞರು 59 62

ಚರ್ಮರೋಗ ತಜ್ಞರು 79 21

ರೇಡಿಯಾಲಜಿ ತಜ್ಞರು 34 19

ಒಟ್ಟು 1,072 707

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT