ಶನಿವಾರ, ಮಾರ್ಚ್ 6, 2021
19 °C

‘ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಲ್ಲ’

ದೊಡ್ಡಬಳ್ಳಾಪುರ: ‘ತಾಲ್ಲೂಕಿನ ಸಾಸಲು ಹೋಬಳಿಯ ಗರುಡಗಲ್ಲು ಹಾಗೂ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಒಳಗೊಂಡಂತೆ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಿಸಲು ನಿರ್ಮಿಸಲಾಗುತ್ತಿರುವ ಬೈರಗೊಂಡ್ಲು ಜಲಾಶಯ ಅವೈಜ್ಞಾನಿಕ ನಿರ್ಧಾರ.

ನಮ್ಮ ಪೂರ್ವಿಕರು ಉಳಿಸಿ ಕೊಟ್ಟು ಹೋಗಿರುವ ಭೂಮಿ ಪ್ರಾಣ ಕೊಟ್ಟಾದರೂ ಸರಿ ಉಳಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಜಲಾಶಯ ನಿರ್ಮಿಸಲು ಭೂಮಿ ನೀಡುವುದಿಲ್ಲ’ ಎಂದು ಲಕ್ಕೇನಹಳ್ಳಿ ಗ್ರಾಮದ ನಿವಾಸಿ ಹಾಗೂ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ವೀರೇಂದ್ರಕುಮಾರ್‌ ತಿಳಿಸಿದ್ದಾರೆ.

ಡಿ.4 ಮತ್ತು 5 ರಂದು ಮಧ್ಯಾಹ್ನ 2 ಗಂಟೆಗೆ ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆ ನೀರಿನಿಂದ ಮುಳುಗಡೆ ಆಗಲಿರುವ ಗ್ರಾಮಗಳ ನಿವಾಸಿಗಳು ಹಾಗೂ ಕೃಷಿ ಭೂಮಿ ಕಳೆದುಕೊಳ್ಳಲಿರುವ ರೈತರೊಂದಿಗೆ ಅಧಿಕಾರಿಗಳು ಹಾಗೂ ಸಂಸತ್‌ ಸದಸ್ಯ ಎಂ. ವೀರಪ್ಪಮೊಯಿಲಿ ಅವರು ಗ್ರಾಮ ಸಭೆಗಳನ್ನು ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ನಿರ್ಧಾರ ಮಹತ್ವ ಪಡೆದಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ವೀರೇಂದ್ರಕುಮಾರ್‌, ಮನೆ, ಭೂಮಿ ಕಳೆದುಕೊಳ್ಳುವ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಎತ್ತಿನಹೊಳೆ ನೀರು ಸಂಗ್ರಹಣೆಯಿಂದ ಗರುಡಗಲ್ಲು, ಲಕ್ಕೇನಹಳ್ಳಿ ಗ್ರಾಮಗಳು ಸೇರಿದಂತೆ ಸುತ್ತಲಿನ ಎಲ್ಲ ಕೃಷಿ ಭೂಮಿ ಸಂಪೂರ್ಣವಾಗಿ ಮುಳುಗಡೆಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.

ವಾಸ್ತವದಲ್ಲಿ ನೀರು ನಿಲ್ಲುವ ಭೌಗೋಳಿಕ ಪ್ರದೇಶ ಗಮನಿಸಿದರೆ ದಾಸರಪಾಳ್ಯ, ನರಸಾಪುರ, ಮಚ್ಚೇನಹಳ್ಳಿ, ಸಿಂಗೇನಹಳ್ಳಿ, ಶ್ರೀರಾಮನಹಳ್ಳಿಗಳೂ ಮುಳುಗಡೆ ಯಾಗಲಿವೆ. ಆದರೆ ಅಧಿಕಾರಿಗಳು ಮಾತ್ರ ಈ ಗ್ರಾಮಗಳು ಭಾಗಶಃ ಮುಳುಗಡೆಯಾಗಲಿವೆ ಎಂದು ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಕೊರಟಗೆರೆ ತಾಲ್ಲೂಕಿನ ಬೆಲ್ಲದಹಳ್ಳಿ, ಸುಂಕನಹಳ್ಳಿ, ಗದ್ದೆಮೋಹನಹಳ್ಳಿ,ವೀರಸಾಗರ, ಲಕ್ಕಮುತ್ತನಹಳ್ಳಿ ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಯಾಗಲಿವೆ. ಎರಡು ತಾಲ್ಲೂಕುಗಳ ಸುಮಾರು 5,500 ಎಕರೆ ಕೃಷಿ ಭೂಮಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗಲಿದೆ. ಕೊಳವೆ ಬಾವಿಗಳ ಮೂಲಕ ನೀರಾವರಿ ಹಾಗೂ ಮಳೆ ಆಶ್ರಯದಲ್ಲಿ ಕೃಷಿ ಮಾಡುತ್ತಿರುವ ಭೂಮಿಯನ್ನೇ ಜಲಾಶಯಕ್ಕೆ ಬಳಸಲಾಗುತ್ತಿದೆ. ಒಟ್ಟಾರೆ ಫಲವತ್ತಾದ ಭೂಮಿ ನೀರುಪಾಲಾಗಲಿದೆ ಎನ್ನುತ್ತಾರೆ ವೀರೇಂದ್ರಕುಮಾರ್‌.

ಪರ್ಯಾಯ ಮಾರ್ಗ ಇದೆ: ಎತ್ತಿನಹೊಳೆಯಿಂದ ನೀರು ತರುವ ಅಥವಾ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವುದಕ್ಕೆ ವಿರೋಧ ಇಲ್ಲ ಎನ್ನುವ ಮಚ್ಚೇನಹಳ್ಳಿ ಗ್ರಾಮದ ದೊಡ್ಡನಾಗಪ್ಪ, ಜಲಾಶಯ ನಿರ್ಮಿಸಲು ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಬಿಡುವುದಿಲ್ಲ ಎಂದರು.

ನೀರು ಸಂಗ್ರಹಕ್ಕೆ ರಾಜ್ಯ ರೈತ ಸಂಘ ಈಗಾಗಲೇ ಪರ್ಯಾಯ ವ್ಯವಸ್ಥೆ ಸೂಚಿಸಿದೆ. ಇದೇ ಭಾಗದಲ್ಲಿನ ತೀತಾ ಡ್ಯಾಂ, ಮಾವುತ್ತೂರು ಕೆರೆ ಇದಲ್ಲದೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ತಾಲ್ಲೂಕಿಗಳಲ್ಲಿನ ದೊಡ್ಡ ಕೆರೆಗಳನ್ನು ಅಭಿವೃದ್ಧಿ ಪಡಿಸಿ ನೀರು ಸಂಗ್ರಹಿಸಬಹುದು. ಇದರಿಂದ ಯಾವುದೇ ರೈತರ ಭೂಮಿಯು ಮುಳುಗಡೆ ಆಗುವುದಿಲ್ಲ. ಈ ಭಾಗದಲ್ಲೂ ಅಂರ್ತಜಲವು ವೃದ್ಧಿಯಾಗಲಿದೆ ಎನ್ನುತ್ತಾರೆ.

ಉದ್ದೇಶ ಪೂರ್ವಕ ಇಳಿಕೆ: ಸಾಸಲು ಹೋಬಳಿಯಲ್ಲಿ ಮುಳುಗಡೆಗೆ ಒಳಗಾಗಲಿರುವ ರೈತರ ಭೂಮಿಯ ಬೆಲೆಯನ್ನು ಸರ್ಕಾರ ಉದ್ದೇಶಪೂರ್ವಕ ಇಳಿಕೆ ಮಾಡಿದೆ ಎನ್ನುತ್ತಾರೆ ಚಿರಋಣಿ ಕನ್ನಡಾಂಬೆ ಹೊರಾಟ ಸಮಿತಿ ಮುಖಂಡ ಕದಿರೇಗೌಡ.

ಗರುಡಗಲ್ಲು ಗ್ರಾಮದ ಸರ್ವೇ ನಂಬರ್‌ಗಳ ಕೃಷಿ ಭೂಮಿ ಬೆಲೆ 2008 ರಿಂದ 2013ರ ವರೆಗೆ ₹ 10 ಲಕ್ಷ ಇತ್ತು. ಇದನ್ನು 2014ರಲ್ಲಿ ₹ 6 ಲಕ್ಷಕ್ಕೆ ಇಳಿಕೆ ಮಾಡಲಾಗಿತ್ತು. ನಂತರ 2016–17ನೇ ಸಾಲಿಗೆ ₹ 8 ರಿಂದ ₹ 9 ಲಕ್ಷ ನಿಗದಿ ಮಾಡಿದೆ.

ಆದರೆ ಸಾಸಲು ಹೋಬಳಿಯಲ್ಲಿ ಮುಳುಗಡೆ ಆಗದೇ ಇರುವ ಗ್ರಾಮಗಳಲ್ಲಿನ ಭೂಮಿಯ ಬೆಲೆ ₹ 12 ಲಕ್ಷ ಎಂದಿದೆ.  ಅಲ್ಲದೆ ಜಲಾಶಯದಿಂದ ಮುಳುಗಡೆಯಾಗಲಿರುವ ಗರುಡಗಲ್ಲು ಗ್ರಾಮದಿಂದ 10 ಕಿ.ಮೀ ದೂರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಒಂದು ಎಕರೆ ಭೂಮಿ ಬೆಲೆ ₹ 80 ಲಕ್ಷಕ್ಕೆ ಮುಟ್ಟಿದೆ ಎಂದರು.

ಸಾಸಲು ಹೋಬಳಿಯಲ್ಲೂ ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಭೂಮಿ ಬೆಲೆ ₹ 40 ಲಕ್ಷಕ್ಕೂ ಮೇಲ್ಪಟ್ಟಿದೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಉದ್ದೇಶಪೂರ್ವಕವಾಗಿ ಜಲಾಶಯದಿಂದ ಮುಳುಗಡೆಯಾಗಲಿರುವ ಕೃಷಿ ಭೂಮಿ ಬೆಲೆಯನ್ನು ಇಳಿಸಿ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾಪ್ರಭುತ್ವ ವಿರೋಧಿ

ಗರುಡಗಲ್ಲು ಗ್ರಾಮದ ಮುತ್ತರಾಯಪ್ಪ ಹೇಳುವಂತೆ, ಭೂಮಿ ರೈತರ ಸ್ವತ್ತು. ಇದನ್ನು ಪ್ರವೇಶ ಮಾಡಬೇಕಾದರೆ ರೈತನ ಒಪ್ಪಿಗೆ ಇಲ್ಲದೇ ಯಾರೂ ಸ್ವಾಧೀನಪಡಿಸಿಕೊಳ್ಳಲು ಹಾಗೂ ಪ್ರವೇಶ ಮಾಡಲು ಕಾನೂನಿನಲ್ಲೇ ಅವಕಾಶ ಇಲ್ಲ. ಹೀಗಿರುವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಳಿಗೆ ತೂರಿ ಬ್ರಿಟೀಷ್‌ ಆಡಳಿತ ಮಾದರಿಯಲ್ಲಿ ರೈತರ ಭೂಮಿ ಕಸಿದುಕೊಳ್ಳು ಅವಕಾಶ ನೀಡುವುದಿಲ್ಲ ಎಂದರು.

2013ರ ಭೂ ಸ್ವಾಧೀನ ಕಾಯಿದೆ ಪ್ರಕಾರ ಯಾವುದೇ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಮುನ್ನ ಅಲ್ಲಿನ ಸಾಮಾಜಿಕ, ಪರಿಸರ, ಕೃಷಿ ಅಧ್ಯಯನ ನಡೆಸಿದ ನಂತರ ಅಲ್ಲಿ ವಾಸ ಮಾಡುವ ಶೇ 80 ರಷ್ಟು ರೈತರ ಒಪ್ಪಿಗೆ ಇದ್ದರೆ ಮಾತ್ರ ಭೂಮಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು. ಆದರೆ ಈ ಯಾವುದೇ ನಿಯಮವನ್ನು ಪಾಲಿಸದೇ ಕನಿಷ್ಠ ಗ್ರಾಮ ಸಭೆಗಳನ್ನು ನಡೆಸದೇ ಏಕಾಏಕಿ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಹೊರಟಿರುವ ಕ್ರಮ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.